• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೆಗಾಸಸ್ ಬೇಹುಗಾರಿಕೆ ಬಗ್ಗೆ ತನಿಖೆಗೆ ಏಕೆ ಆದೇಶಿಸಿಲ್ಲ ಪ್ರಧಾನಿ ಮೋದಿ ಸರ್ಕಾರ!?

|
Google Oneindia Kannada News

ಇಸ್ರೇಲಿನ ಪೆಗಾಸಸ್ ತಂತ್ರಾಂಶದ ಮೂಲಕ ಬೇಹುಗಾರಿಕೆ ಪ್ರಕರಣದ ತನಿಖೆಯನ್ನು ಜಂಟಿ ಸಂಸದೀಯ ಸಮಿತಿ ತನಿಖೆ ಅಥವಾ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ನೇತೃತ್ವದ ಸಮಿತಿಗೆ ವಹಿಸುವಂತೆ ಕೇಂದ್ರ ಮಾಜಿ ಸಚಿವ ಪಿ ಚಿದಂಬರಂ ಆಗ್ರಹಿಸಿದ್ದಾರೆ. ದೇಶದಲ್ಲಿ ಬೇಹುಗಾರಿಕೆ ನಡೆದಿದೆಯೋ ಇಲ್ಲವೋ ಎನ್ನುವುದರ ಕುರಿತು ಸಂಸತ್ ಅನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ಪಷ್ಟನೆ ನೀಡಬೇಕು ಎಂದಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದಾರೆ. "ಕಳೆದ 2019ರಲ್ಲಿ ನಡೆದ ಚುನಾವಣೆಗಳ ಮಾಹಿತಿ ಬಹುಪಾಲು ಸೋರಿಕೆ ಆಗಿದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ಬಿಜೆಪಿಗೆ ಅದರಿಂದ ಸಹಾಯವಾಗಿರಬಹುದು," ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಮಾಹಿತಿ ತಂತ್ರಜ್ಞಾನದ ವಿಷಯದಲ್ಲಿ ಸಂಸದೀಯ ಸ್ಥಾಯಿ ಸಮಿತಿಯ ತನಿಖೆಗಿಂತ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ತನಿಖೆ ಹೆಚ್ಚು ಪರಿಣಾಮಕಾರಿಯಾಗಬಲ್ಲದು ಎಂದು ಚಿದಂಬರಂ ಹೇಳಿದ್ದಾರೆ.

ಭಾರತೀಯ ಉದ್ಯಮಿ ಅನಿಲ್ ಅಂಬಾನಿ ಮೇಲೂ 'ಪೆಗಾಸಸ್ ಕಣ್ಣು'! ಭಾರತೀಯ ಉದ್ಯಮಿ ಅನಿಲ್ ಅಂಬಾನಿ ಮೇಲೂ 'ಪೆಗಾಸಸ್ ಕಣ್ಣು'!

ಸಂಸತ್ತಿನ ಮಾಹಿತಿ ಮತ್ತು ತಂತ್ರಜ್ಞಾನ ಸಮಿತಿಯು ಆದೇಶದ ಮೇರೆಗೆ ತನಿಖೆ ನಡೆಸುತ್ತಿದ್ದು, ಜಂಟಿ ಸಂಸದೀಯ ಸಮಿತಿಯ ತನಿಖೆ ಅಗತ್ಯವಿಲ್ಲ ಎಂದ ಐಟಿ ತಂಡದ ಮುಖ್ಯಸ್ಥ ಶಶಿ ತರೂರ್ ಹೇಳಿಕೆಗೂ ಚಿದಂಬರಂ ತಿರುಗೇಟು ನೀಡಿದ್ದಾರೆ. ಐಟಿ ತಂಡದಲ್ಲಿ ಬಹುಪಾಲು ಸದಸ್ಯರು ಬಿಜೆಪಿಯವರೇ ಆಗಿದ್ದು, ಈ ತನಿಖೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪಿ ಚಿದಂಬರಂ ಸಂಪೂರ್ಣ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆ ಪರಿಣಾಮಕಾರಿ ಎಂದ ಚಿದಂಬರಂ

ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆ ಪರಿಣಾಮಕಾರಿ ಎಂದ ಚಿದಂಬರಂ

ಸಂಸದೀಯ ಸಮಿತಿ ನಿಯಮಗಳು ಹೆಚ್ಚು ಕಟ್ಟುನಿಟ್ಟಾಗಿರುತ್ತವೆ. ಉದಾಹರಣೆಗೆ ಅವರು ಸಾಕ್ಷ್ಯವನ್ನು ಬಹಿರಂಗವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಸಾರ್ವಜನಿಕ ದೃಷ್ಟಿಯಲ್ಲಿ ಸಾಕ್ಷ್ಯಗಳನ್ನು ತೆಗೆದುಕೊಳ್ಳಲು, ಸಾಕ್ಷಿಗಳನ್ನು ಪರೀಕ್ಷಿಸಲು ಮತ್ತು ದಾಖಲೆಗಳನ್ನು ಕರೆಸಲು ಸಂಸತ್ತಿನಿಂದ ಜಂಟಿ ಸಂಸದೀಯ ಸಮಿತಿ ಅಧಿಕಾರ ನೀಡಬಹುದು. ಹಾಗಾಗಿ ಸಂಸದೀಯ ಸಮಿತಿಗಿಂತ ಜಂಟಿ ಸಂಸದೀಯ ಸಮಿತಿಗೆ ಹೆಚ್ಚಿನ ಅಧಿಕಾರವಿರುವುದಾಗಿ ಭಾವಿಸುತ್ತೇನೆ," ಎಂದು ಪಿ ಚಿದಂಬರಂ ಹೇಳಿದರು. ಇದೇ ವೇಳೆ ಈ ವಿಷಯದ ಬಗ್ಗೆ ಸಂಸದೀಯ ಸಮಿತಿ ತನಿಖೆ ಮಾಡುವ ಮಟ್ಟಕ್ಕಿಲ್ಲ ಎಂದು ದೂಷಿಸುತ್ತಿಲ್ಲ. ಬದಲಾಗಿ ಸಂಸದೀಯ ಮಂಡಳಿ ತನಿಖೆಯನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.

ಭಾರತದ 300ಕ್ಕೂ ಹೆಚ್ಚು ಗಣ್ಯರ ಮೇಲೆ ಪೆಗಾಸಸ್ ಕಣ್ಣು

ಭಾರತದ 300ಕ್ಕೂ ಹೆಚ್ಚು ಗಣ್ಯರ ಮೇಲೆ ಪೆಗಾಸಸ್ ಕಣ್ಣು

ಇಸ್ರೇಲ್ ಮೂಲದ ಪೆಗಾಸಸ್ ತಂತ್ರಾಂಶವನ್ನು ಬಳಸಿಕೊಂಡು ಭಾರತದಲ್ಲಿ ಬೇಹುಗಾರಿಕೆ ನಡೆಸಲಾಗುತ್ತಿದೆ ಎಂಬ ಆರೋಪ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ. ದೇಶದ ಪ್ರಮುಖ ರಾಜಕಾರಣಿಗಳು, ಕೇಂದ್ರ ಸಚಿವರು, ನ್ಯಾಯಾಧೀಶರು ಹಾಗೂ ಪತ್ರಕರ್ತರ ಮೊಬೈಲ್ ಸಂಖ್ಯೆ ಹ್ಯಾಕ್ ಮಾಡಲಾಗುತ್ತಿದೆ ಎಂದ ಆರೋಪವಿದೆ. ಈ ಬೇಹಾಗಾರಿಕೆಗೆ ಒಳಗಾದವರ ಪಟ್ಟಿಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ, ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್, ಕೇಂದ್ರ ಸಚಿವರಾದ ಪ್ರಹ್ಲಾದ್ ಪಟೇಲ್ ಮತ್ತು ಅಶ್ವಿನಿ ವೈಷ್ಣವ್ ಜೊತೆಗೆ 40 ಮಂದಿ ಪತ್ರಕರ್ತರ ಹೆಸರು ಕೂಡ ಸೇರಿದೆ.

ವಿರೋಧ ಪಕ್ಷಗಳ ಆರೋಪ ತಳ್ಳಿ ಹಾಕಿದ ಕೇಂದ್ರ ಸರ್ಕಾರ

ವಿರೋಧ ಪಕ್ಷಗಳ ಆರೋಪ ತಳ್ಳಿ ಹಾಕಿದ ಕೇಂದ್ರ ಸರ್ಕಾರ

ಇಸ್ರೇಲಿನ ಪೆಗಾಸಸ್ ತಂತ್ರಾಂಶದ ಮೂಲಕ ಬೇಹುಗಾರಿಕೆ ನಡೆಸಲಾಗುತ್ತಿದೆ ಎಂಬ ವರದಿಯು ಆಧಾರ ರಹಿತ ಆರೋಪವಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು. "ಈ ಬೇಹುಗಾರಿಕೆ ಆರೋಪದ ಹಿಂದೆ ಎಲ್ಲ ಪ್ರತಿಪಕ್ಷಗಳ ಕೈವಾಡವಿದೆ. ಪೆಗಾಸಸ್ ಮೂಲಕ ಗೂಢಾಚಾರಿಕೆ ನಡೆಸಿರುವ ಬಗ್ಗೆ ಯಾವುದೇ ಆಧಾರಗಳಿಲ್ಲದೇ ಆರೋಪಿಸಲಾಗುತ್ತಿದೆ," ಎಂದು ಹೇಳಿದ್ದರು. ಅಲ್ಲದೇ, "ಪೆಗಾಸಸ್ ತಂತ್ರಾಂಶದ ಬಗ್ಗೆ ನಾವು ತರ್ಕಬದ್ಧವಾಗಿ ವಿಶ್ಲೇಷಣೆ ಮಾಡಿದಾಗ ಇದರ ಹಿಂದೆ ಯಾವುದೇ ಆಧಾರವಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ನಮ್ಮ ಸಂಸ್ಥೆಗಳ ಕಣ್ಗಾವಲಿನಲ್ಲಿ ಇರುವ ಕಾನೂನು ಮತ್ತು ದೃಢವಾದ ಅಂಕಿ-ಅಂಶಗಳಲ್ಲಿ ಯಾವುದೇ ರೀತಿ ಅಕ್ರಮ ಪ್ರವೇಶಕ್ಕೆ ಅವಕಾಶವೇ ಇಲ್ಲ. ಭಾರತದಲ್ಲಿ ರಾಷ್ಟ್ರೀಯ ಭದ್ರತೆಯ ಉದ್ದೇಶಕ್ಕಾಗಿ ಎಲೆಕ್ಟ್ರಾನಿಕ್ ಸಂವಹನದ ಕಾನೂನುಬದ್ಧ ಪ್ರತಿಬಂಧನದ ಒಂದು ಸುಸ್ಥಾಪಿತ ಕಾರ್ಯವಿಧಾನವಿದೆ," ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದರು.

ಕೇಂದ್ರ ಐಟಿ ಸಚಿವರದ್ದು ಜಾಣ ಉತ್ತರ ಎಂದ ಚಿದಂಬರಂ

ಕೇಂದ್ರ ಐಟಿ ಸಚಿವರದ್ದು ಜಾಣ ಉತ್ತರ ಎಂದ ಚಿದಂಬರಂ

"ಲೋಕಸಭೆಯಲ್ಲಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಜಾಣ ರೀತಿಯಲ್ಲಿ ಉತ್ತರ ನೀಡಿದ್ದಾರೆ. ಅವರು ಬೇಹುಗಾರಿಕೆ ನಡೆದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಅನಧಿಕೃತವಾಗಿ ಬೇಹುಗಾರಿಕೆ ನಡೆದಿಲ್ಲ ಎಂದು ಹೇಳಿದ್ದಾರೆ. ಅಂದರೆ ಅಧಿಕೃತವಾಗಿ ಬೇಹುಗಾರಿಕೆ ನಡೆದಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಏಕೆಂದರೆ ಅವರಿಗೆ ಅನಧಿಕೃತ ಬೇಹುಗಾರಿಕೆ ಮತ್ತು ಅಧಿಕೃತ ಬೇಹುಗಾರಿಕೆ ನಡುವಿನ ವ್ಯತ್ಯಾಸದ ಬಗ್ಗೆ ಗೊತ್ತಿದೆ," ಎಂದು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಟೀಕಿಸಿದ್ದಾರೆ. "ಪೆಗಾಸಸ್ ಬೇಹುಗಾರಿಕೆಯನ್ನು ಬಳಸಿದ್ದರೆ, ಅದನ್ನು ಯಾರು ಸ್ವಾಧೀನಪಡಿಸಿಕೊಂಡರು?, ಅದನ್ನು ಸರ್ಕಾರ ಅಥವಾ ಅದರ ಒಂದು ಸಂಸ್ಥೆ ಸ್ವಾಧೀನಪಡಿಸಿಕೊಂಡಿದೆಯೇ. ಇವರು ಸಾರ್ವಜನಿಕರು ಕೇಳುತ್ತಿರುವ ಸರಳ ಮತ್ತು ನೇರ ಪ್ರಶ್ನೆಗಳಾಗಿವೆ. ಈ ಪ್ರಶ್ನೆಗೆ ಕೇಂದ್ರ ಸಚಿವರು ನೇರವಾಗಿ ಉತ್ತರ ನೀಡಬೇಕಿದೆ" ಎಂದು ಸರ್ಕಾರಕ್ಕೆ ಪಿ ಚಿದಂಬರಂ ಆಗ್ರಹಿಸಿದ್ದಾರೆ.

ಪೆಗಾಸಸ್; ಸಿಬಿಐ ಮುಖ್ಯಸ್ಥರ ಕರೆ ಮೇಲೂ ನಿಗಾ ವಹಿಸಲಾಗಿತ್ತು!ಪೆಗಾಸಸ್; ಸಿಬಿಐ ಮುಖ್ಯಸ್ಥರ ಕರೆ ಮೇಲೂ ನಿಗಾ ವಹಿಸಲಾಗಿತ್ತು!

ಬೇಹುಗಾರಿಕೆಗೆ ಸಂಬಂಧಿಸಿದಂತೆ ಫ್ರಾನ್ಸ್ ತನಿಖೆ

ಬೇಹುಗಾರಿಕೆಗೆ ಸಂಬಂಧಿಸಿದಂತೆ ಫ್ರಾನ್ಸ್ ತನಿಖೆ

ಫ್ರಾನ್ಸ್ ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರೋನ್ ಮೊಬೈಲ್ ಸಂಖ್ಯೆ ಹ್ಯಾಕ್ ಆಗಿರುವ ಬಗ್ಗೆ ಗೊತ್ತಾಗುತ್ತಿದ್ದಂತೆ ಫ್ರಾನ್ಸ್ ಸರ್ಕಾರವು ತನಿಖೆಗೆ ಆದೇಶಿಸಿತು. ರಾಷ್ಟ್ರೀಯ ಭದ್ರತಾ ಸಮಿತಿಗೆ ತನಿಖೆ ಹೊಣೆಯನ್ನು ವಹಿಸಲಾಯಿತು. ಎರಡು ಪ್ರಮುಖ ರಾಷ್ಟ್ರಗಳು ತನಿಖೆಗೆ ಆದೇಶಿಸಿವೆ ಎಂದಾಗ ಭಾರತ ಮಾತ್ರ ಏಕೆ ಈ ಕುರಿತು ತನಿಖೆ ನಡೆಸುವುದಕ್ಕೆ ಮುಂದಾಗಿಲ್ಲ. ಇದು ದೇಶದ ಭದ್ರತೆಗೆ ಸಂಬಂಧಿಸಿದ ವಿಷಯವಾಗಿದ್ದು, ಬೇಹುಗಾರಿಕೆ ನಡೆದಿದೆಯೋ ಇಲ್ಲವೋ ಎನ್ನುವುದು ಸ್ಪಷ್ಟವಾಗಬೇಕಿದೆ. ಸರ್ಕಾರಕ್ಕೆ ಮಾಹಿತಿ ಇಲ್ಲದೇ ವಿದೇಶಿ ತಂಡವೊಂದು ದೇಶದ ಮೊಬೈಲ್ ಸಂಖ್ಯೆಯನ್ನು ಕದಿಯುತ್ತದೆ ಎಂದರೆ ಅದು ಸಾಧ್ಯವೇ. ಹಾಗೊಂದು ವೇಳೆ ಕದಿಯುವುದಕ್ಕೆ ಅವಕಾಶ ನೀಡುವುದಾದರೆ ಸರ್ಕಾರದ ಗುಪ್ತಚರ ಇಲಾಖೆ ಏನು ಮಾಡುತ್ತಿದೆ. ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ ಎಂದು ಹೇಳಿದ್ದಾರೆ.

ಸುಮೋಟೋ ಪ್ರಕರಣದ ಬಗ್ಗೆ ಪಿ ಚಿದಂಬರಂ ಉಲ್ಲೇಖ

ಸುಮೋಟೋ ಪ್ರಕರಣದ ಬಗ್ಗೆ ಪಿ ಚಿದಂಬರಂ ಉಲ್ಲೇಖ

ಪೆಗಾಸಸ್ ಬೇಹುಗಾರಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸುಮೋಟೋ ತೆಗೆದುಕೊಳ್ಳಬೇಕೆ ಎಂಬ ಪ್ರಶ್ನೆಗೆ ಪಿ ಚಿದಂಬರಂ ಉತ್ತರಿಸಲು ನಿರಾಕರಿಸಿದರು. "ಸರ್ವೋಚ್ಛ ನ್ಯಾಯಾಲಯವು ಏನು ಮಾಡಬಹುದು ಅಥವಾ ಮಾಡಬಾರದು ಎಂಬುದರ ಕುರಿತು ಪ್ರತಿಕ್ರಿಯಿಸಲು ಬರುವುದಿಲ್ಲ. ಆದರೆ ಈಗಾಗಲೇ ಒಬ್ಬರೋ ಅಥವಾ ಇಬ್ಬರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು ಎಂದರು.

ಗೃಹ ಸಚಿವ ಅಮಿತ್ ಶಾರಿಗೆ ಎಚ್ಚರಿಕೆ ಸಂದೇಶ

ಗೃಹ ಸಚಿವ ಅಮಿತ್ ಶಾರಿಗೆ ಎಚ್ಚರಿಕೆ ಸಂದೇಶ

ಪೆಗಾಸಸ್ ಬೇಹುಗಾರಿಕೆಗೆ ಸಂಬಂಧಿಸಿದಂತೆ ಕೇಳಿ ಬಂದಿರುವ ಆರೋಪಗಳು ಜಾಗತಿಕ ಮಟ್ಟದಲ್ಲಿ ದೇಶವನ್ನು ಅವಮಾನಿಸುವ ಉದ್ದೇಶವನ್ನು ಹೊಂದಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಗಮನಿಸಿದಾಗ ಕಣ್ಗಾವಲು ಇರುವ ಬಗ್ಗೆ ಒಪ್ಪಿಕೊಂಡಂತೆ ಆಗುತ್ತದೆ. "ಪೆಗಾಸಸ್ ಸಾಫ್ಟ್‌ವೇರ್ ಬಳಸಿ ಭಾರತದಲ್ಲಿ ನಿರ್ದಿಷ್ಟ ಸಂಖ್ಯೆಯ ದೂರವಾಣಿಗಳನ್ನು ಹ್ಯಾಕ್ ಮಾಡಲಾಗಿದೆ ಎಂಬುದನ್ನು ಅಮಿತ್ ಶಾ ಅಲ್ಲಗಳೆಯುವುದಿಲ್ಲ. ಆದ್ದರಿಂದ ಗೃಹ ಸಚಿವರು ತಿಳಿಸಿದ ಮಾಹಿತಿಗಿಂತ ತಿಳಿಸದೇ ಇರುವ ಮಾಹಿತಿಯು ಬಹುಮುಖ್ಯ ಎನಿಸುತ್ತದೆ. ಬೇಹುಗಾರಿಕೆ ಮೂಲಕ ಭಾರತೀಯ ದೂರವಾಣಿಗಳನ್ನು ಕದಿಯುತ್ತಿರುವುದನ್ನು ಗೃಹ ಸಚಿವರಿಗೆ ಸ್ಪಷ್ಟವಾಗಿ ನಿರಾಕರಿಸಲು ಸಾಧ್ಯವಾಗದಿದ್ದರೆ, ಅವರು ತಮ್ಮ ಭದ್ರತಾ ವೈಫಲ್ಯದ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗುತ್ತದೆ," ಎಂದು ಚಿದಂಬರಂ ಟೀಕಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರೇ ಉತ್ತರ ನೀಡಬೇಕು

ಪ್ರಧಾನಿ ನರೇಂದ್ರ ಮೋದಿಯವರೇ ಉತ್ತರ ನೀಡಬೇಕು

"ಕೆಲವೇ ಕೆಲವು ತಂಡಗಳು ಈ ಬೇಹುಗಾರಿಕೆಯಲ್ಲಿ ತೊಡಗಿವೆ. ಆದರೆ ದೇಶದಲ್ಲಿರುವ ಎಲ್ಲ ಇಲಾಖೆಗಳ ತಂಡಗಳ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಿಡಿತ ಸಾಧಿಸಿರುತ್ತಾರೆ. ಪ್ರತಿಯೊಬ್ಬ ಸಚಿವರು ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಂಡಿರುತ್ತಾರೆ. ಆದರೆ ಪ್ರಧಾನಮಂತ್ರಿಗೆ ಎಲ್ಲಾ ಇಲಾಖೆಗಳಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಗೊತ್ತಿರುತ್ತದೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರೇ ಮುಂದೆ ಬಂದು ಬೇಹುಗಾರಿಕೆ ನಡೆದಿದೆಯೋ ಇಲ್ಲವೋ, ನಡೆದಿದ್ದರೆ ವೈಫಲ್ಯ ಆಗಿರುವುದು ಎಲ್ಲಿ ಎಂಬುದರ ಬಗ್ಗೆ ಉತ್ತರ ನೀಡಬೇಕಿದೆ ಎಂದು ಪಿ ಚಿದಂಬರಂ ಆಗ್ರಹಿಸಿದ್ದಾರೆ.

2018 ರಿಂದ 2019ರ ಅವಧಿಯಲ್ಲಿ ದತ್ತಾಂಶ ಸೋರಿಕೆ

2018 ರಿಂದ 2019ರ ಅವಧಿಯಲ್ಲಿ ದತ್ತಾಂಶ ಸೋರಿಕೆ

ಕಳೆದ 2018 ಮತ್ತು 2019ರ ಅವಧಿಯಲ್ಲಿ ಭಾರತದ ಡಸಾಲ್ಟ್ ಏವಿಯೇಷನ್‌ನ ಪ್ರತಿನಿಧಿ ವೆಂಕಟ ರಾವ್ ಪೊಸಿನಾ, ಮಾಜಿ ಸಾಬ್ ಇಂಡಿಯಾ ಮುಖ್ಯಸ್ಥ ಇಂದರ್‌ಜಿತ್ ಸಿಯಾಲ್ ಮತ್ತು ಬೋಯಿಂಗ್ ಇಂಡಿಯಾ ಬಾಸ್ ಪ್ರತ್ಯುಷ್ ಕುಮಾರ್ ಸೇರಿದಂತೆ ಹಲವರಿಗೆ ಸಂಬಂಧಿಸಿದ ದತ್ತಾಂಶಗಳು ಸೋರಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಫ್ರೆಂಚ್ ಸಂಸ್ಥೆಯ ಎನರ್ಜಿ ಇಡಿಎಫ್‌ನ ಮುಖ್ಯಸ್ಥ ಹರ್ಮನ್‌ಜಿತ್ ನೇಗಿ ಸಂಖ್ಯೆಯೂ ಸೋರಿಕೆಯಾದ ದತ್ತಾಂಶಗಳ ಪಟ್ಟಿಯಲ್ಲಿದೆ. ಇದೇ ಅವಧಿಯಲ್ಲಿ ಫ್ರೆಂಚ್ ಅಧ್ಯಕ್ಷರ ಭಾರತ ಭೇಟಿಯ ಸಂದರ್ಭದಲ್ಲಿ ಅವರು ಎಮ್ಯಾನುಯೆಲ್ ಮ್ಯಾಕ್ರನ್‌ರ ಅಧಿಕೃತ ನಿಯೋಗದ ಸದಸ್ಯರಾಗಿದ್ದರು ಎಂದು ತಿಳಿದು ಬಂದಿದೆ.

ಪೆಗಾಸಸ್ ಗೂಢಾಚಾರಿಕೆ ಬಗ್ಗೆ ತನಿಖೆ ವರದಿ ಪ್ರಕಟ

ಪೆಗಾಸಸ್ ಗೂಢಾಚಾರಿಕೆ ಬಗ್ಗೆ ತನಿಖೆ ವರದಿ ಪ್ರಕಟ

ಜಾಗತಿಕ ಸುದ್ದಿ ಸಂಸ್ಥೆಗಳಾಗಿರುವ ವಾಶಿಂಗ್ಟನ್ ಪೋಸ್ಟ್, ದಿ ಗಾರ್ಡಿಯನ್, ಲೇ ಮೊಂಡೆ ಜೊತೆ ಸಹಯೋಗ ಹೊಂದಿರುವ 'ದಿ ವೈರ್' ಪೆಗಾಸಸ್ ಬೇಹುಗಾರಿಕೆ ಕುರಿತು ವಿಸ್ತೃತ ವರದಿಯನ್ನು ಪ್ರಕಟಿಸಿತ್ತು. ಮಾಧ್ಯಮ ಪಾಲುದಾರ ಸಂಸ್ಥೆ ಆಗಿರುವ ಪ್ಯಾರಿಸ್ ಮೂಲದ 'ನಾನ್ ಪ್ರಾಫಿಟ್ ಆರ್ಗನೈಸೇಷನ್ ಫಾರ್ಬಿಡನ್ ಸ್ಟೋರೀಸ್ ಮತ್ತು ರೈಟ್ಸ್ ಗ್ರೂಪ್ ಅಮ್ನೆಸ್ಟಿ ಇಂಟರ್ ನ್ಯಾಷನಲ್' ಸಂಸ್ಥೆಗಳು ಈ ಕುರಿತು ತನಿಖೆ ನಡೆಸಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿಶ್ವದಲ್ಲಿ ಒಟ್ಟು 50,000 ಮೊಬೈಲ್ ಸಂಖ್ಯೆಗಳ ಸೋರಿಕೆ

ವಿಶ್ವದಲ್ಲಿ ಒಟ್ಟು 50,000 ಮೊಬೈಲ್ ಸಂಖ್ಯೆಗಳ ಸೋರಿಕೆ

ಇಸ್ರೇಲ್ ಕಣ್ಗಾವಲು ಕಂಪನಿ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್ ತಂತ್ರಾಂಶವನ್ನು ಬಳಸಿಕೊಂಡು ಜಗತ್ತಿನಾದ್ಯಂತ ಸಾವಿರಾರು ಗಣ್ಯರ ಮೊಬೈಲ್ ಸಂಖ್ಯೆಯನ್ನು ಕದಿಯಲಾಗಿದೆ ಎಂದು ತನಿಖಾ ವರದಿಯಿಂದ ಗೊತ್ತಾಗಿದೆ. ವಿಶ್ವದಲ್ಲಿ ಒಟ್ಟು 50,000ಕ್ಕೂ ಅಧಿಕ ಮೊಬೈಲ್ ಸಂಖ್ಯೆಗಳನ್ನು ಕದ್ದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

English summary
Why Not Indian Govt Order To Investigation About Pegasus Scandal; Ex-Minister P Chidambaram Asking Many Questions To PM Modi Govt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X