• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ಲೇಷಣೆ : ಮಧ್ಯಪ್ರದೇಶದಲ್ಲಿ ಮಣ್ಣುಮುಕ್ಕುವವರು ಯಾರು? ಕಾಂಗ್ರೆಸ್, ಬಿಜೆಪಿ?

By ಯಶೋಧರ ಪಟಕೂಟ
|

ಇತ್ತೀಚೆಗೆ ನಡೆದ ಕೆಲವು ಉಪ ಚುನಾವಣೆಗಳು, ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು, ಪಕ್ಷದಲ್ಲಿ ಎದುರಿಸುತ್ತಿರುವ ಪ್ರತಿರೋಧಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮತ್ತೊಂದು ಅವಧಿಗೆ ಆಡಳಿತ ಚುಕ್ಕಾಣಿ ಹಿಡಿಯುವುದು ಅನುಮಾನ.

ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆದಿಯಲ್ಲಿ ರಾಜಸ್ತಾನ, ಛತ್ತೀಸಗಢ ರಾಜ್ಯಗಳೊಂದಿಗೆ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ ಕೂಡ ನಡೆಯಲಿದ್ದು, ಭಾರತೀಯ ಜನತಾ ಪಕ್ಷಕ್ಕೆ ಮತ್ತು ವಿಶೇಷವಾಗಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಈ ಚುನಾವಣೆ ಅಗ್ನಿಪರೀಕ್ಷೆ ಒಡ್ಡಲಿದೆ.

ಶಿವರಾಜ್ ಸಿಂಗ್ ಚೌಹಾಣ್ ಇದ್ದ ಬಸ್ ಮೇಲೆ ಕಲ್ಲು ತೂರಾಟ

ಈ ವರ್ಷ ಮತ್ತು ಕಳೆದ ವರ್ಷ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇಷ್ಟು ಮಾತ್ರವಲ್ಲ 13 ಜಿಲ್ಲೆಗಳಲ್ಲಿ ನಡೆದ ನಗರಸಭಾ ಚುನಾವಣೆಗಳಲ್ಲಿ ಕೂಡ ಕಾಂಗ್ರೆಸ್ ಪಕ್ಷ ಬಿಜೆಪಿಗೆ ಮಣ್ಣು ಮುಕ್ಕಿಸಿದೆ. ಶಿವರಾಜ್ ಅವರ ಇಮೇಜ್ ಕುಸಿಯುತ್ತಿರುವುದು ಸುಸ್ಪಷ್ಟವಾಗಿದೆ.

ಸಮೀಕ್ಷೆ: ಅಸೆಂಬ್ಲಿಯಲ್ಲಿ ಹಿಂದೆ, ಲೋಕಸಭೆಯಲ್ಲಿ 'ಬಿಜೆಪಿ' ಭಾರೀ ಮುಂದೆ

ಲೋಕಸಭೆ ಚುನಾವಣೆಯೂ ಹತ್ತಿರ ಬರುತ್ತಿರುವುದರಿಂದ ಮಧ್ಯಪ್ರದೇಶದಲ್ಲಿ ಗೆಲ್ಲಲೇಬೇಕಾಗಿರುವುದು ಬಿಜೆಪಿ ಮತ್ತು ಕಾಂಗ್ರೆಸ್ ಗೆ ತಮ್ಮ ಬಲವನ್ನು ತೋರಿಸಿಕೊಳ್ಳಲು ಅಗತ್ಯವಾಗಿದೆ. ಕರ್ನಾಟಕ ಮತ್ತು ಪಂಜಾಬ್ ಹೊರತುಪಡಿಸಿ ಎಲ್ಲೆಡೆ ಸೋಲು ಕಂಡಿರುವ ಕಾಂಗ್ರೆಸ್ ಗೆ ಮರ್ಯಾದೆಯ ಪ್ರಶ್ನೆಯಾದರೆ, ಭಾರತೀಯ ಜನತಾ ಪಕ್ಷಕ್ಕೆ ಪ್ರತಿಷ್ಠೆಯ ಚುನಾವಣೆಯಾಗಿದೆ.

ಕಳೆದ ಬಾರಿ ಭರ್ಜರಿ ಗೆಲುವು ಸಾಧಿಸಿದ್ದ ಬಿಜೆಪಿ

ಕಳೆದ ಬಾರಿ ಭರ್ಜರಿ ಗೆಲುವು ಸಾಧಿಸಿದ್ದ ಬಿಜೆಪಿ

230 ಸೀಟುಗಳ ವಿಧಾನಸಭೆಯಲ್ಲಿ ಕಳೆದ (2013) ಚುನಾವಣೆಯಲ್ಲಿ ಬಿಜೆಪಿ 166 ಸೀಟುಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 57 ಸೀಟುಗಳನ್ನು ಮಾತ್ರ ತನ್ನದಾಗಿಸಿಕೊಂಡಿತ್ತು. ಬಹುಜನ ಸಮಾಜವಾದಿ ಪಕ್ಷ 4 ಸೀಟುಗಳನ್ನು ಗೆದ್ದಿದ್ದರೆ, ಉಳಿದ ಸೀಟುಗಳು ಸ್ವತಂತ್ರ ಅಭ್ಯರ್ಥಿಗಳ ಪಾಲಾಗಿದ್ದವು. 2003 ಮತ್ತು 2008ರಲ್ಲಿ ನಡೆದಿದ್ದ ಚುನಾವಣೆಯಲ್ಲಿಯೂ ಭಾರತೀಯ ಜನತಾ ಪಕ್ಷ ಸ್ಪಷ್ಟ ಬಹುಮತ ಪಡೆದು ಕಾಂಗ್ರೆಸ್ಸಿನ ನಡುವನ್ನು ಮುರಿದಿತ್ತು. ಅದಕ್ಕೂ ಮೊದಲು 1993ಯಿಂದ 2003ರವರೆಗೆ ಹತ್ತು ವರ್ಷಗಳ ಕಾಲ ಕಾಂಗ್ರೆಸ್ ರಾಜ್ಯಭಾರ ಮಾಡಿತ್ತು.

ಇದನ್ನೆಲ್ಲ ಗಮನಿಸಿದರೆ ಭಾರತೀಯ ಜನತಾ ಪಕ್ಷಕ್ಕೆ ಮೇಲುನೋಟಕ್ಕೆ ಅಂತಹ ಪ್ರತಿರೋಧವೇನಿಲ್ಲ. ಆಡಳಿತಾರೂಢ ಪಕ್ಷವನ್ನು ಸದೆಬಡಿಯುವುದು ಕಾಂಗ್ರೆಸ್ ಪಕ್ಷಕ್ಕೆ ಕಷ್ಟಕರವಾದರೂ, ಈಬಾರಿ ಬಿಜೆಪಿಗೆ ಸುಲಭದ ದಾರಿಯೂ ಅಲ್ಲ. ಇತ್ತೀಚೆಗೆ ನಡೆದ ಕೆಲವು ಚುನಾವಣಾ ಸಮೀಕ್ಷೆಗಳ ಪ್ರಕಾರ, ಮತಬ್ಯಾಂಕ್ ಕಾಂಗ್ರೆಸ್ ಪರ ವಾಲುತ್ತಿರುವುದು ಸ್ಪಷ್ಟವಾಗಿದೆ.

ಇನ್ನೂ ಜನಪ್ರಿಯತೆ ಕಾದುಕೊಂಡಿರುವ ಚೌಹಾಣ್

ಇನ್ನೂ ಜನಪ್ರಿಯತೆ ಕಾದುಕೊಂಡಿರುವ ಚೌಹಾಣ್

ಶಿವರಾಜ್ ಅವರ ಇಮೇಜ್ ಗೆ ಧಕ್ಕೆ ಆಗಿದ್ದರೂ, ಇತರ ನಾಯಕರಿಗೆ ಹೋಲಿಸಿದರೆ ಅವರ ಜನಪ್ರಿಯತೆ ಇತರರಿಗಿಂತ ಇನ್ನೂ ಉತ್ತುಂಗದಲ್ಲಿಯೇ ಇದೆ. ಇದೇ ಕಾರಣಕ್ಕಾಗಿ ಅವರನ್ನು ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿದರೂ ಅಚ್ಚರಿಯಿಲ್ಲ. ದುರಾದೃಷ್ಟವೆಂದರೆ, ಕಾಂಗ್ರೆಸ್ ನಲ್ಲಿ ಈ ರೀತಿ ಬಿಂಬಿಸುವಂಥ ಯಾವ ನಾಯಕನೂ ಇಲ್ಲದಿರುವುದು. ಯುವ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಇದ್ದಾರಾದರೂ ಅವರು ಇನ್ನೂ ಪಳಗಬೇಕು ಎಂಬ ಅಭಿಪ್ರಾಯವಿದೆ. ವಯಾಪಾಮ್ ಹಗರಣದಲ್ಲಿ ಶಿವರಾಜ್ ಅವರ ಹೆಸರು ತಳಕುಹಾಕಿಕೊಂಡಿದ್ದರೂ, ಇದರ ಲಾಭ ಪಡೆಯುವಲ್ಲಿ ಸ್ಥಳೀಯ ಕಾಂಗ್ರೆಸ್ ವಿಫಲವಾಯಿತು. ಸಾಲದೆಂಬಂತೆ, ಕಾಂಗ್ರೆಸ್ ಪಾಳಯದಲ್ಲಿಯೇ ಒಗ್ಗಟ್ಟಿಲ್ಲ. ವಿಭಿನ್ನ ಬಣಗಳು ವಿರುದ್ಧವಾಗಿ ಕೆಲಸ ಮಾಡುತ್ತಿವೆ.

ಕಾಂಗ್ರೆಸ್ ನನ್ನ ರಕ್ತಕ್ಕಾಗಿ ಊಳಿಡುತ್ತಿದೆ: ಮಧ್ಯಪ್ರದೇಶ ಮುಖ್ಯಮಂತ್ರಿ

ಬಲವರ್ಧಿಸಿಕೊಳ್ಳುತ್ತಿರುವ ಬಿಎಸ್ಪಿ

ಬಲವರ್ಧಿಸಿಕೊಳ್ಳುತ್ತಿರುವ ಬಿಎಸ್ಪಿ

ಮಧ್ಯಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷದ ಪ್ರವೇಶದಿಂದಾಗಿ ಕಾಂಗ್ರೆಸ್ ಗೆ ಭಾರೀ ಧಕ್ಕೆಯಾಗಿದೆ. ಮತಗಳು ಇಬ್ಭಾಗವಾಗುತ್ತಿರುವುದರಿಂದ ಭಾರತೀಯ ಜನತಾ ಪಕ್ಷ ಲಾಭ ಪಡೆಯುತ್ತಿದೆ. 2003ರಲ್ಲಿ ಎರಡು, 2008ರಲ್ಲಿ ಏಳು ಮತ್ತು 2013ರಲ್ಲಿ ನಾಲ್ಕು ಸೀಟುಗಳನ್ನು ಬಿಎಸ್ಪಿ ಗೆದ್ದುಕೊಂಡಿತ್ತು. ವಿಂದ್ಯ ಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷ ಪ್ರಬಲವಾಗಿದೆ. ಇಲ್ಲಿ ಮತಗಳಿಸುವಲ್ಲಿ ಕಾಂಗ್ರೆಸ್ ಎಷ್ಟೇ ಪ್ರಯತ್ನಿಸಿದರೂ ಯಶ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಿಎಸ್ಪಿಯ ನಾಯಕಿ ಮಾಯಾವತಿ ಅವರೊಂದಿಗೆ ಮೈತ್ರಿಯ ಮಾತುಕತೆ ನಡೆಸುತ್ತಿದ್ದಾರೆ. ಮೈತ್ರಿ ಯಶಸ್ವಿಯಾದರೆ ಬಿಎಸ್ಪಿಗೆ 25 ಸೀಟುಗಳನ್ನು ಬಿಟ್ಟುಕೊಡಲು ಕಾಂಗ್ರೆಸ್ ಸಿದ್ಧವಿದೆ.

ಎಷ್ಟೇ ದೌರ್ಬಲ್ಯಗಳಿದ್ದರೂ ಬಿಜೆಪಿ ಬಲಿಷ್ಠ

ಎಷ್ಟೇ ದೌರ್ಬಲ್ಯಗಳಿದ್ದರೂ ಬಿಜೆಪಿ ಬಲಿಷ್ಠ

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಕೃಷಿ ನೀತಿಯಿಂದಾಗಿ ಕೃಷಿಕರು ಸಿಡಿದೆದ್ದಿದ್ದಾರೆ. ಮಳೆ ಕೈಕೊಟ್ಟಿದೆ, ನದಿಗಳು ಬರಿದಾಗುತ್ತಿವೆ, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಕಳೆದೊಂದು ವರ್ಷದಲ್ಲಿ ರೈತರ ಆತ್ಮಹತ್ಯೆಯ ಪ್ರಮಾಣ ಶೇ.21ರಷ್ಟು ಏರಿದೆ. ರಾಜ್ಯದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳು ಮೇರೆ ಮೀರಿವೆ. ಅದನ್ನು ಹತ್ತಿಕ್ಕಲು ಚೌಹಾಣ್ ಅವರಿಂದ ಸಾಧ್ಯವಾಗುತ್ತಿಲ್ಲ. ಇಷ್ಟೆಲ್ಲ ದೌರ್ಬಲ್ಯಗಳಿದ್ದರೂ ಬಿಜೆಪಿ ಇನ್ನೂ ಬಲಿಷ್ಠವಾಗಿಯೇ ಇದೆ. ಕಾಂಗ್ರೆಸ್ ಪಕ್ಷ ಬಿಎಸ್ಪಿ ಜೊತೆ ಕೈಜೋಡಿಸುವ ಹವಣಿಕೆಯಲ್ಲಿದೆ. ಆದರೆ, ಆಟವಾಡಿಸುತ್ತಿರುವ ಬಿಎಸ್ಪಿ ಕಾಂಗ್ರೆಸ್ಸಿಗೆ ಸೊಪ್ಪು ಹಾಕುತ್ತಿರುವಂತೆ ಕಾಣಿಸುತ್ತಿಲ್ಲ. ಆದರೂ ಕಾಂಗ್ರೆಸ್ ಬಹುಮತ ಗಳಿಸಬೇಕಿದ್ದರೆ ಪವಾಡವೇ ನಡೆಯಬೇಕು.

ಚುನಾವಣಾ ಸಮೀಕ್ಷೆಯಲ್ಲಿ ಬಿಜೆಪಿಗೆ ಸೋಲು

ಚುನಾವಣಾ ಸಮೀಕ್ಷೆಯಲ್ಲಿ ಬಿಜೆಪಿಗೆ ಸೋಲು

ಕಳೆದ ಆಗಸ್ಟ್ ನಲ್ಲಿ ಎಬಿಪಿ ನ್ಯೂಸ್ ಮತ್ತು ಸಿವೋಟರ್ ನಡೆಸಿದ ಚುನಾವಣಾ ಸಮೀಕ್ಷೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಹೇಳಿದೆ. 2013ರಲ್ಲಿ ಕೇವಲ 57 ಸೀಟು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 117 ಸೀಟು ಗೆದ್ದು ಬಹುಮತ ಪಡೆಯಲಿದೆ ಎಂದು ಸಮೀಕ್ಷೆ ಹೇಳಿದ್ದರೆ, ಕಳೆದ ಚುನಾವಣೆಯಲ್ಲಿ 166 ಸೀಟು ಗೆದ್ದಿದ್ದ ಭಾರತೀಯ ಜನತಾ ಪಕ್ಷ ಈ ಬಾರಿ 106 ಸ್ಥಾನ ಗೆದ್ದು ಎರಡನೇ ಸ್ಥಾನಕ್ಕೆ ಕುಸಿಯಲಿದೆ. ಈ ಸಮೀಕ್ಷೆಯಿಂದ ಭಾರೀ ಗೆಲುವಿನ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದರೆ ಸೋಲು ಕಟ್ಟಿಟ್ಟ ಬುತ್ತಿ ಎಂಬುದನ್ನೂ ಮರೆಯಬಾರದು.

3 ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಭರ್ಜರಿ ಜಯ: ಸಮೀಕ್ಷೆ

English summary
Who will bite the dust in Madhya Pradesh Assembly Elections 2018? If Congress and BSP join hands in MP, it will difficult for BJP to emerge victorious. Poll surveys also suggest it will not be cake walk for BJP in Madhya Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X