• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮರ್ತ್ಯ ಸೇನ್ ನಿಂದ ಅರುಣ್ ಜೇಟ್ಲಿವರೆಗೆ ನೋಟು ರದ್ದು ಬಗ್ಗೆ ಏನಂತಾರೆ?

|

ಬೆಂಗಳೂರು, ನವೆಂಬರ್ 29: ಪ್ರಧಾನಿ ನರೇಂದ್ರ ಮೋದಿ ಅವರು 500, 1000 ನೋಟುಗಳನ್ನು ರದ್ದು ಮಾಡಿ, ಘೋಷಿಸಿ ಇಪ್ಪತ್ತು ದಿನಗಳು ಕಳೆದೇ ಹೋದವು. ಆ ನಂತರ ಹಲವು ಚರ್ಚೆಗಳು ಈ ಬಗ್ಗೆ ಆಗಿವೆ. ಇದೊಂದು ದಿಟ್ಟ ನಿರ್ಧಾರವೇ? ತುಂಬ ಆಲೋಚಿಸಿ, ತುಂಬ ಚೆನ್ನಾಗಿ ಜಾರಿಗೆ ತಂದ ಕಾನೂನು ಬದ್ಧವಾದ ನಿರ್ಧಾರವೇ? ಇದರಿಂದ ಕಪ್ಪು ಹಣಕ್ಕೆ ತಡೆ ಹಾಕಬಹುದೇ ಎಂಬ ಚರ್ಚೆಗಳು ನಡೆಯುತ್ತಲೇ ಇವೆ.

ಕೇಂದ್ರ ಸರಕಾರ ತೆಗೆದುಕೊಂಡ ಈ ನಿರ್ಧಾರದ ಬಗ್ಗೆ ಇಡೀ ದೇಶದಲ್ಲಿ ಅಭಿಪ್ರಾಯ ಒಂದೇ ಥರ ಇಲ್ಲ. ಇರಲಿ, ತಾತ್ಕಾಲಿಕವಾಗಿ ದೇಶದಲ್ಲೊಂದು ಆರ್ಥಿಕ ಹಿಂಜರಿತ ಕಾಣಿಸಿಕೊಂಡಿದೆಯಾದರೂ-ಇದು ಮುಂಚಿತವಾಗಿಯೇ ತಿಳಿಸಿದಂತೆ. ಅರ್ಥಶಾಸ್ತ್ರಜ್ಞರು, ತಜ್ಞರು ನೋಟು ರದ್ದು ನಿರ್ಧಾರದ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಇಲ್ಲಿ ಕೊಡಲಾಗಿದೆ.[ಜನಪ್ರತಿನಿಧಿಗಳೇ, ಜನವರಿ 1ಕ್ಕೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ತಿಳಿಸಿ]

ಇಡೀ ದೇಶದಲ್ಲಿ ಕೇಳಿಬಂದಂತೆ ಇಲ್ಲಿಯೂ ಸಹಜವಾಗಿಯೇ ಪರ--ವಿರೋಧ ಅಭಿಪ್ರಾಯಗಳು ಬಂದಿವೆ. ಆದರೆ ಅದರ ಬಗ್ಗೆ ಅಂತಿಮವಾಗಿ ನಿರ್ಧರಿಸ ಬೇಕಾದವರು ಓದುಗರು. ಅದ್ದರಿಂದ ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳನ್ನು ಓದಿದ ನಂತರ ತಮ್ಮ ಸ್ವಂತ ಆಲೋಚನೆಯಿಂದ ಓದುಗರೇ ನಿರ್ಧರಿಸಿಕೊಳ್ಳಿ,

ಅರ್ಥ ಶಾಸ್ತ್ರಜ್ಞ ಅಮರ್ತ್ಯ ಸೇನ್

ಅರ್ಥ ಶಾಸ್ತ್ರಜ್ಞ ಅಮರ್ತ್ಯ ಸೇನ್

ಅಧಿಕಾರ ಇರುವ ಸರಕಾರ ಮಾತ್ರ ತುಂಬ ಪ್ರಶಾಂತವಾಗಿ ಈ ರೀತಿ ತೊಂದರೆಯನ್ನು ಜನರಿಗೆ ಕೊಡೋಕೆ ಸಾಧ್ಯ. ಹತ್ತಾರು ಲಕ್ಷ ಅಮಾಯಕ ಜನರು ತಮ್ಮದೇ ಹಣ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ತಮ್ಮ ಹಣ ಪಡೆಯುವುದಕ್ಕೆ ಅವಮಾನ, ಅಚಾತುರ್ಯಗಳನ್ನು ಎದುರಿಸುತ್ತಿದ್ದಾರೆ.

ಕಪ್ಪು ಹಣ ಇರುವುದು ಕೆಲವರ ಹತ್ತಿರ. ಒಂದೇ ಏಟಿಗೆ ಎಲ್ಲ ಭಾರತೀಯರು, ಯಾರ ಹತ್ತಿರ ಭಾರತದ ನೋಟುಗಳು ಇವೆಯೋ ಎಲ್ಲರನ್ನೂ ತಪ್ಪು ಮಾಡಿದವರು ಅಂದಂತಾಯಿತು. ಈಗ ಎಲ್ಲರೂ ತಮ್ಮ ಹತ್ತಿರ ಕಪ್ಪು ಹಣ ಇಲ್ಲ ಅನ್ನೋದನ್ನು ರುಜುವಾತು ಮಾಡೋ ಹಾಗೆ ಆಗಿದೆ.

ಮೊದಲಿಗೆ ಬಿಜೆಪಿ ವಿದೇಶದಲ್ಲಿರುವ ಕಪ್ಪು ಹಣ ತರುವ ಮಾತು ಕೊಟ್ಟಿತು (ಎಲ್ಲ ಭಾರತೀಯರಿಗೂ ದಿಢೀರ್ ಕೊಡುಗೆ-ಎಂಥ ಪೊಳ್ಳು ಭರವಸೆ?). ಕಪ್ಪು ಹಣ ಇರುವವರು ಅನುಭವಸ್ಥರು. ಅವರು ಎಂಥ ನಿರ್ಧಾರಕ್ಕೂ ಹೆದರಲ್ಲ. ಅವರೇನು ಜನ ಸಾಮಾನ್ಯರಾ ಅಥವಾ ಸಣ್ಣ ವ್ಯಾಪಾರಸ್ಥರಾ ತೊಂದರೆ, ಅವಮಾನಗಳನ್ನು ಎದುರಿಸುವುದಕ್ಕೆ?

ಡಾ.ಮನಮೋಹನ್ ಸಿಂಗ್

ಡಾ.ಮನಮೋಹನ್ ಸಿಂಗ್

ರಾಜ್ಯಸಭೆಯಲ್ಲಿ ಮಾತನಾಡುತ್ತಾ ಸಿಂಗ್ ನೋಟು ರದ್ದು ನಿರ್ಧಾರವನ್ನು 'ಸಂಘಟಿತ ದರೋಡೆ', 'ಕಾನೂನುಬದ್ಧ ಲೂಟಿ' ಮತ್ತು 'ಐತಿಹಾಸಿಕ ಕಳಪೆ ನಿರ್ವಹಣೆ' ಎಂದರು. ಅಷ್ಟೇ ಅಲ್ಲ, ಇದರಿಂದ ರಾಷ್ಟ್ರೀಯ ಆದಾಯ ಶೇ 2ರಷ್ಟು ಇಳಿಕೆಯಾಗುತ್ತದೆ. ತಕ್ಷಣಕ್ಕೆ ಹೇಳುವುದಾದರೆ ಈ ಅಂಕಿ ಕೂಡ ತೀರಾ ಕಡಿಮೆ ಎಂದು ಹೇಳಿದರು.

ನಾನು ಪ್ರಧಾನಿ ಅವರಿಂದ ತಿಳಿದುಕೊಳ್ಳೋದಿಕೆ ಬಯಸ್ತೀನಿ: ಯಾವುದೇ ದೇಶದಲ್ಲಿ ಜನರು ಬ್ಯಾಂಕ್ ಗೆ ತಮ್ಮ ಹಣವನ್ನು ಹಾಕಬಹುದು. ಆದರೆ ಡ್ರಾ ಮಾಡಲು ಸಾಧ್ಯವಿಲ್ಲ ಅನ್ನೋದನ್ನು ಕೇಳಿದ್ದೀರಾ? ಇದೊಂದು ಅಂಶ ಸಾಕು, ನೀವು ಈ ದೇಶದ ಜನರ ಏಳ್ಗೆಗಾಗಿ ಮಾಡಿದ್ದೀನಿ ಎನ್ನುತ್ತಿರುವ ಕಾರ್ಯವನ್ನು ಖಂಡಿಸೋದಿಕ್ಕೆ ಎಂದು ಹೇಳಿದ್ದಾರೆ ಸಿಂಗ್.

ನನ್ನ ಪ್ರಕಾರ ಈ ಯೋಜನೆಯಿಂದ ನಮ್ಮ ದೇಶದ ಕೃಷಿ ಅಭಿವೃದ್ಧಿಗೆ ಹೊಡೆತ ಬೀಳುತ್ತದೆ. ಸಣ್ಣ ಕೈಗಾರಿಕೆಗಳಿಗೆ ಸಮಸ್ಯೆಯಾಗುತ್ತದೆ. ದೇಶದ ಶೇ 55ರಷ್ಟು ಮಂದಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಕೋ ಆಪರೇಟಿವ್ ಬ್ಯಾಂಕ್ ಗಳು ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿವೆ. ಇದರಿಂದ ಅವು ಕಾರ್ಯ ನಿರ್ವಹಿಸಲು ಆಗದಂತೆ, ಹಣ ನಿರ್ವಹಿಸಲು ಆಗದಂಥ ಸ್ಥಿತಿ ಏರ್ಪಡುತ್ತದೆ. ಆದ್ದರಿಂದಲೇ ಈ ಯೋಜನೆಯನ್ನು ಐತಿಹಾಸಿಕ ಕಳಪೆ ನಿರ್ವಹಣೆ ಎಂದು ಕರೆದಿದ್ದು ಎಂದಿದ್ದಾರೆ ಸಿಂಗ್.

ಕೌಶಿಕ್ ಬಸು

ಕೌಶಿಕ್ ಬಸು

ಹೊಸ ಯೋಜನೆಯಿಂದ ಹೊಚ್ಚ ಹೊಸ ಕಪ್ಪು ಹಣ ದಂಧೆ ಶುರುವಾಗಿದೆ. ಕೆಲವು ಜನ ಅಕ್ರಮ ಹಣವನ್ನು ಬದಲಾಯಿಸುವ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ. ಈಗಿನ ನಿಯಮದ ಪ್ರಕಾರ ಎರಡೂವರೆ ಲಕ್ಷದ ಮೇಲೆ ಬ್ಯಾಂಕ್ ಗೆ ಹಣ ಹಾಕಿದರೆ ತೆರಿಗೆ ಕಟ್ಟಬೇಕು, ಲೆಕ್ಕ ಹೇಳಬೇಕು ಎಲ್ಲ. ಆದರೆ ದೊಡ್ಡ ಜಾಲವೊಂದನ್ನು ಮಾಡಿಕೊಂಡಿರುವವರು ಸುಲಭವಾಗಿ ಬದಲಿಸುತ್ತಿದ್ದಾರೆ.

ನಿಜವಾದ ಸಮಸ್ಯೆ ಯಾರಿಗೆ ಗೊತ್ತಾ? ವರ್ಷಾನುಗಟ್ಟಲೆ ಕಾಲ ತಮ್ಮ ಹಣವನ್ನು ಕೂಡಿಸಿಟ್ಟುಕೊಂಡು ಬಂದವರಿಗೆ ತೊಂದರೆ. ಅದರಲ್ಲೂ ಬಡ ಮಹಿಳೆಯರು. ತಮ್ಮ ಪತಿ ಕೊಡುವ ಹಣದಲ್ಲೇ ಅಲ್ಪಸ್ವಲ್ಪ ಉಳಿಸಿಕೊಂಡು, ಮಕ್ಕಳಿಗೋ ಮನೆಯ ವಸ್ತುಗಳಿಗೋ ಕೂಡಿಟ್ಟವರ ಸ್ಥಿತಿ ಬಹಳ ಕಷ್ಟ.

ಅರುಣ್ ಶೌರಿ

ಅರುಣ್ ಶೌರಿ

ಚಲಾವಣೆಯಲ್ಲಿದ್ದ ಶೇ 85ರಷ್ಟು ಹಣವನ್ನು ವಾಪಸ್ ಪಡೆಯಬೇಕು ಅಂತ ನಿರ್ಧರಿಸಿದಾಗ ಅದರಿಂದ ಆಗುವ ಸಮಸ್ಯೆಗಳನ್ನು ಮುಂಚೆಯೇ ಗುರುತಿಸಲಿಲ್ಲ. ಸಣ್ಣ-ಮಧ್ಯಮ ಗಾತ್ರದ ವ್ಯಾಪಾರ ಮಾಡುವವರು, ಟ್ರಾನ್ಸ್ ಪೋರ್ಟ್, ಕೃಷಿ ವಲಯ.. ಹೀಗೆ ಅರು ಲಕ್ಷ ಹಳ್ಳಿಗಳನ್ನು ತಲುಪುವುದು ಸಾಧ್ಯವೇ?

ಕಪ್ಪು ಹಣ ಇರುವವರು ಬಹಳ ಜಾಣ್ಮೆಯಿಂದ ಅದನ್ನು ಬದಲಾಯಿಸಿಕೊಂಡಿದ್ದಾರೆ. ಇದು ಖಂಡಿತಾ ಕಪ್ಪು ಹಣದ ಮೇಲಿನ ದಾಳಿಯಲ್ಲ. ಏಕೆಂದರೆ ಅಂಥ ಹಣವನ್ನು ಅದಾಗಲೇ ಆಸ್ತಿಗಳಾಗಿ ಪರಿವರ್ತನೆ ಮಾಡಿರ್ತಾರೆ. ಶೇ 1ರಷ್ಟು ಭಾರತೀಯರ ಬಳಿ ದೇಶದ ಒಟ್ಟು ಆಸ್ತಿಯ ಶೇ 53ರಷ್ಟು ಇದೆ. ಇನ್ನು 10 ಪರ್ಸೆಂಟ್ ಜನರ ಬಳಿ ಶೇ 85ರಷ್ಟು ಆಸ್ತಿ ಇದೆ. ಈ ಎಲ್ಲ ಸಿರಿವಂತರ ಹತ್ತಿರ ಕಪ್ಪು ಹಣ ಇದೆ. ಅವರೆಲ್ಲ ಹಾಸಿಗೆ ಕೆಳಗೆ ಹಣ ಇಡೊಲ್ಲ. ಅವನ್ನೆಲ್ಲ ವಿದೇಶದಲ್ಲಿ ಇಟ್ಟಿರ್ತಾರೆ. ಗೋಣಿಚೀಲದಲ್ಲಿ ಡಾಲರ್ ಹಾಕಿಟ್ಟಿರೋದಿಲ್ಲ. ಅದು ಆಸ್ತಿ, ಅದರಲ್ಲೂ ಆಭರಣ, ಬೇರೆ ಆಸ್ತಿ, ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿರ್ತಾರೆ.

ಈಗ ಭಾರತ ಡಿಜಿಟಲ್ ಆಗಿ ಬದಲಾಗುತ್ತದೆ ಅಂತಾರೆ ನರೇಂದ್ರ ಮೋದಿ. ಇದರಿಂದ ನಿಜಕ್ಕೂ ತೊಂದರೆ ಆಗೋದು ರೈತರಿಗೆ. ಅವರ ವ್ಯವಹಾರದ ಪ್ರಮಾಣವೇ ಕಡಿಮೆಯಿರುತ್ತದೆ. ಕೃಷಿ ಮಾಡೋರು ದಿನಗೂಲಿಯನ್ನು ಡೆಬಿಟ್ ಕಾರ್ಡ್ ನಲ್ಲಿ ಕೊಡ್ತಾರಾ? ರೈತರು ತರಕಾರಿ ಕೊಳ್ಳೋಕೆ ಕ್ರೆಡಿಟ್ ಕಾರ್ಡ್ ಕೊಡ್ತಾರಾ? ಅವರು ಆ ದಿನದ ದುಡಿಮೆ ಮಾಡ್ತಾರೆ ಅಷ್ಟೇ

ಅರುಣ್ ಜೇಟ್ಲಿ

ಅರುಣ್ ಜೇಟ್ಲಿ

ಸರಕಾರಕ್ಕೆ ಕೃಷಿ ಹಾಗೂ ಸಾಮಾಜಿಕ ವಲಯದಲ್ಲಿ ಬಂಡವಾಳ ಹೂಡುವುದಕ್ಕೆ ಈಗ ಸಾಧ್ಯವಿದೆ. ಆರ್ಥಿಕತೆಯ ನೆರಳಿನಂತೆ ಇದ್ದ ಹಣ ಬ್ಯಾಂಕಿಂಗ್ ವಲಯದೊಳಗೆ ಬರುತ್ತದೆ. ಆರ್ಥಿಕತೆಗೆ ನೆರವಾಗಲು ಬ್ಯಾಂಕ್ ಗಳ ಬಳಿ ಈಗ ಹೆಚ್ಚಿನ ಹಣ ಇದೆ. ಖಾಸಗಿ ಬಂಡವಾಳ ಈ ವರೆಗೆ ಕಡಿಮೆಯಿತ್ತು. ಅದೀಗ ವಾಪಸ್ ಆಗಿದೆ. ಕೃಷಿ, ಮೂಲಸೌಕರ್ಯ ಹಾಗೂ ಸಾಮಾಜಿಕ ವಲಯಕ್ಕೆ ಸಾಲ ನೀಡಲು ಬ್ಯಾಂಕ್ ಗಳು ಸದೃಢವಾಗಿವೆ. ಅವುಗಳ ಅನುತ್ಪಾದಕ ಸಾಲಗಳು ಕಡಿಮೆಯಾಗಿವೆ.

ಬಿಬೇಕ್ ದೇಬ್ ರಾಯ್

ಬಿಬೇಕ್ ದೇಬ್ ರಾಯ್

ನೋಟು ರದ್ದು ಒಂದು ಭಾಗ ಅಷ್ಟೇ. ಇನ್ನೂ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಏಕೆ ಒಂದೇ ಅಳತೆಯ ನೋಟು ಮುದ್ರಿಸುತ್ತಿದ್ದೀರಿ, ಬೇರೆ ಅಳತೆಯಲ್ಲಿದ್ದರೆ ದೃಷ್ಟಿ ದೋಷ ಸಮಸ್ಯೆ ಇರುವವರಿಗೆ ಅನುಕೂಲ ಆಗುತ್ತದೆ ಎಂಬ ವಾದ ಹಲವರದು. ಅದ್ದರಿಂದಲೇ ನೋಟಿನ ಮುಖಬೆಲೆಯನ್ನು ಬ್ರೈಲ್ ಲಿಪಿ ಮೂಲಕ ತಿಳಿಯಲು ಅನುಕೂಲವಾಗುವಂತೆ ಮುದ್ರಿಸಲಾಗಿದೆ.

ಅರವಿಂದ್ ವಿರ್ಮಾನಿ

ಅರವಿಂದ್ ವಿರ್ಮಾನಿ

ಕಪ್ಪು ಹಣವನ್ನು ತೊಳೆದು ಹಾಕುವುದಕ್ಕೆ ಈ ವಿಧಾನ ಸುಲಭದ್ದು. ದೊಡ್ಡ ಮೊತ್ತದ ಹಣ ಸಂಗ್ರಹ ಆ ದೊಡ್ಡ ನೋಟಿನ ಮುಖಬೆಲೆಯಲ್ಲೇ ಇತ್ತು. ಅದು ಜಾರಿಯಾದ ವಿಧಾನದಲ್ಲೇ ಯಾವುದೇ ಅಚ್ಚರಿಯಿಲ್ಲ. ಅಂಥ ನಡೆಗಳು ಘೋಷಣೆಯಾಗುವ ತನಕ ರಹಸ್ಯವಾಗಿರಬೇಕು. ಆಗಷ್ಟೇ ಅದರ ಜಾರಿ ಪರಿಣಾಮಕಾರಿ ಆಗೋಕೆ ಸಾಧ್ಯ.

ವ್ಯವಹಾರಕ್ಕೆ ಅಗತ್ಯ ಇರುವ ಹಣವನ್ನು ಎಷ್ಟು ಬೇಗ ಪೂರೈಸುತ್ತೀರಿ ಎಂಬುದರ ಆಧಾರದಲ್ಲಿ ಅದರ ಯಶಸ್ಸು ಇರುತ್ತದೆ. ದಿನದ ಖರ್ಚು-ವೆಚ್ಚಗಳಿಗೆ ಬೇಕಾದಷ್ಟು ಹಣವನ್ನು ತಕ್ಷಣವೇ ಬದಲಿಕೊಡಬೇಕು. ಅದು ವಿಳಂಬವಾದಷ್ಟೂ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಸುರ್ಜಿತ್ ಬಲ್ಲಾ

ಸುರ್ಜಿತ್ ಬಲ್ಲಾ

ಈ ನಿರ್ಧಾರ ತುಂಬ ಧೈರ್ಯ, ದಿಟ್ಟತನದಿಂದ ಬಂದಿದ್ದು ಎಂಬುದರಲ್ಲಿ ಎರಡು ಮಾತಿಲ್ಲ. ವ್ಯವಹಾರಸ್ಥರ ವಲಯ ಏನಿದೆ, ಅದು ಬಿಜೆಪಿಯ ಬಲಿಷ್ಠ ಬೆಂಬಲಿಗ ವರ್ಗ. ಅದರ ವಿರುದ್ಧ ಮೋದಿ ಕ್ರಮ ತೆಗೆದುಕೊಂಡಿದ್ದಾರೆ. ದೇಶದ ಒಳಿತಿಗಾಗಿ ಇಂಥ ದಿಟ್ಟ ಕ್ರಮ ತೆಗೆದುಕೊಂಡ ಶ್ರೇಯ ಮೋದಿ ಅವರಿಗೆ ಸಿಗಬೇಕು.

ಕಪ್ಪುಹಣ, ಭ್ರಷ್ಟಾಚಾರ ವಿರುದ್ಧದ ಹೋರಾಟ ಈಗ ಶುರುವಾಗಿದೆ. ಇದು ಜಿಎಸ್ ಟಿಗಿಂತ ದೊಡ್ಡ ಸುಧಾರಣೆ. ಮತ್ತು 1991ರ ಕೈಗಾರಿಕಾ ನೀತಿ ಸುಧಾರಣೆಗಗೂ ದೊಡ್ಡದು. ಮೌನವಾಗಿಯೇ ಇದು ಹಣವನ್ನು ಸೃಷ್ಟಿಸುತ್ತದೆ.

ಹಣವನ್ನು ಬೇನಾಮಿ ಖಾತೆಗೆ ವರ್ಗಾಯಿಸುವುದು ಈಗ ಸುಲಭ ಅಲ್ಲ. ವಿಶ್ವದ ಎಲ್ಲ ಕಡೆ ಕಪ್ಪು ಹಣ ಹೂಡುವವರಿಗೆ ಬ್ರೇಕ್ ಬಿದ್ದಿದೆ. ಚಿನ್ನ ಖರೀದಿ ಕೂಡ ಸಲೀಸಾಗಿಲ್ಲ. ಸದ್ಯಕ್ಕೆ ಕಪ್ಪು ಹಣ ತೊಡಗಿಸಬೇಕು ಅಂದರೆ ರಿಯಲ್ ಎಸ್ಟೇಟ್ ನಲ್ಲಿ ಮಾತ್ರ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
What some of the country’s leading economists and experts have to say about Demonetisation. Unsurprisingly, the views are divided, but we ask the readers to make their own inferences.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more