ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರಿಗಾಗಿ ಮೂರು ಹೆಂಡಿರ ಗಂಡನಾದ ಮಾರ್ತಾಂಡ!

By Shami
|
Google Oneindia Kannada News

ನಮ್ಮ ಭಾರತದಲ್ಲಿನ ಕುಡಿಯುವ ನೀರಿನ ಬವಣೆ ಸಾರುವ ಕರುಣಾಜನಕ ಕಥೆಗಳನ್ನು ನೀವು ಸಾಕಷ್ಟು ಓದಿರಬಹುದು. ನಮ್ಮ ನೀರ ಹೊತ್ತ ನೀರ ಜಾಣೆಯರು ಒಂದೊಮ್ಮೆ, ಹಿಂದೊಮ್ಮೆ ಇಂಥ ಕಥೆಗಳ ನಾಯಕಿರಾಗಿದ್ದರೂ ಆಗಿರಬಹುದು. ಹೇಳಲಾರೆ. ಬಿಂದಿಗೆ ನೀರಿಗಾಗಿ ಬದುಕನ್ನೇ ಚೆಲ್ಲಿಕೊಂಡವರ ಒಂದು "ಕಥಾಸರಿತ್ಸಾಗರವನ್ನು" ಆರು ತಿಂಗಳ ಹಿಂದಷ್ಟೆ ಇಂಟರ್ ನೆಟ್ಟಿನಲ್ಲಿ ಓದಿದ್ದೆ. ಓದಿದ ನಂತರ, "ಭಾರತದ ಆತ್ಮ ಹಳ್ಳಿಗಳಲ್ಲಿದೆ" ಎಂಬ ಮಹಾತ್ಮಾ ಗಾಂಧೀ ನುಡಿದ ಭರತವಾಕ್ಯವನ್ನು ನೆನೆಪಿಸಿಕೊಂಡು ಸುಮ್ಮನಾಗಿದ್ದೆ.

ಕುಡಿಯುವ ನೀರನ್ನು ಹೊರಲೋಸುಗ ಕಣ್ಣೀರು ಹಾಕುವುದನ್ನೂ ಮರೆತ ಮಾನಿನಿಯರ ಆ ಚಿತ್ರಕಥಾ ಮಾಲಿಕೆಯನ್ನು ಪ್ರಕಟಿಸಿದ್ದು www.trust.org ಅದು ಪಶ್ಚಿಮ ಮಹಾರಾಷ್ಟ್ರದ ಒಂದು ಹಳ್ಳಿ. ಮುಂಬೈನಿಂದ 140 ಕಿಲೋಮೀಟರ್ ದೂರದಲ್ಲಿರುವ ಮರಳಿಲ್ಲದ ಮರುಭೂಮಿ. ಹಳ್ಳಿಯ ಹೆಸರು ಡೆಂಗಲ್ಮಲ್ ಅಂತ. ಊರಾಚೆಯಿರುವ ಗೋರ್ಕಲ್ಲ ಬೆಟ್ಟಗಳ ಗರ್ಭದಲ್ಲಿ ಎರಡು ಬಾವಿಗಳಿವೆ. ಅಲ್ಲಿಂದ ನೀರು ಹೊತ್ತು ತಂದರೆ ಮಾತ್ರ ಜೋಳದ ಹಿಟ್ಟು ಜೋಪಡಿಯಲ್ಲಿ ರೊಟ್ಟಿಯಾಗುತ್ತದೆ.


ನೀರನ್ನು ಹೊತ್ತು ತರುವವಳು ಅವಳೇ ತಾನೇ? ವರ್ಷಾನುಗಟ್ಟಲೆ ನೀರು ಹೊತ್ತೂಹೊತ್ತೂ ಅವಳ ಕುತ್ತಿಗೆ ಬಾಗಿದೆ, ಸೊಂಟ ಮುರಿದಿದೆ. ಹೆಂಡತಿಯ ಅಂಗಾಲು ಒಡೆದು ಚೂರುಚೂರಾದ ಮಾತ್ರಕ್ಕೆ ಗಂಡನ ಸಂಸಾರವೇನೂ ನಿಂತು ಹೋಗುವುದಿಲ್ಲ! ನೀರನ್ನು ಹೊತ್ತು ತರುವುದಕ್ಕೋಸ್ಕರವೇ ಗಂಡ ಇನ್ನೊಂದು ಮದುವೆ ಆಗುತ್ತಾನೆ. ಅವಳ ಸೊಂಟವೂ ಮುರಿದ ಮೇಲೆ ಮತ್ತೊಂದು ಮದುವೆ ಆಗುತ್ತಾನೆ. ಅಲ್ಲಿ ವಧುಗಳಿಗೇನೂ ಕೊರತೆಯಿಲ್ಲ. ಮದುವೆ ಆಗದೇ ಉಳಿದವರು, ಅನಾಥರು, ವಿಧವೆಯರು, ಮದುವೆಯಾಗಿಯೂ ಒಂಟಿಯಾಗಿರುವವರು ಇರ್ತಾರೆ, ಸಿಕ್ತಾರೆ.

ಮೂರು ಹೆಂಡಿರ ಗಂಡ, ಮಾರ್ತಾಂಡ ಎನ್ನುವಂತೆ ಡೆಂಗಲ್ಮಲ್ ನ ಇಂಥ ಗಂಡಂದಿರನ್ನು ಅಲ್ಲಿನ ಜನ ಮೂರು ಒಂಟೆಯ ಗಂಡ ಎಂದು ತಮಾಷೆ ಮಾಡುತ್ತಾರೆ! ಟ್ರಸ್ಟ್.ಆರ್ಗ್ ಪ್ರಕಟಿಸಿರುವ ಮೂರು ಗಂಡ ಆರು ಬಿಂದಿಗೆಯ ಚಿತ್ರ ವರದಿ ಈ ಕೊಂಡಿಯಲ್ಲಿದೆ. ನೋಡ್ಕೊಂಡು ಬನ್ನಿ.


ಬಹುಶಃ ಈ ವರದಿಯನ್ನು ನೋಡಿಯೋ ಏನೋ www.scoopwhoop.com ನ ಉಪಸಂಪಾದಕಿ ಇಷಾ ಜಲನ್ ಡಂಗಲ್ ಮಲ್ ಗ್ರಾಮಕ್ಕೆ ಹೋಗುತ್ತಾರೆ. ಮೂರು ಹೆಂಡಿರ ಗಂಡ ಸಖಾರಾಮ್ ಭಗತ್ ಸಂಸಾರದ ಕಥೆಯನ್ನು ವಿಡಿಯೋದಲ್ಲಿ ಸೆರೆ ಹಿಡಿಯುತ್ತಾರೆ. ಸಂಕಟ, ಶೋಷಣೆಯ ಪರಮಾವಧಿಯನ್ನು ಚಿತ್ರಿಸುವ ಈ ವೃತ್ತಾಂತವನ್ನು ನಾನು ನೋಡಿದ್ದು ಸ್ಕೂಪ್ ವೂಪ್ ಫೇಸ್ ಬುಕ್ಕಿನಲ್ಲಿ. ಎರಡು ದಿನಗಳ ಹಿಂದೆ (28 ನವಂಬರ್) ಪ್ರಕಟವಾಗಿದೆ.

ಸಂಪ್ರದಾಯಸ್ಥ ಹಿಂದೂಗಳು, ಪ್ರಮುಖವಾಗಿ ಮೇಲ್ಜಾತಿಯಲ್ಲಿ ಹುಟ್ಟಿದವರು ಸ್ನಾನ ಮಾಡುವಾಗ "ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ! ಪಂಚಕನ್ಯಾಸ್ಮರೇನಿತ್ಯಂ ಮಹಾಪಾತಕ ನಾಶನಂ" ಶ್ಲೋಕ ಹೇಳಿಕೊಂಡು ಮಡಿಯಾಗುತ್ತಾರೆ. ಇನ್ನು ಕೆಲವರು "ಗಂಗೇ ಚ ಯಮುನೇ ಚೈವ, ಗೋದಾವರಿ ಸರಸ್ವತಿ. ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು' ಎಂದು ಪವಿತ್ರ ನದಿಗಳನ್ನು ಆಹ್ವಾನಿಸಿಕೊಳ್ಳುತ್ತಾರೆ.

ಅದ್ಸರಿ, ಎರಡು ಹೊತ್ತಿನ ಊಟಕ್ಕಾಗಿ, ಮದುವೆಯ ಶಾಸ್ತ್ರಕ್ಕೆ ಕೊರಳಾಗಿ, ಬಯಕೆಗಳೆಲ್ಲ ಬಿಂದಿಗೆ ನೀರು ಹೊರುವ ಬೆವರಲ್ಲಿ ಕರಗಿಹೋಗುವ ಕೆಂಪಮ್ಮ, ನಿಂಗಮ್ಮ, ರಂಗಮ್ಮನವರನ್ನು ಸ್ಮರಿಸುವವರು ಯಾರು?


ಬೈದವೇ, ನೀರು ಹೊರುವುದಕ್ಕಾಗಿ ಪತ್ನಿಯರಾಗುವ ಮಹಿಳೆಯರನ್ನು Water Wives ಎಂದು ಕರೆಯಲಾಗುತ್ತದೆ. ಟೈಂ ಇದ್ರೆ Water Wives ಅಂತ ಟೈಪ್ ಮಾಡಿ, ಗೂಗಲ್ ಸರ್ಚ್ ಇಂಜಿನಿನಲ್ಲಿ ತಡಕಾಡಿರಿ. ಎತ್ತಿನಹೊಳೆ, ಕಾವೇರಿ, ಕೃಷ್ಣೆ, ನೇತ್ರಾವತಿ, ಕೊಳವೆ ಬಾವಿಗಳಲ್ಲಿ ನೀರು ತುಂಬಿಕೊಳ್ಳುವ ನಮ್ಮ ಕರ್ನಾಟಕದ ಮಹಿಳೆಯರ ವ್ಯಥೆಗಳು ಇಲ್ಲೇನಾದರೂ ಕಣ್ಣಿಗೆ ಬಿದ್ದರೆ ನನಗೆ ಹೇಳಿ!
English summary
Some Indian men are marrying multiple wives to help beat drought in Western Maharashtra. Blame men, blame women or put the entire blame on drinking water management in the Country?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X