ಉತ್ತರಾಖಂಡ ಚುನಾವಣೆ; ಉಚ್ಚಾಟಿತ ನಾಯಕನ ಕ್ಷೇತ್ರಕ್ಕೆ ಮಾಜಿ ಸಿಎಂ ಪುತ್ರಿ ಕಣಕ್ಕಿಳಿಸಿದ ಬಿಜೆಪಿ
ಡೆಹ್ರಾಡೂನ್, ಜನವರಿ 27: ಉತ್ತರಾಖಂಡದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸಿದ್ದು, ಆಡಳಿತರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಚುನಾವಣೆ ಎದುರಿಸಲು ಸನ್ನದ್ಧವಾಗುತ್ತಿವೆ. ಅದರಲ್ಲೂ ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಗಂಭೀರವಾಗಿ ತೆಗೆದುಕೊಂಡಿದೆ.
ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಬಿಜೆಪಿ ಬುಧವಾರ ಮತ್ತೆ ಒಂಬತ್ತು ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಖಂಡೂರಿ ಅವರ ಪುತ್ರಿ ರಿತು ಭೂಷಣ್ ಖಂಡೂರಿ ಅವರನ್ನು 2017ರಲ್ಲಿ ಬಿಜೆಪಿಯಿಂದ ಹರಕ್ ಸಿಂಗ್ ರಾವತ್ ಗೆದ್ದಿದ್ದ ಕೋಟ್ದ್ವಾರ ಕ್ಷೇತ್ರದಿಂದ ಕಣಕ್ಕಿಳಿಸಿದ್ದಾರೆ. ಸದ್ಯ ಹರಕ್ ಸಿಂಗ್ ರಾವತ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
59 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ರಿತು ಭೂಷಣ್ ಖಂಡೂರಿ ಅವರ ಹೆಸರು ಇರಲಿಲ್ಲ, ಕಳೆದ ಚುನಾವಣೆಯಲ್ಲಿ ಅವರು ಗೆದ್ದಿದ್ದ ಕ್ಷೇತ್ರವಾದ ಯಮಕೇಶ್ವರದಿಂದ ಪಕ್ಷವು ಬೇರೆ ನಾಯಕನಿಗೆ ಟಿಕೆಟ್ ನೀಡಿದ್ದರಿಂದ ಬಿಜೆಪಿ ರಿತು ಭೂಷಣ್ ಖಂಡೂರಿಗೆ ಟಿಕೆಟ್ ನೀಡುವುದಿಲ್ಲ ಎಂಬ ಊಹಾಪೋಹಗಳಿಗೆ ಶಕ್ತಿ ತುಂಬಿತ್ತು. ಆದರೆ ಕ್ಷೇತ್ರ ಬದಲಾವಣೆ ಮಾಡಲಾಗಿದೆ.
ಈ ಎರಡನೇ ಪಟ್ಟಿಯೊಂದಿಗೆ ಪಕ್ಷವು ಒಟ್ಟು 70 ಸ್ಥಾನಗಳ ಪೈಕಿ 68 ಸ್ಥಾನಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಹಾಲಿ ಶಾಸಕ ಮತ್ತು ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಪ್ರತಿನಿಧಿಸುವ ದೋಯಿವಾಲಾ ಸೇರಿದಂತೆ ಬಿಜೆಪಿ ಇನ್ನೂ ಅಭ್ಯರ್ಥಿಗಳನ್ನು ಹೆಸರಿಸದ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಬೇಕಿದೆ. ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛೆ ವ್ಯಕ್ತಪಡಿಸಿಲ್ಲ.
ಇದಕ್ಕೂ ಮೊದಲು ಉತ್ತರಾಖಂಡದ 70 ಕ್ಷೇತ್ರಗಳ ಪೈಕಿ 59 ಸ್ಥಾನಗಳಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿತ್ತು.

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಖತಿಮಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಪುಷ್ಕರ್ ಸಿಂಗ್ ಧಾಮಿ ಖತಿಮಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಒಂದೇ ಹಂತದಲ್ಲಿ ಫೆ.14ರಂದು ಮತದಾನ
ಉತ್ತರಾಖಂಡದಲ್ಲಿ ಜನವರಿ 21ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಸಲು ಜನವರಿ 21ರಿಂದ ಜ.28ರವರೆಗೆ ಅವಕಾಶವಿರುತ್ತದೆ. ಜನವರಿ 29ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಜನವರಿ 31 ಕೊನೆಯ ದಿನಾಂಕವಾಗಿದೆ.
ಉತ್ತರಾಖಂಡ ರಾಜ್ಯದ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಫೆ.14ರಂದು ಮತದಾನ ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ. ಉತ್ತರಾಖಂಡ ಅಭ್ಯರ್ಥಿಗಳ ವೆಚ್ಚದ ಮಿತಿ 40 ಲಕ್ಷ ರೂ. ಇರಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. 2017ರ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 70 ಸ್ಥಾನಗಳ ಪೈಕಿ ಬಿಜೆಪಿ 57 ಸ್ಥಾನಗಳನ್ನು ಗೆದ್ದಿತ್ತು.