ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾರ್‌ಧಾಮ ಕ್ಷೇತ್ರಗಳ ಉತ್ತರಾಖಂಡದಲ್ಲಿ ಮೂರು ಪಕ್ಷಗಳ ಮಧ್ಯೆ ಹಣಾಹಣಿ

|
Google Oneindia Kannada News

ಉತ್ತರಾಖಂಡ, ಜ.12: ಉತ್ತಾರಖಂಡ ಎಂದರೆ ನೆನಪಿಗೆ ಬರುವುದು ಚಾರ್‌ಧಾಮ ಕ್ಷೇತ್ರಗಳು. ಯಮುನೋತ್ರಿ, ಗಂಗೋತ್ರಿ, ಕೇದಾರನಾಥ, ಬದರೀನಾಥ ಕ್ಷೇತ್ರಗಳನ್ನು ಹೊಂದಿರುವ ರಾಜ್ಯದಲ್ಲೀಗ ಚುನಾವಣೆಯ ಅಬ್ಬರ ನಡೆಯುತ್ತಿದೆ. ಹಿಮಚ್ಛಾದಿತ ಪರ್ವತಗಳನ್ನು ಹೊಂದಿರುವ ಸುಂದರ ಮತ್ತು ಕಿರಿದಾದ ರಾಜ್ಯದಲ್ಲಿ ರಾಜಕೀಯ ಮೇಲಾಟ ಆರಂಭವಾಗಿದೆ.

ಉತ್ತರಾಖಂಡದಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯಯೇ ಪೈಪೋಟಿ ಇರುವುದು. ಆದರೆ, ಈ ಬಾರಿ ಅಮ್ ಆದ್ಮಿ ಪಕ್ಷ ತನ್ನ ವರ್ಚಸ್ಸು ತೋರಿಸುತ್ತಿರುವುದು ರಾಷ್ಟ್ರೀಯ ಪಕ್ಷಗಳ ನಿದ್ದೆ ಗೆಡಿಸಿದೆ. ಇದರಿಂದ ಚಾರ್‌ಧಾಮ ಕ್ಷೇತ್ರವಾದ ಉತ್ತರಾಖಂಡವನ್ನು ವಶಕ್ಕೆ ಪಡೆಯಲು ಮೂರು ಪಕ್ಷಗಳು ಕಾಯುತ್ತಿವೆ.

ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಬಿಜೆಪಿ ಪರವಾದಂತಹ ಕಂಡುಬರುತ್ತಿದ್ದರೂ ಸಹ ಕಾಂಗ್ರೆಸ್ ಹಾಗೂ ಅಮ್‌ ಆದ್ಮಿ ಪಕ್ಷಗಳು ತೋಳೇರಿಸಿ ನಿಂತಿರುವುದು ಬಿಜೆಪಿಗೆ ಸುಲಭ ತುತ್ತಾಗಲು ಸಾಧ್ಯವಿಲ್ಲ ಎಂಬ ವಾತಾವರಣ ನಿರ್ಮಿಸಿವೆ. ಅಮ್‌ ಆದ್ಮಿ ಪಕ್ಷಕ್ಕೆ ಇಲ್ಲಿ ಅಂತಹ ನೆಲೆ ಇಲ್ಲವಾದರೂ ದೆಹಲಿ ಸಹಿತ ಇತರೆ ರಾಜ್ಯಗಳ ವರ್ಚಸ್ಸನ್ನು ಇಲ್ಲಿ ಬಳಸಿ ರಾಷ್ಟ್ರೀಯ ಪಕ್ಷಗಳ ವಿರುದ್ಧ ಗುಟುರು ಹಾಕಿ ನಿಂತಿದೆ.

70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಾಖಂಡದಲ್ಲಿ ಫೆ.14ರಂದು ಒಂದೇ ಹಂತದ ಮತದಾನ ನಡೆಯುತ್ತದೆ. ಈಗಾಗಲೇ ಅಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅಳೆದು ತೂಗಿ ಅಭ್ಯರ್ಥಿಗಳನ್ನು ಸಿದ್ಧಗೊಳಿಸುತ್ತಿದೆ. ಅಭ್ಯರ್ಥಿಗಳ ಘೋಷಣೆಯಲ್ಲಿ ಮುಂಚೂಣಿಯಲ್ಲಿರುವ ಆಪ್‌ ಈಗಾಗಲೇ ಎರಡು ಹಂತದಲ್ಲಿ ಒಟ್ಟು 42 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ಬಿಜೆಪಿ: ಇಲ್ಲೂ ಮೂವರು ಸಿಎಂ

ಬಿಜೆಪಿ: ಇಲ್ಲೂ ಮೂವರು ಸಿಎಂ

ಆಡಳಿತಾರೂಢ ಬಿಜೆಪಿ ಸರ್ಕಾರದ ಬಗ್ಗೆ ಅಂತಹ ವಿರೋಧ ಇಲ್ಲದಿದ್ದರೂ ಸಹ ಅವರ ಆಡಳಿತವೇ ಇಲ್ಲಿ ಅಭಾಸ ಉಂಟುಮಾಡುತ್ತಿದೆ. ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಬದಲಾಯಿಸಿದ್ದು ಪಕ್ಷದ ಬಗ್ಗೆ ಜನರಲ್ಲಿ ಸ್ವಲ್ಪಮಟ್ಟಿನ ಅಪಸ್ವರ ಮೂಡಿಸಿದೆ.

2017ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯಲ್ಲಿ ತ್ರಿವೇಂದ್ರ ಸಿಂಗ್ ರಾವತ್ ಮುಖ್ಯಮಂತ್ರಿಯಾದರು. ಮುಖ್ಯಮಂತ್ರಿಯಾಗಿ ನಾಲ್ಕು ವರ್ಷ ಪೂರೈಸಲು ಕೆಲವು ದಿನಗಳು ಬಾಕಿ ಇರುವಾಗಲೇ 2021ರ ಮಾರ್ಚ್ 9ರಂದು ಅವರ ರಾಜೀನಾಮೆ ಪಡೆಯಲಾಯಿತು. ಬಳಿಕ ಪೌರಿ ಗರ್ವಾಲ್ ಕ್ಷೇತ್ರದ ಸಂಸದ ತೀರಥ್ ಸಿಂಗ್ ರಾವತ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ತೀರಥ್ ಸಿಂಗ್ ರಾವತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 116 ದಿನದೊಳಗೆ ಅವರನ್ನು ಬದಲಾಯಿಸಿ ಶಾಸಕ ಪುಷ್ಕರ್ ಸಿಂಗ್ ಧಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಹೀಗೆ ನಾಲ್ಕು ತಿಂಗಳ ಅವಧಿಯಲ್ಲಿ ಮೂವರು ಮುಖ್ಯಮಂತ್ರಿ ಬದಲಾಗಿದ್ದು, ಸ್ಥಿರ ಆಡಳಿತದ ಬಗ್ಗೆ ಉತ್ತರಾಖಂಡ ರಾಜ್ಯದ ಬಗ್ಗೆ ಜನರ ಅಪನಂಬಿಕೆ ಹೊಂದಲು ಕಾರಣವಾಗಿದೆ.

ಸದ್ಯ ಇಲ್ಲಿ ಬಿಜೆಪಿ ಉತ್ತರಾಖಂಡದ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ ಕೇಂದ್ರ ಸರ್ಕಾರದಲ್ಲಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳು ಮತ್ತು ಅಟಲ್‌ಬಿಹಾರಿ ವಾಜಪೇಯಿ ಅವರ ಸಾಧನೆಗಳ ಬಹುವಾಗಿ ಚರ್ಚಿಸುತ್ತಿದೆ. ಕೇದಾರನಾಥ ಕ್ಷೇತ್ರದ ಪುನರುಜ್ಜೀವನ, ಎಲ್ಲ ಹವಾಮಾನ ಪರಿಸ್ಥಿತಿಯಲ್ಲಿಯೂ ಚಾರ್‌ಧಾಮ ಕ್ಷೇತ್ರಗಳಿಗೆ ಓಡಾಡಲು ಅನುಕೂಲವಾಗುವಂತಹ ರಸ್ತೆ ಅಭಿವೃದ್ಧಿ ಮತ್ತು ರಿಷಿಕೇಶ- ಕರ್ನ ಪ್ರಯಾಗ್ ರೈಲು ಮಾರ್ಗ ಅಭಿವೃದ್ಧಿ ಇಲ್ಲಿ ಬಿಜೆಪಿಗೆ ವರವಾಗುತ್ತಿವೆ. ಯುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸುತ್ತಿದೆ.

ಹಳೆಯ ಸೈನಿಕನನ್ನು ನಂಬಿದ ಕಾಂಗ್ರೆಸ್:

ಹಳೆಯ ಸೈನಿಕನನ್ನು ನಂಬಿದ ಕಾಂಗ್ರೆಸ್:

ಕಾಂಗ್ರೆಸ್‌ ಇಲ್ಲಿ ತನ್ನ ಹಳೆಯ ಸೈನಿಕ ಹರೀಶ್ ರಾವತ್‌ ಅವರನ್ನು ನಂಬಿದೆ. ಈಗಾಗಲೇ ಮೂರು ಅವಧಿಗೆ ಮುಖ್ಯಮಂತ್ರಿಯಾಗಿದ್ದ ರಾವತ್ ಮೂಲಕ ಈ ಬಾರಿಯೂ ಉತ್ತಾರಾಖಂಡದಲ್ಲಿ ನೆಲೆಯೂರಲು ಕಾಂಗ್ರೆಸ್ ಹವಣಿಸುತ್ತಿದೆ.

ಸದ್ಯ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದಲ್ಲಿ ಮೂವರು ಮುಖ್ಯಮಂತ್ರಿಗಳು ಬದಲಾಗಿರುವುದು ಮತ್ತು ಸರ್ಕಾರದ ವಿರುದ್ಧ ರೈತರು ನಡೆಸಿದ ಹೋರಾಟವನ್ನೇ ಕಾಂಗ್ರೆಸ್ ಇಲ್ಲಿ ಪ್ರಮುಖ ಅಸ್ತ್ರವಾಗಿ ಬಳಸುತ್ತಿದೆ. ಆದರೆ, ಇದು ಕಾಂಗ್ರೆಸ್‌ಗೆ ಎಷ್ಟರ ಮಟ್ಟಿಗೆ ವರವಾಗುತ್ತದೆ ಎಂಬುದನ್ನು ಕಾದು ನೋಡಬೇಕು.

ಅಮ್‌ ಆದ್ಮಿ ಪಕ್ಷ:

ಅಮ್‌ ಆದ್ಮಿ ಪಕ್ಷ:

ಉತ್ತರಾಖಂಡದಲ್ಲಿ ಅಮ್‌ ಆದ್ಮಿ ಪಕ್ಷ ನಿವೃತ್ತ ಸೇನಾಧಿಕಾರಿ ಕರ್ನಲ್ ಅಜಯ್ ಕೋಥಿಯಾಲ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ. ಅಲ್ಲದೆ, 70 ವಿಧಾನಸಭಾ ಕ್ಷೇತ್ರಗಳ ಪೈಕಿ ಈಗಾಗಲೇ 42 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರತಿ ತಿಂಗಳಿಗೊಮ್ಮೆ ಉತ್ತಾರಖಂಡ ರಾಜ್ಯಕ್ಕೆ ಭೇಟಿ ನೀಡಿ ಚುನಾವಣಾ ಪ್ರಚಾರ ಈ ಮೊದಲೇ ಆರಂಭಿಸಿದ್ದಾರೆ. ದೆಹಲಿಯಲ್ಲಿ ರೂಪಿಸಿರುವ ಜನಪರ ಕಾರ್ಯಕ್ರಮಗಳನ್ನೇ ಇಲ್ಲೂ ಸಹ ರೂಪಿಸುವುದಾಗಿ ಅಮ್‌ ಆದ್ಮಿ ಪಕ್ಷ ಭರವಸೆ ನೀಡುತ್ತಿದೆ.

ಸಮೀಕ್ಷೆಗಳು ಹೇಳುವುದೇನು?

ಸಮೀಕ್ಷೆಗಳು ಹೇಳುವುದೇನು?

ಎಬಿಪಿ ನ್ಯೂಸ್ ಮತ್ತು ಸಿ-ವೋಟರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಹುದು ಎಂದು ಹೇಳಿದೆ. ಕಣಿವೆ ರಾಜ್ಯದಲ್ಲಿ ಕೇಸರಿ ಪಕ್ಷ ಶೇ 39.08ರಷ್ಟು ಮತ ಗಳಿಸಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.

ಸದ್ಯ ವಿರೋಧ ಪಕ್ಷದ ಸ್ಥಾಣದಲ್ಲಿರುವ ಕಾಂಗ್ರೆಸ್ 35.7ರಷ್ಟು ಮತ ಪಡೆಯಬಹುದು ಎಂದು ಸಮೀಕ್ಷೆಗಳು ಅಂದಾಜಿಸಿವೆ. ಒಂದು ವೇಳೆ ಇಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಹರೀಶ್ ರಾವತ್ ಅವರೇ ಮುಖ್ಯಮಂತ್ರಿಯಾಗಬಹುದು ಎಂದು ಹೇಳಲಾಗುತ್ತಿದೆ. ಇನ್ನು ಅಮ್‌ ಆದ್ಮಿ ಪಕ್ಷ ಸಹ ಇಲ್ಲಿ 12.6ರಷ್ಟು ಮತ ಪಡೆಯಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

Recommended Video

BCCI ನಿರ್ಧಾರಕ್ಕೆ ಕಾಯುತ್ತಿರ ಪಾಕ್ ಕ್ರಿಕೆಟ್ ಮಂಡಳಿ! | Oneindia Kannada

English summary
In Uttarakhand, the Congress and the BJP have been competing ever since. But this time the Aam Aadmi Party is showing its charisma and the national parties are asleep. The three parties are waiting to take over the Uttarakhand state, which is the refugee constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X