• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮವಸ್ತ್ರವೇ ನನ್ನ ಧರ್ಮ ಎನ್ನುತ್ತಾರೆ ಈ ಅಧಿಕಾರಿಣಿ

|

ಬೆಂಗಳೂರು, ಏಪ್ರಿಲ್ 16: 'ಅವರು ದೌರ್ಜನ್ಯ ಮತ್ತು ಕಿರುಕುಳದ ಪರಾಕಾಷ್ಠೆಗೆ ತಲುಪಿದ್ದರು. ನಮ್ಮ ತನಿಖೆಗೆ ಅಡ್ಡಿಪಡಿಸಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಆದರೆ, ನಾವು ಕೊನೆಯವರೆಗೂ ಅದರಿಂದ ಹಿಮ್ಮೆಟ್ಟಲಿಲ್ಲ'.

- ಇದು ಜಮ್ಮು ಮತ್ತು ಕಾಶ್ಮೀರದ ಕತುವಾ ಜಿಲ್ಲೆಯಲ್ಲಿ ನಡೆದ ಬಾಲಕಿ ಮೇಲಿನ ಅಮಾನವೀಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ದಳದ (ಎಸ್‌ಐಟಿ) ಏಕೈಕ ಮಹಿಳಾ ಸದಸ್ಯೆ ಶ್ವೇತಾಂಬರಿ ಶರ್ಮಾ ಅವರ ಹೇಳಿಕೆ.

ಕತುವಾ ಪ್ರಕರಣ: ಸಂತ್ರಸ್ಥೆ ಕುಟುಂಬದ ವಕೀಲರಿಗೆ ಕೊಲೆ ಬೆದರಿಕೆ

ಜಮ್ಮು ಮೂಲದವರಾದ ಶ್ವೇತಾಂಬರಿ ಶರ್ಮಾ, ಜಮ್ಮು ಮತ್ತು ಕಾಶ್ಮೀರ ಅಪರಾಧ ದಳದ ಉಪ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದಾರೆ.

ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ದೇಶದಾದ್ಯಂತ ತೀವ್ರ ಚರ್ಚೆಗೀಡಾಗಿರುವ ಅತ್ಯಾಚಾರ ಪ್ರಕರಣದ ತನಿಖೆಯ ವೇಳೆ ಆರೋಪಿಗಳ ಪರವಾಗಿ ನಿಂತವರಿಂದ ಎದುರಾದ ತೊಂದರೆಗಳು, ಅಡೆತಡೆಗಳನ್ನು ಅವರು ತೆರೆದಿಟ್ಟಿದ್ದಾರೆ.

ಅತ್ಯಾಚಾರ ಆರೋಪಿಗಳ ಸಂಬಂಧಿಕರು, ಅವರ ಪರ ಅನುಕಂಪ ಹೊಂದಿರುವವರು ಮತ್ತು ಕೆಲವು ವಕೀಲರ ಗುಂಪು ಯಾವ ಮಟ್ಟಕ್ಕೆ ಹೋಗಿದ್ದರು ಎಂದರೆ, ತನಿಖೆಗೆ ಯಾವ ಯಾವ ರೀತಿ ಅಡ್ಡಿಪಡಿಸಲು ಸಾಧ್ಯವೋ, ಆ ಎಲ್ಲಾ ಪ್ರಯತ್ನಗಳನ್ನೂ ನಡೆಸಿದ್ದರು ಎಂದಿದ್ದಾರೆ.

ಸಾಕ್ಷ್ಯ ನಾಶಪಡಿಸಿದ್ದ ಪೊಲೀಸರು

'ಅತಿಯಾದ ಒತ್ತಡಗಳ ನಡುವೆ ತನಿಖೆ ನಡೆಸಿದೆವು. ಆರಂಭದಲ್ಲಿ ತೀವ್ರ ನಿರಾಶೆಗೆ ಒಳಗಾಗಿದ್ದೆವು. ಅದರಲ್ಲಿಯೂ ಹೀರಾನಗರ ಠಾಣೆಯ ಪೊಲೀಸರು ಕೂಡ ಪ್ರಕರಣವನ್ನು ಮುಚ್ಚಿಹಾಕಲು ಲಂಚ ಪಡೆದು, ಸಾಕ್ಷ್ಯ ನಾಶಪಡಿಸಲು ಸಂತ್ರಸ್ತೆಯ ಬಟ್ಟೆಯನ್ನು ತೆರವುಗೊಳಿಸಿದ್ದರು.

ಆದರೂ, ಪವಿತ್ರ ನವರಾತ್ರಿಯ ವೇಳೆ ನಡೆದ ಈ ಭಯಾನಕ ಅತ್ಯಾಚಾರ ಮತ್ತು ಕೊಲೆ ಕೃತ್ಯದ ರಹಸ್ಯವನ್ನು ಭೇದಿಸಿದೆವು. ತಪ್ಪಿತಸ್ಥರನ್ನು ಶಿಕ್ಷಿಸಲು ದೈವಿಕ ಪ್ರೇರಣೆಯೂ ದೊರೆತಿದೆ ಎಂದು ನಾನು ನಂಬುತ್ತೇನೆ. ದುರ್ಗಾಮಾತೆ ತಮ್ಮ ತಲೆಯ ಮೇಲೆ ಕೈಯನ್ನಿರಿಸಿ ಆಶೀರ್ವಾದ ಮಾಡಿದ್ದಳು' ಎಂದು ಶ್ವೇತಾಂಬರಿ ಹೇಳಿದ್ದಾರೆ.

ಹೀರಾನಗರದ ರಸನಾ ಎಂಬ ಗ್ರಾಮದ ಬಾಲಕಿಯೊಬ್ಬಳು ಜನವರಿ 10 ರಂದು ಕಣ್ಮರೆಯಾಗಿದ್ದಳು. ಆಕೆಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂಬ ವಿಚಾರ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಅಧಿವೇಶನದಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಗಿತ್ತು. ಒಂದು ವಾರದ ಬಳಿಕ ಆಕೆಯ ಶವ ಅರಣ್ಯದಲ್ಲಿ ಪತ್ತೆಯಾಗಿತ್ತು.

ಕತುವಾ ಪ್ರಕರಣ ಇತ್ಯರ್ಥಕ್ಕೆ ತ್ವರಿತ ನ್ಯಾಯಾಲಯ: 90 ದಿನಗಳ ಗಡುವು

ಜನವರಿ 23ರಂದು ಜಮ್ಮು ಮುತ್ತು ಕಾಶ್ಮೀರ ಸರ್ಕಾರವು ಪ್ರಕರಣ ಸಂಬಂಧ ವಿಶೇಷ ಅಪರಾಧ ದಳದ ತನಿಖೆಗೆ ಆದೇಶ ಹೊರಡಿಸಿತ್ತು.

ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂಬ ಬೇಡಿಕೆಯ ನಡುವೆಯೂ ಎಸ್‌ಐಟಿ ತನಿಖೆ ಮುಂದುವರಿಸಿತ್ತು. ಅತ್ಯಾಚಾರ, ಕೊಲೆ, ಅಪಹರಣ, ಅಕ್ರಮ ಬಂಧನ, ಅಪರಾಧ ಸಂಚು ಮತ್ತು ಸಾಕ್ಷ್ಯ ನಾಶಗಳಲ್ಲಿ ತೊಡಗಿದ ಎಂಟು ಆರೋಪಿಗಳ ವಿರುದ್ಧ ಸಿಜೆಎಂ ನ್ಯಾಯಾಲಯದಲ್ಲಿ ಎರಡು ಜಾರ್ಜ್‌ಷೀಟ್‌ ಸಲ್ಲಿಸಿತ್ತು.

ಸಮವಸ್ತ್ರವೇ ಏಕೈಕ ಧರ್ಮ

ಆರೋಪಿಗಳಲ್ಲಿ ಹೆಚ್ಚಿನವರು ಬ್ರಾಹ್ಮಣರೇ ಆಗಿದ್ದಾರೆ. ಅವರು ನನ್ನ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದರು. ನಾವು ಒಂದೇ ಧರ್ಮ, ಒಂದೇ ಜಾತಿಗೆ ಸೇರಿದವರು. ಮುಸ್ಲಿಂ ಬಾಲಕಿಯೊಬ್ಬಳ ಅತ್ಯಾಚಾರ ಮತ್ತು ಕೊಲೆಯ ತಪ್ಪಿಗೆ ಅವರನ್ನು ನಾನು ಬಂಧಿಸಬಾರದು ಎಂದು ಹೇಳಿದರು.

ನಾನು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಅಧಿಕಾರಿ. ನನಗೆ ಯಾವ ಧರ್ಮವೂ ಇಲ್ಲ. ನನ್ನ ಏಕೈಕ ಧರ್ಮವೆಂದರೆ ಅದು ಪೊಲೀಸ್ ಸಮವಸ್ತ್ರ ಎಂದು ಪ್ರತಿಕ್ರಿಯಿಸಿದೆ ಎಂಬುದಾಗಿ ಶ್ವೇತಾಂಬರಿ ವಿವರಿಸಿದ್ದಾರೆ.

ಈ ಎಲ್ಲ ತಂತ್ರಗಳು ವಿಫಲವಾದಾಗ ಅವರ ಕುಟುಂಬದವರು ಮತ್ತು ಬೆಂಬಲಿಗರು ಬ್ಲ್ಯಾಕ್‌ಮೇಲ್ ಮಾಡುವುದನ್ನು ಬೆದರಿಕೆ ಹಾಕುವುದನ್ನು ಮಾಡತೊಡಗಿದರು. ಲಾಠಿಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ತ್ರಿವರ್ಣ ಧ್ವಜ ಹಿಡಿದು ವಿವಿಧ ಗ್ರಾಮಗಳಿಗೆ ತೆರಳುವ ರಸ್ತೆಗಳನ್ನು, ಕೊನೆಗೆ ನ್ಯಾಯಾಲಯವನ್ನೂ ಅಡ್ಡಗಟ್ಟಿದರು. ಆದರೆ, ನಾವು ಸಂಪೂರ್ಣ ದೃಢತೆ, ಬದ್ಧತೆ ಮತ್ತು ವೃತ್ತಿಧರ್ಮಕ್ಕೆ ಅನುಗುಣವಾಗಿ ಮಾಡಿದ ಕೆಲಸಕ್ಕೆ ಅಚಲವಾಗಿ ಮತ್ತು ತಾಳ್ಮೆ ಕಳೆದುಕೊಳ್ಳದೆ ಅಂಟಿಕೊಂಡಿದ್ದೆವು.

ತನಿಖೆ ಕಾರ್ಯ ಸವಾಲಿನದ್ದು

ಖಾಸಗಿ ದೇವಸ್ಥಾನದೊಳಗೆ ಅಮಾನುಷವಾಗಿ ಅತ್ಯಾಚಾರಕ್ಕೆ ಒಳಗಾಗಿದ್ದ ಮಗುವನ್ನು ಪತ್ತೆ ಹಚ್ಚುವುದು ತುಂಬಾ ಕಷ್ಟಕರವಾಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ.

ಶ್ವೇತಾಂಬರಿ ಅವರು ದೇವಸ್ಥಾನದ ಒಳಗೆ ಪ್ರವೇಶಿಸಿ ಸಂತ್ರಸ್ತೆಯ ತಲೆಗೂದಲು ಸೇರಿದಂತೆ ಕೆಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಆ ಕೂದಲು ಬಾಲಕಿಯದ್ದೇ ಎಂಬುದನ್ನು ವಿಧಿವಿಜ್ಞಾನ ಪ್ರಯೋಗಾಲಯ ದೃಢಪಡಿಸಿತ್ತು.

ಜಾಮೀನು ಅರ್ಜಿ ವಿಚಾರಣೆ ವೇಳೆ, ಎದುರಾಳಿ ವಕೀಲರು ವಾದ ಮಂಡಿಸುವ ಬದಲು 10-20 ವಕೀಲರು ಪ್ರತಿಭಟನೆ ಆರಂಭಿಸಿದರು. ಆರೋಪಿಗಳ ಹೆಸರು ಬಹಿರಂಗಪಡಿಸಿದ್ದೇವೆ ಎಂದು ಆರೋಪಿಸಿದರು. ನ್ಯಾಯಾಲಯದ ಹೊರಗೆ ಸಹ ಬೃಹತ್ ಗುಂಪುಗಳನ್ನು ಎದುರಿಸಬೇಕಾಯಿತು.

ಎಫ್‌ಐಆರ್ ದಾಖಲಿಸುವಂತೆ ಠಾಣಾಧಿಕಾರಿಗೆ ಸೂಚಿಸಿದ್ದರೂ ಅವರು ದಾಖಲಿಸಲಿಲ್ಲ. ಕೊನೆಗೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರನ್ನು ಸಂಪರ್ಕಿಸಬೇಕಾಯಿತು. ಎಲ್ಲ ಕಡೆಯೂ ಅರಾಜಕತೆ, ಬೆದರಿಕೆ ಎದುರಿಸಲೇಬೇಕಾಗಿತ್ತು ಎಂದು ವಿವರಿಸಿದ್ದಾರೆ.

ತನ್ನದೇ ಮಗನ ವಯಸ್ಸಿನ ಮಗುವಿನ ಮೇಲೆ ನಡೆದ ಅತ್ಯಾಚಾರದ ವಿವರಗಳನ್ನು ಕೆಲಹಾಕುವುದು ಮಾನಸಿಕವಾಗಿಯೂ ಕಷ್ಟದ ಕೆಲಸವಾಗಿತ್ತು ಎಂದು ಹೇಳಿದ್ದಾರೆ.

ಮಗು, ಗಂಡ ಮುಂತಾದ ಕೌಟುಂಬಿಕ ನಿರ್ವಹಣೆಯ ಹೊಣೆಗಾರಿಕೆಗಳಿಗೆ ಗಮನ ಹರಿಸಲಾಗದೆ, ರಾತ್ರಿಯಿಡೀ ನಿದ್ದೆಗೆಟ್ಟು ಕೆಲಸ ಮಾಡಬೇಕಾಗಿತ್ತು. ಕೊನೆಗೂ ನಮ್ಮ ಕೆಲಸ ಯಶಸ್ವಿಯಾಯಿತು. ಆ ಅತ್ಯಾಚಾರಿಗಳು ಮತ್ತು ಕೊಲೆಗಡುಕರಿಗೆ ಶಿಕ್ಷೆ ವಿಧಿಸುವ ಪ್ರಯತ್ನದಲ್ಲಿ ನಾವೊಂದಿಷ್ಟು ಕೆಲಸ ಮಾಡಿದ್ದೇವೆ ಎಂಬ ಸಂತೃಪ್ತಿ ನಮ್ಮ ತಂಡಕ್ಕೆ ಆಗಿದೆ.

ನಮಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ಎಲ್ಲ ರೀತಿಯ ಪುರಾವೆಗಳನ್ನು ಸಹ ಒದಗಿಸಿದ್ದೇವೆ. ನಮ್ಮ ತನಿಖೆ ಸಂತ್ರಸ್ತೆಗೆ ನ್ಯಾಯ ಒದಗಿಸಲಿದೆ ಎಂಬ ಭರವಸೆ ಇದೆ ಎಂದಿದ್ದಾರೆ ಅವರು.(ಕೃಪೆ: ದಿ ಕ್ವಿಂಟ್ ಡಾಟ್ ಕಾಮ್)

English summary
The only female officer of the Special Invistigation Case Shwetambari Sharma said, Family and sympathisers of culprits had tried her to influence by mentioning their caste.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X