• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈಗ ನನ್ನ ಕಥೆ ಹೇಳುವ ಸಮಯ ಬಂದಿದೆ : ಪ್ರಿಯಾ ರಮಣಿ

|

ನವದೆಹಲಿ, ಜನವರಿ 29 : "ಈಗ ನನ್ನ ಕಥೆ ಹೇಳುವ ಸಮಯ ಬಂದಿದೆ"

ಈ ಒಂದು ವಾಕ್ಯದಲ್ಲಿ ಎಷ್ಟೊಂದು ಅರ್ಥಗಳು ಅಡಗಿವೆ. ಇದು ಕಥೆಯೊಂದನ್ನು ಕಟ್ಟಿಕೊಡುವ ಸಂಗತಿಯೂ ಆಗಬಹುದು, ಹಿಂದೆ ನಡೆದ ಘಟನೆಯನ್ನು, ಅದರ ಹಿಂದಿರುವ ಸತ್ಯಗಳನ್ನು ಜಗಜ್ಜಾಹೀರು ಮಾಡುವ ಕುರಿತು ಮಾಡಿದ್ದೂ ಆಗಬಹುದು. ಆದರೆ, ಯಾರು ಯಾರ ಬಗ್ಗೆ ಹೇಳಿದ್ದಾರೆ ಎಂಬುದರ ಮೇಲೆ ಹೆಚ್ಚು ಅರ್ಥ ಕಟ್ಟಿಕೊಳ್ಳುತ್ತದೆ.

ಈ ಮಾತನ್ನು ಆಡಿದ್ದು, ಮಾಜಿ ಕೇಂದ್ರ ಸಚಿವ, ಮಾಜಿ ಪತ್ರಕರ್ತ ಎಂಜೆ ಅಕ್ಬರ್ (67) ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೇನೆ ಎಂದು ಹೇಳಿಕೊಂಡು, ಅವರಿಂದಲೇ ಮಾನನಷ್ಟ ಮೊಕದ್ದಮೆ ಕೇಸು ಹಾಕಿಸಿಕೊಂಡಿರುವ ಪತ್ರಕರ್ತೆ ಪ್ರಿಯಾ ರಮಣಿ ಅವರು.

#MeToo : ಎಂಜೆ ಅಕ್ಬರ್ ವಿರುದ್ಧ ತಿರುಗಿಬಿದ್ದ ಸಂತ್ರಸ್ತ ವನಿತೆಯರು

ನನ್ನ ಕಥೆಯನ್ನು ಮಾಧ್ಯಮದಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದೆ, ಈಗ ಇಷ್ಟು ದಿನಗಳ ಕಾಲ ಸಾಮಾಜಿಕ ಜಾಲತಾಣದಲ್ಲಿ ವಿಸ್ತೃತವಾಗಿ ಚರ್ಚೆಯಾಗಿರುವ, ಹಲವಾರು #ಮಿಟೂ ಪ್ರಕರಣಗಳಿಗೆ ನಾಂದಿ ಹಾಡಿದ ಲೈಂಗಿಕ ದೌರ್ಜನ್ಯದ ಕಥೆಯನ್ನು ನ್ಯಾಯಾಲಯದ ಮುಂದೆ ಬಿಚ್ಚಿಡುವ, ಸತ್ಯವನ್ನು ತೆರೆದಿಡುವ ಸಮಯ ಬಂದಿದೆ ಎಂದು ಪ್ರಿಯಾ ರಮಣಿ ಅವರು ಮಾರ್ಮಿಕವಾಗಿ ಹೇಳಿದ್ದಾರೆ.

ಎಂಜೆ ಅಕ್ಬರ್ ಕೇಸ್: ಪತ್ರಕರ್ತೆ ಪ್ರಿಯಾ ರಮಣಿಗೆ ಕೋರ್ಟಿನಿಂದ ಸಮನ್ಸ್

ಮಾಜಿ ಕೇಂದ್ರ ಸಚಿವ ಮೊಬಶಾರ್ ಜಾವೇದ್ ಅಕ್ಬರ್ ಅವರು ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ, ಎಡಿಷನಲ್ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ಸಮರ್ ವಿಶಾಲ್ ಅವರು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಪ್ರಿಯಾ ರಮಣಿ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ತಮ್ಮ ಬದಿಯ ವಿವರ ನೀಡಲು ಪ್ರಿಯಾ ರಮಣಿ ಅವರು ಫೆಬ್ರವರಿ 25ರಂದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಬೇಕಿದೆ.

ಪ್ರಿಯಾ ರಮಣಿಗೆ ಟ್ವಿಟ್ಟಿಗರ ಬೆಂಬಲ

ಪ್ರಿಯಾ ರಮಣಿಗೆ ಟ್ವಿಟ್ಟಿಗರ ಬೆಂಬಲ

ಪ್ರಿಯಾ ರಮಣಿ ಅವರು ಮಾಡಿರುವ ಒಂದು ಸಾಲಿನ ಟ್ವೀಟ್ ಗೆ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಬಹುತೇಕರು, #WithPriya ಎಂಬ ಹ್ಯಾಶ್ ಟ್ಯಾಗ್ ಹಾಕಿಕೊಂಡು, ಹೆದರಬೇಡ ಗೆಳತಿ ನಿನ್ನ ಜೊತೆ ನಾವಿದ್ದೇವೆ, ನಿನಗೆ ಶಕ್ತಿಯನ್ನು ತುಂಬಲು ನಿನಗೆ ಬೆಂಬಲವಾಗಿ ನಾವಿದ್ದೇವೆ, ನಮ್ಮ ಪ್ರಾರ್ಥನೆ ನಿನ್ನೊಂದಿಗಿದೆ, ಧರ್ಮಕ್ಕೆ ಜಯ ಇದ್ದೇ ಇರುತ್ತದೆ, ನೀನು ಈಗಾಗಲೆ ಗೆದ್ದಿರುವೆ, ನಮ್ಮ ಹೃದಯವನ್ನೂ ಗೆದ್ದಿರುವೆ, ಅಲ್ಲಿಯೂ ಗೆದ್ದು ಬರುತ್ತೀ, ನಿನಗೆ ದೇವರು ಒಳ್ಳೆಯದನ್ನು ಮಾಡಲಿ, ಅದೃಷ್ಟ ನಿನ್ನ ಬಳಿಯಿರಲಿ, ನೀನು ಹೀರೋ ನಿನಗೆ ಶುಭವಾಗಲಿ ಎಂದು ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

'ಅಕ್ಬರ್ ತುಟಿಗೆ ತುಟಿಯೊತ್ತಿ ಗಂಟಲೊಳಗೆ ನಾಲಿಗೆ ತುರುಕಿದ್ದರು!'

ನ್ಯಾಯಾಲಯ ಕಥೆ ಕೇಳುವುದೇ, ಪುರಾವೆ ಕೇಳುವುದೆ?

ನ್ಯಾಯಾಲಯ ಕಥೆ ಕೇಳುವುದೇ, ಪುರಾವೆ ಕೇಳುವುದೆ?

ಕೆಲವರು, ಇದು ಮಾಧ್ಯಮವಲ್ಲ ಅಥವಾ ಪತ್ರಿಕಾಗೋಷ್ಠಿಯಲ್ಲ, ನೀನು ಹೋಗುತ್ತಿರುವುದು ನ್ಯಾಯಾಲಯಕ್ಕೆ, ಸಾಕಷ್ಟು ಪುರಾವೆಗಳನ್ನು ಇಟ್ಟುಕೊಂಡೇ ನ್ಯಾಯಾಲಯದ ಮುಂದೆ ನಿನ್ನ ಕಥೆ ಹೇಳು ಎಂದು ಎಚ್ಚರಿಕೆಯ ಮಾತನ್ನೂ ಆಡುತ್ತಿದ್ದಾರೆ. ಇದು ಸತ್ಯವಾದ ಸಂಗತಿ ಕೂಡ. ನ್ಯಾಯಾಲಯ ನಮ್ಮ ಕಥೆ ಕೇಳುವುದಿಲ್ಲ, ಬದಲಾಗಿ ಪುರಾವೆ ಕೇಳುತ್ತದೆ. ದಶಕಗಳ ಹಿಂದೆ ನಡೆದ ಘಟನೆಯ ಬಗ್ಗೆ ನಾವು ಮಾಡಿರುವ ಆರೋಪಗಳನ್ನು ಪುಷ್ಟೀಕರಿಸಲು ಸಾಕ್ಷ್ಯ ಕೇಳುತ್ತದೆ. ಆದರೆ, ಪ್ರಿಯಾ ರಮಣಿ ಬಳಿ ಯಾವುದಿದೆ? ನ್ಯಾಯಾಲಯ ಈ ಪ್ರಕರಣವನ್ನು ವಿಭಿನ್ನವಾಗಿ ಟ್ರೀಟ್ ಮಾಡಿ, ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವುದಾ?

ಕೇಂದ್ರ ಸಚಿವ ಎಂಜೆ ಅಕ್ಬರ್ ವಿರುದ್ದ ಲೈಂಗಿಕ ಕಿರುಕುಳ ಆರೋಪ

ಷಡ್ಯಂತ್ರವಿಲ್ಲ, ವೈಯಕ್ತಿಕ ಹಿತಾಸಕ್ತಿಯೂ ಇಲ್ಲ

ಷಡ್ಯಂತ್ರವಿಲ್ಲ, ವೈಯಕ್ತಿಕ ಹಿತಾಸಕ್ತಿಯೂ ಇಲ್ಲ

ಕೆಲಸದ ಸ್ಥಳದಲ್ಲಿ ತಮಗೇನಾಗುತ್ತಿದೆ ಎಂದು ಹೇಳಿಕೊಳ್ಳಲು ಹಿಂಜರಿಯುವ ಸಮಯದಲ್ಲಿ ಪ್ರಿಯಾ ರಮಣಿ ಅವರು ಎಂಜೆ ಅಕ್ಬರ್ ಅವರಿಂದ ಎಂಥ ಪರಿಸ್ಥಿತಿ ಎದುರಿಸಬೇಕಾಯಿತು ಎಂಬುದನ್ನು ಅಂಕಣವೊಂದರಲ್ಲಿ ಬರೆದಿದ್ದರು. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬೆದರಿಸಿದಾಗ, ನಾನು ಎಂಥ ಬೆದರಿಕೆಗಳಿಗೂ ಬಗ್ಗುವುದಿಲ್ಲ, ನನ್ನ ಹೇಳಿಕೆಗೆ ಕಟಿಬದ್ಧಳಾಗಿದ್ದೇನೆ, ಇಲ್ಲಿ ಯಾವುದೇ ಷಡ್ಯಂತ್ರವಿಲ್ಲ, ವೈಯಕ್ತಿಕ ಹಿತಾಸಕ್ತಿಯೂ ಇಲ್ಲ, ರಾಜಕೀಯ ಮಹತ್ವಾಕಾಂಕ್ಷೆಯೂ ಇಲ್ಲ, ನನ್ನ ಜೀವನವನ್ನು ಪಣಕ್ಕಿಟ್ಟು ಈ ಹೋರಾಟ ನಡೆಸಿದ್ದೇನೆ ಎಂದು ಪ್ರಿಯಾ ರಮಣಿ ತಿರುಗೇಟು ನೀಡಿದ್ದರು. ಪ್ರಿಯಾ ರಮಣಿ ಅವರ ಎದೆಗಾರಿಕೆಯಿಂದ ಧೈರ್ಯ ತೆಗೆದುಕೊಂಡ ಡಜನ್ ಗೂ ಹೆಚ್ಚು ಪತ್ರಕರ್ತೆಯರು ತಾವು ಎಂಜೆ ಅಕ್ಬರ್ ಅವರಿಂದ ಒಳಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಬಹಿರಂಗವಾಗಿಯೇ ಆರೋಪ ಮಾಡಿದ್ದರು.

ಕೆಕ್ಕರಿಸಿ ನೋಡುವಾಗಲೇ ಏಟುಕೊಟ್ಟು ಕಿರುಚಬೇಕಿತ್ತು 'ಮೀಟೂ'!

ಏನನ್ನೂ ಮಾಡಿಯೇ ಇಲ್ಲ

ಏನನ್ನೂ ಮಾಡಿಯೇ ಇಲ್ಲ

ಮೊದಲಿಗೆ ನನ್ನ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳು ಆಧಾರರಹಿತವಾದದ್ದವು, ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದ ಎಂಜೆ ಅಕ್ಬರ್ ನಂತರ ತೀವ್ರ ಒತ್ತಡಕ್ಕೆ ಒಳಗಾಗಿ, ಕಾನೂನು ಹೋರಾಟ ಮಾಡುವ ಉದ್ದೇಶದಿಂದ ರಾಜೀನಾಮೆ ನೀಡಿರುವುದಾಗಿ ಹೇಳಿದ್ದರು. ಪ್ರಿಯಾ ರಮಣಿಯವರು ಹೇಳಿರುವ ಪ್ರಕಾರ, ನಾನು ಏನನ್ನೂ ಮಾಡಿಯೇ ಇಲ್ಲ, ಅಂದರೆ ಯಾವುದೇ ಲೈಂಗಿಕ ದೌರ್ಜನ್ಯ ಎಸಗಿಯೇ ಇಲ್ಲ. ಅದನ್ನು ಅವರೇ ಅವರ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದ್ದಲ್ಲದೆ ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು ಅಕ್ಬರ್. ಪ್ರಿಯಾ ರಮಣಿ ಅವರು ಮಾಡಿದ ಟ್ವೀಟ್ ನಲ್ಲಿ, ಅವರನ್ನು ನನ್ನ ಕಥೆಯಲ್ಲಿ ಹೆಸರಿಸಿರಲಿಲ್ಲ, ಏಕೆಂದರೆ ಅವರು ನನಗೆ 'ಏನೂ ಮಾಡಿರಲಿಲ್ಲ'. ಆದರೆ, ಇನ್ನೂ ಹಲವಾರು ಮಹಿಳೆಯರ ಬಳಿ ಅಸಹ್ಯಕರ ಕಥೆಗಳಿವೆ ಎಂದಿದ್ದರು.

ಪ್ರಿಯಾ ರಮಣಿ ಅವರಿಗೆ ಆಗಿದ್ದೇನೆಂದರೆ...

ಪ್ರಿಯಾ ರಮಣಿ ಅವರಿಗೆ ಆಗಿದ್ದೇನೆಂದರೆ...

ಪ್ರಿಯಾ ರಮಣಿ ಅವರು ಹೇಳಿದ್ದೇನೆಂದರೆ, ತಾವು ಏಷ್ಯನ್ ಏಜ್ ಪತ್ರಿಕೆ ಸೇರಿಕೊಳ್ಳಲೆಂದು ಹೋಟೆಲೊಂದಕ್ಕೆ ಸಂದರ್ಶನಕ್ಕೆಂದು ಹೋದಾಗ, ಎಂಜೆ ಅಕ್ಬರ್ ಅಸಭ್ಯವಾಗಿ ನಡೆದುಕೊಂಡಿದ್ದರು. ಸಂದರ್ಶನ ಮಾಡುವ ಬದಲು, ಸರಿಯಾದ ಬಟ್ಟೆ ಧರಿಸಿರದಿದ್ದ ಅವರು ಮದ್ಯ ತೆಗೆದುಕೊಳ್ಳಲು ಹೇಳಿದ್ದರು, ರೋಮ್ಯಾಂಟಿಕ್ ಹಾಡು ಹಾಡುತ್ತ ಪಲ್ಲಂಗದ ಮೇಲೆ ತಮ್ಮ ಪಕ್ಕದಲ್ಲಿ ಕೂಡಲು ಹೇಳಿದ್ದರು ಎಂದು ಪ್ರಿಯಾ ರಮಣಿ ಬರೆದುಕೊಂಡಿದ್ದರು. ಇದು ಲೈಂಗಿಕ ದೌರ್ಜನ್ಯವಲ್ಲವೆ ಎಂದು ಅವರು ಪ್ರಶ್ನಿಸಿದ್ದರು. ಅವರ ಹಿಂದೆಯೇ ಸುಪರ್ಣಾ ಶರ್ಮಾ, ಮಜಲಿ ಡೇ ಪುಯ್ ಕಂಪ್ ಮುಂತಾದವರು ಎಂಜೆ ಅಕ್ಬರ್ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಮುಂದೇನಾಗುವುದೋ ನ್ಯಾಯಾಲಯವೇ ತೀರ್ಮಾನಿಸಲಿದೆ. ನ್ಯಾಯಾಲಯ ಮಹಿಳೆಯರ ಪರವಾಗಿ ನಿಲ್ಲುವುದೆ ಅಥವಾ ಸಾಕ್ಷ್ಯ ಕೇಳುವುದೆ?

English summary
Time to tell our side of the story : Priya Ramani has tweeted in response to summons by ACMM to appear in a defamation case filed by former Union Minister MJ Akbar against the sexual harassment allegations made by Priya Ramani. Will the court hear the story or ask for evidence?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X