ಲೋಕಸಭಾ ಚುನಾವಣೆ ವೇಳೆಗೆ ತೃತೀಯರಂಗ ಸ್ಥಾಪನೆ?
ಬೆಂಗಳೂರು, ಮೇ 29; ಚುನಾವಣೆಗೆ ಕಾಲ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ನಾಯಕರು ರಾಜಕೀಯ ಲಾಭದ ಬಗ್ಗೆ ಚಿಂತಿಸಲು ಆರಂಭಿಸುತ್ತಾರೆ. ಇದು ಇವತ್ತು ನಿನ್ನೆಯ ಕಥೆಯಲ್ಲ. ಪ್ರತಿ ಚುನಾವಣೆ ಬಂದಾಗಲೂ ರಾಜ್ಯ ಮತ್ತು ರಾಷ್ಟ್ರದಲ್ಲಿ ನಡೆಯುವ ವಿದ್ಯಮಾನಗಳು ಎಂದರೆ ತಪ್ಪಾಗಲಾರದು.
ಮೊದಲೆಲ್ಲ ಚುನಾವಣೆಗೆ ಆರು ತಿಂಗಳು ಇರುವಾಗ ರಾಜಕೀಯ ಪಕ್ಷಗಳ ನಾಯಕರು ಮೈಕೊಡವಿಕೊಂಡು ಮೇಲೇಳುತ್ತಿದ್ದರು. ಆದರೆ ಬದಲಾದ ಕಾಲದಲ್ಲಿ ಎಲ್ಲವನ್ನೂ ರಾಜಕೀಯವಾಗಿಯೇ ನೋಡುವ ಮತ್ತು ರಾಜಕೀಯ ಲಾಭ ಪಡೆಯುವ ಬೆಳವಣಿಗೆಗಳು ನಡೆಯುತ್ತಿರುವುದು ಎದ್ದು ಕಾಣಿಸುತ್ತದೆ.
ಲೋಕಸಭೆ ಚುನಾವಣೆ: ತೃತೀಯ ರಂಗದತ್ತ ಜೆಡಿಎಸ್ ಉತ್ಸುಕ
2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಇದಕ್ಕೂ ಮೊದಲು ರಾಷ್ಟ್ರ ರಾಜಕೀಯದಲ್ಲಿ ತೃತೀಯ ರಂಗ ಸ್ಥಾಪನೆ ಕುರಿತು ಚರ್ಚೆಗಳು ಆರಂಭವಾಗಿವೆ. ಬಿಜೆಪಿಯನ್ನು ಎದುರಿಸಲು ಸಮಾನ ಮನಸ್ಕ ಪಕ್ಷಗಳು ಒಂದಾಗುವ ಸುಳಿವು ನೀಡಿದ್ದು, ಈ ಕುರಿತು ಮಾತುಕತೆಗಳು ಸಹ ಆರಂಭವಾಗಿವೆ.
ದೇವೇಗೌಡರನ್ನು ಭೇಟಿ ಮಾಡಿದ ತೆಲಂಗಾಣ ಸಿಎಂ ಕೆಸಿಆರ್: ತೃತೀಯ ರಂಗದ ಕನಸು
ಈ ಬಾರಿ ತೃತೀಯ ರಂಗ ಸ್ಥಾಪನೆಗೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಮುಂದಾಗಿದ್ದಾರೆ. ವಿವಿಧ ರಾಜ್ಯಗಳಿಗೆ ತೆರಳಿ ಕಾಂಗ್ರೆಸ್ಯೇತರ ಪಕ್ಷಗಳ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಬಿಜೆಪಿ ವಿರುದ್ಧ ಪ್ರಬಲ ತೃತೀಯ ರಂಗ ಸ್ಥಾಪಿಸಿಯೇ ತೀರುವುದಾಗಿ ಹಠಕ್ಕೆ ಬಿದ್ದಿದ್ದಾರೆ. ಮುಂದೇನಾಗುತ್ತದೆ? ಎಂಬುದನ್ನು ಕಾದು ನೋಡಬೇಕಾಗಿದೆ.
ಬಿಜೆಪಿ-ಕಾಂಗ್ರೆಸ್ ಹೊರತಾದ ತೃತೀಯ ರಂಗ ಕನಸು: ಪ್ರವಾಸ ಆರಂಭಿಸಿದ ಕೆಸಿಆರ್

ನರೇಂದ್ರ ಮೋದಿ ವಿರುದ್ಧ ಕಿಡಿ
ರಾಷ್ಟ್ರ ರಾಜಕೀಯದಲ್ಲಿ ಎಲ್ಲ ಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರುತ್ತಾ ಬಿಜೆಪಿ ಸೇರಿದಂತೆ ಸಂಘಪರಿವಾರವನ್ನು ಬಾಯಿಗೆ ಬಂದಂತೆ ಟೀಕಿಸುತ್ತಿದ್ದರೂ ಬಿಜೆಪಿ ತನ್ನ ಪ್ರಾಬಲ್ಯವನ್ನು ವಿಸ್ತರಿಸುತ್ತಲೇ ಸಾಗುತ್ತಿರುವುದು ಅಚ್ಚರಿ ಹುಟ್ಟಿಸುತ್ತಿದೆ.
ಬಿಜೆಪಿಗೆ ಎದುರಾಳಿಯಾಗಿ ಕಾಂಗ್ರೆಸ್ ಇದ್ದರೂ ಕೂಡ ಬಿಜೆಪಿಯ ಪಕ್ಷ ಸಂಘಟನೆ ಮತ್ತು ಪ್ರಧಾನಿ ನರೇಂದ್ರ ಮೋದಿಯ ಪ್ರಭಾವದ ಎದುರು ಧೂಳಿ ಪಟವಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಬಿಜೆಪಿಗೆ ಎದುರಾಳಿಯಾಗಿ ಗೆಲುವು ಸಾಧಿಸಬಹುದು ಎಂಬ ನಂಬಿಕೆ ಪ್ರಾದೇಶಿಕ ಪಕ್ಷದವರಿಗೆ ಇಲ್ಲವಾಗಿದೆ.
ಅದಕ್ಕಿಂತ ಹೆಚ್ಚಾಗಿ ಬಹಳಷ್ಟು ಪ್ರಾದೇಶಿಕ ಪಕ್ಷಗಳಿಗೆ ತಮ್ಮ ರಾಜ್ಯ ಮತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎದುರಾಳಿಯಾಗಿದೆ. ಆದ್ದರಿಂದ ಕಾಂಗ್ರೆಸ್ಗೆ ಬೆಂಬಲ ನೀಡಿದರೂ ತಮಗೆ ಯಾವುದೇ ಪ್ರಯೋಜನವಾಗಲ್ಲ ಎಂಬ ಆಲೋಚನೆಗಳು ಶುರುವಾಗಿದೆ. ಹೀಗಾಗಿಯೇ ಬಹಳಷ್ಟು ಪ್ರಾದೇಶಿಕ ಪಕ್ಷಗಳು ಎನ್ಡಿಎ ಮತ್ತು ಯುಪಿಎ ಇದೆರಡನ್ನು ಬಿಟ್ಟು ತೃತೀಯ ರಂಗ ಸ್ಥಾಪನೆಯ ಕನಸು ಕಾಣುತ್ತಿದ್ದಾರೆ.

ತೃತೀಯರಂಗದ ವೇದಿಕೆಗೆ ಹರಸಾಹಸ
ಹಾಗೆ ನೋಡಿದರೆ ತೃತೀಯ ರಂಗದ ಕನಸು ಇವತ್ತು ನಿನ್ನೆಯದಲ್ಲ. ಚುನಾವಣಾ ಕಾಲ ಸಮೀಪಿಸುವಾಗಲೆಲ್ಲ ಇಂತಹ ಕನಸು ಕೆಲವು ಪ್ರಾದೇಶಿಕ ಪಕ್ಷದ ನಾಯಕರನ್ನು ಇನ್ನಿಲ್ಲದಂತೆ ಕಾಡುತ್ತದೆ. ಹೀಗಾಗಿ ಪ್ರಧಾನಿ ಖುರ್ಚಿಯ ಕನಸಿನಲ್ಲಿ ಒಂದಷ್ಟು ದಿನಗಳ ಕಾಲ ಓಡಾಟ ನಡೆಯುತ್ತದೆ. ಒಂದಷ್ಟು ಪ್ರಾದೇಶಿಕ ನಾಯಕರನ್ನು ಭೇಟಿಯಾಗಿ ಮಾತುಕತೆಗಳು ನಡೆಯುತ್ತವೆ. ಆದರೆ ಚುನಾವಣೆ ಸಮಯದಲ್ಲಿ ಅದು ಒಂದಷ್ಟು ಭಿನ್ನಾಭಿಪ್ರಾಯಗಳ ಕಾರಣದಿಂದ ನೆನೆಗುದಿಗೆ ಬೀಳುತ್ತದೆ.
ಒಂದು ವೇಳೆ ತೃತೀಯ ರಂಗ ಸ್ಥಾಪನೆಯಾದರೆ ಆದರ ನಾಯಕತ್ವ ವಹಿಸಿಕೊಳ್ಳುವವರು ಯಾರು?. ಪ್ರಧಾನಿ ಅಭ್ಯರ್ಥಿ ಯಾರಾಗ ಬೇಕು?. ಯಾರ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಗೆಲುವು ಸಾಧಿಸಬಹುದು? ಎಂಬುದರ ಬಗ್ಗೆ ತೀರ್ಮಾನ ಮಾಡುವುದೇ ಕಷ್ಟಸಾಧ್ಯವಾಗಿದೆ. ಕಳೆದ 2019ರಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ತೃತೀಯರಂಗದ ಕನಸನ್ನು ಬದಿಗೆ ಸರಿಸಿ ಬಿಜೆಪಿಯನ್ನು ಸೋಲಿಸಿ ನರೇಂದ್ರ ಮೋದಿಯನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಬೇಕೆಂಬ ಒಂದೇ ಒಂದು ಉದ್ದೇಶದಿಂದ ಕಾಂಗ್ರೆಸ್ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಮಹಾಘಟಬಂಧನ್ಗೆ ಚಾಲನೆ ನೀಡಲಾಗಿತ್ತು.

5 ರಾಜ್ಯಗಳ ಚುನಾವಣೆ ಸೋಲು
ಕೆಲವು ದಿನಗಳ ಹಿಂದೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವುದಿರಲಿ, ಅಧಿಕಾರದಲ್ಲಿದ್ದ ರಾಜ್ಯವನ್ನು ಕಳೆದುಕೊಂಡು ಮಕಾಡೆ ಮಲಗಿತ್ತು. ಹೀಗಾಗಿ ಇನ್ನು ನಾವು ಕಾಂಗ್ರೆಸ್ಗೆ ಬೆಂಬಲ ಸೂಚಿಸುತ್ತಾ ಕುಳಿತರೆ ಮುಂದೆ ರಾಜಕೀಯ ಭವಿಷ್ಯ ಇಲ್ಲವಾಗುತ್ತದೆ ಎಂದು ಎಚ್ಚೆತ್ತುಕೊಂಡ ತೃಣಮೂಲ ಕಾಂಗ್ರೆಸ್ನ ಮುಖ್ಯಸ್ಥೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತೃತೀಯ ರಂಗ ಸ್ಥಾಪನೆಯ ಕರೆ ನೀಡಿದ್ದರು.
ಇದೀಗ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅದಕ್ಕೆ ಜೀವ ತುಂಬುತ್ತಿದ್ದಾರೆ. ಸಮಾನಮನಸ್ಕ ಪ್ರಾದೇಶಿಕ ಪಕ್ಷಗಳ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತಿದ್ದಾರೆ. ತೃತೀಯ ರಂಗ ಸ್ಥಾಪನೆಯ ಚರ್ಚೆಗಳು ಆರಂಭಗೊಂಡಿವೆ. ಮುಂದಿನ ದಾರಿ?.

ಮಹಾಘಟಬಂಧನ್ ಸಕ್ಸಸ್ ಕಾಣಲಿಲ್ಲ
ಮಹಾಘಟಬಂಧನ್ಗೆ ವೇದಿಕೆ ಕೂಡ ಕರ್ನಾಟಕವೇ ಆಗಿತ್ತು. ಲೋಕಸಭಾ ಚುನಾವಣೆಗೆ ಒಂದು ವರ್ಷವಿರುವಾಗ ಮಹಾಘಟಬಂಧನ್ ಕಲ್ಪನೆ ಶುರುವಾಗಿತ್ತಾದರೂ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಮಂಕಾಯಿತು. ತದ ನಂತರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ಪಡೆದು ಎರಡನೇ ಬಾರಿಗೆ ಅಧಿಕಾರ ಹಿಡಿಯುವಂತಾಯಿತು. ಕಾಂಗ್ರೆಸ್ನ ಸೋಲು ಇತರೆ ಪ್ರಾದೇಶಿಕ ಪಕ್ಷಗಳು ಅದರ ಹತ್ತಿರ ಸುಳಿಯದಂತೆ ಮಾಡಿತು. ಕಳೆದ ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ಗೆ ಬೆಂಬಲ ನೀಡಿದರೆ ಪ್ರಯೋಜನವಿಲ್ಲ ಎಂಬುದನ್ನು ಅರಿತು, ಕಳೆದೊಂದು ವರ್ಷದಿಂದ ಪ್ರಾದೇಶಿಕ ಪಕ್ಷಗಳ ನಾಯಕರು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಗೆ ಪರ್ಯಾಯವಾಗಿ ತೃತೀಯ ರಂಗವನ್ನು ಕಟ್ಟುವ ತೀರ್ಮಾನಕ್ಕೆ ಬಂದಿದ್ದಾರೆ. ಇದರಿಂದ ಈ ಹಿಂದೆಯೇ ಹುಟ್ಟಿಕೊಂಡಿದ್ದ ತೃತೀಯ ರಂಗದ ಕನಸಿಗೆ ವೇಗ ಸಿಕ್ಕಿದೆ.

ತೃತೀಯರಂಗ ಸ್ಥಾಪನೆ ಸಾಧ್ಯನಾ?
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಜಕೀಯ ವೈರತ್ವ ಕಟ್ಟಿಕೊಂಡಿರುವ ಕೆ. ಚಂದ್ರಶೇಖರ ರಾವ್ ಏನೇ ಆಗಲಿ ತೃತೀಯರಂಗ ಸ್ಥಾತಪನೆ ಮಾಡಿ ಮುಂದಿನ 2024ರ ಲೋಕಸಭಾ ಚುನಾವಣೆ ವೇಳೆಗೆ ಮೋದಿಗೆ ಟಕ್ಕರ್ ನೀಡುವ ಮೂಲಕ ಪ್ರಧಾನಿ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ಅವರು ತೃತೀಯ ರಂಗದ ಸಾರಥ್ಯ ವಹಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಮುಂದಿನ 2023ರ ವಿಧಾನಸಭಾ ಚುನಾವಣೆ ದೇವೇಗೌಡರ ಪಾಲಿಗೆ ಬಹುಮುಖ್ಯವಾಗಿದೆ. ಅದರತ್ತ ಸದ್ಯ ಹೆಚ್ಚಿನ ಗಮನಹರಿಸಬೇಕಿದೆ. ಹೀಗಿರುವಾಗ 2024ರ ಲೋಕಸಭಾ ಚುನಾವಣೆಯತ್ತ ಈಗಿನಿಂದಲೇ ನಿಗಾವಹಿಸುವುದು ಅವರಿಗೆ ಕಷ್ಟವಾಗಲಿದೆ.
ಆದರೆ ದೇವೇಗೌಡರು ಸೇರಿದಂತೆ ಜೆಡಿಎಸ್ ನಾಯಕರಿಗೆ ತೃತೀಯ ರಂಗದತ್ತ ಒಲವಿಲ್ಲ ಎಂದು ಹೇಳಲಾಗದು. ಸದ್ಯ ವಿಧಾಸಭಾ ಚುನಾವಣೆಯಿರುವುದರಿಂದ ರಾಜ್ಯ ರಾಜಕೀಯಕ್ಕೆ ಒತ್ತು ನೀಡಿ ಆ ನಂತರ ರಾಷ್ಟ್ರ ರಾಜಕೀಯದತ್ತ ದೇವೇಗೌಡರು ಹೊರಳಿದರೆ ಅಚ್ಚರಿ ಪಡುವಂತಿಲ್ಲ. ಪ್ರತಿ ಬಾರಿಯೂ ಲೋಕಸಭಾ ಚುನಾವಣೆ ಹತ್ತಿರ ಬಂದಾಗಲೆಲ್ಲ ತೃತೀಯರಂಗ ಸ್ಥಾಪನೆಯ ವಿಚಾರ ಮುಂಚೂಣಿಗೆ ಬರುವುದು ಮಾಮೂಲಿಯಾಗಿದೆ. ಆದರೆ ಈ ಬಾರಿ ಹಾಗಾಗ ಬಾರದು ಎಂಬ ಉದ್ದೇಶದಿಂದ ಅಖಾಡಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಇಳಿದಿದ್ದಾರೆ.