ರಾಹುಲ್ ಗಾಂಧಿ ಇಟಲಿ ಕನ್ನಡಕ ತೆಗೆದು ನೋಡಲಿ: ಅಮಿತ್ ಶಾ
ಇಟಾನಗರ ಮೇ 24: "ವಯಾನಾಡು ಸಂಸದರು ತಮ್ಮ ಇಟಲಿ ಕನ್ನಡಕವನ್ನು ತೆಗೆದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಬೇಕು" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಲಹೆ ನೀಡಿದರು.
ಅರುಣಾಚಲ ಪ್ರದೇಶದ ನಮ್ಸಾಯಿ ಜಿಲ್ಲೆಯಲ್ಲಿ 1,000 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿದರು.
"ಕಳೆದ 8 ವರ್ಷದಲ್ಲಿ ಏನು ಅಭಿವೃದ್ಧಿ ಕಾರ್ಯ ಆಗಿದೆ ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸುತ್ತಾರೆ. ಇವರು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ. ರಾಹುಲ್ ಬಾಬಾ ತಮ್ಮ ಇಟಲಿ ಕನ್ನಡಕವನ್ನು ತೆಗೆದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೋಡಲಿ'' ಎಂದು ಅಮಿತ್ ಶಾ ಹೇಳಿದರು.
"ಅರುಣಾಚಲ ಪ್ರದೇಶದಲ್ಲಿ ಕಳೆದ ಎಂಟು ವರ್ಷಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಸುಧಾರಿಸಲು, ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಾಕಷ್ಟ ಕೆಲಸಗಳು ನಡೆದಿವೆ. ಕಳೆದ 50 ವರ್ಷಗಳಲ್ಲಿ ನಡೆಯದ ಅಭಿವೃದ್ಧಿ ಕೆಲಸಗಳನ್ನು ನರೇಂದ್ರ ಮೋದಿ ಮತ್ತು ಪೆಮಾ ಖಂಡು 8 ವರ್ಷಗಳಲ್ಲಿ ಸಾಧಿಸಿದ್ದಾರೆ'' ಎಂದು ಶ್ಲಾಘಿಸಿದರು.
ಎರಡು ದಿನಗಳ ಅರುಣಾಚಲ ಪ್ರದೇಶ ಭೇಟಿಯಲ್ಲಿರುವ ಅಮಿತ್ ಶಾ, ರಾಜ್ಯದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಸೋಮವಾರ ನಾಮ್ಸಾಯಿ ಜಿಲ್ಲೆಯ ಗೋಲ್ಡನ್ ಪಗೋಡಕ್ಕೆ ಅಮಿತ್ ಶಾ ಭೇಟಿ ನೀಡಿದರು. ಈ ವೇಳೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹಾಗೂ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಉಪಸ್ಥಿತರಿದ್ದರು.

ಅರುಣಾಚಲ ಪ್ರದೇಶ ಭೇಟಿ ಸಮಯದಲ್ಲಿ ಅಮಿತ್ ಶಾ ಅವರು ರಾಜ್ಯದಲ್ಲಿ ಕೈಗೊಂಡಿರುವ ಭದ್ರತಾ ಕ್ರಮಗಳು ಮತ್ತು ಅಭಿವೃದ್ಧಿಯನ್ನು ಪರಿಶೀಲಿಸಲಿದ್ದಾರೆ ಜತೆಗೆ ಭಾರತೀಯ ಸೇನೆ, ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ), ಸರ್ವೀಸಸ್ ಸೆಲೆಕ್ಷನ್ ಬೋರ್ಡ್(ಎಸ್ಎಸ್ ಬಿ), ಅಸ್ಸಾಂ ರೈಫಲ್ಸ್, ಬಾರ್ಡರ್ ರೋಡ್ ಆರ್ಗನೈಸೇಶನ್ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್(ಎನ್ಎಚ್ಐಡಿಎಲ್ ಸಿ) ಸಿಬ್ಬಂದಿಯೊಂದಿಗೆ ಸಂವಾದ ನಡೆಸಲಿದ್ದಾರೆ.
ಅಲ್ಲದೇ ಭಾರತೀಯ ಸೇನೆ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ(ಸಿಎಪಿಎಫ್) ಸಿಬ್ಬಂದಿಯೊಂದಿಗೆ ಭೋಜನ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.