ಮೋದಿ ಸಂಸದ ಸ್ಥಾನಕ್ಕೆ ಸವಾಲೆಸೆದ ಬಹದ್ದೂರ್ ಅರ್ಜಿ ವಜಾ
ನವದೆಹಲಿ, ನ. 24: ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಿಂದ ಲೋಕಸಭೆಗೆ ಸಂಸದರಾಗಿ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಮಾಜಿ ಯೋಧ ತೇಜ್ ಬಹದ್ದೂರ್ ಅವರು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ನ್ಯಾಯಪೀಠವು ಅರ್ಜಿಯನ್ನು ತಳ್ಳಿ ಹಾಕಿದೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಸ್ಪಿ-ಬಿಎಸ್ಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಾಜಿ ಬಿಎಸ್ಪಿ ಯೋಧ ತೇಜ್ ಬಹದ್ದೂರ್ ಸ್ಪರ್ಧಿಸಿದ್ದರು. ಆದರೆ, ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ್ದ ದಾಖಲೆಗಳು ಸಮಪರ್ಕವಾಗಿಲ್ಲದ ಕಾರಣ ನಾಮಪತ್ರ ತಿರಸ್ಕೃತಗೊಂಡಿತ್ತು, ಗಡಿ ಭದ್ರತಾ ಪಡೆಯಿಂದ ನಿರಪೇಕ್ಷಣಾ ಪತ್ರ ಪಡೆದಿರಲಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿತ್ತು.
ಮೋದಿ ಎದುರಾಳಿ ತೇಜ್ ಬಹದೂರ್ ಯಾದವ್ ಆಸ್ತಿ ವಿವರ
ತೇಜ್ ಬಹದ್ದೂರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ, ಜಸ್ಟೀಸ್ ಎಎಸ್ ಬೋಪಣ್ಣ ಹಾಗೂ ಜಸ್ಟೀಸ್ ವಿ ರಾಮಸುಬ್ರಮಣಿಯನ್ ಅವರು ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದು, ಅರ್ಜಿಯನ್ನು ವಜಾಗೊಳಿಸಿದರು.
"ನಾನು ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆ ಕಣಕ್ಕಿಳಿದಿದ್ದೆ. ನಂತರ ಸಮಾಜವಾದಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು. ನನ್ನ ನಾಮಪತ್ರ ತಿರಸ್ಕೃತಗೊಳ್ಳಲು ಸರಿಯಾದ ಕಾರಣ ನೀಡಿಲ್ಲ'' ಎಂದು ತೇಜ್ ಬಹದ್ದೂರ್ ದೂರಿದ್ದರು.
ಆದರೆ, ಯಾವುದೇ ಸರ್ಕಾರಿ ಸಿಬ್ಬಂದಿಯು ಭ್ರಷ್ಟಾಚಾರ ಹಾಗೂ ಸೈನಿಕರು ವಿಶ್ವಾಸದ್ರೋಹ ಆರೋಪದಡಿ ಸೇವೆಯಿಂದ ಅಮಾನತ್ತಾಗಿದ್ದರೆ ಅಂತಹವರು ಐದು ವರ್ಷ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಇದೇ ನಿಯಮದಡಿ ತೇಜ್ ಬಹದ್ದೂರ್ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಆಯೋಗ ಸ್ಪಷ್ಟನೆ ನೀಡಿ ಅಲಹಾಬಾದ್ ಕೋರ್ಟಿಗೂ ದಾಖಲೆ ಒದಗಿಸಿತ್ತು.
2017ರಲ್ಲಿ ಗಡಿ ಭಾಗದಲ್ಲಿ ಸೇವೆ ಸಲ್ಲಿಸುವ ಯೋಧರಿಗೆ ನೀಡಲಾಗುವ ಆಹಾರ ಕಳಪೆ ಗುಣಮಟ್ಟದ್ದಾಗಿದೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತೇಜ್ ಬಹದ್ದೂರ್ ಅವರು ಹರಿಬಿಟ್ಟಿದ್ದರು, ಇದರಿಂದಾಗಿ ಅವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿತ್ತು. ಈ ಬಗ್ಗೆ ನಿರಪೇಕ್ಷಣಾ ಪತ್ರವನ್ನು ಸಲ್ಲಿಸುವಂತೆ ಆಯೋಗವು ಕೇಳಿತ್ತು, ಆದರೆ ತೇಜ್ ಪಾಲ್ ಅವರು ನಿರಪೇಕ್ಷಣಾ ಪತ್ರ ಸಲ್ಲಿಸಲು ವಿಫಲರಾಗಿದ್ದರು.