ಉಡ್ತಾ ಪಂಜಾಬ್ ಬಿಡುಗಡೆ ತಡೆಗೆ ಸುಪ್ರೀಂ ನಕಾರ
ನವದೆಹಲಿ, ಜೂನ್ 16: ವಿವಾದಿತ "ಉಡ್ತಾ ಪಂಜಾಬ್ " ಚಿತ್ರ ಬಿಡುಗಡೆಗೆ ಇದ್ದ ಎಲ್ಲ ಅಡ್ಡಿ ಆತಂಕಗಳು ಅಂತಿಮವಾಗಿ ದೂರವಾಗಿವೆ. ಚಿತ್ರ ಬಿಡುಗಡೆ ತಡೆ ಕೋರಿ ಪಂಜಾಬ್ ನ ಎನ್ ಜಿಒ ಸಲ್ಲಿಕೆ ಮಾಡಿದ್ದ ಮನವಿಯನ್ನು ತಿರಸ್ಕಾರ ಮಾಡಿರುವ ಸುಪ್ರೀಂ ಕೋರ್ಟ್ ಚಿತ್ರ ಬಿಡುಗಡೆ ಮಾಡಲು ಅಡ್ಡಿಯಿಲ್ಲ ಎಂದು ಗುರುವಾರ ತಿಳಿಸಿದೆ.
ಆದರೆ ಚಿತ್ರದಲ್ಲಿ ಬಳಕೆ ಮಾಡಿರುವ ಪದಗಳನ್ನು ಸುಪ್ರೀಂ ಕೋರ್ಟ್ ವಿಮರ್ಶೆ ಮಾಡಿ ಇಂಥ ಆಶ್ಲೀಲ ಮತ್ತು ಕೆಟ್ಟ ಪದ ಬಳಕೆ ಮಡಿದ್ದು ಯಾವ ಕಾರಣಕ್ಕೆ ಎಂಬ ಪ್ರಶ್ನೆಯನ್ನು ಕೇಳಿದೆ.
ಬಾಂಬೆ ಹೈ ಕೋರ್ಟ್ ನೀಡಿರುವ ತೀರ್ಪನ್ನು ಎತ್ತಿ ಹಿಡಿದಿದ್ದು ಒಂದು ದೃಶ್ಯಕ್ಕೆ ಕತ್ತರಿ ಹಾಕಿ ಬಿಡುಗಡೆ ಮಾಡಬಹುದು ಎಂದು ನ್ಯಾಯಮೂರ್ತಿಗಳಾದ ಆದರ್ಶ ಗೋಯೆಲ್ ಮತ್ತು ಎಲ್ ಎನ್ ರಾವ್ ಅವರಿದ್ದ ಪೀಠ ತಿಳಿಸಿದೆ. ಸೆನ್ಸಾರ್ ಮಂಡಳಿ ಚಿತ್ರಕ್ಕೆ 89 ಕತ್ತರಿ ಪ್ರಯೋಗ ಮಾಡಿತ್ತು. ಸೆನ್ಸಾರ್ ಮಂಡಳಿ ವಿರುದ್ಧ ಚಿತ್ರ ತಂಡ ಬಾಂಬೆ ಹೈ ಕೋರ್ಟ್ ಮೆಟ್ಟಿಲು ಏರಿತ್ತು.[ಉಡ್ತಾ ಪಂಜಾಬ್ ಉಡಾವಣೆಗೆ ಎನ್ಜಿಒ ಅಡ್ಡಿ]
ನ್ಯಾಯಾಲಯ ಹೇಳಿದ್ದೇನು?
ವಿಚಾರಣೆ ವೇಳೆ ನ್ಯಾಯಾಧೀಶರು ಅನೇಕ ಅಂಶಗಳನ್ನು ಉಲ್ಲೇಖ ಮಾಡಿ ಮಾತನಾಡಿದ್ದಾರೆ. ಚಿತ್ರದಲ್ಲಿ ಬಳಸಿರುವ ಕೆಟ್ಟ ಪದ ಬಳಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಯಾಕಾಗಿ ಇಂಥ ಭಾಷೆ? ಎಂದು ಪ್ರಶ್ನೆ ಮಾಡಿದ್ದಾರೆ.[ಉಡ್ತಾ ಪಂಜಾಬ್ಗೆ ಒಂದೇ ಕತ್ತರಿ ಸಾಕೆಂದ ಬಾಂಬೆ ಹೈಕೋರ್ಟ್]
ಮಾದಕ ವಸ್ತುಗಳ ದಾಸರಾದವರು ಇಂಥ ಭಾಷೆ ಬಳಕೆ ಮಾಡುವುದಿಲ್ಲ. ನಾನು ಮಾದಕ ವ್ಯಸನಿಗಳನ್ನು ಹತ್ತಿರದಿಂದ ಕಂಡಿದ್ದೇನೆ. ಯಾವತ್ತೂ ಚಿತ್ರದಲ್ಲಿ ಬಳಕೆ ಮಾಡಿದಂತಹ ಪದ ಅವರು ಬಳಸಿಲ್ಲ ಎಂದು ನ್ಯಾಯಮೂರ್ತಿಗಳಾದ ಆದರ್ಶ ಗೋಯೆಲ್ ಉಲ್ಲೇಖ ಮಾಡಿದ್ದಾರೆ.[ಬಿಡುಗಡೆಗೆ ಮುನ್ನವೇ ಮೊಬೈಲ್ ನಲ್ಲಿ 'ಉಡ್ತಾ ಪಂಜಾಬ್']
ಎನ್ ಜಿಒ ದ ವಾದ
ಚಿತ್ರದಲ್ಲಿ ಪಂಜಾಬ್ ನ್ನು ಅತಿ ಕೆಟ್ಟದಾಗಿ ತೋರಿಸಲಾಗಿದೆ. ಇದು ರಾಜ್ಯದ ಯುವಕರ ಮೇಲೆ ಮಾರಕ ಪರಿಣಾಮ ಬೀರುವ ಸಾಧ್ಯತೆ ಇದೆ. ಪಂಜಾಬ್ ಯುವಕರಿಗೆ ಮುಂದೆ ಕೆಲಸ ಸಿಗುವುದೇ ದುಸ್ತರ ಎಂಬ ಸ್ಥಿತಿ ಬಂದರೂ ಬರಬಹುದು ಎಂದು ಎನ್ ಜಿ ಒ ವಾದ ಮುಂದಿಟಡ್ಟಿತು.
ನಿರ್ಮಾಪಕರ ಪರ ವಾದ ಮುಂದಿಟ್ಟ ಮೀನಾಕ್ಷಿ ಅರೋರ, ಕೆಲವೊಂದು ನೈಜ ಸ್ಥಿತಿಯನ್ನು ಜನರ ಮುಂದೆ ಇಡಬೇಕಿದ್ದರೆ ಇಂಥ ಪದ ಬಳಕೆ ಮಾಡಲೇಬೇಕು. ಚಲನಚಿತ್ರ ಅಂದ ಮೇಲೆ ಕೊಂಚ ವೈಭವೀಕರಣ ಮಾಡಿದರೆ ತಪ್ಪಿಲ್ಲ ಎಂದು ಹೇಳಿದರು.
ಹಿಂದಿನ ಕೆಲವು ಪ್ರಕರಣಗಳ ತೀರ್ಪನ್ನು ಉಲ್ಲೇಖ ಮಾಡಿದ ಮೀನಾಕ್ಷಿ, ನಿರ್ದೇಶಕನ ಕ್ರಿಯಾತ್ಮಕ ಚಿಂತನೆಗೆ ಭಂಗ ತರುವುದು ತರವಲ್ಲ ಎಂದು ಹೇಳಿದರು.
ಪಂಜಾಬ್ ಸರ್ಕಾರ ಅಥವಾ ಸೆನ್ಸಾರ್ ಮಂಡಳಿ ಯಾಕೆ ಸುಪ್ರೀಂ ಬಳಿಗೆ ಬರಲಿಲ್ಲ. ಎನ್ ಜಿಒ ಮನವಿ ಸಲ್ಲಿಕೆ ಮಾಡಿತು ಎಂಬುದರ ಬಗ್ಗೆಯೂ ನ್ಯಾಯಾಲಯ ಪ್ರಶ್ನೆ ಮಾಡಿತು.
ಚಿತ್ರ ಬಿಡುಗಡೆ ಸಾಧಕ ಮತ್ತು ಬಾಧಕಗಳನ್ನು ತುಲನೆ ಮಾಡಿದ ನ್ಯಾಯಾಲಯ ಬಿಡುಗಡೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಹೇಳಿತು.