ವಿಶೇಷ ಲೇಖನ : ಸ್ವಾತಂತ್ರ್ಯದ ಕನಸು ನನಸಾಗುತ್ತಿದೆಯಾ?

By: ಬಿ.ಎಂ.ಲವಕುಮಾರ್
Subscribe to Oneindia Kannada

70ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದೇವೆ. ಎಲ್ಲಡೆ ಸ್ವಾತಂತ್ರ್ಯದಿನಾಚರಣೆ ಕುರಿತಂತೆ ಮಾರುದ್ದದ ಭಾಷಣಗಳು ಕೇಳಿಬರುತ್ತಿವೆ. ಇತ್ತೀಚೆಗಿನ ವಿದ್ಯಮಾನಗಳನ್ನು ಗಮನಿಸಿದರೆ ನಿಜವಾಗಿಯೂ ಸ್ವಾತಂತ್ರ್ಯದ ಆಶಯಗಳು ಈಡೇರಿವೆಯಾ? ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ.

ಒಕ್ಕೂಟದ ವ್ಯವಸ್ಥೆಯಲ್ಲಿರುವ ನಾವುಗಳು ಒಂದು ರಾಜ್ಯ ಮತ್ತೊಂದು ರಾಜ್ಯಕ್ಕೆ ಮಗ್ಗುಲ ಮುಳ್ಳಾಗುತ್ತಿದೆ. ಸೌಹಾರ್ದಯುತವಾಗಿ ಬಗೆಹರಿಸಬೇಕಾದ ಸಮಸ್ಯೆಗಳೆಲ್ಲವೂ ನ್ಯಾಯಾಲಯದ ಮೆಟ್ಟಿಲೇರುತ್ತಿವೆ. ಆಡಳಿತರೂಢರಿಗೆ ಜನರ ಸಂಕಷ್ಟಗಳಿಗೆ ಸ್ಪಂದಿಸುವುದಕ್ಕಿಂತ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವುದೇ ಸವಾಲಾಗುತ್ತಿದೆ.[ಲಾಲ್ ಬಾಗ್ 'ಗುಲಾಬಿ' ಸಂಸತ್ ಎದುರು ಸೆಲ್ಫಿ ನಿಷೇಧ]

Special article : 70th Independence Day

ದೇಶಕ್ಕೆ ಅನ್ನನೀಡುವ ಅನ್ನದಾತ ತಾನು ಬೆಳೆದ ಬೆಳೆಗೆ ನಿಖರ ದರ ಪಡೆಯಲಾಗದೆ ಸಂಕಷ್ಟದಲ್ಲಿದ್ದಾನೆ. ಅಷ್ಟೇ ಅಲ್ಲ ಸಾಲದ ಸುಳಿಯಲ್ಲಿ ಸಿಕ್ಕಿ ಸಾವಿಗೆ ಶರಣಾಗುತ್ತಿದ್ದಾನೆ. ಮತ್ತೊಂದೆಡೆ ನೀರು ಕೇಳಿದ ರೈತರು ದೌರ್ಜನ್ಯಕ್ಕೊಳಗಾಗಿ ಜೈಲು ಸೇರುವಂತಾಗಿದೆ. ಹೆಣ್ಣು ಮಕ್ಕಳ ಮೇಲೆ ನಿರಂತರ ಅತ್ಯಾಚಾರ ನಡೆಯುತ್ತಲೇ ಇದೆ. ಇದೆಲ್ಲದರ ನಡುವೆ ಯಾರಿಗೆ ಸಿಕ್ಕಿದೆ ಹಾಗಾದರೆ ಸ್ವಾತಂತ್ರ್ಯ? ಎಂಬ ವಿಷಾದದ ಪ್ರಶ್ನೆ ಸದ್ದಿಲ್ಲದೆ ಎದ್ದು ನಿಲ್ಲುತ್ತದೆ.[320 ಕೈದಿಗಳಿಗೆ ಸ್ವಾತಂತ್ರ್ಯ ದಿಚಾರಣೆಯಂದು ಬಿಡುಗಡೆ ಭಾಗ್ಯ]

ರಾಜಕೀಯ ಹಗ್ಗ ಜಗ್ಗಾಟದಲ್ಲಿ ಭಾರತದ ಶ್ರೀಸಾಮಾನ್ಯ ಬಡವನಾಗುತ್ತಿದ್ದಾನೆ. ಅಧಿಕಾರಕ್ಕೆ ಬಂದ ಮತ್ತು ಅಧಿಕಾರ ಪಡೆಯಲು ಹವಣಿಸುತ್ತಿರುವ ನಾಯಕರು ದೇಶದ ಬಗ್ಗೆ ಚಿಂತಿಸುತ್ತಿಲ್ಲ ಬದಲಾಗಿ ಇದ್ದಷ್ಟು ದಿನ ಹೇಗೆ ಸಂಪಾದಿಸಿ ಕೂಡಿಟ್ಟುಕೊಳ್ಳಬೇಕೆಂಬುದರಲ್ಲಿ ಮಗ್ನರಾಗಿದ್ದಾರೆ.[ಮಂಗಳೂರಲ್ಲಿ ಹಾರಾಡಲಿದೆ 305 ಮೀಟರ್ ಉದ್ದದ ರಾಷ್ಟ್ರಧ್ವಜ]

ಇದೆಲ್ಲದರ ನಡುವೆ ಚಳವಳಿ, ಸೆರೆವಾಸ, ಪ್ರಾಣ ತ್ಯಾಗ ಮಾಡಿ ನಮ್ಮ ಹಿರಿಯರು ತಂದುಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವಾ? ಖಂಡಿತಾ ಇಲ್ಲ. ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕಾದ ಸಂಸ್ಥೆಗಳು ಭ್ರಷ್ಟಕೂಪಗಳಾಗುತ್ತಿವೆ. ಕಾನೂನು ರಕ್ಷಕರು ಭಕ್ಷಕರಾಗುತ್ತಿದ್ದಾರೆ. ಇದೆಲ್ಲವನ್ನೂ ಗಮನಿಸಿದಾಗ ಸ್ವಾತಂತ್ರ್ಯದ ಕನಸು ನನಸಾಗುತ್ತಿದೆಯಾ ಎಂಬ ಪ್ರಶ್ನೆಗೆ ಉತ್ತರಗಳು ಸಿಗುವುದೇ ಇಲ್ಲ.

ಅವತ್ತು ಸ್ವಾತಂತ್ರ್ಯ ದೊರೆತ ದಿನ ದೇಶವನ್ನುದ್ದೇಶಿಸಿ ಪ್ರಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಆಡಿದ ಮಾತುಗಳು ನೆನಪಾಗುತ್ತವೆ. ಅದು ಹೀಗಿದೆ.[ಕೆಂಪುಕೋಟೆ ಮೇಲೆ ಮೋಡಿ ಮಾಡಿದ ಮೋದಿ]

Special article : 70th Independence Day

"ಮಧ್ಯರಾತ್ರಿಯ ಗಂಟೆಹೊಡೆಯುತ್ತಿದ್ದಂತೆ ಜಗತ್ತು ಮಲಗಿರುವಾಗ ಭಾರತವು ಚಲನಶೀಲ ಮತ್ತು ಸ್ವಾತಂತ್ರ್ಯಕ್ಕೆ ಎಚ್ಚೆತ್ತುಕೊಳ್ಳುತ್ತಿದೆ. ಇತಿಹಾಸದಲ್ಲಿ ಬರುವ ಇಂತಹ ಅಪರೂಪದ ಈ ಗಳಿಗೆಯಲ್ಲಿ ಹಳತಿನಿಂದ ಹೊಸತನಕ್ಕೆ ಕಾಲಿಡುತ್ತಿದ್ದೇವೆ. ಹಳೆಯ ಯುಗ ಮುಗಿದು ಬಹುಕಾಲ ಅದುಮಿಟ್ಟ ದೇಶವೊಂದರ ಚೇತನವು ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತಿದೆ. ಇವತ್ತು ನಾವು ನಮ್ಮ ದುರಾದೃಷ್ಟದ ಕಾಲವನ್ನು ಮುಗಿಸಿಕೊಳ್ಳುತ್ತಿದ್ದೇವೆ. ಮತ್ತು ಭಾರತವು ಮತ್ತೆ ತನ್ನನ್ನು ತಾನು ಕಂಡುಕೊಳ್ಳುತ್ತಿದೆ."

ಅದು ಅವರ ಬರೀ ಮಾತು ಆಗಿರಲಿಲ್ಲ ಮುಂದಿನ ಕನಸಾಗಿತ್ತು. ಆದರೆ, ಅದು ನನಸಾಗಿದೆಯಾ ಎಂಬ ಪ್ರಶ್ನೆಯನ್ನು ನಾವೀಗ ಕೇಳಿಕೊಳ್ಳಬೇಕಿದೆ. ಇವತ್ತು ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಸಂಭ್ರಮದಿಂದ ಆಚರಿಸುವುದರ ಹಿಂದೆ ಅಷ್ಟೇ ಅಲ್ಲ ನಾವು ನೆಮ್ಮದಿಯಾಗಿ, ಸ್ವತಂತ್ರರಾಗಿ ಬದುಕುತ್ತಿದ್ದೇವೆ ಎನ್ನುವುದಾದರೆ ಈಗಿನ ನಮ್ಮ ಈ ಬದುಕಿಗಾಗಿ ಅಂದು ಹೋರಾಡಿ, ತಮ್ಮ ಜೀವನವನ್ನೇ ತ್ಯಾಗ ಮಾಡಿದ, ತ್ಯಾಗಿಗಳನ್ನು ನಾವು ಸ್ಮರಿಸಲೇಬೇಕು.

ಭಾರತ ಸ್ವಾತಂತ್ರ್ಯದ ಇತಿಹಾಸವನ್ನು ಮೆಲುಕು ಹಾಕುತ್ತಾ ಹೋದರೆ ಅದು ಒಂದೆರಡು ದಿನದ ಹೋರಾಟವಲ್ಲ. ಸುಮಾರು ಎಂಟೊಂಬತ್ತು ದಶಕಗಳ ಕಾಲ ನಡೆದ ನಿರಂತರ ಹೋರಾಟ, ಈ ಹೋರಾಟದಲ್ಲಿ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಬ್ರಿಟೀಷರ ಬೂಟಿನೇಟಿಗೆ, ಬಂದೂಕಿನ ತುಫಾಕಿಗೆ ಬಲಿಯಾಗಿದ್ದಾರೆ. 1857ರಿಂದ 1947ರವರೆಗಿನ ಹೋರಾಟವನ್ನು ಗಮನಿಸಿದರೆ ಸ್ವಾತಂತ್ರ್ಯಕ್ಕಾಗಿ ಭಾರತದಲ್ಲಿ ನಡೆದ ದಂಗೆಗಳು, ಹೋರಾಟಗಳು ನಿಜಕ್ಕೂ ರೋಚಕ. ಅಷ್ಟೇ ಅಲ್ಲ ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯ ಪಡೆದದ್ದು ಮತ್ತೊಂದು ವಿಶೇಷ ಸಾಧನೆ.

ವ್ಯಾಪಾರಕ್ಕೆಂದು ಈಸ್ಟ್ ಇಂಡಿಯಾ ಕಂಪನಿ ಮೂಲಕ ಬಂದ ಬ್ರಿಟೀಷರು ಭಾರತದಲ್ಲಿ ಆಳುತ್ತಿದ್ದ ವಿವಿಧ ರಾಜರುಗಳ ನಡುವಿನ ಒಳಜಗಳ, ರಾಜ್ಯ ವಿಸ್ತರಣೆಗಾಗಿ ನಡೆಯುತ್ತಿದ್ದ ಕುತಂತ್ರಗಳನ್ನು ತಮ್ಮ ದಾಳಗಳನ್ನಾಗಿ ಬಳಸಿಕೊಂಡು ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿಕಟ್ಟಿ ಅದರ ಲಾಭವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡರಲ್ಲದೆ, ಭಾರತವನ್ನೇ ತಮ್ಮ ಮುಷ್ಟಿಗೆ ಪಡೆದು ಸರ್ವಾಧಿಕಾರಿಗಳಾಗಿ ಮೆರೆದು ಸಂಪತ್ತನ್ನೆಲ್ಲಾ ಲೂಟಿ ಮಾಡಿದರು ಎಂಬುವುದನ್ನು ಮರೆಯುವಂತಿಲ್ಲ.

Special article : 70th Independence Day

ಮೊದಲಿಗೆ 1757ರಲ್ಲಿ ವಂಗದ ನವಾಬನಾಗಿದ್ದ ಸಿರಾಜುದ್ದೌಲನನ್ನು ಪ್ಲಾಸಿ ಕದನದಲ್ಲಿ ಸೋಲಿಸಿದ ಈಸ್ಟ್ ಇಂಡಿಯಾ ಕಂಪನಿ ಸಾರಥ್ಯದ ಬ್ರಿಟಿಷ್ ಸೈನ್ಯ ಬಳಿಕ ತಮಗೆ ಸಹಾಯ ಮಾಡಿದ ಮೀರ್ ಜಾಫರ್‍ಗೆ ಅಧಿಕಾರದ ಪಟ್ಟಕಟ್ಟಿತು. ಆ ನಂತರ ತಮ್ಮ ಕುತಂತ್ರದ ಮೂಲಕ ಕಂಪನಿಯ ಅಧಿಕಾರಿಯಾಗಿದ್ದ ರಾಬರ್ಟ್ ಕ್ಲೈವ್ ವಂಗದ ಮೀರ್‍ಜಾಫರ್‍ನಿಂದ ಅಧಿಕಾರವನ್ನು ಕಿತ್ತುಕೊಂಡಿತು. ಬಳಿಕ ತಮ್ಮದೇ ಆದ ರಾಜಕೀಯ ತಂತ್ರ ನಡೆಸಿ ಅದಕ್ಕೆ ಭಾರತದ ಕೆಲವು ರಾಜರುಗಳನ್ನು ಬಳಸಿಕೊಳ್ಳುತ್ತಾ ದೇಶದ ಬಹು ಭಾಗವನ್ನು ತಮ್ಮ ವಶಕ್ಕೆ ಪಡೆದುಕೊಂಡರು.

ಸುಮಾರು ನೂರು ವರ್ಷಗಳ ಕಾಲ ತಮ್ಮ ಕುತಂತ್ರದಿಂದಲೇ ರಾಜ್ಯವಾಳಿದ ಬ್ರಿಟೀಷರು ದೌರ್ಜನ್ಯ ಮುಂದುವರೆಸತೊಡಗಿದ್ದರು. ಯಾವಾಗ ಬ್ರಿಟೀಷರ ಉಪಟಳ ಹೆಚ್ಚಾಯಿತೋ ಭಾರತದ ಮಂದಿ ಎಚ್ಚೆತ್ತು ಕೊಳ್ಳತೊಡಗಿದರು. ಅವರಿಗೆ ಬ್ರಿಟೀಷರ ದುರಾಡಳಿತದ ಅರಿವಾಗಿತ್ತು. ಭಾರತೀಯ ಸೈನಿಕರಿಗೆ ನೀಡಿದ ಬಂದೂಕುಗಳ ತೋಟಕ್ಕೆ ದನ ಹಾಗೂ ಹಂದಿಯ ಕೊಬ್ಬು ಸವರಿದ್ದಾರೆ ಎಂಬ ಕಾರಣಕ್ಕೆ ಸೈನಿಕರು ಬ್ರಿಟೀಷರ ಮೇಲೆ ದಂಗೆ ಎದ್ದರು.

ಇದು ಪ್ಲಾಸಿ ಕದನದ ನಂತರ ನೂರು ವರ್ಷಕ್ಕೆ ಸರಿಯಾಗಿ 1857ರಲ್ಲಿ ನಡೆದ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮ (ಸಿಪಾಯಿ ದಂಗೆ) ವಾಗಿತ್ತು. ಆದರೆ, ಅದು ವ್ಯವಸ್ಥಿತ ಯೋಜನೆಯಿಲ್ಲದೆ ನಡೆದಿದ್ದುದರಿಂದ ಸಫಲವಾಗದೆ ವಿಫಲವಾಯಿತು. ಈ ನಡುವೆ ಭಾರತದ ಶಿಕ್ಷಿತ ಸಮೂಹ ಕೈಕಟ್ಟಿ ಕೂರಲಿಲ್ಲ. ಬ್ರಿಟೀಷರ ವಿರುದ್ಧ ಸಿಡಿದೆದ್ದರು. ರಾಜಕೀಯವಾಗಿ ಸಂಘಟಕರಾದರು.

ಇವರೆಲ್ಲರ ಪ್ರಯತ್ನದ ಫಲವೇ 1885ರಲ್ಲಿ ಭಾರತದಲ್ಲಿ ಕಾಂಗ್ರೆಸ್ ಜನ್ಮತಾಳಿತು. 20ನೇ ಶತಮಾನದ ವೇಳೆಗೆ ದೇಶದೆಲ್ಲೆಡೆ ಸ್ವಾತಂತ್ರ್ಯದ ಕಿಚ್ಚು ಹತ್ತತೊಡಗಿತ್ತು. ಬಾಲಗಂಗಾಧರತಿಲಕ್‍ರಂತಹ ಕ್ರಾಂತಿಕಾರರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. 1918 ಹಾಗೂ 1922ರ ವೇಳೆಯಲ್ಲಿ ಮಹಾತ್ಮಾ ಗಾಂಧಿಯವರು ಅಹಿಂಸೆ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುತ್ತಿದ್ದಂತೆಯೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹತ್ವದ ತಿರುವು ದೊರೆಯಿತು.

ಮಹಾತ್ಮಗಾಂಧಿಯವರೊಂದಿಗೆ ಹಲವು ನಾಯಕರು ಕೈಜೋಡಿಸಿದರು. ಗ್ರಾಮ ಗ್ರಾಮಗಳಲ್ಲಿ ಜನ ಬ್ರಿಟೀಷರ ವಿರುದ್ಧ ತಿರುಗಿ ಬಿದ್ದರು. 1930ರ ವೇಳೆಗೆ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್‍ನ ಹೋರಾಟ ತೀವ್ರಗೊಂಡಿತು. 1942ರಲ್ಲಿ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ದೇಶದಾದ್ಯಂತ ಚಳುವಳಿ ನಡೆಯತೊಡಗಿತು. ಇದೇ ವರ್ಷ ಸುಭಾಷ್‍ಚಂದ್ರ ಬೋಸ್ ಭಾರತ ರಾಷ್ಟ್ರೀಯ ಸೈನ್ಯವನ್ನು ಸಂಘಟಿಸಿ ಬ್ರಿಟೀಷರ ವಿರುದ್ಧ ಯುದ್ಧಕ್ಕೆ ನಿಂತರಾದರೂ ಅವರ ಅಕಾಲ ಮರಣದಿಂದ ಅವರ ಪ್ರಯತ್ನ ವಿಫಲವಾಯಿತು.

ಎರಡನೇ ಮಹಾಯುದ್ದದ ನಂತರ ಕೊನೆಯ ಬ್ರಿಟೀಷ್ ಭಾರತದ ಗವರ್ನರ್ ಜನರಲ್ ಆದ ಲಾರ್ಡ್ ಲೂಯಿ ಮೌಂಟ್ ಬ್ಯಾಟನ್‍ರವರು ಜಾತ್ಯಾತೀತ ಭಾರತ ಮತ್ತು ಮುಸ್ಲಿಂ ಪಾಕಿಸ್ತಾನ ಎಂದು ಎರಡು ಭಾಗಗಳಾಗಿ ಭಾರತದ ವಿಭಜನೆ ಮಾಡುವ ಮೂಲಕ ಆಗಸ್ಟ್ 15, 1947ರ ಮಧ್ಯ ರಾತ್ರಿ ಸ್ವಾತಂತ್ರ್ಯ ನೀಡಿದರು.

ಆ ನಂತರದ ಸ್ವಾತಂತ್ರ್ಯ ಭಾರತ ಹಲವು ಏಳು ಬೀಳುಗಳನ್ನು ಕಂಡಿದೆ. ಹಲವು ಮಹಾನ್ ನಾಯಕರು ಈ ದೇಶವನ್ನು ಆಳಿದ್ದಾರೆ. ನಮ್ಮ ದೇಶ ಅಭಿವೃದ್ಧಿ ಪಥದತ್ತ ಮುನ್ನುಗ್ಗುತ್ತಿದೆ. ಆದರೆ ನಾವು 70ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವ ಈ ಸಂದರ್ಭವೂ ಇನ್ನು ಕೂಡ ಸ್ವತಂತ್ರ್ಯ ಜೀವನ ಸಾಗಿಸಲಾಗದೆ ಬದುಕುತ್ತಿರುವ ಅದೆಷ್ಟೋ ಮಂದಿ ನಿರ್ಗತಿಕರು ನಮ್ಮ ಮುಂದಿದ್ದಾರೆ ಎಂಬ ನೋವು ಕೂಡ ಇಲ್ಲದಿಲ್ಲ.

ಸ್ವಾತಂತ್ರ್ಯದ ಸಂದರ್ಭದಲ್ಲಾದರೂ ಅಧಿಕಾರರೂಢರು ಸ್ವಹಿತ, ಸ್ವಾರ್ಥ ಮರೆತು, ದೇಶದ ಮತ್ತು ದೇಶದ ಜನತೆ ಬಗ್ಗೆ ಚಿಂತಿಸುವ ಅವರ ಅಭಿವೃದ್ಧಿಗೆ ಸಹಕಾರಿಯಾಗುವ ಯೋಜನೆಯನ್ನು ರೂಪಿಸುವ ಸದ್ಭುದ್ಧಿ ಭಾರತಾಂಬೆ ನೀಡಲಿ..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
We are celebrating 70th Independence Day on August 15, 2016. Here are the special article about Independence Day.
Please Wait while comments are loading...