• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂತರ್ಜಲ ಉಳಿಸಿ! ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸಿದ್ದಾಪುರದ ವಿಜ್ಞಾನಿ

By Mahesh
|

ಬೆಂಗಳೂರು, ಜುಲೈ 17: ಅಮೂಲ್ಯ ಅಂತರ್ಜಲ ಸಂಪನ್ಮೂಲವನ್ನು ನಿರ್ವಹಿಸಲು ಮತ್ತು ಆದ್ಯತೆ ಮೇರೆಗೆ ಅಂತರ್ಜಲ ಕಲುಷಿತಗೊಳ್ಳುವುದನ್ನು ತಡೆಯುವ ಸಲುವಾಗಿ ತಕ್ಷಣ ರಾಷ್ಟ್ರೀಯ ಅಂತರ್ಜಲ ನೀತಿಯನ್ನು ರೂಪಿಸುವಂತೆ ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದವರಾದ ಕೃಷಿ ಸೂಕ್ಷ್ಮಜೀವಶಾಸ್ತ್ರಜ್ಞ ಡಾ.ಶ್ರೀಹರಿ ಚಂದ್ರಘಾಟ್ಗಿ ಭಾರತ ಸರ್ಕಾರವನ್ನು ಆಗ್ರಹಿಸಿದ್ದಾರೆ.

ತಕ್ಷಣ ಇದನ್ನು ಮಾಡದಿದ್ದರೆ, ಕಲುಷಿತ ಅಂತರ್ಜಲವು 2017ರಲ್ಲಿ ರೂಪಿಸಲಾದ ರಾಷ್ಟ್ರೀಯ ಆರೋಗ್ಯ ನೀತಿಯ ಮಹತ್ವಾಕಾಂಕ್ಷಿ ಗುರಿಗಳನ್ನು ತಲುಪುವಲ್ಲಿ ಅತಿದೊಡ್ಡ ತಡೆಯಾಗಲಿದೆ ಎಂದು ಅವರು ಸ್ಪಷ್ಟವಾಗಿ ಎಚ್ಚರಿಸಿದ್ದಾರೆ.

ಶಿರಸಿಯ ಪರಿಸರ ತಜ್ಞ ಡಾ.ಶ್ರೀಹರಿಗೆ ಜಪಾನ್ ಸರ್ಕಾರದ ಪ್ರಶಸ್ತಿ

ಜಪಾನ್‌ನ ಇಕೋಸೈಕಲ್ ಕಾರ್ಪೊರೇಷನ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಡಾ.ಶ್ರೀಹರಿಯವರು, ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಆಹ್ವಾನದ ಮೇರೆಗೆ ಕಳೆದ ವಾರಾಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.

ಇತ್ತೀಚೆಗೆ ನಡೆದ ಪ್ರವಾಸಿ ಭಾರತೀಯ ದಿವಸ್ ಸಮಾವೇಶದ ಆರನೇ ಗುಂಪು ಚರ್ಚೆಯಲ್ಲಿ ಅವರು ಪಾಲ್ಗೊಂಡರು. ಈ ಗುಂಪು ಚರ್ಚೆಯ ಮುಖ್ಯ ತಿರುಳು, "ಕೈಗೆಟುಕುವ ದರಲ್ಲಿ ಘನ ತ್ಯಾಜ್ಯ ನಿರ್ವಹಣೆ ಮತ್ತು ದೇಶದಲ್ಲಿ ಜಲಮಾಲಿನ್ಯ ಸಂಬಂಧಿ ಸಮಸ್ಯೆಗಳು" ಎನ್ನುವುದಾಗಿತ್ತು. ಈ ಚರ್ಚೆಯ ಅಧ್ಯಕ್ಷತೆಯನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ವಹಿಸಿದ್ದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಚಿವೆ ಉಮಾಭಾರತಿ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಡಾ.ವಿ.ಕೆ.ಸಿಂಗ್ ಸಹ ಅಧ್ಯಕ್ಷರಾಗಿದ್ದರು. ವಿವಿಧ ಕ್ಷೇತ್ರಗಳ ಏಳು ತಜ್ಞರಲ್ಲಿ ಶ್ರೀಹರಿಯವರಲ್ಲದೇ ಅಮೆರಿಕ, ಜರ್ಮನಿ, ಸ್ವೀಡನ್, ಸಿಂಗಾಪುರ, ಬೆಲ್ಜಿಯಂ ಮತ್ತು ಆಸ್ಟ್ರೇಲಿಯಾದ ತಲಾ ಒಬ್ಬರು ಆಹ್ವಾನಿತ ಅತಿಥಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಕಟ್ಟುನಿಟ್ಟಿನ ನಿಬಂಧನೆಗಳು ಅಗತ್ಯ

ಕಟ್ಟುನಿಟ್ಟಿನ ನಿಬಂಧನೆಗಳು ಅಗತ್ಯ

ತಮ್ಮ ನಿಲುವನ್ನು ಪ್ರಕಟಿಸಿದ ಡಾ.ಶ್ರೀಹರಿಯವರು, ಅಮೆರಿಕ, ಜಪಾನ್, ಚೀನಾ ಮತ್ತು ತೈವಾನ್ ಸೇರಿದಂತೆ ಹಲವು ದೇಶಗಳು ಅಂತರ್ಜಲ ಕಲುಷಿತಗೊಳ್ಳುವುದನ್ನು ತಡೆಯಲು ಕಟ್ಟುನಿಟ್ಟಿನ ನಿಬಂಧನೆಗಳನ್ನು ಹೊಂದಿವೆ. ಭಾರತದಲ್ಲಿ ಅಂತರ್ಜಲ ಲಕ್ಷಾಂತರ ಜನರ ಜೀವಜಲವಾಗಿದ್ದರೂ ಇಂಥ ನಿಬಂಧನೆಗಳಿಲ್ಲ.

ಗ್ರಾಮೀಣ ಪ್ರದೇಶಗಳ ಶೇಕಡ ರಷ್ಟು ಮಂದಿ ಮತ್ತು ನಗರ ಪ್ರದೇಶದ ಶೇಕಡ 60ರಷ್ಟು ಮಂದಿ ಗೃಹಬಳಕೆ ಮತ್ತು ಕೃಷಿ ಉದ್ದೇಶಕ್ಕಾಗಿ ಅಂತರ್ಜಲವನ್ನು ಅವಲಂಬಿಸಿದ್ದಾರೆ. ಇದು ವಿಶ್ವದಲ್ಲೇ ಅತ್ಯಧಿಕ. ಕೃಷಿ ಸಾಧನಗಳಾದ ರಸಗೊಬ್ಬರ & ಕೀಟನಾಶಕಗಳು ಮತ್ತು ಕೈಗಾರಿಕಾ ರಾಸಾಯನಿಕಗಳು ದೇಶದಲ್ಲಿ ಅಂತರ್ಜಲವನ್ನು ಬಹುವಾಗಿ ಮಲಿನಗೊಳಿಸುತ್ತಿವೆ ಎಂದು ಹೇಳಿದರು.

ಚಿಕಿತ್ಸೆಗಿಂತ, ರೋಗ ಬಾರದಂತೆ ತಡೆಯುವುದು ಸೂಕ್ತ

ಚಿಕಿತ್ಸೆಗಿಂತ, ರೋಗ ಬಾರದಂತೆ ತಡೆಯುವುದು ಸೂಕ್ತ

ಕಲುಷಿತ ನೀರನ್ನು ಸೇವಿಸುವುದರಿಂದ ಲಕ್ಷಾಂತರ ಮಂದಿಗೆ ಗಂಭೀರ ಸ್ವರೂಪದ ಕಾಯಿಲೆಗಳು ಬರುತ್ತಿದ್ದು, ಇವರ ಆರೋಗ್ಯ ಕಾಳಜಿಗಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಸರ್ಕಾರ ವೆಚ್ಚ ಮಾಡುತ್ತಿದೆ. ಚಿಕಿತ್ಸೆಗಿಂತ, ರೋಗ ಬಾರದಂತೆ ತಡೆಯುವುದು ಸೂಕ್ತವಾಗಿದ್ದು, ಕಲುಷಿತ ನೀರನ್ನು ಸ್ವಚ್ಛಗೊಳಿಸುವುದು ಅಗತ್ಯ. ಅನಾರೋಗ್ಯಪೀಡಿತ ವ್ಯಕ್ತಿಗಳಗೆ ಚಿಕಿತ್ಸೆ ನೀಡಲು ಸಾವಿರಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುವ ಬದಲು, ಸಾರ್ವಜನಿಕರಿಗೆ ಸುರಕ್ಷಿತ ನೀರನ್ನು ಒದಗಿಸುವುದು ಸೂಕ್ತ ಎಂದು ಅವರು ಸಲಹೆ ಮಾಡಿದರು.

2017ರ ರಾಷ್ಟ್ರೀಯ ಆರೋಗ್ಯ ನೀತಿಯ ಗುರಿಗಳನ್ನು ತಲುಪಲು ಅಂತರ್ಜಲ ಸಮಸ್ಯೆಯು ಹೇಗೆ ದೊಡ್ಡ ತಡೆಯಾಗಿ ಪರಿಣಮಿಸುತ್ತದೆ ಎನ್ನುವುದನ್ನೂ ಚರ್ಚೆಯಲ್ಲಿ ವಿಷದಪಡಿಸಿದರು. ಸೂಕ್ತ ನಿರ್ಬಂಧಗಳನ್ನು ಜಾರಿಗೊಳಿಸುವುದರಿಂದ ಸುಮಾರು 50 ವರ್ಷಗಳ ಕಾಲ ವಾರ್ಷಿಕವಾಗಿ ಸುಮಾರು 25 ಸಾವಿರ ಕೋಟಿ ರೂಪಾಯಿಯ ಪರಿಸರ ಉದ್ಯಮಕ್ಕೆ ಉತ್ತೇಜನ ನೀಡಿದಂತಾಗುವುದು ಮಾತ್ರವಲ್ಲದೇ, ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ವೆಚ್ಚ ಮಾಡುವ ಸಾವಿರಾರು ಕೋಟಿ ರೂಪಾಯಿಗಳನ್ನು ಉಳಿಸಲು ಕೂಡಾ ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ಪ್ರಮುಖ ನೀತಿ ಶಿಫಾರಸ್ಸುಗಳನ್ನು ಸಲಹೆ ಮಾಡಿದರು

ಪ್ರಮುಖ ನೀತಿ ಶಿಫಾರಸ್ಸುಗಳನ್ನು ಸಲಹೆ ಮಾಡಿದರು

* ಅಂತರ್ಜಲ ಕಲುಷಿತಗೊಳ್ಳುತ್ತಿರುವ ಬಗ್ಗೆ ತಕ್ಷಣ ಕಟ್ಟುನಿಟ್ಟಿನ ನಿರ್ಬಂಧಗಳನ್ನು ರೂಪಿಸಬೇಕು ಮತ್ತು ಅಂತರ್ಜಲ ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆಗಳನ್ನು ಶಿಕ್ಷಿಸಲು ಅವಕಾಶ ಇರಬೇಕು.

* ದೇಶಾದ್ಯಂತ ಬಾವಿಗಳ ಅಂತರ್ಜಲ ಕಲುಷಿತಗೊಳ್ಳುವ ಅಂಕಿ ಅಂಶಗಳನ್ನು ನಿಯತವಾಗಿ ಪಡೆಯಲು ಬಾವಿಗಳ ಮೇಲೆ ನಿಗಾ ವಹಿಸುವ ಜಾಲವನ್ನು ರೂಪಿಸಬೇಕು.

* ನಿಯಂತ್ರಣ ಪ್ರಾಧಿಕಾರಗಳಾದ ಮಾಲಿನ್ಯ ನಿಯಂತ್ರಣ ಮಂಡಳಿಗಳು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಅಂತರ್ಜಲ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು.

* ಸಮಸ್ಯೆ ಬಗ್ಗೆ ಗಮನ ಹರಿಸಲು ಸ್ಪಷ್ಟವಾದ ಆಡಳಿತ ಸಂರಚನೆಯನ್ನು ದೇಶದಲ್ಲಿ ಜಾರಿಗೆ ತರುವುದು ಮತ್ತು ಹೊಣೆಗಾರಿಕೆ ಮತ್ತು ಬದ್ಧತೆಯನ್ನು ಸೃಷ್ಟಿಸುವುದು. (ಅಂತರ್ಜಲ ನಿರ್ವಹಿಸುವ ಜವಾಬ್ದಾರಿಯನ್ನು ಹಲವು ಸಂಸ್ಥೆಗಳು ನಿರ್ವಹಿಸುವುದರಿಂದ ಸ್ಪಷ್ಟವಾದ ಆಡಳಿತ ಸಂರಚನೆ ಮತ್ತು ಹೊಣೆಗಾರಿಕೆ ಇಲ್ಲ).

* ಅಂತರ್ಜಲ ತೀರಾ ಕಲುಷಿತಗೊಂಡ ಪರಿಣಾಮವಾಗಿ ಗಂಭೀರ ಆರೋಗ್ಯ ಸಮಸ್ಯೆಗಳು ವರದಿಯಾದ ಪ್ರದೇಶಗಳನ್ನು ತಕ್ಷಣ ಸ್ವಚ್ಛಗೊಳಿಸಲು ಸೂಪರ್‌ಫಂಡ್ ನಿಗದಿಪಡಿಸುವುದು.

* ಮಿತ ವೆಚ್ಚದಾಯಕ ಪರಿಹಾರಾತ್ಮಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಶೋಧನಾ ಸಂಸ್ಥೆಗಳಿಗೆ ನೆರವು ನೀಡುವುದು.

ಸಾರ್ವಜನಿಕ ಬಳಕೆಗಾಗಿ ಉಚಿತ ತಂತ್ರಜ್ಞಾನ

ಸಾರ್ವಜನಿಕ ಬಳಕೆಗಾಗಿ ಉಚಿತ ತಂತ್ರಜ್ಞಾನ

ತಾವು ಪೇಟೆಂಟ್ ಪಡೆದ ಅಂತರ್ಜಲ ಸ್ವಚ್ಛಗೊಳಿಸುವ ತಂತ್ರಜ್ಞಾನವನ್ನು ಭಾರತದಲ್ಲಿ ಸಾರ್ವಜನಿಕ ಬಳಕೆಗಾಗಿ ಉಚಿತವಾಗಿ ನೀಡುವುದಾಗಿಯೂ ಶ್ರೀಹರಿ ಘೋಷಿಸಿದರು. ನಿಯಂತ್ರಣ ಅಧಿಕಾರಿಗಳಿಗೆ ತರಬೇತಿ ನೀಡುವಲ್ಲಿ ಹಾಗೂ ಜಪಾನ್‌ನಿಂದ ಪರಿಸರ ಕ್ಷೇತ್ರಕ್ಕೆ ವಿದೇಶಿ ನೇರ ಬಂಡವಾಳ ತರುವ ನಿಟ್ಟಿನಲ್ಲೂ ನೆರವು ನೀಡುವುದಾಗಿ ಪ್ರಕಟಿಸಿದರು.

2013ರಲ್ಲಿ ಶ್ರೀಹರಿಯವರು ಗೋವಾಗೆ ಜಪಾನ್ ಸರ್ಕಾರದ ನೆರವು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜತೆಗೆ ತಮ್ಮ ತಂತ್ರಜ್ಞಾನದ ಪ್ರಾಯೋಗಿಕ ಪ್ರಾತ್ಯಕ್ಷಿಕೆ ನೀಡಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ತರಬೇತಿಯನ್ನೂ ನೀಡಿದ್ದರು ಎನ್ನುವುದನ್ನು ನೆನಪಿಸಿಕೊಳ್ಳಬಹುದು.

ಅಂತರ್ಜಲ ನೀತಿಯನ್ನು ರೂಪಿಸಲು ಅಗತ್ಯ ಸಲಹೆ

ಅಂತರ್ಜಲ ನೀತಿಯನ್ನು ರೂಪಿಸಲು ಅಗತ್ಯ ಸಲಹೆ

ಡಾ. ಶ್ರೀಹರಿಯವರು ತೈವಾನ್, ಚೀನಾ, ಥಾಯ್ಲೆಂಡ್ ಸೇರಿದಂತೆ ಹಲವು ದೇಶಗಳಿಗೆ ಅಂತರ್ಜಲ ನೀತಿಯನ್ನು ರೂಪಿಸಲು ಅಗತ್ಯ ಸಲಹೆ ನೀಡುತ್ತಿದ್ದಾರೆ. ಇವರಿಗೆ 2017ರಲ್ಲಿ ಜಪಾನ್‌ನ ಪರಿಸರ ಸಚಿವಾಲಯದ ಪ್ರಶಸ್ತಿ ಸಂದಿದ್ದು, ಈ ಹೆಗ್ಗಳಿಕೆಗೆ ಪಾತ್ರರಾದ ಮೊಟ್ಟಮೊದಲ ವಿದೇಶಿ ಪ್ರಜೆ ಎನಿಸಿಕೊಂಡಿದ್ದರು. ಇದು ಜಪಾನ್‌ನಲ್ಲಿ ಪರಿಸರ ವಲಯದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದೆ. ಕಳೆದ 20 ವರ್ಷಗಳಲ್ಲಿ ವಿಶ್ವದಲ್ಲಿ ಅತಿಹೆಚ್ಚು ಮಲಿನಗೊಂಡ 500ಕ್ಕೂ ಹೆಚ್ಚು ಜಲಮೂಲಗಳನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸಿ, ಅಳವಡಿಸಿದ ಸಾಧನೆಯನ್ನು ಗುರುತಿಸಿ ಈ ಗೌರವ ನೀಡಲಾಗಿತ್ತು. ತಮ್ಮ ಯಶಸ್ಸಿಗೆ ತಾಯಿ ಮಾಲಾಚಂದ್ರಘಾಟ್ಗಿ ಅವರೇ ಪ್ರೇರಣೆ. ಕಠಿಣ ಪರಿಶ್ರಮಕ್ಕೆ ಮತ್ತು ಸಾರ್ವಜನಿಕರಿಗೆ ಸೇವೆ ಒದಗಿಸುವಂತೆ ಸದಾ ಅವರು ಸಲಹೆ ನೀಡುತ್ತಿದ್ದರು ಎಂದು ಅವರು ಹೇಳುತ್ತಾರೆ.

ಸಮಾರೋಪದಲ್ಲಿ ಮಾತನಾಡಿದ ಸುಷ್ಮಾ ಸ್ವರಾಜ್

ಸಮಾರೋಪದಲ್ಲಿ ಮಾತನಾಡಿದ ಸುಷ್ಮಾ ಸ್ವರಾಜ್

"ಆಹ್ವಾನಿತ ತಜ್ಞರಿಂದ ಬಂದ ಶಿಫಾರಸ್ಸುಗಳನ್ನು ಕ್ರೋಢೀಕರಿಸಿ ದೇಶದ ಪರಿಸರ ನೀತಿಯನ್ನು ರೂಪಿಸುವಲ್ಲಿ ಪರಿಗಣಿಸುವಂತೆ ಕೋರಿ ಆಯಾ ಸಚಿವಾಲಯಗಳಿಗೆ ಕಳುಹಿಸಲಾಗುವುದು" ಎಂದು ಹೇಳಿದರು.

ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಮೂಲದ ವ್ಯಕ್ತಿಗಳನ್ನು ತಲುಪುವ ಕಾರ್ಯಕ್ರಮದ ಅಂಗವಾಗಿ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಿರ್ದಿಷ್ಟ ವಿಷಯಗಳ ಬಗ್ಗೆ ಒಂದು ದಿನ ಅವಧಿಯ ಪ್ರವಾಸಿ ಭಾರತೀಯ ದಿವಸ ಸಮ್ಮೇಳನಗಳನ್ನು ಆಯೋಜಿಸುತ್ತಿದೆ.

ಇಂಥ ಗುಂಪು ಚರ್ಚೆಗಳನ್ನು ಆಯೋಜಿಸುವ ಮುಖ್ಯ ಉದ್ದೇಶವೆಂದರೆ, ಭಾರತೀಯ ಮೂಲದ ಖ್ಯಾತ ತಜ್ಞರಿಂದ ಭಾರತದ ಮಹತ್ವದ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಸಲಹೆಗಳನ್ನು ಪಡೆಯುವುದು ಮತ್ತು ಇವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅನಿವಾಸಿ ಭಾರತೀಯರು ನೀಡಬಹುದಾದ ಕೊಡುಗೆ ಬಗ್ಗೆ ಅರಿವು ಮೂಡಿಸುವುದು. ಈ ಚರ್ಚೆಗಳ ಸಾರಾಂಶವನ್ನು ನೀತಿ ಶಿಫಾರಸ್ಸುಗಳಾಗಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.

English summary
Dr. Shrihari Chandraghatgi - an environmental scientist living in Tokyo and hailing from Siddapura in the Uttara Kannada District of Karnataka. Dr. Shrihari Chandraghatgi urges Government to set up Groundwater Regulatory Authority and National Policy on Groundwater
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X