ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಬಣ Vs ಸೋನಿಯಾ ಬಣ: ಕಾಂಗ್ರೆಸ್‌ನಲ್ಲಿ ಮುಸುಕಿನ ಗುದ್ದಾಟ

|
Google Oneindia Kannada News

ನವದೆಹಲಿ, ಅಕ್ಟೋಬರ್ 7: ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದ್ದಕ್ಕಿದ್ದಂತೆ ವಿದೇಶ ಪ್ರಯಾಣಕ್ಕೆ ಹೊರಟಿದ್ದಾರೆ. ಲೋಕಸಭೆ ಚುನಾವಣೆಯ ಬಳಿಕ ಕಾಂಗ್ರೆಸ್‌ನಲ್ಲಿ ಉದ್ಭವಿಸಿದೆ ಎನ್ನಲಾದ ಒಡಕಿಗೆ ಇದು ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.

ರಾಹುಲ್ ಗಾಂಧಿ ಅವರು ಶನಿವಾರ ರಾತ್ರಿ ಕಾಂಬೋಡಿಯಾಕ್ಕೆ ತೆರಳಿದ್ದಾರೆ. ಅವರ ಪ್ರಯಾಣದ ಉದ್ದೇಶ ಮತ್ತು ಇತರೆ ಮಾಹಿತಿಯನ್ನು ಪಕ್ಷ ಬಹಿರಂಗಪಡಿಸಿಲ್ಲ. ಎರಡೂ ವಿಧಾನಸಭೆ ಕ್ಷೇತ್ರಗಳ ತಾರಾ ಪ್ರಚಾರಕರ ಪಟ್ಟಿಯಲ್ಲಿರುವ ರಾಹುಲ್ ಗಾಂಧಿ ಅವರು ಕಾಂಬೋಡಿಯಾದಿಂದ ಹಿಂದಿರುಗಿದ ಬಳಿಕ ಚುನಾವಣಾ ಪ್ರಚಾರಕ್ಕೆ ಇಳಿಯಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಆದರೆ ಲೋಕಸಭೆ ಚುನಾವಣೆಯ ಸೋಲಿನ ಬಳಿಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತ್ಯಜಿಸಿರುವುದು ಹಾಗೂ ನಂತರದ ಬೆಳವಣಿಗೆಗಳು ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಹುಟ್ಟುಹಾಕಿದೆ. ಚುನಾವಣೆ ಹೊಸ್ತಿಲಿನಲ್ಲಿಯೇ ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕೆ ತೆರಳಿರುವುದು ಈ ಅನುಮಾನಗಳನ್ನು ಬಲಪಡಿಸಿವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಸ್ವತಃ ಕಾಂಗ್ರೆಸ್ ನಾಯಕರೂ ಇದನ್ನು ಒಪ್ಪಿಕೊಂಡಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಆಪ್ತರಾಗಿರುವ ಅನೇಕ ಮುಖಂಡರನ್ನು ಸೋನಿಯಾ ಗಾಂಧಿ ಅವರಿಗೆ ಆಪ್ತರಾಗಿರುವ ಮುಖಂಡರು ತಮ್ಮ ಪ್ರಭಾವ ಬಳಸಿ ಮೂಲೆಗುಂಪು ಮಾಡುತ್ತಿರುವುದನ್ನು ಹೇಳಿಕೊಂಡಿದ್ದಾರೆ. ಇದರಿಂದ ಕಾಂಗ್ರೆಸ್ ಒಳಗೆ ಎಲ್ಲವೂ ಸರಿಯಿಲ್ಲ ಎಂಬುದು ಬಹಿರಂಗವಾಗಿದೆ. ಈ ಒಡಕನ್ನು ಸರಿಪಡಿಸಲು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಕೂಡ ಮುಂದಾಗುತ್ತಿಲ್ಲ. ಇದರಿಂದ ಪಕ್ಷದಲ್ಲಿ ಎರಡು ಬಣಗಳು ಉಂಟಾಗಿವೆ ಎಂದು ಹೇಳಲಾಗಿದೆ.

ರಾಹುಲ್ ಬೆಂಬಲಿಗರ ಕಡೆಗಣನೆ

ರಾಹುಲ್ ಬೆಂಬಲಿಗರ ಕಡೆಗಣನೆ

ರಾಹುಲ್ ಗಾಂಧಿ ಅವರು ಅಧಿಕಾರದಿಂದ ಕೆಳಗಿಳಿದು ಸೋನಿಯಾ ಗಾಂಧಿ ಅವರು ಮಧ್ಯಂತರ ಅಧ್ಯಕ್ಷೆಯಾಗಿ ನೇಮಕವಾದ ಬಳಿಕದ ಎರಡು ತಿಂಗಳಲ್ಲಿ ರಾಹುಲ್ ನೇಮಿಸಿದ್ದ ಅನೇಕ ಪದಾಧಿಕಾರಿಗಳನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ ಅಥವಾ ಕಡೆಗಣಿಸಲಾಗಿದೆ. ಹರಿಯಾಣದಲ್ಲಿ ಅಶೋಕ್ ತನ್ವಾರ್, ಮುಂಬೈನಲ್ಲಿ ಸಂಜಯ್ ನಿರುಪಮ್ ಮತ್ತು ಮಿಲಿಂದ್ ದೆವೋರಾ, ಪಂಜಾಬ್‌ನಲ್ಲಿ ನವಜೋತ್ ಸಿಂಗ್ ಸಿಧು, ಉತ್ತರ ಪ್ರದೇಶದಲ್ಲಿ ಅದಿತಿ ಸಿಂಗ್ ಮತ್ತು ತ್ರಿಪುರಾದಲ್ಲಿ ಪ್ರದ್ಯೋತ್ ದೇವವರ್ಮನ್ ಅವರು ಮುಖ್ಯವಾಹಿನಿಯಿಂದ ದೂರವೇ ಇದ್ದಾರೆ. ವಿರೋಧಪಕ್ಷವಾಗಿದ್ದರೂ ಕೂಡ ಮೋದಿ ಸರ್ಕಾರದ ವಿರುದ್ಧ ಕೂಡ ರಾಹುಲ್ ಬಣ ಧ್ವನಿ ಎತ್ತುತ್ತಿಲ್ಲ.

ರಾಹುಲ್ ಹಿಂಬಾಲಕರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ತನ್ವಾರ್, ನಿರುಪಮ್ ಮತ್ತು ದೇವವರ್ಮನ್ ಹೇಳಿಕೊಂಡಿದ್ದಾರೆ. ತಮ್ಮನ್ನು ರಾಹುಲ್ ಗಾಂಧಿ ನೇಮಿಸಿದ್ದರು. ಅವರ ಪರವಾಗಿ ಚಟುವಟಿಕೆಗಳನ್ನು ನಡೆಸಿದ್ದಕ್ಕೆ ಹರಿಯಾಣ ಮುಖ್ಯಮಂತ್ರಿ ಭೂಪಿಂದರ್ ಹೂಡಾ ತಮ್ಮನ್ನು ಗುರಿಯನ್ನಾಗಿರಿಸಿಕೊಂಡಿದ್ದಾರೆ ಎಂದು ತನ್ವಾರ್ ಆರೋಪಿಸಿದ್ದಾರೆ. ಇದನ್ನು ರಾಹುಲ್ ಗಾಂಧಿ ಗಮನಕ್ಕೂ ತಂದಿದ್ದಾರೆ. ಆದರೆ ರಾಹುಲ್ ಕೂಡ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ರೀತಿ ಬೆಂಬಲಕ್ಕೆ ಬಾರದೆ ಇರುವುದು ಅವರ ಬೆಂಬಲಿಗರಿಗೆ ನುಂಗಲಾರದ ತುತ್ತಾಗಿದೆ. ಜತೆಗೆ ಚುನಾವಣೆ ಸಮೀಪದಲ್ಲಿ ಇರುವಾಗ ಅವರು ವಿದೇಶಕ್ಕೆ ತೆರಳಿರುವುದು ಕಾಂಗ್ರೆಸ್‌ನಲ್ಲಿ ಒಳಬೇಗುದಿಗಳನ್ನು ಸಾರಿ ಹೇಳುತ್ತಿದೆ.

ಬೆಂಬಲಕ್ಕೆ ನಿಲ್ಲದ ರಾಹುಲ್

ಬೆಂಬಲಕ್ಕೆ ನಿಲ್ಲದ ರಾಹುಲ್

ಮುಖ್ಯವಾಗಿ ಕಾಂಗ್ರೆಸ್‌ನಲ್ಲಿ ಯುವ ಮತ್ತು ಹಿರಿಯ ನಾಯಕರ ನಡುವೆ ಯುದ್ಧ ನಡೆಯುತ್ತಿದೆ ಎಂದೇ ಅನೇಕರು ವಿಶ್ಲೇಷಿಸಿದ್ದಾರೆ. ಕ್ಯಾಪ್ಟನ್ ಅಮರಿಂದರ್ ಸಿಂಗ್, ಕರಣ್ ಸಿಂಗ್ ಮತ್ತು ಮಿಲಿಂದ್ ದೆವೋರಾ ಅವರಂತಹ ಹಿರಿಯ ನಾಯಕರು ಕೂಡ ಯುವ ಮತ್ತು ವರ್ಚಸ್ವಿ ನಾಯಕತ್ವದ ಪರ ಬ್ಯಾಟ್ ಬೀಸಿದ್ದಾರೆ. ಆದರೆ ಅಧ್ಯಕ್ಷಗಿರಿಯಿಂದ ಇಳಿಯುವ ಮುನ್ನ ರಾಹುಲ್ ಗಾಂಧಿ ತಮ್ಮ ಸ್ಥಾನಕ್ಕೆ ಸಮರ್ಥ ಯುವ ನಾಯಕನನ್ನು ಹೆಸರಿಸುವ ತಮ್ಮ ಅಧಿಕಾರವನ್ನು ಕೂಡ ಬಳಸಿಕೊಂಡಿಲ್ಲ. ಇಂತಹ ಪ್ರಮುಖ ವಿಚಾರದಲ್ಲಿಯೇ ಹಿಂದಡಿಯಿಟ್ಟಿರುವ ರಾಹುಲ್ ಗಾಂಧಿ ಅವರು ತಮ್ಮ ಪರವಾಗಿ ಧ್ವನಿ ಎತ್ತಲು ಮುಂದಾಗುತ್ತಾರೆ ಎಂಬ ಭರವಸೆಯನ್ನು ಅವರ ಬಳಗದ ಮುಖಂಡರು ಕಳೆದುಕೊಂಡಿದ್ದಾರೆ.

ಇಂದಿರಾ ಕೂಡ ಅನುಭವಿಸಿದ್ದರು

ಇಂದಿರಾ ಕೂಡ ಅನುಭವಿಸಿದ್ದರು

ಈ ಹಿಂದೆ ಇಂದಿರಾ ಗಾಂಧಿ ಪಕ್ಷದ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಕೂಡ ಕಾಂಗ್ರೆಸ್‌ನ ಹಿರಿಯ ನಾಯಕರು ಅವರಿಗೆ ಇನ್ನಿಲ್ಲದ ಕಿರುಕುಳ ನೀಡಿದ್ದರು. ಪಕ್ಷದೊಳಗಿನ ವಿರೋಧಿಗಳನ್ನು ಅವರು ಹತ್ತಿಕ್ಕಿ ಬೆಳೆದರು. ಈಗ ರಾಹುಲ್ ಗಾಂಧಿ ಅವರ ತಾಯಿಯ ತಂಡವೇ ಅವರ ರಾಜಕೀಯ ಜೀವನಕ್ಕೆ ಮುಳ್ಳಾಗುತ್ತಿದ್ದಾರೆ. ಈ ಎಲ್ಲ ಸಂಕಷ್ಟಗಳನ್ನು ಸರಿಪಡಿಸುವ ಸ್ಥಿತಿಯಲ್ಲಿ ರಾಹುಲ್ ಗಾಂಧಿ ಇಲ್ಲ. ಸೋನಿಯಾ ಗಾಂಧಿ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಹಿರಿಯ ನಾಯಕರು ಚುನಾವಣೆಯಲ್ಲಿನ ಹೀನಾಯ ಸೋಲಿಗೆ ರಾಹುಲ್ ಗಾಂಧಿ ಅವರೇ ಕಾರಣ ಎಂಬ ಅಭಿಪ್ರಾಯವನ್ನು ಬಲವಾಗಿ ಬಿತ್ತಿದ್ದಾರೆ. ಬೆಂಬಲಿಗರನ್ನು ಮೂಲೆಗುಂಪು ಮಾಡುವ ಮೂಲಕ ರಾಹುಲ್ ಅವರನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ರಾಹುಲ್‌ಗೆ ಸಹಕಾರ ನೀಡದ ಹಿರಿಯರು

ರಾಹುಲ್‌ಗೆ ಸಹಕಾರ ನೀಡದ ಹಿರಿಯರು

ರಾಹುಲ್ ಗಾಂಧಿ ಅವರಿಗೆ ಇದು ಹೊಸತಲ್ಲ. ಮೊದಲ ಬಾರಿಗೆ ರಾಹುಲ್ ಅಧ್ಯಕ್ಷಗಿರಿ ಹಿಡಿದಾಗ ಸೋನಿಯಾ ಗಾಂಧಿ ಅವರ ತಂಡದಲ್ಲಿರುವ ಹೆಚ್ಚಿನವರು ದುಗುಡಗೊಂಡಿದ್ದರು. ರಾಹುಲ್ ಅವರೊಂದಿಗೆ ಮತ್ತು ಅವರ ಆಲೋಚನೆಗೊಂದಿಗೆ ಕೆಲಸ ಮಾಡುವುದಕ್ಕೆ ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದರು. ಯುವ ಕಾಂಗ್ರೆಸ್‌ನ ಸದಸ್ಯರಿಗೆ ಹೆಚ್ಚಿನ ಟಿಕೆಟ್‌ಗಳನ್ನು ನೀಡಬೇಕು ಎಂದು ರಾಹುಲ್ ಗಾಂಧಿ ಪಟ್ಟು ಹಿಡಿದಾಗ ಹಿರಿಯ ಮುಖಂಡರು ಸಿಡಿದೆದ್ದಿದ್ದರು.

ರಾಹುಲ್ ಗಾಂಧಿ ಅವರು ಚುನಾವಣೆ ಎದುರಿಸಲು ರೂಪಿಸಿದ್ದ ತಂತ್ರಗಳ ಬಗ್ಗೆ ಅನೇಕ ಹಿರಿಯ ನಾಯಕರಲ್ಲಿ ಸಹಮತ ಇರಲಿಲ್ಲ. ಅದರಲ್ಲಿಯೂ ರಫೇಲ್ ವಿವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುವ ವಿಚಾರವನ್ನು ಒಪ್ಪಿಕೊಂಡಿರಲಿಲ್ಲ. ಅವರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಸಂದೇಶ ನೀಡಿದ್ದರೂ ಅದನ್ನು ಪಾಲಿಸಲು ಹೆಚ್ಚಿನ ಹಿರಿಯ ಮುಖಂಡರು ನಿರಾಕರಿಸಿದ್ದರು. 'ಚುನಾವಣಾ ವಿಚಾರಗಳನ್ನು ಚರ್ಚಿಸುವುದಕ್ಕಾಗಿಯೇ ವಾಟ್ಸಾಪ್ ಗ್ರೂಪ್ ರಚಿಸಲಾಗಿತ್ತು. ಆದರೆ ಪ್ರತಿ ಬೆಳಿಗ್ಗೆ ಅಲ್ಲಿ ಸಂದೇಶಗಳನ್ನು ಕಳುಹಿಸುತ್ತಿದ್ದರೂ ಹಿರಿಯರು ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ' ಎಂದು ಪ್ರಚಾರದಲ್ಲಿ ಪಾಲ್ಗೊಂಡಿದ್ದ ಮುಖಂಡರೊಬ್ಬರು ಹೇಳಿದ್ದಾಗಿ ವಾಹಿನಿಯೊಂದು ವರದಿ ಮಾಡಿದೆ.

ಮತ್ತೆ ರಾಹುಲ್‌ ಗಾಂಧಿಗೆ ಪಟ್ಟ?

ಮತ್ತೆ ರಾಹುಲ್‌ ಗಾಂಧಿಗೆ ಪಟ್ಟ?

ಸೋನಿಯಾ ಗಾಂಧಿ ಅವರು ಮಗ ಎರಡನೆಯ ಅವಧಿಯಲ್ಲಿ ಮುಂದುವರಿಯಬೇಕು ಎಂದು ಬಯಸಿದ್ದಾರೆ. ಆ ಪ್ರಯತ್ನಕ್ಕೆ ಅದನ್ನು ಬಯಸದ ಹಿರಿಯ ಮುಖಂಡರು ಅಡ್ಡಿಪಡಿಸುತ್ತಿದ್ದಾರೆ. ಇದನ್ನು ಕ್ಷಿಪ್ರವಾಗಿ ಬಗೆಹರಿಸುವ ಪ್ರಯತ್ನಕ್ಕೆ ಹೋಗದೆ ಎಚ್ಚರಿಕೆಯಿಂದ ಹೆಜ್ಜೆ ಇರಿಸಲು ಸೋನಿಯಾ ತೀರ್ಮಾನಿಸಿದ್ದಾರೆ. ರಾಹುಲ್ ಗಾಂಧಿ ರಾಜಕೀಯ ಚಟುವಟಿಕೆಗಳನ್ನು ನಡೆಸದಂತೆ ತಡೆಯೊಡ್ಡುವ ಹಿರಿಯ ನಾಯಕರಿಗೆ ಪಾಠ ಕಲಿಸಲು ಸೂಕ್ತ ವೇದಿಕೆ ನಿರ್ಮಿಸಲಾಗುತ್ತದೆ. ಚುನಾವಣೆ ಬಳಿಕ ರಾಹುಲ್ ಗಾಂಧಿ ಮತ್ತೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಏರಲು ಬಯಸಿದರೆ ಹಿರಿಯ ನಾಯಕರ ಪ್ರಭಾವಳಿ ಅಂತ್ಯವಾಗುತ್ತದೆ. ಯುವ ಮುಖಂಡರು ಅವರ ಸ್ಥಾನಕ್ಕೆ ಬರಲಿದ್ದಾರೆ.

ಹರಿಯಾಣ ಮತ್ತು ಮಹಾರಾಷ್ಟ್ರ ಎರಡೂ ಕಡೆ ಕಾಂಗ್ರೆಸ್ ಸೋಲುವುದು ಖಚಿತ ಎಂದು ಸ್ವತಃ ಪಕ್ಷವೇ ಲೆಕ್ಕಾಚಾರ ಹಾಕಿದೆ. ಚುನಾವಣೆ ವಿಚಾರದಲ್ಲಿ ಹರಿಯಾಣದಲ್ಲಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅಲ್ಲಿ ಅವರ ಸೋತರೆ ದೊಡ್ಡ ಹಿನ್ನಡೆಯಾಗಲಿದೆ. ಇದನ್ನು ಬಳಸಿಕೊಂಡು ರಾಹುಲ್ ಬಣ ತನ್ನ ಹಿಡಿತ ಪಡೆದುಕೊಳ್ಳಲಿದೆ ಎಂಬ ಉದ್ದೇಶ ಇದರ ಹಿಂದೆ ಇದೆ ಎನ್ನಲಾಗಿದೆ. ಚುನಾವಣೆಯ ಬಳಿಕ ಹಿರಿಯ ನಾಯಕರನ್ನು ಮೂಲೆಗೆ ಸರಿಸಿ ಯುವ ಮುಖಗಳ ಸಹಾಯದಿಂದ ಪಕ್ಷವನ್ನು ಹೊಸದಾಗಿ ಕಟ್ಟುವುದು ರಾಹುಲ್ ಗಾಂಧಿ ಉದ್ದೇಶ. ಅದಕ್ಕಾಗಿ ಸದ್ಯ ಅವರು ಎಲ್ಲ ಚಟುವಟಿಕೆಗಳಿಂದ ದೂರವೇ ಉಳಿಯುತ್ತಿದ್ದಾರೆ ಎನ್ನಲಾಗಿದೆ.

English summary
Congress leader Rahul Gandhi's Cambodia tour rises more doubts on his involvement in party's decisions as reports says Congress become two teams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X