• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಬಾಯಲ್ಲಿ ಉಲಿದ ಆ ಹೆಸರು, ಕೊಳಗೇರಿ ಮಕ್ಕಳ ಬದುಕಿನ ಬೆಳಕು!

|

ಕಟಕ್, ಮೇ 30: "ಅದು ಮನ್ ಕಿ ಬಾತ್ ಕಾರ್ಯಕ್ರಮದ 44 ನೇ ಆವೃತ್ತಿ. ಎಂದಿನಂತೆ ಆಸಕ್ತಿಯಿಂದ ಆ ಕಾರ್ಯಕ್ರಮವನ್ನು ಕೇಳುತ್ತ ಕುಳಿತಿದ್ದೆ. ಕಾರ್ಯಕ್ರಮದ ನಡುವಲ್ಲಿ, ಒಬ್ಬ ಆದರ್ಶ ವ್ಯಕ್ತಿಯನ್ನು ಪರಿಚಯಿಸುತ್ತೇನೆ ಎಂದ ಪ್ರಧಾನಿ ನರೇಂದ್ರ ಮೋದಿಯವರು ಪ್ರಕಾಶ್ ರಾವ್.... ಎನ್ನುತ್ತಿದ್ದಂತೆಯೇ ನನಗೆ ದಿಗಿಲು! ಇದೆಂಥ ಕನಸಾ? ಎಂದು. ಯಾಕಂದ್ರೆ ಈ ದೇಶದ ಪ್ರಧಾನಿಯ ಬಾಯಲ್ಲಿ ಉಲಿಯುತ್ತಿದ್ದ ಆ ಹೆಸರು, ನನ್ನದು!"

ಕಣ್ಣಲ್ಲಿ ನೀರು ತುಂಬಿಕೊಂಡು ಒಬ್ಬ ಸಾಮಾನ್ಯ ಟೀ ವ್ಯಾಪಾರಿ ಸಾರ್ಥಕ ಕ್ಷಣ ಅನುಭವಿಸುತ್ತ ಹೇಳಿದ ಮಾತು ಇದು. ಒಡಿಶಾದ ಕಟಕ್ ನ ಪ್ರಕಾಶ್ ರಾವ್ ತಮ್ಮ 6 ನೇ ವಯಸ್ಸಿನಿಂದಲೇ ಟೀ ಮಾರುವ ವ್ಯಾಪಾರ ಮಾಡುತ್ತಿರುವವರು. ಕಡುಬಡತನದಲ್ಲಿ ಬೆಳೆದ ಅವರು ಐದನೇ ತರಗತಿಯವರೆಗೆ ಓದಿ, ನಂತರ ಹಣವಿಲ್ಲದೆ ಶಾಲೆಯನ್ನು ತೊರೆದರು.

ಮನ್‌ ಕಿ ಬಾತ್‌: ಪದ್ಮ ಪುರಸ್ಕೃತ ಸಾಮಾನ್ಯರ ಮಾತು, ರಾಜ್ಯದ ಸೀತವ್ವನ ಸ್ಮರಣೆ

ಜೀವನೋಪಾಯಕ್ಕಾಗಿ ಟೀ ವ್ಯಾಪಾರ ಆರಂಭಿಸಿದ ರಾವ್ ಬುದ್ಧಿವಂತರಾಗಿದ್ದರೂ ಹಣಕಾಸಿನ ಸಮಸ್ಯೆಯಿಂದಾಗಿ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗು ಅವರನ್ನು ಸದಾ ಕಾಡುತ್ತಲೇ ಇತ್ತು. ಟೀ ಮಾರಿದ ವ್ಯಾಪಾರದಲ್ಲೇ ಬರುತ್ತಿದ್ದ ಅಲ್ಪ ಹಣವನ್ನೇ ಕೂಡಿಡುತ್ತಿದ್ದ ಬಡ ರಾವ್ ಮನದಲ್ಲಿ ಶ್ರೀಮಂತ ಕನಸುಗಳು! ಕೊನೆಗೂ ತಮ್ಮ ಕನಸನ್ನು ನನಸಾಗಿಸಿಕೊಂಡ ರಾವ್ ಕೊಳಗೇರಿ ಮಕ್ಕಳಿಗೆ ಶಾಲೆ ಆರಂಭಿಸಿದ್ದಾರೆ.

70 ಕ್ಕೂ ಹೆಚ್ಚು ಮಕ್ಕಳಿಗೆ ತಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಕಲಿಸುತ್ತಾ ಆದರ್ಶ ವ್ಯಕ್ತಿಯಾಗಿದ್ದಾರೆ. ಇವರ ಸೇವಾಕಾರ್ಯದ ಬಗ್ಗೆ ತಿಳಿದ ಮೋದಿ ಅವರನ್ನು ತಮ್ಮ ಕಚೇರಿಗೆ ಕರೆಸಿ, ಬಾಯ್ತುಂಬ ಹರಸಿ ಕಳಿಸಿದ್ದಲ್ಲದೆ, ಮನ್ ಕಿ ಬಾತ್ ನಲ್ಲಿ ಅವರ ಹೆಸರನ್ನು ಸ್ಮರಿಸಿದ್ದಾರೆ. ಮೋದಿ ಬಾಯಲ್ಲಿ ರಾವ್ ಹೆಸರು ಕೇಳುತ್ತಿದ್ದಂತೆಯೇ ಇಡೀ ದೇಶಕ್ಕೂ ರಾವ್ ಒಬ್ಬ ಹೀರೋ ಆಗಿದ್ದಾರೆ. ಅವರು ವಾಸಿಸುವ ಸುತ್ತ ಮುತ್ತಲಿನ ಹಳ್ಳಿಯ ಜನರು ರಾವ್ ಅವರ ಕಾಲಿಗೆ ಬಿದ್ದು, ಅವರ ಸೇವೆಗೆ ನಮನ ಸಲ್ಲಿಸುತ್ತಿದ್ದಾರೆ.

ಮನ್ ಕೀ ಬಾತ್ ನಲ್ಲಿ ಕರ್ನಾಟಕದ ವಿದ್ಯಾರ್ಥಿಗಳ ನೆನೆದ ಮೋದಿ

ಅವರ ಆದರ್ಶ ಬದುಕಿನ ಮಜಲು ಮತ್ತು ಪ್ರಧಾನಿಗಳಿಂದ ಕರೆ ಬಂದ ಅನರೀಕ್ಷಿತ ಸಂತಸದ ಕ್ಷಣಗಳ ಬಗ್ಗೆ ಅವರ ಮಾತಲ್ಲೇ ಕೇಳಿ...

ಮೋದಿಯವರ ಸರಳತೆಗೆ ಮಾರುಹೋದೆ...

"ಅದೊಂದು ದಿನ ಪ್ರಧಾನಿ ಕಚೇರಿಯಿಂದ ನನಗೊಂದು ಅನಿರೀಕ್ಷಿತ ಕರೆ ಬಂತು. 'ಮೇ 26 ರಂದು ಶನಿವಾರ ಪ್ರಧಾನಿ ಕಚೇರಿಗೆ ಆಗಮಿಸುವಂತೆ' ಕೋರಿತ್ತು ಆ ಧ್ವನಿ. ಒಬ್ಬ ಸಾಮಾನ್ಯ ಟೀ ವ್ಯಾಪಾರಿ ನಾನು. ನನಗೆ ಪ್ರಧಾನಿ ಕಚೇರಿಯಿಂದ ಕರೆ! ಇದೆಂಥ ಮರುಳಾ?! ಎಂದು ತಲೆಕೆಡಿಸಿಕೊಂಡು ಕೂತಿದ್ದೆ"

"ಏನಾದರಾಗಲಿ ಎಂದುಕೊಂಡು ನನ್ನ ಶಾಲೆಯ 20 ಮಕ್ಕಳನ್ನು ಕರೆದುಕೊಂಡು ಮೇ 26 ರಂದು ಪ್ರಧಾನಿ ಕಚೇರಿಗೆ ತೆರಳಿದೆ. ನನ್ನ ಕಣ್ಣೇ ನಂಬಲಾರದಂತೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಬಂದು ನನ್ನ ಕೈ ಹಿಡಿದು ಆಮಂತ್ರಿಸಿದರು. ನನ್ನೊಂದಿಗಿದ್ದ ಮಕ್ಕಳನ್ನೆಲ್ಲ ಪ್ರೀತಿಯಿಂದ ಮಾತನಾಡಿಸಿದರು."

ಮನ್ ಕಿ ಬಾತ್ ನಲ್ಲಿ ನನ್ನ ಹೆಸರು!

ಮನ್ ಕಿ ಬಾತ್ ನಲ್ಲಿ ನನ್ನ ಹೆಸರು!

ಅದು ಮನ್ ಕಿ ಬಾತ್ ಕಾರ್ಯಕ್ರಮದ 44 ನೇ ಆವೃತ್ತಿ. ಪ್ರಧಾನಿಯವರನ್ನು ಭೇಟಿ ಮಾಡಿದ ಮರುದಿನ(ಮೇ 27). ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡುತ್ತ, ನಿಮಗೊಮ್ಮ ಆದರ್ಶ ವ್ಯಕ್ತಿಯನ್ನು ಪರಿಚಯಿಸುತ್ತೇನೆ ಎಂದು 'ಪ್ರಕಾಶ್ ರಾವ್' ಎಂದಾಗ ನನಗೆ ಕನಸೋ, ನನಸೋ ತಿಳಿಯಲಿಲ್ಲ.

ನಿನ್ನೆ ನನ್ನನ್ನು ಕರೆಸಿ ಬಾಯ್ತುಂಬ ಹರಸಿದ್ದ ಮೋದಿ, ಇಂದು ಇಡೀ ದೇಶಕ್ಕೂ ಕೇಳುವಂತೆ ನನ್ನನ್ನು ಆದರ್ಶ ವ್ಯಕ್ತಿ ಎಂದರು. ಇಷ್ಟು ದಿನ ನಾನು ಕೊಳಗೇರಿ ಮಕ್ಕಳಿಗಾಗಿ ಶಾಲೆ ತೆರೆದು ನಿಸ್ವಾರ್ಥದಿಂದ ಕೆಲಸ ಮಾಡುತ್ತ ಬಂದಿದ್ದೇನೆ. ಆದರೆ ನನ್ನ ಸೇವೆಯನ್ನು ಯಾರೂ ಗುರುತಿಸಿರಲಿಲ್ಲ. ಗುರುತಿಸಬೇಕು ಎಂಬ ನಿರೀಕ್ಷೆಯೂ ನನಗಿರಲಿಲ್ಲ. ಆದರೆ ಪ್ರಧಾನಿಯವರು ನನ್ನನ್ನು 'ಆದರ್ಶ ವ್ಯಕ್ತಿ' ಎಂದಾಗ ಬದುಕು ಸಾರ್ಥಕವಾಯ್ತು ಎನ್ನಿಸಿದ್ದು ಸತ್ಯ. ಅವರ ಮಾತು ಇಂಥ ಮತ್ತಷ್ಟು ಕೆಲಸ ಮಾಡುವುದಕ್ಕೆ ಸ್ಪೂರ್ತಿ"

ಮಕ್ಕಳ ಉತ್ತಮ ಭವಿಷ್ಯವೇ ನನ್ನ ಕನಸು

ಮಕ್ಕಳ ಉತ್ತಮ ಭವಿಷ್ಯವೇ ನನ್ನ ಕನಸು

"ಟೀ ಮಾರುತ್ತಲೇ ಬದುಕು ಸಾಗಿಸುತ್ತಿರುವ ನನಗೆ ದಿನಕ್ಕೆ 700-800 ರೂ. ಆದಾಯ ಬರುತ್ತದೆ. ಈ ಹಣದಲ್ಲೇ ನನ್ನ ಮನೆಯ ಸುತ್ತ ಮುತ್ತ ಇರುವ ಕೊಳಗೇರಿ ಮಕ್ಕಳಿಗೆ 'ಆಶಾ ಆಶ್ವಾಸನ್' ಎಂಬ ಶಾಲೆಯೊಂದನ್ನು ತೆರೆದಿದ್ದೇನೆ. ಸುಮಾರು 70-75 ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದಾರೆ. ಅವರಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯ ಬಗ್ಗೆಯೂ ಪಾಠ ನಡೆಯುತ್ತದೆ. ಈ ಮಕ್ಕಳ ತಂದೆ-ತಾಯಿಗೆ ಶಿಕ್ಷಣದ ಮಹತ್ವದ ಅರಿವಿಲ್ಲ. ದೇಶದ ಭವಿಷ್ಯವೇ ಆಗಿರುವ ಈ ಮಕ್ಕಳು ಬಾಲ್ಯದಲ್ಲೇ ಕಮರಬಾರದು ಎಂಬುದು ನನ್ನ ಆಶಯ" ಎನ್ನುತ್ತಾರೆ ಪ್ರಕಾಶ್ ರಾವ್.

ಶಿಕ್ಷಕರೂ ಹೌದು, ಡಾಕ್ಟರೂ ಹೌದು!

ಶಿಕ್ಷಕರೂ ಹೌದು, ಡಾಕ್ಟರೂ ಹೌದು!

ಈ ಟೀ ವ್ಯಾಪಾರಿ ಪ್ರಕಾಶ್ ರಾವ್ ತಮ್ಮ ಕೊಳೆಗೇರಿ ಶಾಲೆಯಲ್ಲಿ ಶಿಕ್ಷಕರೂ ಹೌದು. ಹಾಗೆಯೇ ತಮ್ಮ ಮನೆಯ ಹತ್ತಿರವಿರುವ ಆಸ್ಪತ್ರೆಗಳಿಗೆ ತೆರಳಿ ಅಲ್ಲಿನ ರೋಗಿಗಳಿಗೆ ಸೇವೆ ಮಾಡುತ್ತ, ವೈದ್ಯರೂ ಆಗುತ್ತಾರೆ. ಅವರ ಸೇವೆಯನ್ನು ಮನಗಂಡು ಈಗಾಗಲೇ ಹಲವು ಪ್ರಶಸ್ತಿಗಳು ಬಂದಿವೆ. ಆದರೆ ಆ ಪ್ರಶಸ್ತಿ ಪದಕಗಳನ್ನು ಇಡುವುದಕ್ಕೂ ಆಗದಷ್ಟು ಸಣ್ಣ ಮನೆಯಲ್ಲಿ ಅವರು ವಾಸಿಸುತ್ತಿದ್ದಾರೆ. ಅವರ ಈ ಎಲ್ಲಾ ಸೇವಾ ಕಾರ್ಯಗಳಿಗೆ ಪತ್ನಿಯ ಬೆಂಬಲವೂ ಇದೆ. 217 ಕ್ಕೂ ಹೆಚ್ಚು ಬಾರಿ ರಕ್ತದಾನವನ್ನೂ ಮಾಡಿರುವ ರಾವ್, ಕೊಳಗೇರಿ ಮಕ್ಕಳಿಗೆ ವಿದ್ಯೆ ಮಾತ್ರವಲ್ಲದೆ, ಊಟವನ್ನೂ ನೀಡುತ್ತಿದ್ದಾರೆ!

ಸಾರ್ಥಕವೆನ್ನಿಸಿದ ಆ 18 ನಿಮಿಷಗಳು

ಆಹ್ವಾನದ ಮೇರೆಗೆ ಪ್ರಧಾನಿ ಕಚೇರಿಗೆ ಅಳುಕುತ್ತಲೇ ತೆರಳಿದ ರಾವ್ ಅವರನ್ನು ತಮ್ಮ ಪಕ್ಕದಲ್ಲೇ ಕೂರಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ತಮ್ಮ ಅತ್ಯಂತ ಬ್ಯಸಿ ಶೆಡ್ಯೂಲ್ ನಡುವಲ್ಲಿ 18 ನಿಮಿಷಗಳ ಕಾಲ ಮಾತನಾಡಿಸಿದರು. ಶಾಲೆಯ ಬಗ್ಗೆ ಕೇಳಿದರು. ಒಡಿಶಾಕ್ಕೆ ಬಂದಾಗ ನಿಮ್ಮ ಶಾಲೆಯಲ್ಲಿಯೇ ಊಟ ಮಾಡುತ್ತೇನೆ ಎಂದು ಸಹ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. ಪ್ರಧಾನಿಯವರೊಂದಿಗೆ ಒಡನಾಡಿದ ಆ 18 ನಿಮಿಷಗಳು ನನ್ನ ಬದುಕಿನ ಅತ್ಯಂತ ಸಾರ್ಥಕ ಕ್ಷಣ ಎಂದು ತುಂಬಿದ ಕಣ್ಣಾಲಿಗಳಿಂದ ಹೇಳುತ್ತಾರೆ ಪ್ರಕಾಶ್ ರಾವ್.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Cuttack based tea seller from Odisha, was lauded by Prime minister Narendra Modi in his 44th edition of Mann Ki Baat. Here is success, as well as a human interest story of this tea seller Prakash Rao.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more