ಮೂರು ಲಸಿಕೆ ಉತ್ಪಾದನಾ ಕೇಂದ್ರಗಳಿಗೆ ಶನಿವಾರ ನರೇಂದ್ರ ಮೋದಿ ಭೇಟಿ
ನವದೆಹಲಿ, ನವೆಂಬರ್ 27: ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವೈರಸ್ ಲಸಿಕೆ ಅಭಿವೃದ್ಧಿ ಕುರಿತಾದ ವೀಕ್ಷಣೆಗಾಗಿ ಶನಿವಾರ ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆಗೆ ಭೇಟಿ ನೀಡಲಿದ್ದಾರೆ.
ಹೈದರಾಬಾದ್ನಲ್ಲಿರುವ ಭಾರತ್ ಬಯೋಟೆಕ್ ಲಸಿಕೆ ಉತ್ಪಾದನಾ ಕಂಪೆನಿಯ ಘಟಕಕ್ಕೆ ಮೋದಿ ಅವರು ಭೇಟಿ ನೀಡಲಿದ್ದಾರೆ. ಭಾರತದ ಮೊದಲ ಸ್ವದೇಶಿ ನಿರ್ಮಿತ ಕೋವಿಡ್ ಲಸಿಕೆ 'ಕೋವ್ಯಾಕ್ಸಿನ್' ಇಲ್ಲಿ ಐಸಿಎಂಆರ್ ಸಹಯೋಗದೊಂದಿಗೆ ತಯಾರಾಗುತ್ತಿದೆ.
ಜಗತ್ತಿನಾದ್ಯಂತ ಸಿದ್ಧವಾಗುತ್ತಿವೆ 200ಕ್ಕೂ ಹೆಚ್ಚು ಕೋವಿಡ್ ಲಸಿಕೆಗಳು
ಅಹಮದಾಬಾದ್ನಲ್ಲಿ ಝಿಕೋವ್-ಡಿ ಲಸಿಕೆ ಉತ್ಪಾದಿಸುತ್ತಿರುವ ಝಿಡಸ್ ಕ್ಯಾಡಿಲಾ ಕಂಪೆನಿ ಘಟಕಕ್ಕೆ ತೆರಳಿ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಜತೆಗೆ ಪುಣೆಯಲ್ಲಿ ಆಸ್ಟ್ರಾಜೆನಿಕಾ-ಆಕ್ಸ್ಫರ್ಡ್ ವಿಶ್ವವಿದ್ಯಾಲಯಗಳ ಜತೆಗೂಡಿ ಭಾರತದ ಸೆರಮ್ ಇನ್ಸ್ಟಿಟ್ಯೂಟ್ ತಯಾರಿಸುತ್ತಿರುವ ಕೋವಿಶೀಲ್ಡ್ ಲಸಿಕೆ ಉತ್ಪಾದನಾ ಘಟಕಕ್ಕೆ ಭೇಟಿ ನೀಡಲಿದ್ದಾರೆ.
ಮೋದಿ ಅವರು ಪುಣೆಯಿಂದ ಹಕೀಮ್ ಪೇಟೆ ವಾಯು ನೆಲೆಗೆ ಮಧ್ಯಾಹ್ನ ಐಎಎಫ್ ವಿಮಾನದಲ್ಲಿ ಆಗಮಿಸಲಿದ್ದಾರೆ ಎಂದು ತೆಲಂಗಾಣ ಮುಖ್ಯ ಕಾರ್ಯದರ್ಶಿ ಗುರುವಾರ ರಾತ್ರಿ ಮಾಹಿತಿ ನೀಡಿದ್ದಾರೆ.
ನಾನು ಲಸಿಕೆ ತೆಗೆದುಕೊಳ್ಳುವುದಿಲ್ಲ, ಅದು ನನ್ನ ಹಕ್ಕು: ಬ್ರೆಜಿಲ್ ಅಧ್ಯಕ್ಷ
ವಾಯುನೆಲೆಯಿಂದ ನೇರವಾಗಿ ಜೆನೋಮ್ ಕಣಿವೆಯಲ್ಲಿನ ಭಾರತ್ ಬಯೋಟೆಕ್ ಘಟಕಕ್ಕೆ ತೆರಳಲಿದ್ದಾರೆ. ಬಳಿಕ ವಾಯುನೆಲೆಗೆ ಮರಳಲಿದ್ದಾರೆ. ಅದೇ ಸಂಜೆ ಅವರು ರಾಜಧಾನಿ ದೆಹಲಿಗೆ ವಾಪಸ್ ಹೋಗಲಿದ್ದಾರೆ. ಈ ಘಟಕದಲ್ಲಿ ಮೋದಿ ಅವರು ಒಂದು ಗಂಟೆ ಕಳೆಯಲಿದ್ದಾರೆ. ಭಾರತ್ ಬಯೋಟೆಕ್ನ ಕೋವ್ಯಾಕ್ಸಿಲ್ ಲಸಿಕೆಯ ಮೂರನೇ ಹಂತದ ಪ್ರಯೋಗದ ಬಗ್ಗೆ, ಅದರ ಸಂಗ್ರಹ ಮತ್ತು ಹಂಚಿಕೆ ಕುರಿತು ಮಾಹಿತಿ ಪಡೆಯಲಿದ್ದಾರೆ.