ಬಿಪಿನ್ ರಾವತ್ ಪಾರ್ಥಿವ ಶರೀರಕ್ಕೆ ಮೋದಿ, ತ್ರಿ-ಸೇನಾ ಮುಖ್ಯಸ್ಥರಿಂದ ಅಂತಿಮ ಗೌರವ
ನವದೆಹಲಿ, ಡಿಸೆಂಬರ್ 9: ತಮಿಳುನಾಡಿನ ನೀಲ್ಗಿರಿ ಜಿಲ್ಲೆಯ ಕುನೂರ್ ಬಳಿ ಬುಧವಾರ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟಿರುವ ಭಾರತದ ಮೊದಲ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಪತ್ನಿ ಮಧುಲಿಕಾ ಮತ್ತು ಇತರ 11 ಸಶಸ್ತ್ರ ಪಡೆ ಸಿಬ್ಬಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಂತಿಮ ನಮನ ಸಲ್ಲಿಸಿದರು.
ತಮಿಳುನಾಡು ಚಾಪರ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಜನರಲ್ ಬಿಪಿನ್ ರಾವತ್ ಅವರ ಪಾರ್ಥಿವ ಶರೀರವನ್ನು ಸೂಲೂರಿನಿಂದ ಪಾಲಂ ವಾಯುನೆಲೆಗೆ ಆಗಮಿಸಿದ IAF ವಿಮಾನದಿಂದ ಹೊರತರಲಾಯಿತು. ದೆಹಲಿಯ ಪಾಲಂ ವಾಯು ನೆಲೆಯಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು 11 ಸಶಸ್ತ್ರ ಪಡೆ ಸಿಬ್ಬಂದಿಗೆ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು.
Army Helicopter Crash updates: ಪಾಲಂ ವಾಯುನೆಲೆಗೆ ಬಿಪಿನ್ ರಾವತ್ ಪಾರ್ಥಿವ ಶರೀರ
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಶ್ರದ್ಧಾಂಜಲಿ ಸಲ್ಲಿಸಿದರು. ಇದೇ ವೇಳೆ ಭಾರತೀಯ ಭೂ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅಂತಿಮ ನಮನ ಸಲ್ಲಿಸಿದರು.
ಪಾಲಂ ವಾಯು ನೆಲೆಯಲ್ಲಿ ಅಂತಿಮ ಗೌರವ:
ತಮಿಳುನಾಡು ಸೇನಾ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟ ಸಿಡಿಎಸ್ ಜನರಲ್ ಬಿಪಿನ್ ರಾವತ್, ಮಧುಲಿಕಾ ರಾವತ್, ಎಲ್/ಎನ್ಕೆ ವಿವೇಕ್ ಕೆಆರ್, ಎನ್ಕೆ ಗುರುಶೇವಕ್ ಸಿಂಗ್, ಎಲ್/ಎನ್ಕೆ ಬಿಎಸ್ ತೇಜ, ನಾಯಕ್ ಜಿತೇಂದರ್ ಕೆಆರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ಬ್ರಿಗ್ ಎಲ್ಎಸ್ ಲಿಡರ್, ಹವಾಲ್ದಾರ್ ಸತ್ಪಾಲ್ ರಾಜ್, ಡಬ್ಲ್ಯುಜಿ ಸಿಡಿಆರ್ ಪಿ ಎಸ್ ಚೌಹಾಣ್, ಸ್ಕ್ಎನ್ ಲೀಡರ್ ಕೆ ಸಿಂಗ್, ಜೆಡಬ್ಲ್ಯೂಒ ರಾಣಾ ಪ್ರತಾಪ್ ದಾಸ್ ಮತ್ತು ಜೆಡಬ್ಲ್ಯೂಒ ಪ್ರದೀಪ್ ಎ. ಪಾರ್ಥಿವ ಶರೀರವನ್ನು ಪಾಲಂ ವಾಯು ನೆಲೆಯಲ್ಲಿ ಅಂತಿಮ ಗೌರವ ಸಲ್ಲಿಸಲಾಯಿತು.
ಶುಕ್ರವಾರ ಬಿಪಿನ್ ರಾವತ್ ಮತ್ತು ಪತ್ನಿ ಅಂತ್ಯಸಂಸ್ಕಾರ:
ತಮಿಳುನಾಡಿನ ನೀಲ್ಗಿರಿ ಜಿಲ್ಲೆಯ ಕುನೂರ್ ಬಳಿ ಬುಧವಾರ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟಿರುವ ಭಾರತದ ಮೊದಲ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಪತ್ನಿ ಮಧುಲಿಕಾ ಅಂತ್ಯಸಂಸ್ಕಾರವನ್ನು ಡಿಸೆಂಬರ್ 10ರ ಶುಕ್ರವಾರ ನಡೆಸಲಾಗುತ್ತದೆ. ಶುಕ್ರವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ತದನಂತರದಲ್ಲಿ ಅಂತಿಮ ಗೌರವ ಸಲ್ಲಿಸಲು ಅವಕಾಶ ನೀಡಲಾಗುವುದು. ಬಳಿಕ ಕಾಮರಾಜ್ ಮಾರ್ಗದಿಂದ ದೆಹಲಿ ಕಂಟೋನ್ಮೆಂಟ್ನ ಬ್ರಾರ್ ಸ್ಕ್ವೇರ್ ಸ್ಮಶಾನದವರೆಗೆ ಅಂತ್ಯಕ್ರಿಯೆ ಮೆರವಣಿಗೆ ನಡೆಯಲಿದೆ. ಅಂತಿಮವಾಗಿ ದೆಹಲಿ ಕಂಟೋನ್ಮೆಂಟ್ನಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನರವೇರಿಸಲಾಗುತ್ತದೆ.
ಬ್ರಿಗೇಡಿಯರ್ ಎಲ್ ಎಸ್ ಲಿಡ್ಡೇರ್ ಅಂತ್ಯ ಸಂಸ್ಕಾರವನ್ನು ಶುಕ್ರವಾರ ಬೆಳಗ್ಗೆ 9.30ಕ್ಕೆ ದೆಹಲಿ ಕಂಟೋನ್ಮೆಂಟ್ನಲ್ಲಿ ನಡೆಸಲಾಗುತ್ತದೆ.