ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಮಲಾ ಸೀತಾರಾಮನ್ ಸಮರ್ಥ ಹೆಗಲಿಗೆ ವಿತ್ತ ಖಾತೆ ಜವಾಬ್ದಾರಿ

|
Google Oneindia Kannada News

ನವದೆಹಲಿ, ಮೇ 31 : ಅರುಣ್ ಜೇಟ್ಲಿ ಅವರು ತೆರವು ಮಾಡಿದ್ದ ಕೇಂದ್ರ ಹಣಕಾಸು ಖಾತೆ ಯಾರಿಗೆ ದೊರೆಯುತ್ತದೆ ಎಂಬ ಊಹಾಪೋಹಕ್ಕೆ ಕೊನೆಗೂ ತೆರೆಬಿದ್ದಿದೆ. ನರೇಂದ್ರ ಮೋದಿ ಸರಕಾರದಲ್ಲಿ 5 ವರ್ಷ ಅರುಣ್ ಜೇಟ್ಲಿ ಅವರು ನಿಭಾಯಿಸಿದ್ದ ವಿತ್ತ ಖಾತೆ ಇದೀಗ ನಿರ್ಮಲಾ ಸೀತಾರಾಮನ್ ಅವರ ಪಾಲಾಗಿದೆ.

ನಿರ್ಮಲಾ ಸೀತಾರಾಮನ್ ಅವರು ಭಾರತದ ಮೊದಲ ಪೂರ್ಣ ಪ್ರಮಾಣದ ಹಣಕಾಸು ಸಚಿವೆಯಾದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 1970-71ರಲ್ಲಿ ಇಂದಿರಾ ಗಾಂಧಿ ಅವರು ಈ ಖಾತೆಯನ್ನು ಹಂಗಾಮಿ ಸಚಿವೆಯಾಗಿ ನಿಭಾಯಿಸಿದ್ದರು.

ಅನಾರೋಗ್ಯದ ಕಾರಣ ಸಂಪುಟ ಸೇರಲು ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನಿರಾಕರಿಸಿದ್ದರಿಂದ ಈ ಖಾತೆ ಯಾರ ಮಡಿಲಿಗೆ ಬೀಳಲಿದೆ, ಈ ಜವಾಬ್ದಾರಿಯುತ ಖಾತೆಯನ್ನು ಯಾರ ಹೆಗಲ ಮೇಲೆ ನರೇಂದ್ರ ಮೋದಿಯವರು ಹೊರಿಸಲಿದ್ದಾರೆ ಎಂಬ ಬಗ್ಗೆ ಭಾರೀ ಚರ್ಚೆ ನಡೆದಿತ್ತು.

ಮೋದಿ 2.0 ಸರ್ಕಾರ: ಯಾವ ಸಚಿವರಿಗೆ ಯಾವ ಖಾತೆ ಹಂಚಿಕೆ? ಮೋದಿ 2.0 ಸರ್ಕಾರ: ಯಾವ ಸಚಿವರಿಗೆ ಯಾವ ಖಾತೆ ಹಂಚಿಕೆ?

2017ರ ಸೆಪ್ಟೆಂಬರ್ 3ರಿಂದ ಕೇಂದ್ರ ರಕ್ಷಣಾ ಸಚಿವೆಯಾಗಿ ಖಾತೆಯನ್ನು ನಿಭಾಯಿಸಿದ್ದಲ್ಲದೆ, ರಫೇಲ್ ಡೀಲ್ ಹಗರಣದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಆರಂಭವಾಗಿ ಕೋಲಾಹಲ ಎದ್ದಾಗ, ಸಮರ್ಥವಾಗಿ ಪ್ರತಿಪಕ್ಷಗಳಿಗೆ ಉತ್ತರ ನೀಡಿದ್ದ ನಿರ್ಮಲಾ ಸೀತಾರಾಮನ್ ಅವರು ಇದೀಗ ಹಣಕಾಸು ಖಾತೆಯನ್ನು ವಹಿಸಿಕೊಳ್ಳಲಿದ್ದಾರೆ.

Nirmala Sitharaman is the new finance minister in Modi cabinet

ಕಳೆದ ಜನವರಿಯಲ್ಲಿ, ಮಧುಮೇಹದಿಂದ ಬಳಲುತ್ತಿರುವ ಅರುಣ್ ಜೇಟ್ಲಿಯವರು ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ್ದಾಗ, 16ನೇ ಲೋಕಸಭೆಯ ಕಡೆಯ ಅಧಿವೇಶನದಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ್ದ ಪಿಯೂಶ್ ಗೋಯಲ್ ಅವರು ಹಣಕಾಸು ಖಾತೆಯನ್ನು ನಿಭಾಯಿಸಬಹುದು ಎಂಬ ಊಹೆ ಹಬ್ಬಿತ್ತು.

ಮೋದಿ ಸಂಪುಟದ ಖಾತೆ ಹಂಚಿಕೆ : ಕರ್ನಾಟಕದ ಸಚಿವರಿಗೆ ಯಾವ ಖಾತೆ? ಮೋದಿ ಸಂಪುಟದ ಖಾತೆ ಹಂಚಿಕೆ : ಕರ್ನಾಟಕದ ಸಚಿವರಿಗೆ ಯಾವ ಖಾತೆ?

ನಂತರ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಗಾಂಧಿನಗರದಿಂದ ಸ್ಪರ್ಧಿಸಿ ಭರ್ಜರಿಯಾಗಿ ಗೆದ್ದ ನಂತರ, ಅವರು ಸಂಪುಟ ಸೇರಿಕೊಳ್ಳಲಿದ್ದು, ಅವರೇ ಹಣಕಾಸು ಖಾತೆಯನ್ನು ನಿಭಾಯಿಸಬಹುದು ಎಂದೂ ಮಾತುಗಳು ಕೇಳಿಬಂದಿದ್ದವು. ಇವೆರಡು ಊಹೆಗಳು ಸುಳ್ಳಾಗಿ, ನಿರ್ಮಲಾ ಸೀತಾರಾಮನ್ ಅವರ ಹೆಗಲಿಗೆ ವಿತ್ತ ಖಾತೆಯ ಜವಾಬ್ದಾರಿಯನ್ನು ಹೊರಿಸಲಾಗಿದೆ.

ಕೇಂದ್ರ ವಿತ್ತ ಖಾತೆಯನ್ನು ನಿಭಾಯಿಸಲು ನಿರ್ಮಲಾ ಸೀತಾರಾಮನ್ ಅವರು ಸಮರ್ಥರು ಕೂಡ. ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ಎಕಾನಾಮಿಕ್ಸ್ ನಲ್ಲಿ ಬಿಎ ಪದವಿ ಗಳಿಸಿರುವ ಅವರು, ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಿಂದ ಎಕಾನಾಮಿಕ್ಸ್ ನಲ್ಲಿ ಸ್ನಾತಕೋತ್ತರ ಪದವಿಯನ್ನೂ 1984ರಲ್ಲಿ ಪಡೆದಿದ್ದಾರೆ.

ಮೋದಿ ಸಂಪುಟದಲ್ಲಿ ಸ್ಥಾನ ವಂಚಿತರಾದ ಬಿಜೆಪಿ ಪ್ರಮುಖರುಮೋದಿ ಸಂಪುಟದಲ್ಲಿ ಸ್ಥಾನ ವಂಚಿತರಾದ ಬಿಜೆಪಿ ಪ್ರಮುಖರು

ಭಾರತದ ಎರಡನೇ ಮಹಿಳಾ ರಕ್ಷಣಾ ಸಚಿವೆ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಅವರು, ಅದಕ್ಕೂ ಮೊದಲು ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆಯ ರಾಜ್ಯ ಸಚಿವೆಯಾಗಿ, ವಾಣಿಜ್ಯ ಮತ್ತು ಕೈಗಾರಿಕೆ ಖಾತೆಯ ಸ್ವತಂತ್ರ ರಾಜ್ಯ ಸಚಿವೆಯಾಗಿ ಕೆಲಸ ಮಾಡಿದ್ದಾರೆ.

ಇಷ್ಟು ಮಾತ್ರವಲ್ಲ, ಯುನೈಟೆಡ್ ಕಿಂಗಡಂನಲ್ಲಿ ಅಗ್ರಿಕಲ್ಚರಲ್ ಅಸೋಸಿಯೇಶನ್ ಆಫ್ ಇಂಜಿನಿಯರ್ಸ್ ನಲ್ಲಿ ಆರ್ಥಿಕತಜ್ಞರಿಗೆ ಸಹಾಯಕಿಯಾಗಿರೂ ಸೇವೆ ಸಲ್ಲಿಸಿರುವ ಅನುಭವವೂ ನಿರ್ಮಲಾ ಸೀತಾರಾಮನ್ ಅವರಿಗಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಜುಲೈನಲ್ಲಿ ಬಜೆಟ್ ಮಂಡಿಸಲಿರುವುದು ಖಚಿತವಾದಂತಾಗಿದೆ.

English summary
Nirmala Sitharaman, Rajya Sabha member from Karnataka, is the new finance minister in Narendra Modi cabinet. Nirmala has served as the Defence minister. She has degree (Tamil Nadu) and masters degree in Economics from Jawaharlal Nehru University, Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X