ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಮನ್ ಕೀ ಬಾತ್; ನದಿಗಳ ಮಹತ್ವ ತಿಳಿಸಿದ ಪ್ರಧಾನಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 26: ಭಾರತದ ಪ್ರಧಾನಿ ನರೇಂದ್ರ ಮೋದಿ 'ಮನ್ ಕೀ ಬಾತ್' ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ಭಾನುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದರು.

ಮನ್ ಕೀ ಬಾತ್ ಸರಣಿಯ 81ನೇ ಸಂಚಿಕೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ನದಿಗಳ ಮಹತ್ವದ ಬಗ್ಗೆ ಹಲವಾರು ವಿಚಾರಗಳನ್ನು ತಿಳಿಸಿದರು.

ಆಗಸ್ಟ್ 29; ನರೇಂದ್ರ ಮೋದಿ ಮನ್ ಕೀ ಬಾತ್ ಮುಖ್ಯಾಂಶಗಳು ಆಗಸ್ಟ್ 29; ನರೇಂದ್ರ ಮೋದಿ ಮನ್ ಕೀ ಬಾತ್ ಮುಖ್ಯಾಂಶಗಳು

ಮೊದಲಿಗೆ ಇಂದು 'ವಿಶ್ವ ನದಿಗಳ ದಿನ'ವಾಗಿದ್ದರಿಂದ ಮೋದಿ ನದಿಗಳ ಬಗ್ಗೆ ಮಾತನಾಡಿದರು. ಸೆಪ್ಟೆಂಬರ್ ತಿಂಗಳು ಅತ್ಯಂತ ಮಹತ್ವದ ತಿಂಗಳಾಗಿದೆ. ಈ ತಿಂಗಳಿನಲ್ಲಿ ನಾವು ವಿಶ್ವ ನದಿಗಳ ದಿನ ಆಚರಣೆ ಮಾಡುತ್ತೇವೆ ಎಂದರು.

Narendra Modi Mann Ki Baat September 26 Highlights in Kannada

ನದಿಗಳು ನಮಗೆ ನಿಸ್ವಾರ್ಥವಾಗಿ ನೀರನ್ನು ಕೊಡುತ್ತೆವೆ. ನಾವು ಅದನ್ನು ಸ್ಮರಿಸಿಕೊಳ್ಳಬೇಕು. ಹನಿ ಹನಿ ನೀರು ಸಹ ಬಹಳ ಮುಖ್ಯವಾದದ್ದು. ನದಿಗಳ ದಂಡೆಯ ಮೇಲೆ ವಾಸಿಸುವ ಜನರು ವರ್ಷಕ್ಕೆ ಒಮ್ಮೆ ನದಿ ಉತ್ಸವ ಆಚರಣೆ ಮಾಡಬೇಕು ಎಂದು ಮೋದಿ ಹೇಳಿದರು.

ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ ಪ್ರಜಾಪ್ರಭುತ್ವದ ಪಾಠವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ ಪ್ರಜಾಪ್ರಭುತ್ವದ ಪಾಠ

ನಮಾಮಿ ಗಂಗೆ ಯೋಜನೆ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, "ದೇಶದ ಪವಿತ್ರ ನದಿ ಗಂಗೆಯನ್ನು ಸ್ವಚ್ಛಗೊಳಸುವ ನಮಾಮಿ ಗಂಗೆ ಯೋಜನೆ ಯಶಸ್ಸು ಕಾಣುತ್ತಿದೆ. ಜನರೂ ಕೂಡ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ" ಎಂದರು.

ನದಿಗಳ ಜೊತೆ ನಮ್ಮ ಜೀವನ ಕ್ರಮ ಸೇರಿಕೊಂಡಿದೆ. ಪ್ರತಿ ದಿನ ನಾವು ನದಿಗಳನ್ನು ನೆನಪು ಮಾಡಿಕೊಳ್ಳಬೇಕು ಎಂದು ಹಿರಿಯರು ಪ್ರತಿದಿನ ಸ್ನಾನದ ಸಮಯದಲ್ಲಿ 'ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು' ಎಂದು ಶ್ಲೋಕ ಅಭ್ಯಾಸ ಮಾಡಿಸುತ್ತಿದ್ದರು. ವಿಶ್ವ ನದಿಗಳ ದಿನಾಚರಣೆಯಂದು ನಾವು ಇದನ್ನು ನೆನಪಿಸಿಕೊಳ್ಳೋಣ ಎಂದರು.

ವಿಶ್ವಸಂಸ್ಥೆಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮೋದಿವಿಶ್ವಸಂಸ್ಥೆಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮೋದಿ

ಈಗ ದೇಶದಲ್ಲಿ ಇಂದು ಇ-ಹರಾಜು ನಡೆಯುತ್ತಿದೆ. ದೇಶದ ಹಲವು ಜನರಿಗೆ ಇದು ತಿಳಿದಿದೆ. ಯುವಕರಿಗೆ ಖಂಡಿತವಾಗಿ ತಿಳಿದಿರುತ್ತದೆ. ವಿವಿಧ ಸಮಯದಲ್ಲಿ ನಾನು ಸ್ವೀಕರಿಸಿದ ಉಡುಗೊರೆಯನ್ನು ಹರಾಜು ಹಾಕಲಾಗುತ್ತಿದೆ. ಇದರಿಂದ ಬಂದ ಹಣವನ್ನು ನಮಾಮಿ ಗಂಗೆ ಯೋಜನೆಗೆ ನೀಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ತಮಿಳುನಾಡಿನ ನಾಗಾ ನದಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದರು. ನಾಗಾ ನದಿ ಒಣಗಿ ಹೋಗಿತ್ತು. ಆದರೆ ಅಲ್ಲಿನ ಹಳ್ಳಿಗಳ ಜನರು ನದಿಯ ಪುನಶ್ಚೇತನಕ್ಕೆ ತೀರ್ಮಾನ ಕೈಗೊಂಡರು. ಮಕ್ಕಳು, ಮಹಿಳೆಯರು ಈ ಕಾರ್ಯಕ್ಕೆ ಕೈ ಜೋಡಿಸಿದರು.

ಚೆಕ್ ಡ್ಯಾಂ ನಿರ್ಮಿಸಿದರು. ನದಿಯ ದಂಡೆಗಳನ್ನು ಸ್ವಚ್ಛಗೊಳಿಸಿದರು. ಈಗ ನಾಗಾ ನದಿಯು ಹೊಸ ಜೀವ ಕಳೆ ಪಡೆದಿದೆ. ನದಿಯಲ್ಲಿ ಉತ್ತಮವಾದ ನೀರು ಇದೆ. ಇದು ತುಂಬ ಖುಷಿಯ ವಿಚಾರವಾಗಿದೆ ಎಂದು ಮೋದಿ ಶ್ಲಾಘಿಸಿದರು.

ದೇಶದ ಪಶ್ಚಿಮ ಭಾಗದಲ್ಲಿ ಅದರಲ್ಲೂ ಗುಜರಾತ್‌, ರಾಜಸ್ಥಾನದಲ್ಲಿ ನೀರಿನ ತೀವ್ರ ಅಭಾವವಿದೆ. ಪ್ರತಿ ವರ್ಷ ಬರಗಾಲ ರಾಜ್ಯಗಳಲ್ಲಿ ಕಂಡು ಬರುತ್ತದೆ. ಸರಿಯಾಗಿ ಮಳೆಯಾಗಲಿ ಎಂದು ಜನರು ಮಳೆಗಾಲ ಆರಂಭಗೊಂಡಾಗ ಗುಜರಾತಿನ ಜನರು ಜಿಲಾನಿ ಏಕಾದಶಿ ಆಚರಣೆ ಮಾಡುತ್ತಾರೆ.

ದೇಶದ ಪೂರ್ವ ಭಾಗದಲ್ಲಿ ಬಿಹಾರ ಸೇರಿದಂತೆ ಇತರ ರಾಜ್ಯಗಳಲ್ಲಿ Chhath ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ನದಿಗಳ ಶುದ್ಧೀಕರಣ ಮತ್ತು ನದಿ ದಂಡೆಗಳ ರಿಪೇರಿ ಕಾರ್ಯವನ್ನು ನಾವು ಆರಂಭಿಸಬೇಕು. ನದಿಗಳು ಶುದ್ಧವಾಗಬೇಕಾದರೆ ಅದಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ.

ಮಹಾತ್ಮ ಗಾಂಧಿ ಸ್ವಚ್ಛತೆಯ ಕಾರ್ಯವನ್ನು ಸ್ವಾತಂತ್ರ್ಯ ಸಂಗ್ರಾಮದ ಜೊತೆ ಬೆಸೆದರು. ನಾನು ಸ್ವಚ್ಛತೆ ಬಗ್ಗೆ ಮಾತನಾಡುವ ಯಾವುದೇ ಅವಕಾಶವನ್ನು ನಾನು ಕಳೆದುಕೊಳ್ಳುವುದಿಲ್ಲ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಮಾಡುತ್ತಿರುವ ಇಂದಿನ ಸಂದರ್ಭದಲ್ಲಿ ನಾವು ಸ್ವಚ್ಛತೆಗೆ ಆದ್ಯತೆ ನೀಡೋಣ ಎಂದು ಮೋದಿ ಕರೆ ನೀಡಿದರು.

ಅಕ್ಟೋಬರ್ 2ರಂದು ಮಹಾತ್ಮ ಗಾಂಧಿ ಜಯಂತಿ ಇದೆ. ನಾವು ಖಾದಿ ಬಟ್ಟೆಗಳನ್ನು ಖರೀದಿ ಮಾಡುವ ಮೂಲಕ ಗಾಂಧಿ ಜಯಂತಿಯನ್ನು ಬೆಂಬಲಿಸೋಣ. ಖಾದಿ ಬಟ್ಟೆ ಖರೀದಿಯಿಂದ ನಾವು ಸ್ಥಳೀಯ ನೇಕಾರರಿಗೆ ಬೆಂಬಲ ನೀಡಿದಂತೆ ಆಗುತ್ತದೆ. ಇದರಿಂದ ಆತ್ಮ ನಿರ್ಭರ ಭಾರತಕ್ಕೂ ನಾವು ಬೆಂಬಲಿಸಿದಂತೆ ಆಗುತ್ತದೆ ಎಂದು ಮೋದಿ ಹೇಳಿದರು.

ಸಾಲು ಸಾಲು ಹಬ್ಬಗಳು ನಮ್ಮ ಮುಂದಿವೆ. ಆದರೆ ನಾವು ಕೋವಿಡ್ ವಿರುದ್ಧದ ಹೋರಾಟವನ್ನು ಸಹ ಮುಂದುವರೆಸಬೇಕಿದೆ. ಲಸಿಕೆ ನೀಡುವ ವಿಚಾರದಲ್ಲಿ ಭಾರತ ಒಂದೊಂದು ದಿನ ಅಂತರಾಷ್ಟ್ರೀಯ ಮಟ್ಟದಲ್ಲಿ ಒದೊಂದು ಸಾಧನೆಯನ್ನು ಮಾಡುತ್ತಿದೆ. ಹಬ್ಬಗಳ ಸಂದರ್ಭದಲ್ಲಿ ಯಾರೂ ಸಹ 'ಸುರಕ್ಷಾ ಚಕ್ರ'ವನ್ನು ಮರೆಯಬಾರದು. ಕೋವಿಡ್ ಮಾರ್ಗಸೂಚಿಗಳನ್ನು ಜನರು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಮೋದಿ ಮನವಿ ಮಾಡಿದರು.

ನಮ್ಮ ಸರದಿ ಬಂದಾಗ ನಾವು ತಪ್ಪದೇ ಕೋವಿಡ್ ಲಸಿಕೆಯನ್ನು ಪಡೆಯಬೇಕು. ನಾವು ನಮ್ಮ ಅಕ್ಕ-ಪಕ್ಕದ ಎಲ್ಲರೂ ಲಸಿಕೆ ಪಡೆಯುವಂತೆ ನೋಡಿಕೊಳ್ಳಬೇಕು. ನಿಮ್ಮ ಸುತ್ತಲಿನ ಯಾರು ಲಸಿಕೆ ಪಡೆದಿಲ್ಲವೋ ಅವರನ್ನು ಲಸಿಕಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಲಸಿಕೆ ಪಡೆಯುವಂತೆ ಮನವೊಲಿಸಿ ಎಂದು ಮೋದಿ ಕರೆ ನೀಡಿದರು.

ನಮ್ಮ ಆರೋಗ್ಯ ಕಾಪಾಡುವ ಆನೇಕ ಉತ್ಪನ್ನಗಳು ನೈಸರ್ಗಿಕವಾಗಿ ನಮಗೆ ಲಭ್ಯವಿದೆ. ದೇಶದ ವಿವಿಧ ಭಾಗದಲ್ಲಿ ಇಂತಹ ಅನೇಕ ಆಯುರ್ವೇದ ಉತ್ಪನ್ನಗಳನ್ನು ನಾವು ಕಾಣಬಹುದಾಗಿದೆ. ಪತಾಯತ್ ಸಾಹು ಎಂಬ ಒಡಿಶಾ ಮೂಲದ ವ್ಯಕ್ತಿ ಇಂತಹ ವಲಯದಲ್ಲಿ ಗಮನಾರ್ಹ ಕೆಲಸ ಮಾಡುತ್ತಿದ್ದಾರೆ. ಒಂದೂವರೆ ಎಕರೆ ಜಾಗದಲ್ಲಿ ಅವರು ವಿವಿಧ ಔಷಧೀಯ ಸಸ್ಯಗಳನ್ನು ಬೆಳೆಸಿದ್ದಾರೆ.

ಆಯುಷ್ ಇಲಾಖೆ ಮಕ್ಕಳಲ್ಲಿ ಔಷಧಿಯ ಸಸ್ಯ ಮತ್ತು ನೈಸರ್ಗಿಕವಾಗಿ ದೊರೆಯುವ ಸಸ್ಯಗಳ ಬಗ್ಗೆ ಅರಿವು ಮೂಡಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪ್ರೊಫೆಸೆಸರ್ ಆಯುಷ್ಮಾನ್ ಇದರ ನೇತೃತ್ವ ವಹಿಸಿದ್ದಾರೆ. ಪ್ರೊಫೆಸರ್ ಆಯುಷ್ಮಾನ್ ಎಂಬ ಹೆಸರು ಕಾಮಿಕ್ ಪುಸ್ತಕದಲ್ಲಿನ ಹೆಸರಾಗಿದೆ.

ನಾವು ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಆಚರಣೆ ಮಾಡುತ್ತಿದ್ದೇವೆ. ಸುಮಾರು 5000 ಲೇಖಕರು ಸ್ವಾತಂತ್ರ್ಯ ಸಂಗ್ರಾಮದ ಕಥೆಗಳನ್ನು ಇಂದಿನ ಜನಾಂಗಕ್ಕೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಲ್ಲಿ ಕಳೆದ 75 ವರ್ಷಗಳಲ್ಲೇ ಹೆಸರಿಸಲಾಗದ ಅನೇಕ ಸ್ವಾತಂತ್ರ್ಯ ಯೋಧರ ಕಥೆಗಳನ್ನು ಯುವಕರಿಗೆ, ಮಕ್ಕಳಿಗೆ ತಲುಪಿಸಲಾಗುತ್ತದೆ.

ದೇಶದಲ್ಲಿ ವಿಕಲಾಂಗರನ್ನು ಪ್ರೋತ್ಸಾಹಿಸಲು ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ. ಉತ್ತರ ಪ್ರದೇಶದಲ್ಲಿ ಇಂತಹ ಒಂದು ಕಾರ್ಯ 'ಒನ್ ಟೀಚರ್, ಒನ್ ಕಾಲ್' ಎಂಬ ಅಭಿಯಾನದ ಮೂಲಕ ನಡೆಯುತ್ತಿದೆ. ಶಾಲೆಯ ಶಿಕ್ಷಕರು ಗ್ರಾಮದಲ್ಲಿ ಸಂಚಾರ ನಡೆಸಿ ಯಾವುದೇ ವಿಕಲಾಂಗ ಮಗು ಶಾಲೆಗೆ ದಾಖಲಾಗದಿದ್ದಲ್ಲಿ ಅವರನ್ನು ಶಾಲೆಗೆ ದಾಖಲಿಸುವ ಕಾರ್ಯವನ್ನು ಮಾಡುತ್ತಾರೆ.

ದೇಶದಲ್ಲಿ 'ಜನ್‌ಧನ್' ಖಾತೆ ತೆರೆಯುವ ಬಗ್ಗೆ ನಡೆದ ಅಭಿಯಾನದ ಬಗ್ಗೆ ಎಲ್ಲರಿಗೂ ತಿಳಿಸಿದೆ. ಈ ಅಭಿಯಾನದ ಭಾಗವಾಗಿ ಇಂದು ವಿವಿಧ ಯೋಜನೆಗಳ ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹೋಗುತ್ತಿದೆ. ಮಧ್ಯವರ್ತಿಗಳ ಕಾಟವಿಲ್ಲದೇ, ಯಾವುದೇ ಭಷ್ಟ್ರಾಚಾರವಿಲ್ಲದೇ ನೇರವಾಗಿ ಜನರು ಹಣವನ್ನು ಪಡೆಯುತ್ತಿದ್ದಾರೆ.

ಕಳೆದ ಆಗಸ್ಟ್ ತಿಂಗಳಿನಲ್ಲಿ 355 ಕೋಟಿ ರೂ. ಯುಪಿಐ ವರ್ಗಾವಣೆ ನಡೆದಿದೆ. ಡಿಜಿಟಲೀಕರಣ ಸಾಮಾನ್ಯ ಜನರನ್ನು ತಲುಪುತ್ತಿದೆ. 6 ಲಕ್ಷ ಕೋಟಿಗೂ ಅಧಿಕ ವಹಿವಾಟು ಯುಪಿಐ ಮೂಲಕ ನಡೆಯುತ್ತಿದೆ.

ಇನ್ನೇನು ಚಳಿಗಾಲ ಆರಂಭವಾಗುತ್ತಿದೆ. ಚಳಿಗಾಲದಲ್ಲಿ ಸಿಯಾಚಿನ್‌ನಲ್ಲಿನ ಪರಿಸ್ಥಿತಿ ಹೇಗಿರುತ್ತದೆ? ಎಂದು ನೀವು ಊಹಿಸುವುದು ಸಹ ಅಸಾಧ್ಯ ಎಂದು ಹೇಳಿದ ಪ್ರಧಾನಿ ಮೋದಿ ಕೆಲವು ದಿನಗಳ ಹಿಂದೆ ಸಿಯಾಚಿನ್ ಬೆಟ್ಟವೇರಿದ ಜನರು ಸಾಹಸವನ್ನು ಮನ್ ಕೀ ಬಾತ್‌ನಲ್ಲಿ ಪ್ರಸ್ತಾಪಿಸಿದರು.

ಯುವಜನರು ತಿಳಿದುಕೊಳ್ಳಬೇಕು; ಸೆಪ್ಟೆಂಬರ್ 25 ಪಂಡಿ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ದಿನ. ಅವರ ಜೀವನದಿಂದ ನಮಗೆ ಎಂದಿಗೂ ಸೋಲೊಪ್ಪದ ಪಾಠವೂ ದೊರೆಯುತ್ತದೆ. ಗಂಭೀರ ರಾಜಕೀಯ ಮತ್ತು ಸೈದ್ಧಾಂತಿಕ ವೈಪರೀತ್ಯಗಳ ಹೊರತಾಗಿಯೂ ಭಾರತದ ಪ್ರಗತಿಗಾಗಿ ದೇಶೀಯ ಮಾದರಿಯ ದೃಷ್ಟಿಕೋನದಿಂದ ಅವರು ಹಿಂದೆ ಸರಿಯಲಿಲ್ಲ.

ಇಂದು ಹೆಚ್ಚಿನ ಸಂಖ್ಯೆಯ ಯುವಜನತೆ ಸಿದ್ಧ ಮಾರ್ಗಗಳಲ್ಲದೇ ಪ್ರತ್ಯೇಕವಾಗಿ ಮುಂದೆ ಸಾಗಲು ಬಯಸುತ್ತಿದ್ದಾರೆ. ಅವರು ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡಲು ಬಯಸುತ್ತಾರೆ. ದೀನ್ ದಯಾಳ್ ಅವರ ಜೀವನದಿಂದ ಇಂತಹವರಿಗೆ ಸಾಕಷ್ಟು ಸಹಾಯ ದೊರೆಯಬಹುದು. ಆದ್ದರಿಂದಲೇ ಅವರ ಬಗ್ಗೆ ಖಂಡಿತವಾಗಿಯೂ ತಿಳಿದುಕೊಳ್ಳಬೇಕೆಂದು ನಾನು ಯುವಜನತೆಯಲ್ಲಿ ಮನವಿ ಮಾಡುತ್ತೇನೆ ಎಂದು ಮೋದಿ ಹೇಳಿದರು.

ಇಂದು ದೇಶದ ಎರಡೂಕಾಲು ಕೋಟಿಗೂ ಅಧಿಕ ಬಡಜನತೆಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಆಸ್ಪತ್ರೆಗಳಲ್ಲಿ 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ ದೊರೆತಿದೆ. ಬಡವರಿಗಾಗಿ ಇಷ್ಟು ದೊಡ್ಡ ಯೋಜನೆಯನ್ನು, ದೀನ್ ದಯಾಳ್ ಅವರ ಅಂತ್ಯೋದಯ್ ತತ್ವಕ್ಕೆ ಸಮರ್ಪಿಸಲಾಗಿದೆ. ಇಂದಿನ ಯುವಜನತೆ ಅವರ ಮೌಲ್ಯಗಳನ್ನು ಮತ್ತು ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅದರಿಂದ ಅವರಿಗೆ ಬಹಳಷ್ಟು ಸಹಾಯವಾಗುತ್ತದೆ ಎಂದರು.

ಮನ್ ಕೀ ಬಾತ್‌ನಲ್ಲಿ ನಾವಿಂದು ಅನೇಕ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ನಾವು ಹೇಳುತ್ತಿದ್ದ ಹಾಗೆ ಮುಂಬರುವ ದಿನಗಳು ಹಬ್ಬಗಳ ಸಮಯವಾಗಿದೆ. ಇಡೀ ದೇಶ ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಸುಳ್ಳಿನ ವಿರುದ್ಧ ಸತ್ಯದ ವಿಜಯೋತ್ಸವವನ್ನು ಆಚರಿಸಲಿದೆ. ಆದರೆ ಈ ಉತ್ಸವಾಚರಣೆಯಲ್ಲಿ ನಾವು ಹೋರಾಟದ ಬಗ್ಗೆ ಕೂಡಾ ನೆನಪಿಟ್ಟುಕೊಳ್ಳಬೇಕು ಅದೇ ಕೊರೋನಾ ವಿರುದ್ಧದ ಹೋರಾಟ ಎಂದು ಮೋದಿ ಹೇಳಿದರು.

ಟೀಮ್ ಇಂಡಿಯಾ ಈ ಹೋರಾಟದಲ್ಲಿ ಪ್ರತಿದಿನ ಹೊಸದೊಂದು ದಾಖಲೆ ಸೃಷ್ಟಿಸುತ್ತಿದೆ. ಲಸಿಕಾ ನೀಡಿಕೆಯಲ್ಲಿ ದೇಶವು ಇಂತಹ ಅನೇಕ ದಾಖಲೆಗಳನ್ನು ಮಾಡುತ್ತಿದೆ. ಇದರ ಬಗ್ಗೆ ಇಡೀ ವಿಶ್ವದಲ್ಲಿ ಚರ್ಚೆ ನಡೆಯುತ್ತಿದೆ. ಈ ಹೋರಾಟದಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ಮಹತ್ವದ ಪಾತ್ರವಿದೆ. ನಮ್ಮ ಸರದಿ ಬಂದಾಗ ನಾವು ಲಸಿಕೆಯನ್ನು ಪಡೆಯಬೇಕು ಎಂದು ಮೋದಿ ಕರೆ ಕೊಟ್ಟರು.

English summary
Prime minister of India Narendra Modi Mann ki baat radio program September 26, 2021. Modi addressed the nation. Here are the highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X