ಕೇಂದ್ರ ಗೃಹ ಸಚಿವಾಲಯದಿಂದ ಹೊಸ ಕೊವಿಡ್ 19 ಮಾರ್ಗಸೂಚಿ ಬಿಡುಗಡೆ
ನವದೆಹಲಿ,ನವೆಂಬರ್ 25: ಕೇಂದ್ರ ಗೃಹ ಸಚಿವಾಲಯವು ಹೊಸ ಕೊವಿಡ್ 19 ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಕೊವಿಡ್ 19 ರೋಗದ ವಿರುದ್ಧ ಕಣ್ಗಾವಲು, ನಿಯಂತ್ರಣ ಮತ್ತು ಎಚ್ಚರಿಕೆಗಾಘಿ ಹೊಸ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಲಾಗಿದೆ.
ಹೊಸ ಮಾನದಂಡಗಳು ಡಿಸೆಂಬರ್ 1 ರಿಂದ ಜಾರಿಗೆ ಬರಲಿದ್ದು, ಡಿಸೆಂಬರ್ 31ರವರೆಗೆ ಜಾರಿಯಲ್ಲಿರುತ್ತದೆ.
ಈ ಕೊವಿಡ್ ಮಾರ್ಗಸೂಚಿಯಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ರಾತ್ರಿ ಕರ್ಫ್ಯೂ ಸೇರಿದಂತೆ ಸ್ಥಳೀಯ ನಿರ್ಬಂಧಗಳನ್ನು ವಿಧಿಸಲು ಕೇಂದ್ರವು ರಾಜ್ಯಗಳಿಗೆ ಅವಕಾಶ ನೀಡಿದೆ.
ಆದಾಗ್ಯೂ ಕೇಂದ್ರ ಸರ್ಕಾರದೊಂದಿಗೆ ಪೂರ್ವ ಸಮಾಲೋಚನೆ ನಡೆಸದೆ ಕಂಟೈನ್ಮೆಂಟ್ ವಲಯಗಳ ಹೊರಗೆ ಸ್ಥಳೀಯ ಲಾಕ್‌ಡೌನ್‌ನ್ನು ರಾಜ್ಯಗಳು ವಿಧಿಸಲು ಸಾಧ್ಯವಿಲ್ಲ.
ಕಣ್ಗಾವಲು ತಂಡ ಮನೆಮನೆಯ ಮೇಲೂ ಕಣ್ಗಾವಲಿರಿಸುತ್ತದೆ. ಕೊವಿಡ್ 19 ರೋಗಿಗಳ ತ್ವರಿತ ಪ್ರತ್ಯೇಕತೆ, ಚಿಕಿತ್ಸಾ ಸೌಲಭ್ಯ, ಅಥವಾ ಹೋಂ ಐಸೊಲೇಷನ್ ಬಗ್ಗೆ ಖಾತ್ರಿಪಡಿಸುತ್ತದೆ.
ಆರೋಗ್ಯ ಸಚಿವಾಲಯವು ಸೂಚಿಸಿರುವ ಕೊವಿಡ್ 19 ನಿಯಮಗಳಲ್ಲಿ ಕಂಟೈನ್ಮೆಂಟ್ ಜೋನ್‌ಗಳ ಗುರುತಿಸುವಿಕೆ, ವೈದ್ಯಕೀಯ ತುರ್ತು ಪರಿಸ್ಥಿತಿ ಹೊರತುಪಡಿಸಿ, ಅಗತ್ಯ ಸರಕು, ಸೇವೆಗಳನ್ನು ಪೂರೈಸಿಕೊಳ್ಳಲು ಮಾತ್ರ ಅವಕಾಶವಿರುತ್ತದೆ. ಅದನ್ನು ಹೊರತುಪಡಿಸಿ ಎಲ್ಲೆಂದರಲ್ಲಿ ಓಡಾಡುವಂತಿಲ್ಲ.