ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೀಕಾಪ್ರವೀಣರ ಬಾಯಿ ಮುಚ್ಚಿಸುತ್ತಾರಾ 'ಮೌನಿ'ಮೋದಿ?

By ಒನ್ಇಂಡಿಯಾ ಕನ್ನಡ ಡೆಸ್ಕ್
|
Google Oneindia Kannada News

Recommended Video

ಮೌನ ಮೋದಿ ತಮ್ಮ ಮೌನವನ್ನ ಮುರಿದು ಉತ್ತರಿಸುತ್ತಾರಾ? | Oneindia Kannada

ಬೆಂಗಳೂರು, ಫೆಬ್ರವರಿ 20 : ಇದು ಚುನಾವಣೆ ಸಮಯ. ಕಿವಿ ತುಂಬಿ ತುಳುಕುವಂತೆ, ಕೆಲವೊಂದು ಬಾರಿ ಕಿವಿಗೆ ತೂತು ಬೀಳುವಂತೆ ಭಾಷಣಗಳು ಸುರಿಮಳೆ ಸುರಿಯುತ್ತಿವೆ. ಆರೋಪ ಪ್ರತ್ಯಾರೋಪಗಳು ವಿಲೇವಾರಿಯಾಗದ ಕಸದಂತೆ ಗುಡ್ಡೆ ಹಾಕಿಕೊಳ್ಳುತ್ತಿವೆ.

ಇದೆಲ್ಲದರ ಮಧ್ಯೆ, ರಾಜಕಾರಣಿಗಳ ಆ 'ಮೌನ', ಆ ಭಾಷಣಗಳ ಶಬ್ಧಮಾಲಿನ್ಯವನ್ನು ಮೀರಿ ಕಂಗೆಡಿಸುತ್ತಿದೆ. ಮಾತು ಬೆಳ್ಳಿ, ಮೌನ ಬಂಗಾರ ಅಂತಾರೆ! ಹಲವು ಬಾರಿ ಮಾತಿಗಿಂತಲೂ ಮೌನವೇ ಹೆಚ್ಚಿನ ಸಂಗತಿಯನ್ನು ಅರುಹಿರುತ್ತದೆ. ಆದರೆ, ಈ 'ಮೌನ'ವಿದೆಯಲ್ಲ, ಅದು ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ.

ಮೋದಿ ಮೌನಕ್ಕೆ ಸಾವಿರ ಅರ್ಥ: ವ್ಯಂಗ್ಯ, ಅಪಹಾಸ್ಯ, ಲೇವಡಿ...ಮೋದಿ ಮೌನಕ್ಕೆ ಸಾವಿರ ಅರ್ಥ: ವ್ಯಂಗ್ಯ, ಅಪಹಾಸ್ಯ, ಲೇವಡಿ...

ಮೌನಗಳ ವಿಷಯ ಬಂದಾಗ ಕಣ್ಣಿಗೆ ಕಟ್ಟಿದಂತೆ ಚಿತ್ರ ಬರುವುದು, 10 ವರ್ಷಗಳ ಕಾಲ ದೇಶವಾಳಿದ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರದು. ಯುಪಿಎ ಸರಕಾರವಿದ್ದಾಗ ಅವರ ಮೌನ, ವಿರೋಧ ಪಕ್ಷದವರನ್ನು ಮಾತ್ರವಲ್ಲ, ಆಡಳಿತ ಪಕ್ಷದ ಧುರೀಣರನ್ನೂ ಸಿಡಿಮಿಡಿ ಮಾಡುವಂತೆ ಮಾಡಿತ್ತು.

2ಜಿ, ಕಾಮನ್ವೆಲ್ತ್, ಕಲ್ಲಿದ್ದಲು ಮುಂತಾದ ಹಗರಣಗಳು ಕಗ್ಗತ್ತಲಿನಿಂದ ಬೆಳಕಿಗೆ ಬಂದಾಗ, ಮನಮೋಹನ ಸಿಂಗ್ ಅವರು ಬಾಯಿಯನ್ನೇ ಬಿಡದಿದ್ದುದು ಆಕ್ರೋಶಕ್ಕೆ ಅಪಹಾಸ್ಯಕ್ಕೆ ಕಾರಣವಾಗಿತ್ತು. ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರೇ ಸ್ವತಃ ಮನಮೋಹನ ಸಿಂಗ್ ಅವರನ್ನು 'ಮೌನ'ಮೋಹನ ಸಿಂಗ್ ಎಂದು ಬಿರುದನ್ನು ಕೊಟ್ಟಿದ್ದರು.

ಅದು ಒಂದು ರೀತಿ ನಿಜವೂ ಆಗಿತ್ತು. ಯಾವ್ಯಾವ ಸಂದರ್ಭದಲ್ಲಿ ಅವರು ಮಾತನಾಡಬೇಕಿತ್ತೋ ಆವಾಗ ಬಾಯಿಗೆ ಬೀಗ ಜಡಿದವರಂತೆ ಅವರು ಮೌನ ವ್ರತಕ್ಕೆ ಶರಣಾಗಿದ್ದರು. ಅವರ ಮೌನ ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕಿದ್ದವು, ಹಲವಾರು ಪ್ರಶ್ನೆಗಳಿಗೂ ಉತ್ತರ ನೀಡಿದ್ದವು. ಅವರು ಉತ್ತರ ನೀಡಲು ಆರಂಭಿಸಿದಾಗ ಕಾಲ ಮಿಂಚಿತ್ತು.

ಮೌನಿ ಮೋಹನ ಅಂದವರೇ ಮೌನಕ್ಕೆ ಶರಣು

ಮೌನಿ ಮೋಹನ ಅಂದವರೇ ಮೌನಕ್ಕೆ ಶರಣು

ಅಚ್ಚರಿಯ ಸಂಗತಿಯೆಂದರೆ, ಅಂದು ಯಾರು ಅವರಿಗೆ 'ಮೌನ'ಮೋಹನ ಸಿಂಗ್ ಎಂದು ಬಿರುದು ನೀಡಿದ್ದರೋ, ಇಂದು ಅವರೇ ಮೌನಕ್ಕೆ ಜಾರಿದ್ದಾರೆ. ನರೇಂದ್ರ ಮೋದಿಯವರನ್ನು ಅವರ ವಿರೋಧಿಗಳು 'ಮೌನ' ಮೋದಿ ಎಂದೇ ಕರೆಯಲು ಆರಂಭಿಸಿದ್ದಾರೆ. ಪಿಎನ್‌ಬಿ ಹಗರಣ, ರೋಟೋಮ್ಯಾಕ್ ಹಗರಣ ಸೇರಿದಂತೆ ಹಲವಾರು ವಿವಾದಗಳ ಬಗ್ಗೆ ಅವರು ಮಾತು ಆಡದಿರುವುದು ಅವರಿಗೆ ಮೌನ ಪಟ್ಟ ತಂದುಕೊಟ್ಟಿದೆ.

ಖದೀಮ ನಿರಾವ್ ಮೋದಿ ಬಗ್ಗೆ ಏಕೆ ಮಾತಿಲ್ಲ?

ಖದೀಮ ನಿರಾವ್ ಮೋದಿ ಬಗ್ಗೆ ಏಕೆ ಮಾತಿಲ್ಲ?

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಪಂಗನಾಮ ಹಾಕಿ, 11,300 ಕೋಟಿ ರುಪಾಯಿ ನುಂಗಿ ನೀರು ಕುಡಿದು ದೇಶಬಿಟ್ಟು ಪರಾರಿಯಾಗಿರುವ ಆಭರಣ ಉದ್ಯಮಿ ನಿರಾವ್ ಮೋದಿ ಬಗ್ಗೆ ಇದೇ ದೇಶವೇ ಮಾತನಾಡುತ್ತಿರುವಾಗ, ಪ್ರಧಾನಿ ನರೇಂದ್ರ ಮೋದಿಯವರು ಈಕುರಿತು ಒಂದೇ ಒಂದು ಹೇಳಿಕೆಯನ್ನು ನೀಡದಿರುವುದು ಅವರ ಅಭಿಮಾನಿಗಳನ್ನೂ ಅಚ್ಚರಿಗೆ ತಳ್ಳಿದೆ.

ಹಗರಣಗಳ ಬಗ್ಗೆ ದಿವ್ಯ ಮೌನ

ಹಗರಣಗಳ ಬಗ್ಗೆ ದಿವ್ಯ ಮೌನ

ಕನ್ನಡ ಪತ್ರಕರ್ತೆ ಗೌರಿ ಲಂಕೇಶ್ ಅವರ ಭೀಕರ ಹತ್ಯೆ ನಡೆದಾಗಲೂ ಅವರು ಹೇಳಿಕೆ ನೀಡದಿದ್ದುದು ಅವರ ವಿರೋಧಿಗಳಿಂದ ಟೀಕೆಗೆ ಗುರಿಯಾಗಿತ್ತು. ಗೋವು ರಕ್ಷಕರಿಂದ ಹಲ್ಲೆ ಆಗುತ್ತಿರುವ ಬಗ್ಗೆ, ವಿವಾದಾತ್ಮಕ ರಾಫೇಲ್ ಡೀಲ್, ಭ್ರಷ್ಟಾಚಾರದಲ್ಲಿ ಅಮಿತ್ ಶಾ ಅವರ ಮಗನ ಹೆಸರು ಕೇಳಿಬಂದಾಗ ಕೂಡ ಅವರು ದಿವ್ಯ ಮೌನ ವಹಿಸಿದ್ದಾರೆ. ಕಡೆಗೆ, ಗೋವು ರಕ್ಷಕರಿಂದ ಆಗುತ್ತಿರುವ ಹಲ್ಲೆಯ ಬಗ್ಗೆ ಮೌನ ಮುರಿದಿದ್ದರು.

ಮೋದಿ, ಸಿದ್ದುವಿನಿಂದ ಮೋದಿಗೆ ವಾಗ್ಬಾಣ

ಮೋದಿ, ಸಿದ್ದುವಿನಿಂದ ಮೋದಿಗೆ ವಾಗ್ಬಾಣ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಹೆಡ್ ದಿವ್ಯಾ ಸ್ಪಂದನಾ ಸೇರಿದಂತೆ ಮೋದಿ ವಿರೋಧಿಗಳು ನರೇಂದ್ರ ಮೋದಿಯವರ ಮೌನವನ್ನು ಪ್ರಶ್ನಿಸುತ್ತಲೇ ಬಂದಿದ್ದಾರೆ. ಮೋದಿಯವರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಗ್ಗೆ ಏಕೆ ಚಕಾರವೆತ್ತಿಲ್ಲ? ಅವರು ಪ್ರಧಾನಿಯಾಗಲೇ ಅರ್ಹರಲ್ಲ ಎಂದು ಸಿದ್ದರಾಮಯ್ಯ ಅವರು ಮೋದಿಯನ್ನು ಟೀಕಿಸಿದ್ದಾರೆ.

ಕಮಿಷನ್ ಸರ್ಕಾರ ಎಂದ ಮೋದಿಗೆ ಕಾರ್ಟೂನ್ ತೋರಿಸಿದ ಸಿದ್ದರಾಮಯ್ಯಕಮಿಷನ್ ಸರ್ಕಾರ ಎಂದ ಮೋದಿಗೆ ಕಾರ್ಟೂನ್ ತೋರಿಸಿದ ಸಿದ್ದರಾಮಯ್ಯ

ಮೌನಗಾರಿಕೆ ಕಲೆ ಕರಗತ ಮಾಡಿಕೊಂಡಿದ್ದಾರಾ?

ಮೌನಗಾರಿಕೆ ಕಲೆ ಕರಗತ ಮಾಡಿಕೊಂಡಿದ್ದಾರಾ?

ಮೌನಗಾರಿಕೆಯ ಕಲೆಯನ್ನು ಮೋದಿಯವರು ಕರಗತ ಮಾಡಿಕೊಂಡಿದ್ದಾರಾ? ದೇಶದ ಚೌಕಿದಾರನಾಗಿರುತ್ತೇನೆಂದಿದ್ದ ಮೋದಿಯವರು ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಅಲುಗಾಡಿಸುತ್ತಿರುವ ಹಗರಣಗಳ ಬಗ್ಗೆ ಏಕೆ ಒಂದು ಮಾತನ್ನೂ ಆಡುತ್ತಿಲ್ಲ? ಈ ಮೌನದ ಹಿಂದಿನ ರಹಸ್ಯವಾದರೂ ಏನು? ಎಂದು ಕಾಂಗ್ರೆಸ್ಸಿನವರು ತಿರುಗಿಬಿದ್ದಿದ್ದಾರೆ.

ಮೋದಿಯವರು ಟೀಕಾಕಾರರ ಬಾಯಿ ಮುಚ್ಚಿಸಬೇಕು

ಮೋದಿಯವರು ಟೀಕಾಕಾರರ ಬಾಯಿ ಮುಚ್ಚಿಸಬೇಕು

ಎಲ್ಲ ವಿರೋಧಿಗಳ ಬಾಯಿ ಮುಚ್ಚಿಸಲಾದರೂ ನರೇಂದ್ರ ಮೋದಿಯವರು ಮೌನವ್ರತ ಕೊನೆಗಾಣಿಸಲೇಬೇಕು. ದೇಶದ ಜನತೆ ಕೂಡ ಅವರ ಅಭಿಪ್ರಾಯವೇನು ಎಂದು ತಿಳಿದುಕೊಳ್ಳಲು ದೇಶದ ಜನತೆ ಕೂಡ ಉತ್ಸುಕದಿಂದ ಇದ್ದಾರೆ. ಮೋದಿಯವರು ಈ ಪ್ರಶ್ನೆಗಳಿಗೆಲ್ಲ ಮೌನದಿಂದಲೇ ಉತ್ತರ ಕೊಡುತ್ತಾರಾ? ಅಥವಾ ಟೀಕಾಪ್ರವೀಣರ ಬಾಯಿ ಮುಚ್ಚಿಸುತ್ತಾರಾ?

English summary
The 'politics of silence' pervades the nation. It is almost eerie. Maun Modi (silent Modi) has replaced Maun Mohan as the country's pradhan sevak. Narendra Modi should break his silence and should start giving statements on scams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X