ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಿ ಗಂಡನಿಗೆ ಡಿಮ್ಯಾಂಡು, ಹೆಂಡತಿ ಅಪ್ಪನಿಗೆ ರಿಮ್ಯಾಂಡು!

By Prasad
|
Google Oneindia Kannada News

ಬೆಂಗಳೂರು, ಆಗಸ್ಟ್ 08 : "ಹುಡುಗ ಅಮೆರಿಕಾದಲ್ಲಿದ್ದಾನಂತೆ? ಸಾಫ್ಟ್ ವೇರ್ ಇಂಜಿನಿಯರ್ ಬೇರೆ! ವಾವ್, ಅದೃಷ್ಟ ಖುಲಾಯಿಸಿತು ಬಿಡೆ. ಮದುವೆಯಾದ ಮೇಲೆ ಅಮೆರಿಕಾದಲ್ಲೇ ಸೆಟ್ಲ್ ಆಗಿಬಿಡ್ತೀಯೋ, ಭಾರತಕ್ಕೂ ವಾಪಸ್ ಬರ್ತೀಯೋ? ಫಾರಿನ್ ಹುಡುಗ, ಕೈತುಂಬ ಡಾಲರೂ... ನಿಜವಾಗ್ಲೂ ಲಕ್ಕೀ ಕಣೆ ನೀನು..."

ಎನ್ಆರ್‌ಐ ಗಂಡಿನೊಂದಿಗೆ ಮದುವೆ ನಿಶ್ಚಯವಾಗುತ್ತಿದ್ದಂತೆ ಹರ್ಷದ ವರ್ಷಧಾರೆ. ಹುಡುಗಿ ನಾಚಿ ನೀರಾಗಿರುತ್ತಾಳೆ, ಗಲ್ಲ ಕೆಂಪೇರಿರುತ್ತೆ, ಮಳೆ ಸುರಿಯದಿದ್ದರೂ ಕನಸುಗಳು ಬಿತ್ತನೆ ಮಾಡಿರುತ್ತವೆ. ಅಪ್ಪ ಧಾಂಧೂಂ ಅಂತ ಮದುವೆ ಮಾಡುವ ತಯಾರಿಗಾಗಿ ಓಡಾಡುತ್ತಿರುತ್ತಾನೆ, ಅಮ್ಮನ ಕಣ್ಣಂಚಿನಲ್ಲಿ ನೀರಾಡಿರುತ್ತದೆ.

ಎಲ್ಲ ಹುಡುಗಿಯರ ಬದುಕೂ ಹೀಗೇ ಆಗಿದ್ದರೆ ಎಷ್ಟು ಚೆಂದ ಇರುತ್ತದಲ್ಲಾ? ಹಾಗಿದ್ದರೆ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಅಷ್ಟೊಂದು ಕಂಪ್ಲೇಂಟುಗಳೇಕೆ ಗುಡ್ಡೆಹಾಕಿ ಕುಳಿತುಕೊಂಡಿವೆ? ನಿಜಸ್ಥಿತಿ ಎಲ್ಲರೂ ಅಂದುಕೊಂಡಂತೆ ಇಲ್ಲವೇ ಇಲ್ಲ ಅನ್ನುವುದು ವಸ್ತುಸ್ಥಿತಿ. ಗುಲಾಬಿಯ ಕಾಂಡದಲ್ಲಿ ಮುಳ್ಳು ತುಂಬಿಕೊಂಡಿದೆ ಹುಷಾರ್!

ವಿದೇಶಿ ಮದುಮಗನಿಗೆ ಮದುವೆ ಮಾಡಿಕೊಟ್ಟ ಹೆಣ್ಣಿನ ಕುಟುಂಬದವರು ಎಂತೆಂಥ ಸಂಕಟದಲ್ಲಿ ಸಿಲುಕಿರುವುದು ನಿಜಕ್ಕೂ ಎಚ್ಚರಿಕೆಯ ಗಂಟೆಯಾಗಿದೆ. ಆಳ ಎಷ್ಟಿದೆಯೆಂದು ತಿಳಿದುಕೊಂಡು ನೀರಿನಲ್ಲಿ ಕಾಲಿಳಿಬಿಡುವುದು ಹೆಣ್ಣುಮಕ್ಕಳ ಪೋಷಕರು ಅರಿಯಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಮುಂದೆ ಓದುತ್ತಾ ಸಾಗಿ...

ವಿದೇಶಿ ಮದುವೆಯೆಂಬ ಪ್ರತಿಷ್ಠೆಯ ಪ್ರಶ್ನೆ

ವಿದೇಶಿ ಮದುವೆಯೆಂಬ ಪ್ರತಿಷ್ಠೆಯ ಪ್ರಶ್ನೆ

ವಿದೇಶಿ ಗಂಡಿಗೆ ಮದುವೆ ಮಾಡಿಕೊಡುವುದು ಪ್ರತಿಷ್ಠೆಯ ಪ್ರಶ್ನೆಯಾಗಿರುತ್ತದೆ. ಆದರೆ, ಮುಂಬರುವ ತೊಂದರೆಗಳನ್ನು ಯಾರೂ ಕಂಡಿರುವುದಿಲ್ಲ. ಜಾತಕ ಕೂಡಿಸಿ ನೋಡುವುದು ಅತ್ಲಾಗಿರಲಿ, ಗಂಡಿನ ಕುಟುಂಬದ ಹಿನ್ನೆಲೆಯನ್ನೇ ಅನೇಕರು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಭಾಷಾ ತೊಂದರೆ, ಪೊಲೀಸು ಕಾನೂನು ವ್ಯವಸ್ಥೆ ಸಮಸ್ಯೆಗಳನ್ನು ಮತ್ತಷ್ಟು ಜಟಿಲ ಮಾಡಿರುತ್ತವೆ.

ಕಷ್ಟಗಳಿಗೆ ವಿದೇಶಕ್ಕೇ ಹಾರಬೇಕಿಲ್ಲ

ಕಷ್ಟಗಳಿಗೆ ವಿದೇಶಕ್ಕೇ ಹಾರಬೇಕಿಲ್ಲ

ಹಲವಾರು ಕುಟುಂಬಗಳು ಕಂಡ ಕನಸುಗಳು ನುಚ್ಚುನೂರಾಗಿವೆ. ವಿದೇಶಿ ನೆಲಕ್ಕೆ ಜಿಗಿದ ಅನೇಕ ಮಹಿಳೆಯರ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಸಂಸಾರ ಒಡೆದು ಚೂರಾಗಲು ವಿದೇಶಕ್ಕೇ ಹಾರಬೇಕೆಂದೇನಿಲ್ಲ, ವಿದೇಶಕ್ಕೆ ಹೋಗಲಾರದೆ ಭಾರತದಲ್ಲಿದ್ದುಕೊಂಡೇ ಅನೇಕ ಮಹಿಳೆಯರು ಕೈಯನ್ನು ಕಣ್ಣೀರಿನಲ್ಲಿ ಕೈತೊಳೆದುಕೊಳ್ಳುತ್ತಿದ್ದಾರೆ.

ದೂರುಗಳು ಹೇಗಿವೆ ನೋಡಿ

ದೂರುಗಳು ಹೇಗಿವೆ ನೋಡಿ

ಹೆಂಡತಿಯನ್ನು ಇಲ್ಲಿಯೇ ಬಿಟ್ಟು ಪಲಾಯನ ಮಾಡಿದವರೆಷ್ಟೋ? ವರದಕ್ಷಿಣೆ ಕಾಟ, ಪಾಸ್ಪೋರ್ಟ್ ಕಿತ್ತುಕೊಂಡಿರುವುದು, ಮಕ್ಕಳ ಸುಪರ್ದಿ, ಗಂಡ ಬೇರೆ ದೇಶಕ್ಕೆ ಬಿಟ್ಟು ಹೋಗುತ್ತಾನೆಂಬ ಹೆದರಿಕೆ, ವಿಚ್ಛೇದನದ ನಂತರ ಜೀವನಾಂಶ, ನೀಡಿದ ಒಡವೆ ಹಿಂಪಡೆಯಲು ಒದ್ದಾಟ, ಸಾಲದೆಂಬಂತೆ ವಿದೇಶಿ ಕೋರ್ಟುಗಳ ದುಬಾರಿ ಫೀಸು.

ಕೆಲಸವೇ ಖಾತ್ರಿ ಇರಲ್ಲ, ಆಗಲೆ ಡುಂಡುಂಡುಂ

ಕೆಲಸವೇ ಖಾತ್ರಿ ಇರಲ್ಲ, ಆಗಲೆ ಡುಂಡುಂಡುಂ

ಅಲ್ಲಿ ಗಂಡನ ಕೆಲಸವೇ ಖಾತ್ರಿ ಇರುವುದಿಲ್ಲ, ಇಲ್ಲಿ ತಲೆ ಮೇಲೆ ಮಂತ್ರಾಕ್ಷತೆ ಸುರಿದಿರುತ್ತವೆ. ಅಲ್ಲಿ ಮಗಳು ದೈಹಿಕ ಮಾನಸಿಕ ಹಿಂಸೆಗೆ ಗುರಿಯಾಗುತ್ತಿರುತ್ತಾಳೆ, ಇಲ್ಲಿ ಪೋಷಕರಿಗೆ ಅದರ ಲವಲೇಶವೂ ತಿಳಿದಿರುವುದಿಲ್ಲ. ಭರ್ಜರಿಯಾಗಿ ಮದುವೆ ಮಾಡಿಕೊಂಡು ಕೈತುಂಬ ವರದಕ್ಷಿಣೆ ಪಡೆದುಕೊಂಡು ಗಂಡ ವಿದೇಶಕ್ಕೆ ಹಾರಿರುತ್ತಾನೆ, ಹೆಂಡತಿ ವೀಸಾಗಾಗಿ ಕಾಯುತ್ತಾ ಕುಳಿತಿರುತ್ತಾಳೆ.

ಮಧುಚಂದ್ರದ ನಂತರ ಗಂಡ ಗಾಯಬ್

ಮಧುಚಂದ್ರದ ನಂತರ ಗಂಡ ಗಾಯಬ್

ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ವಧುಗಳು ಮದುವೆಯಾಗಿ ಮಧುಚಂದ್ರ ಅನುಭವಿಸಿದ ನಂತರ ಗಂಡನನ್ನೇ ಕಂಡಿಲ್ಲ! ವೀಸಾ ಪಡೆದುಕೊಂಡು ವಿದೇಶಿ ನೆಲದಲ್ಲಿ ಕಾಲಿಟ್ಟರೆ, ಆಕೆಯನ್ನು ಸ್ವಾಗತಿಸಿದ್ದು ಗಂಡನಲ್ಲ ಮೊದಲನೇ ಹೆಂಡತಿ!

ನಿಖರವಾದ ಮಾಹಿತಿ ನೀಡಿರುವುದಿಲ್ಲ

ನಿಖರವಾದ ಮಾಹಿತಿ ನೀಡಿರುವುದಿಲ್ಲ

ಹಲವಾರು ಗಂಡಂದಿರು ತಮ್ಮ ಕೆಲಸ, ಸಂಬಳ, ವೀಸಾ, ಆಸ್ತಿಪಾಸ್ತಿ, ಮದುವೆಯ ಸ್ಥಿತಿಗತಿ, ಮತ್ತಿತರ ಸಂಗತಿಗಳ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಿರುವುದಿಲ್ಲ. ವಿಚ್ಛೇದನಕ್ಕಾಗಿ ಕೋರ್ಟಿನಲ್ಲಿ ಅರ್ಜಿ ಗುಜರಾಯಿಸಿದಾಗಲೇ ಎಲ್ಲ ನೈಜ ಸಂಗತಿಗಳು ಹೊರಬಂದಿರುತ್ತವೆ. ಹೆಣ್ಣು ಕೊಟ್ಟ ಮಾವನಿಗೆ ರಿಮ್ಯಾಂಡಪ್ಪೋ ರಿಮ್ಯಾಂಡು.

ಕಾನೂನು ತಿದ್ದುಪಡಿಗೆ ಶಿಫಾರಸು

ಕಾನೂನು ತಿದ್ದುಪಡಿಗೆ ಶಿಫಾರಸು

ಇದನ್ನೆಲ್ಲ ಮನಗಂಡಿರುವ ರಾಷ್ಟ್ರೀಯ ಮಹಿಳಾ ಆಯೋಗ, ಎನ್ಆರ್‌ಐ ಅಥವಾ ವಿದೇಶಿ ಮದುವೆಯ ಕುರಿತಂತೆ ಇರುವ ಕಾನೂನನ್ನು ತಿದ್ದುಪಡಿ ಮಾಡಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಿದೆ. ರಾಜ್ಯಸಭೆಯಲ್ಲಿ ಈ ಕಾನೂನು ತಿದ್ದುಪಡಿ ಕುರಿತಂತೆ ಚರ್ಚೆ ನಡೆಯಬೇಕಿದೆ.

ಕಷ್ಟಕ್ಕೆ ಒಂದಿಷ್ಟು ಕೇಂದ್ರದ ಹಣಸಹಾಯ

ಕಷ್ಟಕ್ಕೆ ಒಂದಿಷ್ಟು ಕೇಂದ್ರದ ಹಣಸಹಾಯ

ಭಾರತದ ವಿದೇಶಾಂಗ ವ್ಯವಹಾರ ಸಚಿವಾಲಯ ತೊಂದರೆಯಲ್ಲಿ ಸಿಲುಕಿರುವ ಮಹಿಳೆಯ ಕುಟುಂಬಕ್ಕೆ, ವಿದೇಶದಲ್ಲಿ ಕಾನೂನು ಸಹಾಯ ಪಡೆಯಲೆಂದು ಹಣಕಾಸು ನೆರವು ನೀಡುವ ಯೋಜನೆಯನ್ನು ರೂಪಿಸಿದೆ. ಸುಮಾರು 3 ಸಾವಿರ ಅಮೆರಿಕ ಡಾಲರ್ ನಷ್ಟು ಹಣಕಾಸಿನ ಸಹಕಾರ ದೊರೆಯುತ್ತಿದೆ.

English summary
Are you dreaming of marrying your daughter to NRI husband? Think twice before handing over hand of your daughter to NRI groom. All that glitters is not gold! National Commission for Women has received thousands of complaints regarding marital discord of NRI women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X