• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿವಿಧ ಪ್ರಕರಣಗಳಲ್ಲಿ ಜೈಲು ವಾಸ ಅನುಭವಿಸಿದ ಗಣ್ಯರು ಇವರು

|

ಬೆಂಗಳೂರು, ಆಗಸ್ಟ್ 23: ಕೇಂದ್ರದಲ್ಲಿ ಗೃಹ ಸಚಿವರಾಗಿ, ಹಣಕಾಸು ಸಚಿವರಾಗಿ ಬಹು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದ ಪಿ. ಚಿದಂಬರಂ ಅವರು ಐಎನ್‌ಎಕ್ಸ್ ಮೀಡಿಯಾ ಕೇಸ್ ಹಗರಣದಲ್ಲಿ ಜೈಲು ಪಾಲಾಗಿದ್ದಾರೆ. ಭಾರತದ ಇತಿಹಾಸದಲ್ಲಿ ಕೇಂದ್ರದಲ್ಲಿ ಗೃಹ ಸಚಿವರಾಗಿದ್ದವರೊಬ್ಬರು ಜೈಲು ಸೇರಿರುವುದು ಇದೇ ಮೊದಲು.

ಆದರೆ, ಸೆರೆವಾಸ ಅನುಭವಿಸುತ್ತಿರುವ ಪ್ರಮುಖ ಮತ್ತು ಪ್ರಭಾವಿ ಗಣ್ಯರಲ್ಲಿ ಚಿದಂಬರಂ ಅವರು ಮೊದಲಿಗರೇನಲ್ಲ. ವಿವಿಧ ಸಚಿವ ಸ್ಥಾನ, ಮುಖ್ಯಮಂತ್ರಿ ಹುದ್ದೆಗಳಲ್ಲಿದ್ದು ಹಗರಣಗಳಿಂದಾಗಿ ತನಿಖೆ ಎದುರಿಸಿ ಜೈಲು ಪಾಲಾದ ಹಲವು ರಾಜಕಾರಣಿಗಳಿದ್ದಾರೆ. ಅವರಲ್ಲಿ ಅನೇಕರು ಈಗಲೂ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಕೆಲವರು ತಮ್ಮ ಮೇಲಿನ ಆರೋಪಗಳಿಂದ ಖುಲಾಸೆಯಾಗಿದ್ದಾರೆ. ಇನ್ನು ಹಲವರು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇನ್ನು ಕೆಲವರು ಮೃತಪಟ್ಟಿರುವುದರಿಂದ ಆರೋಪಗಳು ಅಲ್ಲಿಗೆ ಅಂತ್ಯಕಂಡಿವೆ. ಅತ್ಯಂತ ಪ್ರಮುಖ ಹುದ್ದೆಗಳಲ್ಲಿದ್ದ ಅಧಿಕಾರಿಗಳು ಕೂಡ ಇದರಿಂದ ಹೊರತಾಗಿಲ್ಲ.

ಸೋನಿಯಾ, ರಾಹುಲ್ ಸೇರಿ ಜಾಮೀನಿನ ಮೇಲಿರುವ ಕಾಂಗ್ರೆಸ್ ನಾಯಕರು ಯಾರ್ಯಾರು?

ಹೀಗೆ ವಿವಿಧ ಪ್ರಕರಣಗಳಲ್ಲಿ ಜೈಲು ಸೇರಿದ ರಾಜಕಾರಣಿಗಳು ಮತ್ತು ಅಧಿಕಾರಿಗಳ ವಿವರ ಇಲ್ಲಿದೆ.

ಜೆ. ಜಯಲಲಿತಾ

ಜೆ. ಜಯಲಲಿತಾ

ಅಕ್ರಮ ಆಸ್ತಿ ಸಂಪಾದನೆಯ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಬೆಂಗಳೂರಿನಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು. 1991-96ರ ಅವಧಿಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ದೂರು ನೀಡಿದ್ದರು. ಅದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದು 2014ರಲ್ಲಿ ಜಯಲಲಿತಾ ಅವರಿಗೆ ನಾಲ್ಕು ವರ್ಷ ಜೈಲುಶಿಕ್ಷೆಯಾಗಿತ್ತು. ಅವರು 21 ದಿನ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು. ಬಳಿಕ ಮತ್ತೆ ಮುಖ್ಯಮಂತ್ರಿ ಹುದ್ದೆ ನಿಭಾಯಿಸಿದ್ದರು. ಅಧಿಕಾರದಲ್ಲಿ ಇರುವಾಗಲೇ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ನಿಧನರಾದರು.

ಇದಕ್ಕೂ ಮೊದಲು ನಿಗದಿತ ಮೊತ್ತಕ್ಕಿಂತ ಅದಿಕ ಬೆಲೆಗೆ ಬಣ್ಣದ ಟೀವಿಗಳನ್ನು ಖರೀದಿಸಿದ ಹಗರಣದಲ್ಲಿ 1998ರಲ್ಲಿ ಜಯಲಲಿತಾ ಅವರನ್ನು 1996ರ ಡಿಸೆಂಬರ್‌ನಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. 2000ರಲ್ಲಿ ಜಯಲಲಿತಾ ಮತ್ತು ಅವರ ಆಪ್ತೆ ಶಶಿಕಲಾ ಅವರು ಖುಲಾಸೆಯಾಗಿದ್ದರು.

Breaking: ಜಾಮೀನು ನಿರಾಕರಣೆ, ಸಿಬಿಐ ವಶಕ್ಕೆ ಪಿ.ಚಿದಂಬರಂ

ಡಿನೋಟಿಫೈ ಹಗರಣ

ಡಿನೋಟಿಫೈ ಹಗರಣ

ಮುಖ್ಯಮಂತ್ರಿಯಾಗಿದ್ದಾಗಲೇ ಜೈಲು ಸೇರಿದ ಮೊದಲ ಮುಖ್ಯಮಂತ್ರಿ ಎಂಬ ಕುಖ್ಯಾತಿಗೆ ಒಳಗಾದವರು ಬಿಜೆಪಿ ನಾಯಕ ಮತ್ತು ಹಾಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಕೀರ್ತಿ ಅವರದು. ಆದರೆ, ಅವರು ಸಂಪೂರ್ಣಾವಧಿ ಅಧಿಕಾರ ನಡೆಸಲು ಸಾಧ್ಯವಾಗಲಿಲ್ಲ. ಸರ್ಕಾರಿ ಜಮೀನನ್ನು ಡಿನೋಟಿಫೈ ಮಾಡಿದ ಆರೋಪದಲ್ಲಿ ಅವರು 25 ದಿನ ಜೈಲು ಶಿಕ್ಷೆ ಅನುಭವಿಸಿದ್ದರು. ಬಳ್ಳಾರಿಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕೂಡ ಅವರು ಆರೋಪ ಎದುರಿಸಿದ್ದರು. ಈ ಕಾರಣದಿಂದಲೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಅನಿವಾರ್ಯತೆಗೆ ಒಳಗಾಗಿದ್ದರು. ಆದರೆ, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿದೆ.

ಲಾಲು ಪ್ರಸಾದ್

ಲಾಲು ಪ್ರಸಾದ್

ಒಂದೆರಡಲ್ಲ, ಹತ್ತಾರು ಹಗರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವವರು ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕ ಲಾಲು ಪ್ರಸಾದ್. ಅವರ ಅಧಿಕಾರಾವಧಿಯಲ್ಲಿ ನಡೆದ ಮೇವು ಹಗರಣ ದೇಶದಾದ್ಯಂತ ಭಾರಿ ಸುದ್ದಿ ಮಾಡಿತ್ತು. ಈ ಹಗರಣದಲ್ಲಿ ಅವರು ಪ್ರಮುಖ ಆರೋಪಿಯಾಗಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಅನಾರೋಗ್ಯದ ಕಾರಣ ಅವರು ಆಸ್ಪತ್ರೆಯಲ್ಲಿದ್ದಾರೆ. 900 ಕೋಟಿ ಮೊತ್ತದ ಮೇವು ಹಗರಣದಲ್ಲಿ ಅವರಿಗೆ 14 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಕೇಂದ್ರದಲ್ಲಿ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಅವರು ಹೋಟೆಲ್‌ಗಾಗಿ ರೈಲ್ವೆ ಇಲಾಖೆ ಜಾಗವನ್ನು ಅಕ್ರಮವಾಗಿ ಮಂಜೂರು ಮಾಡಿಸಿದ್ದರು ಎಂಬ ಆರೋಪ ಕೂಡ ಅವರ ಮೇಲಿದೆ.

ಎ. ರಾಜಾ

ಎ. ರಾಜಾ

2ಜಿ ಹಗರಣದಲ್ಲಿ 15 ತಿಂಗಳು ಸೆರೆವಾಸ ಅನುಭವಿಸಿದ ಕೇಂದ್ರದ ಮಾಜಿ ಸಚಿವ ಎ. ರಾಜಾ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ದೂರಸಂಪರ್ಕ ಖಾತೆ ಸಚಿವರಾಗಿದ್ದ ಎ. ರಾಜಾ ಅವರನ್ನು 2011ರ ಫೆಬ್ರವರಿ 2ರಂದು ಬಂಧಿಸಲಾಗಿತ್ತು

 ಕನಿಮೊಳಿ

ಕನಿಮೊಳಿ

ಡಿಎಂಕೆ ಮುಖ್ಯಸ್ಥರಾಗಿದ್ದ ಎಂ. ಕರುಣಾನಿಧಿ ಅವರ ಮಗಳಾದ ಹಾಲಿ ಸಂಸದೆ ಕನಿಮೊಳಿ ಅವರೂ 2ಜಿ ಹಗರಣದಲ್ಲಿ ಜೈಲುಶಿಕ್ಷೆ ಅನುಭವಿಸಿದ್ದರು. ಆರು ತಿಂಗಳು ಅವರು ಸೆರೆಯಲ್ಲಿದ್ದರು. ಕುಟುಂಬದ ಒಡೆತನದ ಕಲೈನಾರ್ ಟಿವಿಯಲ್ಲಿ ಪಾಲುದಾರಿಕೆ ಹೊಂದಿದ್ದ ಕನಿಮೊಳಿ ಅವರು ಟಿವಿ ಆರಂಭ, ಕಾರ್ಯನಿರ್ವಹಣೆಯ ಸಲುವಾಗಿ ಎ. ರಾಜಾ ಅವರ ಸಹಕಾರ ಪಡೆದುಕೊಂಡಿದ್ದರು. ಇದರಲ್ಲಿ ಅಕ್ರಮ ನಡೆದಿತ್ತು ಎಂದು ಆರೋಪಿಸಲಾಗಿತ್ತು. 2011ರಲ್ಲಿ ಕನಿಮೊಳಿ ಅವರನ್ನು ಸಿಬಿಐ ಬಂಧಿಸಿತ್ತು.

ಭ್ರಷ್ಟಾಚಾರ ಆರೋಪವಿದ್ದರೂ ಸಿಬಿಐ, ಇಡಿ ದಾಳಿ ನಡೆಸದ 7 ರಾಜಕಾರಣಿಗಳಿವರು

ಅಮರ್ ಸಿಂಗ್

ಅಮರ್ ಸಿಂಗ್

ವೋಟಿಗಾಗಿ ನೋಟು ಪ್ರಕರಣದಲ್ಲಿ ನ್ಯಾಯಾಂಗ ಬಂಧನ ಎದುರಿಸಿದ್ದ ಅಮರ್ ಸಿಂಗ್, ಸಮಾಜವಾದಿ ಪಕ್ಷದ ಪ್ರಭಾವಿ ನಾಯಕರಲ್ಲಿ ಒಬ್ಬರು. ರಾಜ್ಯಸಭೆ ಸದಸ್ಯರಾಗಿದ್ದ ಅವರು 2008ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿಶ್ವಾಸಮತ ಯಾಚನೆ ವೇಳೆ ಅವರಿಗೆ ಬೆಂಬಲ ನೀಡುವಂತೆ ಬಿಜೆಪಿಯ ಮೂವರು ಸಂಸದರಿಗೆ ಲಂಚದ ಆಮಿಷವೊಡ್ಡಿದ ಆರೋಪ ದಾಖಲಿಸಲಾಗಿತ್ತು. ಅನಾರೋಗ್ಯದ ನೆಪವೊಡ್ಡಿ ಬಂಧನದಿಂದ ಪಾರಾಗಲು ಅವರು ಪ್ರಯತ್ನಿಸಿದ್ದರೂ ನ್ಯಾಯಾಲಯ ಅವರಿಗೆ ಜಾಮೀನು ನೀಡಿರಲಿಲ್ಲ. ಹೀಗಾಗಿ ಅವರು 13 ದಿನ ತಿಹಾರ್ ಜೈಲಿನಲ್ಲಿ ಕಳೆದಿದ್ದರು.

ಬಂಗಾರು ಲಕ್ಷ್ಮಣ್

ಬಂಗಾರು ಲಕ್ಷ್ಮಣ್

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ್ ಅವರು ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು. 2001-2002ರ ಅವಧಿಯಲ್ಲಿ ಬಿಜೆಪಿ ಅಧ್ಯಕ್ಷರಾಗಿದ್ದ ಅವರು, ಕಳಪೆ ಶಸ್ತ್ರಾಸ್ತ್ರ ಪೂರೈಕೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ನಿಂದ ಶಿಕ್ಷೆಗೆ ಒಳಗಾಗಿದ್ದರು. ಕಳಪೆ ಶಸ್ತ್ರಾಸ್ತ್ರಗಳ ಪೂರೈಕೆದಾರರಿಗೆ ಗುತ್ತಿಗೆ ದೊರಕಿಸುವಲ್ಲಿ ಒಂದು ಲಕ್ಷ ರೂಪಾಯಿ ಲಂಚ ಪಡೆದ ಆರೋಪ ಎದುರಿಸಿದ್ದರು. 2012ರಲ್ಲಿ ಅವರು ತಾವು ತಪ್ಪು ಮಾಡಿದ್ದಾಗಿ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದರು. 2014ರಲ್ಲಿ ಅವರು ಮೃತಪಟ್ಟರು.

ಸುರೇಶ್ ಕಲ್ಮಾಡಿ

ಸುರೇಶ್ ಕಲ್ಮಾಡಿ

ಕಾಮನ್ ವೆಲ್ತ್ ಕ್ರೀಡಾಕೂಟದ ಹಗರಣದಲ್ಲಿ ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಸುರೇಶ್ ಕಲ್ಮಾಡಿ ಅವರು 9 ತಿಂಗಳು ಜೈಲುವಾಸ ಅನುಭವಿಸಿದ್ದರು. ಕ್ರೀಡಾಕೂಟದ ಆಯೋಜನೆಯಲ್ಲಿ ಅಕ್ರಮ ನಡೆಸಿದ ಆರೋಪ ಅವರ ಮೇಲಿತ್ತು. 2011ರಲ್ಲಿ ಸಿಬಿಐ ಅವರನ್ನು ಬಂಧಿಸಿತ್ತು. ದೆಹಲಿಯ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದರು.

ಎಸ್‌ಪಿ ತ್ಯಾಗಿ

ಎಸ್‌ಪಿ ತ್ಯಾಗಿ

ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿದ್ದ ಎಸ್‌ಪಿ ತ್ಯಾಗಿ ಅವರು ಅಗಸ್ಟಾ ವೆಸ್ಟ್ ಲ್ಯಾಂಡ್ ಐಷಾರಾಮಿ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಲಂಚ ಪಡೆದ ಆರೋಪ ಎದುರಿಸಿದ್ದರು. ಈ ಪ್ರಕರಣದಲ್ಲಿ ಸಿಬಿಐ ಅವರನ್ನು 2016ರಲ್ಲಿ ಬಂಧಿಸಿತ್ತು.

English summary
Many notable politicians and officers have faced jail term in various scams. here is a list of that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more