ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂಸಾಚಾರದ ಸ್ವರೂಪ ಪಡೆದ ಪ್ರತಿಭಟನೆ: ರೈತರ ಮೇಲೆ ಬಲಪ್ರಯೋಗ

|
Google Oneindia Kannada News

ನವದೆಹಲಿ, ಅಕ್ಟೋಬರ್ 2: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ರೈತರ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ.

ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು) ಆಯೋಜಿಸಿದ ಪ್ರತಿಭಟನೆಯಲ್ಲಿ, ರಾಜಧಾನಿ ದೆಹಲಿಗೆ ಪ್ರವೇಶಿಸಲು ಪ್ರಯತ್ನಿಸಿದ ರೈತರನ್ನು ತಡೆಯಲು ಪೊಲೀಸರು ಜಲಫಿರಂಗಿ ಪ್ರಯೋಗ ನಡೆಸಿದ್ದಾರೆ.

ಸಾಲಮನ್ನಾ, ಸ್ವಾಮಿನಾಥನ್ ಆಯೋಗದ ವರದಿ ಜಾರಿ, ವಿಮಾ ಕಂತು ಬಿಡುಗಡೆ ಸೇರಿದಂತೆ ಸುಮಾರು 15 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 'ಕಿಸಾನ್ ಕ್ರಾಂತಿ ಯಾತ್ರಾ' ಆರಂಭಿಸಲಾಗಿದೆ.

ಮಹದಾಯಿ ರೈತರ ಕೇಸ್ ವಾಪಸ್, ನವೆಂಬರ್‌ನಲ್ಲಿ ಬೆಳಗಾವಿ ಅಧಿವೇಶನ ಮಹದಾಯಿ ರೈತರ ಕೇಸ್ ವಾಪಸ್, ನವೆಂಬರ್‌ನಲ್ಲಿ ಬೆಳಗಾವಿ ಅಧಿವೇಶನ

ಹರಿದ್ವಾರದಿಂದ ಸೆಪ್ಟೆಂಬರ್ 23ರಂದು ಜಾಥಾ ಆರಂಭಿಸಿದ ಸುಮಾರು 30 ಸಾವಿರ ರೈತರು ದೆಹಲಿಯ ಕಿಸಾನ್ ಘಾಟ್ ತಲುಪುವ ಉದ್ದೇಶ ಹೊಂದಿದ್ದರು. ಆದರೆ, ಪ್ರತಿಭಟನೆ ದೆಹಲಿಗೆ ಪ್ರವೇಶಿಸದಂತೆ ತಡೆಯಲು ಉತ್ತರ ಪ್ರದೇಶದ ಪೊಲೀಸರು ತೀವ್ರ ಬಂದೋಬಸ್ತ್ ನಡೆಸಿದ್ದರು.

ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ವಿರೋಧ ಪಕ್ಷಗಳು, ಗಾಂಧಿ ಜಯಂತಿನ ದಿನದಂದೇ ರೈತರ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿವೆ.

ಮೈಸೂರು: ಕುಮಾರಸ್ವಾಮಿ ವಿರುದ್ಧ ರೈತರ ಪ್ರತಿಭಟನೆಮೈಸೂರು: ಕುಮಾರಸ್ವಾಮಿ ವಿರುದ್ಧ ರೈತರ ಪ್ರತಿಭಟನೆ

ಮೋದಿ ಸರ್ಕಾರವು ರೈತ ವಿರೋಧಿಯಾಗಿದೆ. ಸಂಕಷ್ಟದಲ್ಲಿರುವ ರೈತರಿಗೆ ನೆಮ್ಮದಿ ನೀಡುವ ಬದಲು ಅವರ ಮೇಲೆ ಒತ್ತಡ ಹೆಚ್ಚಿಸಿ ಸಾಲದಲ್ಲಿ ಸಿಲುಕುವಂತೆ ಮಾಡಿ ಆತ್ಮಹತ್ಯೆಗೆ ಎಡೆಮಾಡಿಕೊಡುತ್ತಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಇಲ್ಲಿಯವರೆಗೆ ಈ ಮಟ್ಟದಲ್ಲಿ ರೈತರು ಯಾತನೆ ಪಡುವುದನ್ನು ನೋಡಿರಲಿಲ್ಲ ಎಂದು ಸೀತಾರಾಮ್ ಯೆಚೂರಿ ಹೇಳಿದ್ದಾರೆ.

ಜಲಫಿರಂಗಿ ಪ್ರಯೋಗ

ದೆಹಲಿ ಹೊರವಲಯದ ಸಹೀಬಾಬಾದ್‌ನಲ್ಲಿ ಸೋಮವಾರವೇ ಜಮಾಯಿಸಿದ್ದ ರೈತರನ್ನು ತಡೆಯಲು ಭಾರಿ ಸಂಖ್ಯೆಯಲ್ಲಿ ಪೊಲೀಸರು ಮತ್ತು ಅರೆಸೇನಾಪಡೆ ತುಕಡಿಗಳನ್ನು ನಿಯೋಜಿಸಲಾಗಿದೆ.

ಮೆರವಣಿಗೆಗೆ ಅಡ್ಡಲಾಗಿ ಬ್ಯಾರಿಕೇಡ್‌ಗಳನ್ನು ಹಾಕಿದ್ದರಿಂದ ಸಿಟ್ಟಿಗೆದ್ದ ರೈತರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದರು. ಇದರಿಂದ ಅವರ ಮೇಲೆ ಅಶ್ರುವಾಯು ಮತ್ತು ಜಲಫಿರಂಗ ಪ್ರಯೋಗಿಸುವುದು ಅನಿವಾರ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ರೈತರ ಬೇಡಿಕೆಗಳೇನು?

ರೈತರ ಬೇಡಿಕೆಗಳೇನು?

ಸ್ವಾಮಿನಾಥನ್ ಆಯೋಗದ ವರದಿಯನ್ನು ಶೀಘ್ರ ಜಾರಿ ಮಾಡಬೇಕು. ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಕೆಯ ಬಾಕಿ ಹಣ ಪಾವತಿಸಬೇಕು. ಕೃಷಿ ಸಾಲ ಮನ್ನಾ ಮಾಡಬೇಕು, ಕೊಳವೆಬಾವಿಗಳಿಗೆ ಉಚಿತ ವಿದ್ಯುತ್ ಪೂರೈಸಬೇಕು.

ಎಲ್ಲ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಸೌಲಭ್ಯ ಸಿಗಬೇಕು. ವಿಮೆಯ ಕಂತನ್ನು ಸರ್ಕಾರವೇ ಪಾವತಿಸಬೇಕು. ರೈತರಿಗೆ ಕನಿಷ್ಠ ಆದಾಯದ ಖಾತರಿ ನೀಡಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ನೆರವು ನೀಡಬೇಕು.

ಹಿರಿಯ ನಾಗರಿಕರಾದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾಸಿಕ 5 ಸಾವಿರ ಪಿಂಚಣಿ ನೀಡಬೇಕು. ರಾಜಧಾನಿ ವಲಯದಲ್ಲಿ ಹತ್ತು ವರ್ಷ ಹಳೆಯದಾದ ಡೀಸೆಲ್ ವಾಹನಗಳ ಬಳಕೆಗೆ ಹೇರಿರುವ ನಿಯಮದಿಂದ ಟ್ರ್ಯಾಕ್ಟರ್‌ಗಳಿಗೆ ವಿನಾಯಿತಿ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ರೈತರ ಪ್ರತಿಭಟನೆ ಅಂತ್ಯ: ಹಲವು ರಾಜ್ಯಗಳಲ್ಲಿ ನೀರಸ ಪ್ರತಿಕ್ರಿಯೆರೈತರ ಪ್ರತಿಭಟನೆ ಅಂತ್ಯ: ಹಲವು ರಾಜ್ಯಗಳಲ್ಲಿ ನೀರಸ ಪ್ರತಿಕ್ರಿಯೆ

ಕೇಜ್ರಿವಾಲ್ ಆಕ್ಷೇಪ

ರೈತರ ವಿರುದ್ಧ ಪೊಲೀಸರ ವರ್ತನೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

'ದೆಹಲಿ ಎಲ್ಲರದ್ದೂ ಹೌದು. ದೆಹಲಿ ಪ್ರವೇಶಿಸಲು ರೈತರಿಗೆ ಅನುವು ಮಾಡಿಕೊಡಬೇಕು. ಅವರಿಗೆ ಪ್ರವೇಶ ನಿರಾಕರಿಸುವುದು ಸರಿಯಲ್ಲ. ನಾವು ರೈತರೊಂದಿಗೆ ಇದ್ದೇವೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.

ದೇವೇಗೌಡ ವಿರೋಧ

ಪ್ರತಿಭಟನಾನಿರತ ರೈತರನ್ನು ಹತ್ತಿಕ್ಕುವ ಪ್ರಯತ್ನವನ್ನು ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಖಂಡಿಸಿದ್ದಾರೆ.

'ಕಿಸಾನ್ ಕ್ರಾಂತಿ ಪಾದಯಾತ್ರೆಗೆ ಉತ್ತರ ಪ್ರದೇಶ-ದೆಹಲಿ ಗಡಿಯಲ್ಲಿ ತಡೆಯೊಡ್ಡಿರುವ ಸುದ್ದಿ ಆಘಾತ ಮೂಡಿಸಿದೆ. ಗಾಂಧಿ ಜಯಂತಿ ದಿನ ಶಾಂತಿಯುತವಾಗಿ ನಡೆಯುತ್ತಿದ್ದ ರೈತರ ಪ್ರತಿಭಟನೆಯನ್ನು ತಡೆದು ಅವರನ್ನು ಪ್ರಚೋದಿಸಿರುವುದು ಸಂಪೂರ್ಣವಾಗಿ ಒಪ್ಪುವಂತಹದ್ದಲ್ಲ. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೈ ಕಿಸಾನ್ ಘೋಷಣೆಯನ್ನು ನಾವು ಮರೆಯುವಂತಿಲ್ಲ' ಎಂದು ದೇವೇಗೌಡ ಅವರು ಟ್ವೀಟ್ ಮಾಡಿದ್ದಾರೆ.

ಕೇಜ್ರಿವಾಲ್‌ಗೆ ಬಿಜೆಪಿ ತಿರುಗೇಟು

'ದೆಹಲಿ ಎಲ್ಲರಿಗೂ ಸೇರಿದ್ದು ಎಂದು ನೀವು ಒಪ್ಪಿಕೊಂಡಿದ್ದೀರಿ. ಹಾಗಿದ್ದರೆ, ರಾಜ್ಯದ ಹೊರಗಿನವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಏಕೆ ನೀವು ಅವಕಾಶ ನೀಡುತ್ತಿಲ್ಲ? ರೋಗಿಗಳ ನಡುವೆ ಏಕೆ ಭೇದಭಾವ ತೋರಿಸುತ್ತಿದ್ದೀರಿ? ವಾಸ್ತವ ಏನೆಂದರೆ, ನಿಮಗೆ ರೈತರ ಬಗ್ಗೆಯೂ ಆಸಕ್ತಿ ಇಲ್ಲ, ದೆಹಲಿ ಬಗ್ಗೆಯೂ ಆಸಕ್ತಿ ಇಲ್ಲ. ನಿಮಗೆ ಆಸಕ್ತಿ ಇರುವುದು ರಾಜಕೀಯದಲ್ಲಿ ಮಾತ್ರ' ಎಂದು ಬಿಜೆಪಿಯ ದೆಹಲಿ ಘಟಕ ಕೇಜ್ರಿವಾಲ್ ಅವರಿಗೆ ತಿರುಗೇಟು ನೀಡಿದೆ.

English summary
Police uses tear gases, water cannons to stop the protesting farmers entering delhi on the part of Kisan Kranti Yatra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X