ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಗಿಲ್ ಯುದ್ಧ: ಅನುಜ್ ಎಂಬ ವೀರ ಯೋಧನ ರೋಮಾಂಚನಕಾರಿ ಸಾಹಸಗಾಥೆ

|
Google Oneindia Kannada News

ನವದೆಹಲಿ, ಜುಲೈ 26: ಇಡೀ ಜಗತ್ತಿನ ಗಮನ ಸೆಳೆದ ಕಾರ್ಗಿಲ್ ಯುದ್ಧದಲ್ಲಿ ಭಾರತ ಗೆಲುವು ಸಾಧಿಸಿದೆಯೆಂಬ ಘೋಷಣೆ ಮಾಡಿ ಜುಲೈ 26ಕ್ಕೆ 19 ವರ್ಷ.

ತಾಯ್ನಾಡಿನ ರಕ್ಷಣೆಗಾಗಿ ನೂರಾರು ಯೋಧರು ಪ್ರಾಣತ್ಯಾಗ ಮಾಡಿದರು. ಅವರಲ್ಲಿ ಕೆಲವರ ಬದುಕು, ಸಾಹಸಗಾಥೆಗಳು ಮಾತ್ರ ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ.

ಟೈಗರ್ ಹಿಲ್ ಭಾರತಕ್ಕೆ ಮರಳಿ ಸಿಕ್ಕಿದ್ದು ಎಂಟು ಸಿಖ್ ಯೋಧರ ಸಾಹಸದಿಂದಟೈಗರ್ ಹಿಲ್ ಭಾರತಕ್ಕೆ ಮರಳಿ ಸಿಕ್ಕಿದ್ದು ಎಂಟು ಸಿಖ್ ಯೋಧರ ಸಾಹಸದಿಂದ

ಕಾರ್ಗಿಲ್ ಯುದ್ಧ ಎಂಬ ಇಂದಿಗೂ ಮೈನವಿರೇಳಿಸುವ ಘಟನೆಯ ಹಿಂದೆ ಅದೆಷ್ಟೋ ಕಥೆಗಳಿವೆ. ವಿಜಯ ದಿವಸ ಆಚರಣೆಯ ಈ ಸಂದರ್ಭದಲ್ಲಿ ಕೆಚ್ಚೆದೆಯ ಹೋರಾಟ ನಡೆಸಿದ ನೆನೆಸಿಕೊಳ್ಳಬೇಕಾದ ವೀರ ಯೋಧರಲ್ಲಿ ಕ್ಯಾಪ್ಟನ್ ಅನುಜ್ ನಯ್ಯರ್ ಒಬ್ಬರು.

ವಿಜಯ್ ದಿವಸ್: ಕಾರ್ಗಿಲ್ ಯುದ್ಧದ ಆ ರೋಚಕ ಕ್ಷಣಕ್ಕೆ 19 ವರ್ಷವಿಜಯ್ ದಿವಸ್: ಕಾರ್ಗಿಲ್ ಯುದ್ಧದ ಆ ರೋಚಕ ಕ್ಷಣಕ್ಕೆ 19 ವರ್ಷ

ದೇಶಕ್ಕಾಗಿ ಸಾವನ್ನು ಲೆಕ್ಕಿಸದೆ ವೈರಿಗಳ ವಿರುದ್ಧ ಹೋರಾಡಿದ ಅನುಜ್ ತೋರಿದ ಅಪ್ರತಿಮ ಸಾಹಸದ ಕಥೆ ಇಲ್ಲಿದೆ.

ದೆಹಲಿಯಲ್ಲಿ ಬದುಕು

ದೆಹಲಿಯಲ್ಲಿ ಬದುಕು

1975ರ ಆಗಸ್ಟ್ 28ರಂದು ಜನಿಸಿದ ಅನುಜ್ ನಯ್ಯರ್ ಬೆಳೆದಿದ್ದು ದೆಹಲಿಯಲ್ಲಿ. ಅವರ ತಂದೆ ಎಸ್‌.ಕೆ. ನಯ್ಯರ್ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪ್ರೊಫೆಸರ್. ತಾಯಿ ಮೀನಾ ನಯ್ಯರ್ ದೆಹಲಿ ವಿಶ್ವವಿದ್ಯಾಲಯದ ಸೌಥ್ ಕ್ಯಾಂಪಸ್ ಲೈಬ್ರರಿಯಲ್ಲಿ ಉದ್ಯೋಗಿ.

ಧವುಲಾ ಕೌನ್‌ದ ಆರ್ಮಿ ಪಬ್ಲಿಕ್ ಸ್ಕೂಲ್‌ ವಿದ್ಯಾರ್ಥಿಯಾದ ಅನುಜ್, ಓದು ಮತ್ತು ಕ್ರೀಡೆಯಲ್ಲಿ ಸದಾ ಮುಂದೆ. ಅದರಲ್ಲೂ ವಾಲಿಬಾಲ್ ಹಾಗೂ ಓಟದಲ್ಲಿ ಅನುಜ್ ಪಳಗಿದ್ದರು.

Array

ಸೇನೆ ಸೇರುವ ಬಯಕೆ

ದೇಶಭಕ್ತಿಯನ್ನು ಮೈಗೂಡಿಸಿಕೊಂಡಿದ್ದ ಅವರಲ್ಲಿ ಸೇನೆಗೆ ಸೇರುವ ಆಸೆ ಚಿಕ್ಕಂದಿನಿಂದಲೂ ಬೆಳೆದಿತ್ತು. ರಾಷ್ಟ್ರೀಯ ರಕ್ಷಣಾ ಅಕಾಡೆಮಿಯನ್ನು ಸೇರುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡರು.

1997ರಲ್ಲಿ ಭಾರತೀಯ ಸೇನಾ ಅಕಾಡೆಮಿಯಿಂದ ಪದವೀಧರನಾಗಿ ಹೊರಬಂದ ಅನುಜ್, 17ನೇ ಜಾಟ್ ರೆಜಿಮೆಂಟ್‌ನ ಬಟಾಲಿಯನ್ ಸೇರಿಕೊಂಡರು.

ವಾಜಪೇಯಿಯವರ ದಿಟ್ಟ ನಿರ್ಧಾರ ನೆನೆದ ನರೇಂದ್ರ ಮೋದಿವಾಜಪೇಯಿಯವರ ದಿಟ್ಟ ನಿರ್ಧಾರ ನೆನೆದ ನರೇಂದ್ರ ಮೋದಿ

ಕಾರ್ಗಿಲ್ ಯುದ್ಧದ ಆರಂಭ

ಜಾಟ್ ರೆಜಿಮೆಂಟ್ನಲ್ಲಿ ಕಿರಿಯ ಅಧಿಕಾರಿಯಾಗಿದ್ದ ಅವರು, ಪಾಕಿಸ್ತಾನಿ ಸೇನಾ ಪಡೆಗಳು ಭಾರಿ ಪ್ರಮಾಣದಲ್ಲಿ ಒಳನುಸುಳುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಪ್ರದೇಶಕ್ಕೆ ನಿಯೋಜನೆಗೊಂಡರು.

ಭಾರತೀಯ ನೆಲೆಯಿಂದ ಶತ್ರು ಪಡೆಗಳನ್ನು ಹಿಮ್ಮೆಟ್ಟಿಸುವ ಸಲುವಾಗಿ ಸೇನೆಯು ಕೂಡಲೇ ಈ ಪ್ರದೇಶಗಳಲ್ಲಿ ತನ್ನ ಪಡೆಗಳನ್ನು ಜಮಾವಣೆ ಮಾಡಿತು.

ಪಾಕಿಸ್ತಾನದ ಪಡೆಗಳು ವಶಪಡಿಸಿಕೊಂಡಿದ್ದ ಟೈಗರ್ ಹಿಲ್‌ನ ಪಶ್ಚಿಮ ಭಾಗದಲ್ಲಿರುವ ಪರ್ವತ ಪಾಯಿಂಟ್ 4875ಅನ್ನು ಮರುವಶಪಡಿಸಿಕೊಳ್ಳುವಂತೆ ಅನುಜ್ ಅವರಿದ್ದ ಘಟಕಕ್ಕೆ ಸೂಚಿಸಲಾಯಿತು.

ಯುದ್ಧದ ಕಾರ್ಯತಂತ್ರದ ಭಾಗವಾಗಿ ಪಾಯಿಂಟ್ 4875 ಪರ್ವತವನ್ನು ವಶಪಡಿಸಿಕೊಳ್ಳುವುದು ಭಾರತಕ್ಕೆ ಪ್ರಥಮ ಆದ್ಯತೆಯಾಗಿತ್ತು.

ಅತ್ಯಂತ ಕಠಿಣ ಪರ್ವತ

80 ಡಿಗ್ರಿ ಕೋನದಲ್ಲಿರುವ ಈ ಇಳಿಜಾರಿನ ಬೆಟ್ಟವನ್ನು ಹಿಮದ ಹೊದಿಕೆಗಳು ಆವರಿಸಿದ್ದವು. ಜತೆಗೆ ಎದುರಿಗಿದ್ದವರೂ ಕಾಣದಷ್ಟು ದಟ್ಟ ಮಂಜು. ಅಲ್ಲದೆ, ಪಾಕಿಸ್ತಾನದ ಪಡೆಗಳು 16,000 ಅಡಿ ಎತ್ತರದ ಪ್ರದೇಶದಲ್ಲಿ ಸನ್ನದ್ಧರಾಗಿ ನಿಂತಿದ್ದವು. ವೈಮಾನಿಕ ನೆರವಿಲ್ಲದೆ ಈ ಪರ್ವತದ ತುದಿಯನ್ನು ವಶಕ್ಕೆ ತೆಗೆದುಕೊಳ್ಳುವುದು ಅಸಾಧ್ಯ ಎಂದೇ ಪರಿಗಣಿಸಲಾಗಿತ್ತು.

ಆದರೆ, ಈ ಭಾಗದಲ್ಲಿ ಪಡೆಯನ್ನು ನಿಯೋಜಿಸುವುದು ವಿಳಂಬವಾದಷ್ಟೂ ಪಾಕಿಸ್ತಾನದ ಬಲ ಹೆಚ್ಚುತ್ತದೆ ಎನ್ನುವುದು ಸೇನಾ ಅಧಿಕಾರಿಗಳಿಗೆ ತಿಳಿದಿತ್ತು.

ಹೀಗಾಗಿ ಯಾವುದೇ ವೈಮಾನಿಕ ನೆರವು ಇಲ್ಲದೆಯೇ ಪರ್ವತವನ್ನು ಏರಲು ಅನುಜ್ ಇದ್ದ 'ಚಾರ್ಲಿ ಕಂಪೆನಿ' ತಂಡ ನಿರ್ಧರಿಸಿತ್ತು.

ಜುಲೈ 6 ರಂದು ಕಾರ್ಗಿಲ್ ಯುದ್ಧದಲ್ಲಿ ಅತ್ಯಂತ ಸವಾಲಿನ ಪರ್ವತ ಯುದ್ಧ ಯೋಜನೆಗಳಲ್ಲಿ ಒಂದಾದ ಪಾಯಿಂಟ್ 4875 ವಶ ಕಾರ್ಯಾಚರಣೆ ಆರಂಭವಾಯಿತು.

ಅನುಜ್, ವಿಕ್ರಮ್ ನೇತೃತ್ವ

ಈ ಪರ್ವತವೇರುವ ದುಸ್ಸಾಹಸದ ಪ್ರಯತ್ನದಲ್ಲಿ ವೈರಿ ಪಡೆಗೆ ಭಾರತೀಯ ಸೇನೆಯ ಆಗಮನದ ವಾಸನೆ ಮೊದಲೇ ಸಿಕ್ಕಿತು. ಕೂಡಲೇ ತಮ್ಮ ದಾಳಿಯನ್ನು ತೀವ್ರಗೊಳಿಸಿದರು.

ಪರ್ವತದ ತುದಿಯಿಂದ ಅವರ ಮೇಲೆ ಮೋರ್ಟಾರ್ ಹಾಗೂ ಸ್ವಯಂಚಾಲಿನ ಗುಂಡಿನ ದಾಳಿ ನಡೆಸಿದರು. ಈ ಕದನದಲ್ಲಿ ಚಾರ್ಲಿ ಕಂಪೆನಿಯ ಕಮಾಂಡರ್ ಗಾಯಗೊಂಡರು. ಇದರಿಂದ ತಂಡವನ್ನು ಎರಡು ಘಟಕಗಳಾಗಿ ವಿಭಜಿಸಲಾಯಿತು.

ಒಂದರ ನೇತೃತ್ವವನ್ನು ಅನುಜ್ ವಹಿಸಿಕೊಂಡರೆ, ಇನ್ನೊಂದನ್ನು ಕ್ಯಾಪ್ಟನ್ ವಿಕ್ರಮ್ ಬಾತ್ರಾ ವಹಿಸಿಕೊಂಡರು.

ಶೇರ್ ಶಾ ಎಂಬ ಗುಪ್ತನಾಮ ಹೊಂದಿದ್ದ ವಿಕ್ರಮ್ ನೆರವಿನಿಂದ ಅನುಜ್ ಧೈರ್ಯವಾಗಿ ಪ್ರತಿದಾಳಿ ನಡೆಸಿದರು. ಮುಖಾಮುಖಿ ಕದನ ನಡೆಸಿ ಅವರ ಬಂಕರ್‌ಗಳನ್ನು ನಾಶಗೊಳಿಸಿದರು.

ಈ ಇಬ್ಬರು ಧೈರ್ಯಶಾಲಿ ಯುವಕರು ತಮ್ಮೊಟ್ಟಿಗಿದ್ದ ಸೈನಿಕರನ್ನು ಹುರಿದುಂಬಿಸಿಕೊಂಡು ಮುನ್ನಡೆದರು. ಅವರ ಹೋರಾಟ ಪಾಕ್ ಪಡೆಯ ಸೈನಿಕರನ್ನು ಚಕಿತಗೊಳಿಸಿತು.

ಬಲಿಯಾದದ್ದು ಒಂಬತ್ತು ಶತ್ರುಗಳು

ಶತ್ರುಗಳನ್ನು ಹೊಡೆದುರುಳಿಸಿ ಪರ್ವತ ಪ್ರದೇಶವನ್ನು ತಮ್ಮ ವಶಕ್ಕೆ ಪಡೆದುಕೊಳ್ಳಬೇಕು ಎನ್ನುವುದೇ ಅನುಜ್ ಗುರಿಯಾಗಿತ್ತು. ಅದಕ್ಕಾಗಿ ಅವರು ಪ್ರಾಣವನ್ನೂ ಲೆಕ್ಕಿಸದೆ ಗುಂಡಿನ ದಾಳಿ ನಡೆಸಿದ್ದ ಅನುಜ್, ಮೂರು ಮೆಷಿನ್ ಗನ್ ಬಂಕರ್‌ಗಳನ್ನು ನಾಶಪಡಿಸಿದರು. ಒಂಬತ್ತು ನುಸುಳುಕೋರರನ್ನು ಒಬ್ಬಂಟಿಯಾಗಿ ನೆಲಕಚ್ಚಿಸಿದರು.

ಅದ್ಭುತ ಕಾರ್ಯತಂತ್ರ ರೂಪಿಸಿದ್ದ ಈ ತಂಡ ನಾಲ್ಕರಲ್ಲಿ ಮೂರು ಬಂಕರ್‌ಗಳನ್ನು ನಾಶಗೊಳಿಸುವಲ್ಲಿ ಸಫಲವಾಯಿತು.

ಆದರೆ, ನಾಲ್ಕನೆಯ ಬಂಕರ್ ಮೇಲಿನ ದಾಳಿ ವೇಳೆ ವೈರಿ ಪಡೆಯ ಗ್ರೆನೇಡ್ ಒಂದು ನೇರವಾಗಿ ಅನುಜ್ ಅವರಿಗೆ ಅಪ್ಪಳಿಸಿತು. ಅನುಜ್ ತೀವ್ರ ಗಾಯಗೊಂಡು ನೆಲಕ್ಕುರುಳಿದರು.

ಗೆದ್ದ ಮೇಲೆಯೇ ಉಸಿರು ನಿಲ್ಲಿಸಿದರು

ಗಾಯಗೊಂಡಿದ್ದರೂ ಅನುಜ್ ದೃತಿಗೆಡಲಿಲ್ಲ. 23ರ ಹರೆಯದ ಈ ಮಹಾನ್ ಧೈರ್ಯಶಾಲಿ ಯುವಕ ತನ್ನ ಉಳಿದ ಸೈನಿಕರಲ್ಲಿ ಉತ್ಸಾಹ ತುಂಬಿ ಮಾರ್ಗದರ್ಶನ ನೀಡಿದರು. ಕೊನೆಯ ಬಂಕರ್ ನಾಶವಾಗುವವರೆಗೂ ಅನುಜ್ ತಮ್ಮ ಛಲವನ್ನು ಬಿಡಲಿಲ್ಲ.

ಯೋಜನೆ ಪೂರ್ಣಗೊಂಡ ಬಳಿಕ ಅನುಜ್ ಅಜರಾಮರರಾದರು. ತಾಯ್ನಾಡನ್ನು ರಕ್ಷಿಸುವ ಹೋರಾಟದಲ್ಲಿ ಅನುಜ್ ತಮ್ಮ ಗುರಿ ಸಾಧಿಸುವವರೆಗೂ ಜೀವ ಹಿಡಿದಿಟ್ಟುಕೊಂಡಿದ್ದರು. ಅನುಜ್ ಹೆಸರು ಸೇನೆಯ ಮಹಾನ್ ಹೀರೊಗಳ ಸಾಲಿನಲ್ಲಿ ಸೇರಿಕೊಂಡಿತು.

ಹೆಮ್ಮೆಯ ಪುತ್ರರ ಬಲಿದಾನ

ಮರುದಿನ ಬೆಳಿಗ್ಗೆ ವೇಳೆಗೆ ಪಿಂಪಲ್ ಕಾಂಪ್ಲೆಕ್ಸ್ ಅನ್ನು (ಈಗ ವಿಕ್ರಮ್ ಬಾತ್ರಾ ಟಾಪ್) ಭಾರತದ ಪಡೆಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದವು. ಆದರೆ, ಬಂಕರ್ ತೆರವಿನ ವೇಳೆ ಭಾರತವು ಅನುಜ್ ಮತ್ತು ವಿಕ್ರಮ್ ಬಾತ್ರಾ ಎಂಬ ತನ್ನ ಹೆಮ್ಮೆಯ ಪುತ್ರರನ್ನು ಕಳೆದುಕೊಂಡಿತು.

ಪಾಯಿಂಟ್ 4875ಅನ್ನು ವಶಪಡಿಸಿಕೊಂಡಿದ್ದು ಮುಂದೆ ಟೈಗರ್ ಹಿಲ್‌ಅನ್ನು ಸಹ ಮರಳಿ ವಶಕ್ಕೆ ಪಡೆದುಕೊಳ್ಳಲು ನೆರವಾಯಿತು. ಈ ಎರಡು ದಿಗ್ವಿಜಯಗಳು ಪಾಕಿಸ್ತಾನದ ಪಡೆಗಳನ್ನು ಯುದ್ಧರಂಗದಿಂದ ಪಲಾಯನಗೈಯುವಂತೆ ಮಾಡುವಲ್ಲಿ ಯಶಸ್ವಿಯಾದವು.

ನಾನು ಮರಳದಿದ್ದರೆ ನಿಶ್ಚಿತಾರ್ಥದ ಉಂಗುರ...

ಪಾಯಿಂಟ್ 4875 ಯೋಜನೆಗೆ ತೆರಳುವ ಮುನ್ನ ಅನುಜ್ ತಮ್ಮ ವಿವಾಹ ನಿಶ್ಚಿತಾರ್ಥದ ಉಂಗುರವನ್ನು ತಮ್ಮ ಕಮಾಂಡಿಂಗ್ ಅಧಿಕಾರಿಗೆ ನೀಡಿದ್ದರು.

ತಾವು ಮರಳಿ ಬಾರದೆ ಇದ್ದರೆ, ಮದುವೆಯಾಗಬೇಕಿದ್ದ ಟಿಮ್ಮಿ ಅವರಿಗೆ ಮರಳಿಸುವಂತೆ ಕೋರಿದ್ದರು. ಯುದ್ಧ ಆರಂಭದ ವರ್ಷಕ್ಕೂ ಮುನ್ನ ಅನುಜ್ ಮತ್ತು ಟಿಮ್ಮಿ ನಿಶ್ಚಿತಾರ್ಥವಾಗಿತ್ತು. ಸೆಪ್ಟೆಂಬರ್‌ನಲ್ಲಿ ಮದುವೆಯಾಗಲು ಇಬ್ಬರೂ ನಿರ್ಧರಿಸಿದ್ದರು.

ಮಹಾವೀರ ಚಕ್ರ ಗೌರವ

ಮಹಾವೀರ ಚಕ್ರ ಗೌರವ

ಯುದ್ಧಭೂಮಿಯಲ್ಲಿ ಶತ್ರುಗಳನ್ನು ಮಟ್ಟಹಾಕಲು ತೋರಿಸಿದ ಅಪ್ರತಿಮ ಧೈರ್ಯ, ಸಾಹಸ ಹಾಗೂ ಬಲಿದಾನಕ್ಕಾಗಿ ಕ್ಯಾಪ್ಟನ್ ಅನುಜ್ ನಯ್ಯರ್ ದೇಶದ ಎರಡನೆಯ ಅತ್ಯುತ್ತಮ ಗೌರವವಾದ ಮಹಾವೀರ ಚಕ್ರ ಗೌರವಕ್ಕೆ ಪಾತ್ರರಾದರು.

ಕ್ಯಾಪ್ಟನ್ ವಿಕ್ರಮ್ ಬಾತ್ರಾ ಪರಮವೀರ ಚಕ್ರ ಗೌರವ ಪಡೆದುಕೊಂಡರು.

ಇಂದು ಕಾರ್ಗಿಲ್ ಯುದ್ಧದ ವಿಜಯದ ಸಂಭ್ರಮವನ್ನು ಆಚರಿಸುತ್ತಿದ್ದೇವೆ. ಈ ಸಂಭ್ರಮದ ಹಿಂದೆ ಅದೆಷ್ಟೋ ಸೈನಿಕರ ಪ್ರಾಣತ್ಯಾಗದ ನೋವಿದೆ. ಅವರ ಕುಟುಂಬದ ದುಃಖ ಮತ್ತು ಹೆಮ್ಮೆಯೂ ಇದೆ.

ಕಿರಿಯ ವಯಸ್ಸಿಗೇ ದೇಶಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ಅನುಜ್, ವಿಕ್ರಮ್ ಅವರಂತಹ ವೀರರನ್ನು ನೆನೆಸಿಕೊಳ್ಳದಿದ್ದರೆ ನಮ್ಮ ಸ್ವಾತಂತ್ರ್ಯದ ಬದುಕು ಅರ್ಥಹೀನವಾಗುತ್ತದೆ.

English summary
kargil vijay diwas: Captain Anuj Nayyar of Charlie Company and Vikram Batra sacrifice in Kargil War.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X