ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿರ ವರ್ಷಗಳ ನಂತರ ಧರ್ಮಕ್ಕೆ ಬೆಂಕಿ ಹಚ್ಚಬೇಕು : ತರುಣ್ ಸಾಗರ್ ಜೀ

By ಶುಭಾಶಯ ಜೈನ್
|
Google Oneindia Kannada News

'ಐವತ್ತು ವರ್ಷಗಳ ನಂತರ ನಮ್ಮ ಊಟದ ಪದ್ಧತಿಯನ್ನು ಬದಲಾಯಿಸಬೇಕು. 100 ವರ್ಷಗಳ ನಂತರ ಮನೆಯನ್ನು ಕೆಡಹಬೇಕು. 500 ವರ್ಷಗಳ ನಂತರ ಮಂದಿರ - ಮಸೀದಿಗಳನ್ನು ಬೀಳಿಸಬೇಕು. 1,000 ವರ್ಷಗಳ ನಂತರ ಧರ್ಮ ಗ್ರಂಥಕ್ಕೆ ಬೆಂಕಿ ಹಚ್ಚಬೇಕು' ಇಂತಹಾ ಕಟು ಮಾತನ್ನು ಹೇಳಿದ್ದು ಕ್ರಾಂತಿಕಾರಿ ಸಂತ ದಿ.ಮುನಿಶ್ರೀ ತರುಣ ಸಾಗರ ಆಚಾರ್ಯ ಅವರು.

ಹೌದು...."50 ವರ್ಷಗಳಲ್ಲಿ ನಮ್ಮ ಊಟದ ಏಕತಾನತೆ ರುಚಿ ಹದಗೆಟ್ಟಿರುತ್ತದೆ. ನೂರು ವರ್ಷಗಳಲ್ಲಿ ಮನೆಗಳ ವಾಸ್ತುಶಿಲ್ಪ ಹಳೆಯದಾಗುತ್ತದೆ. ಐನೂರು ವರ್ಷಗಳಲ್ಲಿ ಮಂದಿರಗಳು ತಮ್ಮ ಮೂಲ ಉದ್ದೇಶಗಳನ್ನು ಮರೆತು ಬಿಡುತ್ತವೆ' ಎಂದು ಹೇಳಿದ್ದರು.

ಮುನಿಶ್ರೀ ತರುಣ ಸಾಗರ ವಿಧಿವಶ: ಜೈನ ಮಂದಿರದಲ್ಲೇ ಕೊನೆಯುಸಿರು ಮುನಿಶ್ರೀ ತರುಣ ಸಾಗರ ವಿಧಿವಶ: ಜೈನ ಮಂದಿರದಲ್ಲೇ ಕೊನೆಯುಸಿರು

'1,000 ವರ್ಷಗಳಲ್ಲಿ ಧರ್ಮದಲ್ಲಿಯೂ ( ರೂಢಿಗತವಾದ ಕಂದಾಚಾರಗಳಿಂದ) ಕೊಳೆ- ಗಲೀಜು ಸೇರಿಕೊಂಡು ಬಿಡುತ್ತದೆ. ಇಂದು ಪ್ರತಿಯೊಂದು ಧರ್ಮದ ಸ್ಥಿತಿಯೂ ಹೀಗೆ ಆಗಿರುವುದರಿಂದ ಅವುಗಳ ಸಮಸ್ಯೆಗಳಿಗೆ ಪರಿಹಾರ ಇಲ್ಲದಂತಾಗಿದೆ. ಅದಕ್ಕಾಗಿ ಈ ಬದಲಾವಣೆಗಳು ಅನಿವಾರ್ಯ' ಅನ್ನೋದು ಆಚಾರ್ಯ ಅವರ ಅಭಿಪ್ರಾಯವಾಗಿತ್ತು.

Jain monk Tarun Sagarji speech about religion

ಮಹಾವೀರನನ್ನು ನಡುರಸ್ತೆಯಲ್ಲಿಡಿ : 'ನಾನು ಮಹಾವೀರನನ್ನು ಮಂದಿರಗಳಿಂದ ಮುಕ್ತ ಮಾಡಲು ಇಚ್ಛಿಸುತ್ತೇನೆ. ಈ ಕಾರಣಗಳಿಂದಲೇ ನಾನು ಇತ್ತೀಚಿನ ದಿನಗಳಲ್ಲಿ ಮಂದಿರಗಳಲ್ಲಿ ಪ್ರವಚನ ಮಾಡುವುದನ್ನು ನಿಲ್ಲಿಸಿದ್ದೇನೆ. ನಾನು ಪಟ್ಟಣಗಳಲ್ಲಿ ನಾಲ್ಕು ರಸ್ತೆಗಳು ಕೂಡಿರುವ ಚೌಕಗಳಲ್ಲಿ ಪ್ರವಚನ ಮಾಡುತ್ತೇನೆ. ಮಹಾವೀರನನ್ನು ಜೈನರಿಂದ ಮುಕ್ತಗೊಳಿಸಿ, ಆತನ ಸಂದೇಶಗಳು, ಆತನ ಆಚಾರ, ಆದರ್ಶ ಜೀವನ ಜಗತ್ತಿನ ಮುಂದೆ ಬರಲಿ' ಅನ್ನೋ ಆಶಯವನ್ನೂ ಹೊಂದಿದ್ದರು ತರುಣ್ ಸಾಗರ್ ಜೀ.

ತರುಣ್ ಸಾಗರ್ ಅವರ ಮಾತುಗಳೇ ಹಾಗೆ. ಕಹಿ ಮಾತ್ರೆಯಂತೆ. ಕೇಳೋದಕ್ಕೆ ಕಠೋರವಾಗಿದ್ರೂ, ಸಮಾಜದಲ್ಲಿರುವ ರೋಗಗಳನ್ನು ಗುಣಪಡಿಸುವ ಮಾತ್ರೆಗಳಿದ್ದಂತೆ ಅವು. ಕಠಿಣ ವ್ರತಗಳಿಂದ ಕೃಶವಾಗಿದ್ದ ಕಾಯ, ತೀಕ್ಷ್ಣ ಮಾತು, ಉಗ್ರ ನೋಟ, ಮೈಯ್ಯೆಲ್ಲಾ ಅದುರಿಸಿ ಮಾತಾಡೋ ಶೈಲಿ, ಸಾಧು ಶಾಂತ ಸ್ವಭಾವದ ಸಂತರ ಗುಣಲಕ್ಷಣಗಳಿಗೆ ತದ್ವಿರುದ್ದವಾಗಿದ್ದವರು ಅವರು.

ಮುನಿಶ್ರೀಗಳ ಮಾತುಗಳು ನಮ್ಮ ಸಾಮಾನ್ಯ ಮನುಷ್ಯನ ಬದುಕಿನ ಸುತ್ತಮುತ್ತಲ ವಿಷಯವೇ ಆಗಿದೆ. ಬೇರೆ ಶ್ರೀಗಳ ಹಾಗೇ ಹರಿಕಥಾ ರೂಪದಲ್ಲಿರುವುದಿಲ್ಲ. ಹಾಸ್ಯ, ಪರಿಹಾಸ್ಯ, ರೇಶ್ಮೆ ಬಟ್ಟೆಯಲ್ಲಿ ಸುತ್ತಿ ಹೊಡೆದ ರೀತಿ ಇರುತ್ತದೆ. ಕೇಳುಗರನ್ನು ಅವರ ಮಾತುಗಳು ನಗಿಸುತ್ತವೆ, ಜತೆಗೆ ನಾಚಿ ನೀರಾಗುವಂತೆ ಮಾಡುತ್ತವೆ.
ರಾಷ್ಟೀಯ, ಸಾಮಾಜಿಕ ಮತ್ತು ವ್ಯಕ್ತಿಗತ ಕೆಡುಕುಗಳ ಮೇಲೆ ಅವರ ಮಾತುಗಳು ಪ್ರಖರವಾಗಿತ್ತು. ಬಹುಶ: ಯಾವುದೇ ಬೇರೆ ಸಂತ ಮುನಿಗಳು ಇವರ ಹಾಗೆ ಮಾತನಾಡಿಲ್ಲ.

ರಾಜಕೀಯದ ಬಗ್ಗೆಯೂ ಕಟುವಾದ ಮಾತುಗಳನ್ನು ಹೇಳಿದ್ದರು. 'ಇಂದು ಸಂತರು, ಮುನಿಗಳು ತಮ್ಮ ಪ್ರವಚನವನ್ನು ಸಾಧಾರಣ ಜನರ ನಡುವೆ ಮಾಡುವುದರ ಬದಲು, ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಮಾಡಬೇಕು. ಏಕೆಂದರೆ, ಅಪಾಯಕಾರಿ ಜನರು ಅಲ್ಲಿಯೇ ಹಾಜರಿದ್ದಾರೆ. ದೇಶ ಮತ್ತು ಪ್ರದೇಶದ ರಾಜಧಾನಿಗಳಲ್ಲಿ ಕುಳಿತಿರುವ ಸುಮಾರು 10 ಸಾವಿರ ಜನರು ಸುಧಾರಿಸಿದರೆ, ದೇಶದ 100 ಕೋಟಿ ಜನರು ತಮ್ಮಷ್ಟಕ್ಕೆ ತಾವೇ ರಾತ್ರೋರಾತ್ರಿಯಲ್ಲಿ ಸುಧಾರಿಸುತ್ತಾರೆಂಬ ವಿಶ್ವಾಸ ನನಗಿದೆ' ಎಂದು ಹೇಳಿದ್ದರು.

ಸುಧಾರಣೆ ಪ್ರಕ್ರಿಯೆ ಬಗ್ಗೆ ಮುನಿಶ್ರೀ ಹೀಗೆ ಹೇಳಿದ್ದರು, 'ಸುಧಾರಣೆ ಪ್ರಕ್ರಿಯೆ ಕೆಳಗಿನಿಂದ ಅಲ್ಲ ಮೇಲಿನಿಂದ ಪ್ರಾರಂಭವಾಗಬೇಕು. ಏಕೆಂದರೆ ಭ್ರಷ್ಟಾಚಾರದ ಗಂಗೋತ್ರಿ ಮೇಲಿಂದ ಕೆಳಗಡೆ ಹರಿಯುತ್ತದೆ. ಋಷಿಕೇಶದಲ್ಲಿ ಗಂಗಾನದಿಯು ಶುದ್ದೀಕರಣವಾದರೆ, ಹರಿದ್ವಾರ ಮತ್ತು ಕೆಳಗಿನ ಎಲ್ಲಾ ಸ್ತರಗಳಲ್ಲಿ ಸ್ವತ : ಶುದ್ದವಾಗುತ್ತದೆ'.

2000 ನೇ ಇಸವಿಯಲ್ಲಿ ಮೊತ್ತ ಮೊದಲ ಬಾರಿಗೆ ದೆಹಲಿಯ ಕೆಂಪುಕೋಟೆಯಲ್ಲಿ ಕ್ರಾಂತಿಕಾರಿ ಭಾಷಣವನ್ನು ನೀಡಿದ್ದ ಸಂತ ಇವರು. ಮುಂದೆ ಹರ್ಯಾಣ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಮೊದಲಾದ ಕಡೆ ವಿಹಾರ ಮಾಡಿ 2006 ರಲ್ಲಿ ಕರ್ನಾಟಕದ ಸಂಪರ್ಕಕ್ಕೆ ಬಂದಿದ್ದರು. ಶ್ರವಣಬೆಳಗೊಳದ ಮಸ್ತಕಾಭಿಷೇಕದ ಅವರು ಕರ್ನಾಟಕದಲ್ಲಿ ವಾಸ್ತವ್ಯ ಹೂಡಿದ್ದರು.

2009ರಲ್ಲಿ ನಾಗ್ಪುರದ ಆರ್‌ಎಸ್‌ಎಸ್ ಕಛೇರಿಯಲ್ಲಿ ನಡೆದ ವಿಜಯದಶಮಿಗೆ ಮುನಿಶ್ರೀ ತರುಣ್ ಸಾಗರ್ ಅವರನ್ನು ಕರೆಸಲಾಗಿತ್ತು. ಆ ವೇದಿಕೆಯಲ್ಲಿ ಅವರು ಅಹಿಂಸೆಯ ವಿಚಾರವಾಗಿ ಭಾಷಣ ನೀಡಿದ್ದರು. ಎಲ್ಲಿಯವರೆಗೂ ನಿಮ್ಮ ಸೊಂಟದಲ್ಲಿ ಚರ್ಮದ ಬೆಲ್ಟ್ ಧರಿಸುತ್ತಿರೋ, ಅಲ್ಲಿಯವರೆಗೆ ಅದೆಷ್ಟೇ ಅಹಿಂಸೆಯ ಹೋರಾಟ ಮಾಡಿದ್ರೂ ಪ್ರಯೋಜನವಿಲ್ಲ ಎಂಬ ಮಾತನ್ನು ಹೇಳಿದ್ದರು.

ಮುಂದೆ, ಆರ್‌ಎಸ್‌ಎಸ್ ಚರ್ಮದ ಬೆಲ್ಟ್ ಅನ್ನು ತೆಗೆದುಹಾಕಲಾಯಿತು. ಮಧ್ಯ ಪ್ರದೇಶದಲ್ಲಿ ಸಾರಾಯಿ ಅಂಗಡಿಗಳನ್ನು ತೆರೆಯದಂತೆ ಕ್ರಮ ಕೈಗೊಳ್ಳಲು ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಆಚಾರ್ಯರು ಒಂದು ಸಲಹೆಯನ್ನು ನೀಡಿದ್ದರು.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮುನಿಶ್ರೀಯವರ ಮಾತಿಗೊಪ್ಪಿ 2010 ರಿಂದ ಯಾವುದೇ ಸಾರಾಯಿ ಅಂಗಡಿಗಳಿಗೆ ಪರವಾನಗಿ ನೀಡಲೇ ಇಲ್ಲ. ಇನ್ನು ಮುನಿಶ್ರೀಗಳು ಆರಂಭಿಸಿದ ಅಹಿಂಸಾ ಮಹಾಕುಂಭ್ ಚಳುವಳಿ ಭಾರತದಿಂದ ವಿದೇಶಕ್ಕೆ ರಫ್ತಾಗುತ್ತಿದ್ದ ದನದ ಮಾಂಸ ಮತ್ತು ಚರ್ಮದ ಬೆಲ್ಟ್ ತಡೆಗಟ್ಟುವಲ್ಲಿ ಮಹತ್ತರ ಪಾತ್ರ ವಹಿಸಿದೆ.

2016ರ ಆಗಸ್ಟ್ 26 ರಂದು ಹರಿಯಾಣದ ಅಸೆಂಬ್ಲಿಯಲ್ಲಿ ಮುನಿಶ್ರೀ 'ರಾಜಕಾರಣದಲ್ಲಿ ಸಾಮಾಜಿಕ ಧರ್ಮ' ಕುರಿತು ಸುಮಾರು 40 ನಿಮಿಷ ಮಾತಾಡಿದ್ದರು. ಮುನಿಶ್ರೀ ಅವರ ಕಟು ಕಹಿ ಮಾತುಗಳನ್ನು ಸಹಿಸದ 'ಆಮ್ ಆದ್ಮಿಯ' ಶಾಸಕ ವಿಶಾಲ್ ದಾದ್ ಲಾನಿ, ಸಂತರನ್ನು ಅವಮಾನಿಸಿದ್ದರು. ಇದರಿಂದ ಅಸೆಂಬ್ಲಿಯಲ್ಲಿ ಗಲಾಟೆಯೂ ಆಗಿತ್ತು. ಉಳಿದ ಶಾಸಕರು ಪಕ್ಷಬೇಧ ಮರೆತು ಶಾಸಕನ ವಿರುದ್ಧ ಪ್ರತಿಭಟನೆ ಮಾಡಿದ್ದರು.
ಈ ಕುರಿತು ಪೋಲಿಸ್ ಕೇಸು ದಾಖಲಾಗಿ, ಆ ಶಾಸಕನನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು.

ಮುನಿಶ್ರೀಯವರ ಪೂರ್ವಾಶ್ರಮದ ಹೆಸರು ಪವನ್ ಕುಮಾರ್. ಜೂನ್ 26, 1967ರಲ್ಲಿ ಮಧ್ಯಪ್ರದೇಶದ ಗುಹಾಂಬಿಯಲ್ಲಿ ಪ್ರತಾಪ್ ಚಂದ್ರ ಜೈನ್ ಮತ್ತು ಶಾಂತಿ ಬಾಯಿ ಜೈನ್ ದಂಪತಿಗಳಿಗೆ ಪುತ್ರನಾಗಿ ಜನಿಸಿದರು.
12ನೇ ವಯಸ್ಸಿಗೆ ಕ್ಷುಲ್ಲಕ ದೀಕ್ಷೆಯನ್ನು ಪಡೆದ ಇವರು 20 ನೇ ವಯಸಿಗೆ ಆಚಾರ್ಯ ಪುಷ್ಪದಂತ ಸಾಗರ್ ಮಹಾರಾಜರಿಂದ ಮುನಿದೀಕ್ಷೆ ಪಡೆದರು. ಜಿಲೇಬಿ ಇವರ ಅಚ್ಚು ಮೆಚ್ಚಿನ ಸಿಹಿತಿನಿಸಾಗಿತ್ತು. ರಜತ್ ಶರ್ಮ ನಿರೂಪಣೆಯ ಆಪ್ ಕೀ ಅದಾಲತ್ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುನಿಶ್ರೀ, ತಾನು ದೀಕ್ಷೆ ಪಡೆಯಲು ಪ್ರೇರಣೆಯಾಗಿದ್ದೇನು ಅನ್ನೋದರ ಬಗ್ಗೆ ಹಂಚಿಕೊಂಡಿದ್ದಾರೆ.

ಬಾಲ್ಯದಲ್ಲಿ ಒಂದು ದಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ನೀನೂ ಭಗವಂತನಾಗಬಹುದು ಎಂಬ ಮಾತುಗಳು ಅವರಿಗೆ ಕೇಳಿಸಿತ್ತಂತೆ ಈ ಮಾತುಗಳನ್ನು ಹೇಳಿದ್ದು ಪುಷ್ಪದಂತ ಸಾಗರ್ ಜೀ. ಇದೇ ಮಾತುಗಳಿಂದ ಪ್ರೇರಿತರಾಗಿ ಮನೆಯಿಂದ ಹೊರಟದ್ದಾಗಿ ಹೇಳಿಕೊಂಡಿದ್ದರು ತರುಣ್ ಸಾಗರ್ ಜೀ

ತಮ್ಮ ಕಟು ಪ್ರವಚನಗಳಿಂದಲೇ ಸಮಾಜದ ಪರಿವರ್ತನೆಗೆ ತೊಡಗಿಸಿಕೊಂಡಿದ್ದ ಕ್ರಾಂತಿಕಾರಿ ಮುನಿ ತರುಣ್ ಸಾಗರ್ ಜೀ ಜೈನ ಧರ್ಮ ದ ಆಚರಣೆಯಂತೆ ಸಲ್ಲೇಖನ ಸ್ವೀಕರಿಸಿ ಜಿನೈಕ್ಯರಾಗಿದ್ದಾರೆ. ಮುನಿಧರ್ಮವನ್ನು ಪೂರೈಸಿ ಜ್ಞಾನದ ದೀವಟಿಗೆಯನ್ನು ಉಳಿಸಿಹೋಗಿದ್ದಾರೆ.

English summary
Jain monk Tarun Sagar passed away on September 1, 2018. Tarun Sagarji speech about religion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X