ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲಿಂಗಕಾಮ ಅಪರಾಧವೇ, ಕಾನೂನು ಬದಲಾಗಬೇಕೇ: ಏನಿದು ಸೆಕ್ಷನ್ 377?

|
Google Oneindia Kannada News

ನವದೆಹಲಿ, ಜುಲೈ 12: ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸುವ ಐಪಿಸಿ ಸೆಕ್ಷನ್ 377ರ ಸಿಂಧುತ್ವದ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ ಇರಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಅದನ್ನು ಸುಪ್ರೀಂಕೋರ್ಟ್‌ನ ವಿವೇಚನೆಗೆ ಬಿಟ್ಟಿದೆ.

ಸಲಿಂಗಕಾಮ ಅಪರಾಧ ಎಂಬ ಕಾನೂನಿನ ವಿರುದ್ಧ ಭಾರತದಲ್ಲಿ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಬ್ರಿಟಿಷರ ಆಳ್ವಿಕೆ ಅವಧಿಯಲ್ಲಿ 1862ರಲ್ಲಿ ನಿಸರ್ಗದ ನಿಯಮಕ್ಕೆ ವಿರುದ್ಧವಾದ ಲೈಂಗಿಕ ಸಂಬಂಧ ಅಪರಾಧ ಎಂಬ ಕಾನೂನು ರೂಪುಗೊಂಡಿತು.

ಅದು ಭಾರತೀಯ ದಂಡ ಸಂಹಿತೆಯಲ್ಲಿ ಇಂದಿಗೂ ಅಸ್ತಿತ್ವದಲ್ಲಿದೆ. ಗೇ, ಲೆಸ್ಬಿಯನ್, ಬೈಸೆಕ್ಷುವಲ್ ಮತ್ತು ಟ್ರಾನ್ಸ್‌ಜೆಂಡರ್ಸ್ (ಎಲ್‌ಜಿಬಿಟಿ) ಸಮುದಾಯ ಮತ್ತು ಅವರ ಪರವಾದ ಸಂಘ ಸಂಸ್ಥೆಗಳು ಈ ಕಾನೂನಿನ ರದ್ದತಿಗೆ ಒತ್ತಾಯಿಸಿ ಹೋರಾಟ ನಡೆಸಿವೆ.

ಮದುವೆ ಪಾವಿತ್ರ್ಯ ಉಳಿಯಲು ಅಕ್ರಮ ಸಂಬಂಧವನ್ನು ಅಪರಾಧವೆಂದು ಪರಿಗಣಿಸಿಮದುವೆ ಪಾವಿತ್ರ್ಯ ಉಳಿಯಲು ಅಕ್ರಮ ಸಂಬಂಧವನ್ನು ಅಪರಾಧವೆಂದು ಪರಿಗಣಿಸಿ

ವಿಶೇಷವೆಂದರೆ ಒಂದು ಕಾಲದಲ್ಲಿ ಈ ಕಾನೂನನ್ನು ರೂಪಿಸಿದ ಬ್ರಿಟಿಷ್ ಸರ್ಕಾರವೇ 2013ರಲ್ಲಿ ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಿದೆ.

ಏನಿದು ಸೆಕ್ಷನ್ 377?

ಏನಿದು ಸೆಕ್ಷನ್ 377?

ಬ್ರಿಟಷರ ಕಾಲದಲ್ಲಿಯೇ ಜಾರಿಗೆ ಬಂದ ಭಾರತೀಯ ದಂಡ ಸಂಹಿತೆ ಸೆಕ್ಷನ್ 377 ರ ಪ್ರಕಾರ, ನೈಸರ್ಗಿಕವಲ್ಲದ ಲೈಂಗಿಕ ಸಂಬಂಧಗಳು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಪ್ರಕೃತಿಗೆ ವಿರುದ್ಧವಾಗಿ ಸ್ವಲಿಂಗಿಗಳ ಜತೆ ಅಥವಾ ಪ್ರಾಣಿಗಳ ಜತೆ ಲೈಂಗಿಕ ಕ್ರಿಯೆ ನಡೆಸಿದರೆ ಅವರನ್ನು ಅಪರಾಧಿಗಳು ಎಂದು ಪರಿಗಣಿಸಿ 10 ವರ್ಷದವರೆಗೂ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು.

ಈ ಕಾಯ್ದೆ ವಿರುದ್ಧ 1991ರಿಂದಲೇ ಭಾರತದಲ್ಲಿ ಹೋರಾಟಗಳು ಆರಂಭವಾಗಿದ್ದವು.

ಸುಪ್ರೀಂ ವಿವೇಚನೆಗೆ ಬಿಟ್ಟ ಕೇಂದ್ರ

ಸುಪ್ರೀಂ ವಿವೇಚನೆಗೆ ಬಿಟ್ಟ ಕೇಂದ್ರ

ಸಲಿಂಗ ಕಾಮವನ್ನು ಅಪರಾಧ ಎಂದು ಪರಿಗಣಿಸಿರುವ ಸೆಕ್ಷನ್ 377ಅನ್ನು ರದ್ದುಗೊಳಿಸಿ, ಮಾನವ ಹಕ್ಕುಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಸಲ್ಲಿಸಲಾಗಿರುವ ವಿವಿಧ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೇಂದ್ರ ಸರ್ಕಾರದ ತಟಸ್ಥ ನಿಲುವನ್ನು ತಿಳಿಸಿದರು.

'ವಯಸ್ಕರ ನಡುವಣ ಸಹಮತಿಯ ಲೈಂಗಿಕತೆಯ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಬಯಸುವುದಿಲ್ಲ. ಇದನ್ನು ನ್ಯಾಯಾಲಯದ ವಿವೇಚನೆಗೆ ಬಿಡುತ್ತೇವೆ' ಎಂದು ಮೆಹ್ತಾ ಹೇಳಿದರು.

ನಾಗರಿಕ ಹಕ್ಕುಗಳ ಪರಿಶೀಲನೆ ಬೇಡ

ನಾಗರಿಕ ಹಕ್ಕುಗಳ ಪರಿಶೀಲನೆ ಬೇಡ

ಒಂದು ವೇಳೆ ಸಂವಿಧಾನ ಪೀಠವು ಸಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ ಆಸ್ತಿ ಮತ್ತು ಉತ್ತರಾಧಿಕಾರದ ಹಕ್ಕುಗಳ ಕುರಿತು ವಿಚಾರಣೆ ನಡೆಸಿದರೆ, ಅದಕ್ಕೆ ವಿವರವಾದ ಪ್ರತಿಕ್ರಿಯೆ ನೀಡಲಾಗುತ್ತದೆ.

ನಾಗರಿಕ ಹಕ್ಕುಗಳು, ಉತ್ತರಾಧಿಕಾರತ್ವ ಮತ್ತು ಮದುವೆ ಹಕ್ಕು ಮುಂತಾದವುಗಳ ಕುರಿತು ಪರಿಶೀಲನೆ ನಡೆಸಬಾರದು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.

ಸರ್ಕಾರದ ಜತೆ ವಿವರವಾಗಿ ಸಮಾಲೋಚನೆ ನಡೆಸಿದ ಬಳಿಕವೇ ಇಂತಹ ವಿಚಾರಗಳನ್ನು ಪರಿಶೀಲನೆಗೆ ಒಳಪಡಿಸಬೇಕಾಗುತ್ತದೆ.

ಏಕೆಂದರೆ, ಇವುಗಳಲ್ಲಿ ತರುವ ಬದಲಾವಣೆಯು ಕಾನೂನುಗಳ ಮೇಲೆ ತೀಕ್ಷ್ಣ ಹಾಗೂ ವ್ಯಾಪಕವಾದ ಪರಿಣಾಮವನ್ನು ಬೀರುತ್ತವೆ, ಈ ಕಾರಣದಿಂದ ಇದರ ಕುರಿತು ವಿವರವಾದ ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ.

ಅಲ್ಲದೆ, ಈಗ ಸಾಂವಿಧಾನಿಕ ಪೀಠದ ಮುಂದೆ ಇರುವುದು ಇಬ್ಬರು ವಯಸ್ಕರ ನಡುವಣ ಸಹಮತಿಯ ಲೈಂಗಿಕ ಸಂಬಂಧವನ್ನು ಅಪರಾಧ ಎಂದು ಪರಿಗಣಿಸುವ ಸೆಕ್ಷನ್ 377ರ ಸಾಂವಿಧಾನಿಕ ಸಿಂಧುತ್ವದ ಕುರಿತಾದ ಪ್ರಶ್ನೆ ಮಾತ್ರ.

ಈ ವಿಚಾರಗಳು ಈಗ ಪರಿಶೀಲನೆ ನಡೆಸಬೇಕಾದ ಅರ್ಜಿಗಳ ವ್ಯಾಪ್ತಿಯಲ್ಲಿ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ವಿವಾಹ ಕಾಯ್ದೆಗೆ ತೊಡಕು

ವಿವಾಹ ಕಾಯ್ದೆಗೆ ತೊಡಕು

ಒಂದು ವೇಳೆ ಸಲಿಂಗಕಾಮ ಅಪರಾಧ ಅಲ್ಲ ಎಂದು ಅದಕ್ಕೆ ಅನುಮೋದನೆ ನೀಡುವ ಮೂಲಕ ಸಂಗಾತಿಯ ಆಯ್ಕೆಯನ್ನು ಮೂಲಭೂತ ಹಕ್ಕು ಎಂದು ಘೋಷಣೆ ಮಾಡಿದರೆ ಅದರಿಂದ ಸಮಸ್ಯೆಗಳು ಉಂಟಾಗಬಹುದು.

ಮುಂದೆ ವ್ಯಕ್ತಿಗಳು ತಮ್ಮ ಸಹೋದರ ಅಥವಾ ಸಹೋದರಿಯನ್ನೇ ಮದುವೆಯಾಗುವ ಸಾಧ್ಯತೆ ಕೂಡ ಇದೆ. ಇದು ವಿವಾಹ ಕಾನೂನಿಗೆ ವಿರುದ್ಧವಾದ ಪ್ರಕರಣಗಳಾಗಿ ಪರಿಣಮಿಸಲಿವೆ ಎಂದು ಕೇಂದ್ರ ಕಳವಳ ವ್ಯಕ್ತಪಡಿಸಿದೆ.

ನೈತಿಕ ಪೊಲೀಸ್‌ಗಿರಿ ಬಯಸುವುದಿಲ್ಲ

ನೈತಿಕ ಪೊಲೀಸ್‌ಗಿರಿ ಬಯಸುವುದಿಲ್ಲ

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಆರ್‌ಎಫ್ ನಾರಿಮನ್, ಎಎಂ ಖಾನ್ವಿಲ್ಕರ್, ಡಿವೈ ಚಂದ್ರಚೂಡ್ ಮತ್ತು ಇಂದು ಮಲ್ಹೋತ್ರಾ ಅವರನ್ನು ಒಳಗೊಂಡ ಪೀಠವು ತಾನು ಸೆಕ್ಷನ್ 377ರಲ್ಲಿನ ಅಪರಾಧದ ಕುರಿತ ತಕರಾರರಿನ ವಿಚಾರವಾಗಿ ಮಾತ್ರ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿತು.

ಇಬ್ಬರು ಸಲಿಂಗಿಗಳು ರಸ್ತೆಯಲ್ಲಿ ಮುಕ್ತವಾಗಿ ಕೈಕೈ ಹಿಡಿದು ನಡೆದುಹೋಗುತ್ತಿರುವಾಗ ಅವರನ್ನು ತಡೆಯುವ ನೈತಿಕ ಪೊಲೀಸ್‌ಗಿರಿಯಂತಹ ಯಾವುದೇ ಸನ್ನಿವೇಶ ಎದುರಾಗುವುದನ್ನು ನಾವು ಬಯಸುವುದಿಲ್ಲ.

ಸೆಕ್ಷನ್ 377ಅನ್ನು ಅಸಿಂಧು ಎಂದು ಘೋಷಣೆ ಮಾಡುವುದರಿಂದ ಸಮಾಜದಲ್ಲಿ ಜಾಗೃತಿ ಮೂಡುತ್ತದೆ ಮತ್ತು ಸಲಿಂಗಿಗಳ ಸಮುದಾಯ ನಿಶ್ಚಿಂತೆಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಪೀಠ ಹೇಳಿತು.

ಕಾಲಾವಕಾಶ ನಿರಾಕರಿಸಿದ್ದ ನ್ಯಾಯಪೀಠ

ಕಾಲಾವಕಾಶ ನಿರಾಕರಿಸಿದ್ದ ನ್ಯಾಯಪೀಠ

ಸೋಮವಾರದ ವಿಚಾರಣೆಗೆ ವೇಳೆ ತನ್ನ ಪ್ರತಿಕ್ರಿಯೆಗೆ ಕಾಲಾವಕಾಶ ಕೋರಿದ್ದ ಸರ್ಕಾರದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.

ಅರ್ಜಿಗಳಿಗೆ ತನ್ನ ಪ್ರತಿಕ್ರಿಯೆ ನೀಡಲು ನಾಲ್ಕು ವಾರಗಳ ಸಮಯ ಕೋರಿದ್ದ ಕೇಂದ್ರ ಸರ್ಕಾರ, ವಿಚಾರಣೆಯನ್ನು ಮುಂದೂಡುವಂತೆ ಸಹ ಮನವಿ ಮಾಡಿತ್ತು.

ಆದರೆ, ಅದನ್ನೂ ನಿರಾಕರಿಸಿರುವ ಪೀಠ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.

ಸಲಿಂಗಕಾಮ ಅಪರಾಧ ಎಂದು ಪರಿಗಣಿಸುವ ಸೆಕ್ಷನ್ 377 ಅಸಾಂವಿಧಾನಿಕ ಎಂದು ಅಭಿಪ್ರಾಯಪಟ್ಟು 2009ರಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ 2013ರಲ್ಲಿ ರದ್ದುಗೊಳಿಸಿತ್ತು.

ಸಂಘ ಸ್ಥಾಪನೆಗೆ ಅನುಮತಿ ನೀಡಿ

ಸಂಘ ಸ್ಥಾಪನೆಗೆ ಅನುಮತಿ ನೀಡಿ

ಎಲ್‌ಜಿಬಿಟಿ (ಸಲಿಂಗಿ) ಸಮುದಾಯವು ಎದುರಿಸುತ್ತಿರುವ ತಾರತಮ್ಯದ ಕುರಿತು ಪ್ರಸ್ತಾಪಿಸಿದ ವಕೀಲೆ ಮೇನಕಾ ಗುರುಸ್ವಾಮಿ, ಇದರ ಸದಸ್ಯರು ಸಂಘಗಳನ್ನು ಸ್ಥಾಪಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ಕೋರಿದರು.

ಇದು ಸೆಕ್ಷನ್ 377ರ ವ್ಯಾಪ್ತಿಗೆ ಬರುವುದಿಲ್ಲ. ಒಂದು ವೇಳೆ ನಾವು ಸೆಕ್ಷನ್ 377ಅನ್ನು ಅಸಿಂಧುಗೊಳಿಸಿ ಖಾಸಗಿಯಾಗಿ ನಡೆಸುವ ಒಪ್ಪಿತ ಸಲಿಂಗ ಸಂಬಂಧ ಅಪರಾಧವಲ್ಲ ಎಂದು ತೀರ್ಪು ನೀಡಿದರೆ, ಸಲಿಂಗಿ ಸಮುದಾಯದವರು ಸಂಘ ಸ್ಥಾಪನೆಗೆ ಇರುವ ನಿರ್ಬಂಧ ಸಹಜವಾಗಿಯೇ ತೆರವಾಗುತ್ತದೆ.

ಅಲ್ಲದೆ ಸೆಕ್ಷನ್ 377ಕ್ಕೆ ಸಂಬಂಧಿಸಿದಂತೆ ಸಲಿಂಗಿ ಸಮುದಾಯದ ಸದಸ್ಯರ ಮೇಲೆ ಇರುವ ಯಾವುದೇ ನಿಬಂಧನೆಗಳು ಕೂಡ ತೆರವಾಗುತ್ತವೆ ಎಂದು ಮಿಶ್ರಾ ಹೇಳಿದರು.

ಕಾನೂನು ಹೋರಾಟದ ಘಟನಾವಳಿ

ಕಾನೂನು ಹೋರಾಟದ ಘಟನಾವಳಿ

2001: ಬ್ರಿಟಿಷರ ಕಾಲಾವಧಿಯಲ್ಲಿ 1862ರ ಸಮಯದಲ್ಲಿ ರೂಪಿಸಲಾದ ಸೆಕ್ಷನ್ 377ಅನ್ನು ರದ್ದುಗೊಳಿಸುವಂತೆ ಕೋರಿ ನಾಜ್ ಫೌಂಡೇಷನ್ ಎಂಬ ಎನ್‌ಜಿಒ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು.

2004-2008:
* ಮೊದಲು ಈ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿತು. ಬಳಿಕ ಅರ್ಜಿದಾರರು ಸುಪ್ರೀಂಕೋರ್ಟ್‌ಗೆ ಹೋಗುವ ಮುನ್ನ ಮತ್ತೆ ಅರ್ಜಿಯನ್ನು ಮರು ಪರಿಶೀಲನೆಗೆ ಒಳಪಡಿಸಲು ಒಪ್ಪಿಕೊಂಡಿತು.

* ಈ ಕುರಿತು ಕೇಂದ್ರ ಸರ್ಕಾರದಿಂದ ಅರ್ಜಿ. ಗೃಹ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯಗಳು ವಿರೋಧಾಭಾಸದ ಹೇಳಿಕೆಗಳನ್ನು ನೀಡಿದವು. ಕೊನೆಗೆ ಕೇಂದ್ರ ಸರ್ಕಾರವು ಸಲಿಂಗಕಾಮವು ಅನೈತಿಕ ಎಂದು ಪ್ರತಿಪಾದಿಸಿತು. ಅದನ್ನು ನಿರಪರಾಧ ಎನ್ನುವುದರ ವಿರುದ್ಧ ವಾದ ಮಂಡಿಸಿತು.

* ಅನೈತಿಕ ಎಂಬ ವಾದವನ್ನು ಹೈಕೋರ್ಟ್ ತಳ್ಳಿಹಾಕಿತು. ವೈಜ್ಞಾನಿಕ ಪುರಾವೆಗಳನ್ನು ನೀಡುವಂತೆ ಸೂಚಿಸಿತು. ಇದು ಸಂಸತ್‌ನಲ್ಲಿ ನಿರ್ಧರಿಸಬೇಕಾದ ವಿಚಾರ ಎಂದು ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿತು.

2009ರ ಜುಲೈ 2ರಂದು ಸಲಿಂಗಕಾಮವು ಅಪರಾಧವಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತು.

ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ

ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ

2009-2012: ದೆಹಲಿ ಹೈಕೋರ್ಟ್‌ನ ತೀರ್ಪನ್ನು ಕೆಲವು ಧಾರ್ಮಿಕ ಸಂಘಟನೆಗಳು ಮತ್ತು ವ್ಯಕ್ತಿಗಳು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದರು.

2013ರ ಡಿಸೆಂಬರ್ 11: 2009ರ ದೆಹಲಿ ಹೈಕೋರ್ಟ್ ತೀರ್ಪನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್, ಸಲಿಂಗ ಸಂಬಂಧ ಅಪರಾಧ ಎಂದು ಹೇಳಿತು. ಈ ವಿವಾದದ ಕುರಿತು ಸಂಸತ್ ನಿರ್ಧಾರ ತೆಗೆದುಕೊಳ್ಳಲಿ ಎಂದು ಆದೇಶಿಸಿತು.

2015: ಸಲಿಂಗಕಾಮ ಅಪರಾಧವಲ್ಲ ಎಂದು ಸೆಕ್ಷನ್ 377ಅನ್ನು ಅಸಿಂಧುಗೊಳಿಸಬೇಕು ಎಂಬ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಖಾಸಗಿ ಮಸೂದೆ ವಿರುದ್ಧ ಬಿಜೆಪಿ ಬಹುಮತ ಇರುವ ಲೋಕಸಭೆ ಮತಚಲಾಯಿಸಿತು.

ಮರುಪರಿಶೀಲನೆಗೆ ಒಪ್ಪಿಗೆ

ಮರುಪರಿಶೀಲನೆಗೆ ಒಪ್ಪಿಗೆ

2016ರ ಫೆಬ್ರುವರಿ: ತನ್ನ ಹಿಂದಿನ ತೀರ್ಪನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದಲ್ಲಿ ಮರುಪರಿಶೀಲನೆ ನಡೆಸಲು ಮೂವರು ಸದಸ್ಯರ ನ್ಯಾಯಮೂರ್ತಿಗಳ ಪೀಠ ಒಪ್ಪಿಕೊಂಡಿತು.

2017ರ ಆಗಸ್ಟ್: ಖಾಸಗಿತನದ ಹಕ್ಕನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಯಿತು. ಖಾಸಗಿ ಹಕ್ಕನ್ನು ಮೂಲಭೂತ ಹಕ್ಕು ಎಂದು ಬದಲಿಸಿದರೆ ಸಲಿಂಗಕಾಮ ಅಪರಾಧ ಎಂದು ನೀಡಿರುವ ತೀರ್ಪನ್ನು ಮರುಪರಿಶೀಲನೆ ಮಾಡಬೇಕಾಗುತ್ತದೆ.

ಏಕೆಂದರೆ ಲೈಂಗಿಕ ಆಸಕ್ತಿಯು ಅವರವರ ಖಾಸಗಿತನದ ಹಕ್ಕಾಗಲಿದೆ ಎಂದು ಸುಪ್ರೀಂಕೋರ್ಟ್ ಹೇಳಿತ್ತು.

2018 ಜನವರಿ: 2013ರ ತನ್ನ ತೀರ್ಪನ್ನು ಮರುಪರಿಶೀಲನೆ ಮಾಡಬೇಕಾಗಿದೆ ಎಂದು ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ಹೇಳಿತು. ಅದನ್ನು ಐವರು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿದರು.

2018, ಜುಲೈ 11-12: ಸಲಿಂಗಕಾಮ ಅಪರಾಧ ಎನ್ನುವ 150 ವರ್ಷಗಳ ಹಿಂದಿನ ನಿಯಮವನ್ನು ರದ್ದುಗೊಳಿಸುವ ಕುರಿತ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ.

ಈ ದೇಶಗಳಲ್ಲಿ ಸಲಿಂಗ ವಿವಾಹ ಅಪರಾಧವಲ್ಲ

ಈ ದೇಶಗಳಲ್ಲಿ ಸಲಿಂಗ ವಿವಾಹ ಅಪರಾಧವಲ್ಲ

ಜಗತ್ತಿನ 26 ದೇಶಗಳಲ್ಲಿ ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಲಾಗಿದೆ. ಇವುಗಳಲ್ಲಿ ಹೆಚ್ಚಿನವು ಯುರೋಪ್ ಮತ್ತು ಅಮೆರಿಕದ ದೇಶಗಳಾಗಿವೆ.

ಸಲಿಂಗ ವಿವಾಹಕ್ಕೆ ಮೊಟ್ಟಮೊದಲು ಅನುಮತಿ ನೀಡಿದ್ದು ನೆದರ್‌ಲ್ಯಾಂಡ್ಸ್ (2000).

ಇದರ ಬಳಿಕ ಬೆಲ್ಜಿಯಂ, ಸ್ಪೇನ್, ಕೆನಡಾ, ದಕ್ಷಿಣ ಆಫ್ರಿಕಾ, ನಾರ್ವೆ, ಸ್ವೀಡನ್, ಮೆಕ್ಸಿಕೊ, ಐಸ್‌ಲ್ಯಾಂಡ್, ಅರ್ಜೆಂಟೀನಾ, ಪೋರ್ಚುಗಲ್, ಉರುಗ್ವೆ, ಡೆನ್ಮಾರ್ಕ್, ಬ್ರೆಜಿಲ್, ಇಂಗ್ಲೆಂಡ್/ವೇಲ್ಸ್, ನ್ಯೂಜಿಲೆಂಡ್, ಫ್ರಾನ್ಸ್, ಲುಕ್ಸೆಂಬರ್ಗ್, ಸ್ಕಾಟ್ಲೆಂಡ್, ಗ್ರೀನ್‌ಲ್ಯಾಂಡ್‌, ಐರ್ಲೆಂಡ್, ಅಮೆರಿಕ, ಫಿನ್ಲೆಂಡ್, ಕೊಲಂಬಿಯಾ, ಆಸ್ಟ್ರೇಲಿಯಾ, ಮಾಲ್ಟಾ ಮತ್ತು ಜರ್ಮನಿಗಳಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಲಾಗಿದೆ.

ಏಷ್ಯಾದ ಯಾವುದೇ ದೇಶಗಳಲ್ಲಿ ಹಾಗೂ ಮುಸ್ಲಿಂ ರಾಷ್ಟ್ರಗಳಲ್ಲಿ ಸಲಿಂಗ ವಿವಾಹಕ್ಕೆ ಕಾನೂನಿನಲ್ಲಿ ಅನುಮತಿ ನೀಡಲಾಗಿಲ್ಲ.

ಭಾರತದ ಸಂದರ್ಭದಲ್ಲಿ ಸಲಿಂಗ ವಿವಾಹವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅನೇಕ ಸಂಘಟನೆಗಳು ಹೇಳಿವೆ. ಇದು ನಿಸರ್ಗ ಹಾಗೂ ದೇಶದ ಸಾಂಸ್ಕೃತಿಕ ಪರಂಪರೆಗೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿವೆ.

English summary
Central government said that it leaves the decision of decriminalising gay sex to Supreme Court's wisdom. What is section 377? Here is some details regarding the issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X