ಭಾರತದಲ್ಲಿ ತರಕಾರಿ ಬಲು ದುಬಾರಿ; ಮಾರುಕಟ್ಟೆಯಲ್ಲಿ ರೇಟು ಹೇಗಿದೆ ತಿಳಿಯಿರಿ
ನವದೆಹಲಿ, ಮೇ 18: ಭಾರತದಲ್ಲಿ ನಿಂಬೆ ಹಣ್ಣಿನ ದರ ಗಗನಕ್ಕೇರಿದ ಬೆನ್ನಲ್ಲೇ ಟೊಮ್ಯಾಟೋ ರೇಟು ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಈಗಾಗಲೇ ದಾಖಲೆ ಏರಿಕೆ ಕಂಡಿರುವ ಟೊಮ್ಯಾಟೋದ ಬೆಲೆ ಕೆಜಿಗೆ 100 ರೂಪಾಯಿ ಗಡಿ ದಾಟಿದೆ.
ಕೆಜಿಗೆ 80 ರೂಪಾಯಿ ದಾಟಿದ ಟೊಮೆಟೊ: ರೈತರ ಮೊಗದಲ್ಲಿ ಮಂದಹಾಸ
ಅದೇ ರೀತಿ ದೇಶದ ಮಾರುಕಟ್ಟೆಯಲ್ಲಿ ಹಣದುಬ್ಬರದ ಎಚ್ಚರಿಕೆಗೆ ಕಾರಣವಾಗಿರುವ ತರಕಾರಿಗಳು ಯಾವುವು?, ಯಾವ ತರಕಾರಿ ಬೆಲೆ ಎಷ್ಟಿದೆ ಎಂಬುದನ್ನು ಈ ವರದಿಯಲ್ಲಿ ತಿಳಿಯೋಣ.
ದೇಶದ ಹಲವಾರು ಭಾಗಗಳಲ್ಲಿ ಟೊಮ್ಯಾಟೋ ಬೆಲೆ ಗಗನಕ್ಕೇರಿದೆ. ಕೆಲವು ಪ್ರದೇಶದಲ್ಲಿ ಒಂದು ಕೆಜಿ ಟೊಮ್ಯಾಟೋ ಬೆಲೆ 100 ರೂಪಾಯಿಗೆ ಏರಿಕೆಯಾಗಿದ್ದರೆ, ಇನ್ನೂ ಕೆಲವು ಸ್ಥಳಗಳಲ್ಲಿ 100ಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ.
ಬೆಂಗಳೂರಿನಲ್ಲಿ ಒಂದು ಕೆಜಿ ಟೊಮ್ಯಾಟೋಗೆ 100 ರೂಪಾಯಿಗಿಂತ ಹೆಚ್ಚಾಗಿದ್ದರೆ, ರಾಜ್ಯದ ಇತರೆ ಜಿಲ್ಲೆಗಳಲ್ಲಿ ಒಂದು ಕೆಜಿಗೆ 80 ರಿಂದ 90 ರೂಪಾಯಿ ಆಗಿದೆ. ಮೂರು ತಿಂಗಳ ಹಿಂದೆಯಷ್ಟೇ ರಾಜ್ಯದಲ್ಲಿ ಒಂದು ಕೆಜಿ ಟೊಮ್ಯಾಟೋ ಬೆಲೆ 10 ರೂಪಾಯಿ ಆಗಿತ್ತು.
ಆಂಧ್ರ ಪ್ರದೇಶದಲ್ಲಿ ಟೊಮ್ಯಾಟೋ ದರ:
ಆಂಧ್ರಪ್ರದೇಶದ ಹಲವು ಭಾಗಗಳಲ್ಲಿ ಟೊಮ್ಯಾಟೋ ಬೆಲೆ ಕೆಜಿಗೆ 100 ರೂಪಾಯಿಗೆ ತಲುಪಿದೆ, ಮತ್ತು ಕೆಲವು ಪ್ರದೇಶಗಳಲ್ಲಿ 60-70 ರೂಪಾಯಿಗಳಿಗೆ ತಲುಪಿದೆ ಎಂದು ವರದಿಯಾಗಿದೆ. ಕಳೆದ ಒಂದು ವಾರದ ಹಿಂದೆ ರಾಜ್ಯದಲ್ಲಿ ಟೊಮ್ಯಾಟೋ ದರವು ಕೆಜಿಗೆ 30 ರಿಂದ 40 ರೂಪಾಯಿ ಆಗಿದ್ದು, ಒಂದು ತಿಂಗಳ ಹಿಂದೆ ಟೊಮ್ಯಾಟೋ ದರ ಕೆಜಿಗೆ 10 ರೂಪಾಯಿ ಆಗಿತ್ತು. ಈ ಮಧ್ಯೆ ತೆಲಂಗಾಣದಲ್ಲಿ ಒಂದು ಕೆಜಿ ಟೊಮ್ಯಾಟೋ ಬೆಲೆಯು 80 ರಿಂದ 90 ರೂಪಾಯಿ ಆಗಿದೆ.
ಮಹಾರಾಷ್ಟ್ರ, ಒಡಿಶಾದಲ್ಲಿ ಟೊಮ್ಯಾಟೋ ಬೆಲೆ:
ಒಡಿಶಾದ ಚಿಲ್ಲರೇ ಮಾರುಕಟ್ಟೆಯಲ್ಲಿ ಒಂದು ಕೆಜಿ ಟೊಮ್ಯಾಟೋ ದರವು 120 ರೂಪಾಯಿ ಗಡಿ ದಾಟಿದೆ. ಆದರೆ ಎರಡು ವಾರಗಳ ಹಿಂದೆ ಇದೇ ಒಡಿಶಾದ ರಾಜಧಾನಿ ಭುವನೇಶ್ವರ್ ಮಾರುಕಟ್ಟೆಯಲ್ಲಿ ಒಂದು ಕೆಜಿ ಟೊಮ್ಯಾಟೋಗೆ 25 ರಿಂದ 30 ರೂಪಾಯಿ ಇತ್ತು. ಸದ್ಯ ಮಹಾರಾಷ್ಟ್ರದ ರಾಜಧಾನಿ ಮುಂಬೈನ ಚಿಲ್ಲರೇ ಮಾರುಕಟ್ಟೆಯಲ್ಲಿ ಒಂದು ಕೆಜಿ ಟೊಮ್ಯಾಟೋ ದರ 60 ರೂಪಾಯಿ ಆಗಿದೆ.
ಟೊಮ್ಯಾಟೋ ದರ ಏರಿಕೆಗೆ ಕಾರಣನೇನು?:
ಈ ವರ್ಷ ದೇಶವು ಕಂಡ ತೀವ್ರ ಶಾಖದ ಅಲೆಯು ಟೊಮ್ಯಾಟೋ ಉತ್ಪಾದನೆಗೆ ಪೆಟ್ಟು ಕೊಟ್ಟಿದೆ. ಈ ಪೂರೈಕೆಯಲ್ಲಿ ಇಳಿಕೆ ಹಾಗೂ ವಿಳಂಬವೇ ಬೆಲೆ ಏರಿಕೆಗೆ ಕಾರಣವಾಗಿದೆ. ಸ್ಥಳೀಯ ವರದಿಗಳ ಪ್ರಕಾರ, ರಾಜಸ್ಥಾನ ಮತ್ತು ಗುಜರಾತ್ನಂತಹ ಕೆಲವು ರಾಜ್ಯಗಳಲ್ಲಿ ಟೊಮ್ಯಾಟೋ ದಾಸ್ತಾನು ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಬಿಸಿ ದಿನಗಳು ಮುಂದುವರಿಯುವುದು ಬೆಲೆಗಳನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ಅಂದಾಜಿಸಲಾಗುತ್ತಿದೆ.