ಭಾರತದಲ್ಲಿ 100 ಮಿಲಿಯನ್ ಸ್ಪುಟ್ನಿಕ್ ಲಸಿಕೆ ಉತ್ಪಾದನೆ
ನವದೆಹಲಿ, ನವೆಂಬರ್ 27: ಭಾರತವು 2021ರ ಆರಂಭದಿಂದ ಒಂದು ವರ್ಷಗಳ ಕಾಲ ರಷ್ಯಾದ ಕೊರೊನಾ ವೈರಸ್ ಲಸಿಕೆ ಸ್ಪುಟ್ನಿಕ್ Vರ 100 ಮಿಲಿಯನ್ ಡೋಸ್ಗಳನ್ನು ಉತ್ಪಾದಿಸಲಿದೆ. ರಷ್ಯಾದ ನೇರ ಬಂಡವಾಳ ಹೂಡಿಕೆ ನಿಧಿ (ಆರ್ಡಿಐಎಫ್) ಮತ್ತು ಹೈದರಾಬಾದ್ ಮೂಲದ ಹೆಟೆರೊ ಬಯೋಫಾರ್ಮಗಳ ನಡುವಿನ ಒಪ್ಪಂದಗಳಿಗೆ ಅನುಗುಣವಾಗಿ ಈ ಉತ್ಪಾದನೆ ನಡೆಯಲಿದೆ.
ಮಾನವನ ಅಡೆನೊವೈರಲ್ ವೆಕ್ಟರ್ಗಳ ಮೇಲೆ ಅಧ್ಯಯನಕ್ಕೆ ಒಳಗಾದ ಸ್ಪುಟ್ನಿಕ್ ಲಸಿಕೆಯು ಶೇ 91.4ರಷ್ಟು ಪರಿಣಾಮಕಾರಿ ಎನಿಸಿದೆ ಎಂದು ಎರಡನೆಯ ಮಧ್ಯಂತರ ವಿಶ್ಲೇಷಣಾ ವರದಿ ತಿಳಿಸಿದೆ. ರಷ್ಯಾದಲ್ಲಿ ಸುಮಾರು 40,000 ಸ್ವಯಂ ಸೇವಕರ ಮೇಲೆ ಈ ಮೂರನೇ ಹಂತದ ಪ್ರಯೋಗ ನಡೆಸಲಾಗಿದೆ. ಗಾಮಲೆಯ ಕೇಂದ್ರ ಮತ್ತು ಆರ್ಡಿಐಎಫ್ ನವೆಂಬರ್ 24ರಂದು ಈ ಫಲಿತಾಂಶವನ್ನು ಪ್ರಕಟಿಸಿದ್ದವು.
ಜಗತ್ತಿನಾದ್ಯಂತ ಸಿದ್ಧವಾಗುತ್ತಿವೆ 200ಕ್ಕೂ ಹೆಚ್ಚು ಕೋವಿಡ್ ಲಸಿಕೆಗಳು
ಬೆಲಾರಸ್, ಯುಎಇ, ವೆನೆಜುವೆಲಾ ಮತ್ತು ಇತರೆ ದೇಶಗಳಲ್ಲಿ ಮೂರನೇ ಹಂತದ ಪ್ರಯೋಗಕ್ಕೆ ಅನುಮೋದನೆ ದೊರೆತಿದ್ದು, ಪ್ರಯೋಗಗಳು ನಡೆಯುತ್ತಿವೆ. ಭಾರತದಲ್ಲಿ 2/3ನೇ ಹಂತದ ಪ್ರಯೋಗಕ್ಕೆ ಅನುಮತಿ ದೊರಕಿದೆ. ಕನಿಷ್ಠ 50 ದೇಶಗಳಿಗೆ 1.2 ಬಿಲಿಯನ್ ಡೋಸ್ಗಳಿಗೂ ಅಧಿಕವಾಗಿ ಅಗತ್ಯವಿರುವಷ್ಟು ಲಸಿಕೆಗಳನ್ನು ಭಾರತ, ಬ್ರೆಜಿಲ್, ಚೀನಾ, ದಕ್ಷಿಣ ಕೊರಿಯಾ ಮತ್ತು ಇತರೆ ದೇಶಗಳು ಪೂರೈಸಲಿವೆ.
ಸ್ಪುಟ್ನಿಕ್ ಲಸಿಕೆಯ ಪೂರ್ವ ಅರ್ಹತೆ ಅನುಮೋದನೆ ಮತ್ತು ತುರ್ತು ಬಳಕೆ ಪಟ್ಟಿಯ (ಇಯುಎಲ್) ನೋಂದಣಿ ಅನುಮತಿಗಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ಆರ್ಡಿಐಎಫ್ ಅರ್ಜಿ ಸಲ್ಲಿಸಿದೆ.
ಮೂರು ಲಸಿಕೆ ಉತ್ಪಾದನಾ ಕೇಂದ್ರಗಳಿಗೆ ಶನಿವಾರ ನರೇಂದ್ರ ಮೋದಿ ಭೇಟಿ
'ನಾವು ಭಾರತದಲ್ಲಿನ ಕ್ಲಿನಿಕಲ್ ಪರೀಕ್ಷೆಯ ಫಲಿತಾಂಶಕ್ಕೆ ಎದುರು ನೋಡುತ್ತಿದ್ದೇವೆ. ಸ್ಥಳೀಯವಾಗಿ ಲಸಿಕೆ ಉತ್ಪಾದನೆ ಮಾಡುವುದು ರೋಗಿಗಳಿಗೆ ತ್ವರಿತವಾಗಿ ಪೂರೈಸಲು ಸಾಧ್ಯ ಎನ್ನುವುದು ನಮ್ಮ ನಂಬಿಕೆ. ಈ ಸಹಭಾಗಿತ್ವವು ಕೋವಿಡ್ 19ರ ವಿರುದ್ಧದ ಹೋರಾಟದಲ್ಲಿನ ನಮ್ಮ ಬದ್ಧತೆಗೆ ಮತ್ತೊಂದು ಹೆಜ್ಜೆಯಾಗಿದೆ' ಎಂದು ಹೆಟೆರೊ ಲ್ಯಾಬ್ಸ್ನ ಅಂತಾರಾಷ್ಟ್ರೀಯ ಮಾರ್ಕೆಟಿಂಗ್ ವಿಭಾಗದ ನಿರ್ದೇಶಕ ಬಿ. ಮುರಳಿಕೃಷ್ಣ ರೆಡ್ಡಿ ತಿಳಿಸಿದ್ದಾರೆ.