ಹಾಟ್‌ಲೈನ್‌ನಲ್ಲಿ ಭಾರತ-ಚೀನಾ ಮಾತಿನ ಚಕಮಕಿ
ನವದೆಹಲಿ, ಸೆಪ್ಟೆಂಬರ್ 8: ಭಾರತ ಮತ್ತು ಚೀನಾ ಸೇನೆಗಳ ಬ್ರಿಗೇಡಿಯರ್ ಮಟ್ಟದ ಮಾತುಕತೆಯು ಮಂಗಳವಾರ ಉಭಯ ದೇಶಗಳ ನಡುವಿನ ವೈಷಮ್ಯಕ್ಕೆ ಸಾಕ್ಷಿಯಾಯಿತು. ಸೋಮವಾರ ಎಲ್‌ಎಸಿ ಘರ್ಷಣೆ ಬಳಿಕ ಎರಡೂ ದೇಶಗಳ ಸೇನಾ ನಾಯಕರು ಖುದ್ದು ಭೇಟಿಯ ಮಾತುಕತೆ ನಡೆಸಲು ನಿರಾಕರಿಸಿದ್ದರು.
ಹಾಟ್‌ಲೈನ್‌ನಲ್ಲಿ ನಡೆದ ಚರ್ಚೆಯಲ್ಲಿಯೇ ಉಭಯ ದೇಶಗಳ ಸೇನಾಧಿಕಾರಿಗಳ ನಡುವೆ ಕಾವೇರಿದ ವಾದ ವಿವಾದದ ವಿನಿಯಮ ನಡೆಯಿತು ಎಂದು ಮೂಲಗಳು ತಿಳಿಸಿವೆ. ಲಡಾಖ್‌ನ ಮುಖ್‌ಪಾರಿ ಪೀಕ್ ಮತ್ತು ರೆಜಾಂಗ್ ಲಾ ಪ್ರದೇಶಗಳಲ್ಲಿ ಭಾರತೀಯ ಸೇನೆಯ ಹಿಡಿತವನ್ನು ಹಿಮ್ಮೆಟ್ಟಿಸಲು ಚೀನಾ ಸೇನೆಯು ವಿಫಲ ಪ್ರಯತ್ನ ನಡೆಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
ವಾಸ್ತವ ಗಡಿ ನಿಯಂತ್ರಣ ರೇಖೆ: ಇಲ್ಲಿ ಗುಂಡು ಹಾರಿದ್ದು 45 ವರ್ಷದಲ್ಲಿ ಇದೇ ಮೊದಲು
ಮುಖ್‌ಪಾರಿ ಪೀಕ್ ಪ್ರದೇಶವನ್ನು ಆಕ್ರಮಿಸಲು ಚೀನಾದ ಪಡೆಗಳು ಪ್ರಯತ್ನ ನಡೆಸಿದ ಪ್ರಯತ್ನ ಹಾಗೂ ಪುರಾತನ ಆಯುಧಗಳನ್ನು ಬಳಸಿದ್ದರ ಬಗ್ಗೆ ಇಬ್ಬರು ಬ್ರಿಗೇಡಿಯರ್ ನಡುವೆ ಹಾಟ್‌ಲೈನ್‌ನಲ್ಲಿ ತೀವ್ರ ವಾದ ವಿವಾದ ನಡೆಯಿತು.
ಪಿಎಲ್‌ಎ ಪಡೆಗಳು ತಂದಿದ್ದ ಆಯುಧಗಳ ಕುರಿತು ಭಾರತೀಯ ಸೇನೆಯ ಬ್ರಿಗೇಡಿಯರ್ ಪ್ರಶ್ನಿಸಿದಾಗ, ಈ ಆಯುಧಗಳು ಚೀನಾದ ಮಾರ್ಷಿಯಲ್ ಸಂಸ್ಕೃತಿಯ ಭಾಗಗಳಾಗಿವೆ ಎಂದು ಪ್ರತಿಕ್ರಿಯೆ ನೀಡಿತು ಎನ್ನಲಾಗಿದೆ. ಚೀನಾವು ಭಾಗಶಃ ಶಾಶ್ವತ ಕಲ್ಲಿನ ರಕ್ಷಣಾ ಕಟ್ಟಡಗಳನ್ನು ನಿರ್ಮಿಸುತ್ತಿದೆ. ಈ ಮೂಲಕ ಗಡಿಯಲ್ಲಿ ಉದ್ವಿಗ್ನತೆಯನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ ಎಂದು ಭಾರತದ ಬ್ರಿಗೇಡಿಯರ್ ಆರೋಪಿಸಿದರು.
ಭಾರತ-ಚೀನಾ ಗಡಿಯಲ್ಲಿ ದೊಣ್ಣೆ ಹಿಡಿದು ನಿಂತ ಚೀನಾ ಯೋಧರು
ಭಾರತೀಯ ಸೇನೆಯು ಎಲ್‌ಎಸಿ ಒಳಗೆ ನುಸುಳುವ ಮೂಲಕ ಯಥಾಸ್ಥಿತಿಯನ್ನು ಕದಡಿದೆ. ಭಾರತವು ನಿರಂತರವಾಗಿ ಆಕ್ರಮಣಕಾರಿ ಕೃತ್ಯಗಳನ್ನು ಎಸಗುತ್ತಿದೆ. ರೆಜಾಂಗ್ ಲಾದಲ್ಲಿ ಮಾತ್ರವಲ್ಲದೆ ಪ್ಯಾಂಗೊಂಗ್ ತ್ಸೊ ಸರೋವರ ಬಳಿಯೂ ಇದೇ ರೀತಿ ಮಾಡುತ್ತಿದೆ ಎಂದು ಚೀನಾ ಪ್ರತ್ಯಾರೋಪ ಮಾಡಿತು.