ಕೇಂದ್ರ ಸಚಿವರ ಉಪಸ್ಥಿತಿಯ ಕಾರ್ಯಕ್ರಮದಲ್ಲಿ ಅವಾಂತರ!
ಗುವಾಹಟಿ, ಮೇ 3: ಇಂಡಿಯನ್ ಆಯಿಲ್ನ ಕಾರ್ಯಕ್ರಮವೊಂದರಲ್ಲಿ ಆಕಸ್ಮಿಕವಾಗಿ ಪೋರ್ನ್ ಕ್ಲಿಪ್ವೊಂದು ಪ್ರಸಾರವಾದ ಘಟನೆ ಶನಿವಾರ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಅಸ್ಸಾಂ ರಾಜ್ಯದ ತೀನ್ಸುಕಿಯಾ ನಗರದ ಹೋಟೆಲ್ ಮಿರಾನದಲ್ಲಿ ಮಿಥನಾಲ್ ಮಿಶ್ರಿತ ಎಂ-15 ಪೆಟ್ರೋಲ್ ಅನ್ನ ಪ್ರಯೋಗಾರ್ಥವಾಗಿ ಚಾಲನೆ ಮಾಡಲಾಗಿತ್ತು. ಈ ಉದ್ಘಾಟನಾ ಕಾರ್ಯಕ್ರಮದ ವೇಳೆ ಅಶ್ಲೀಲ ವಿಡಿಯೋ ಪ್ಲೇ ಆಗಿದೆ. ಕೇಂದ್ರ ಸಚಿವರು, ರಾಜ್ಯ ಸಚಿವರು ಹಾಗು ಇಂಡಿಯನ್ ಆಯಿಲ್ನ ಹಲವು ಗಣ್ಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾಗಲೀ ಮುಜುಗರದ ಘಟನೆ ನಡೆದಿದೆ.
ಕೇಂದ್ರ ಸಚಿವ ರಾಮೇಶ್ವರ್ ತೇಲಿ ಅವರು ಈ ಕಾರ್ಯಕ್ರಮ ಉದ್ಘಾಟಿಸಿದ್ದರು. ಅಸ್ಸಾಮ್ನ ಕಾರ್ಮಿಕ ಸಚಿವ ಸಂಜಯ್ ಕಿಸಾನ್ ಮೊದಲಾದವರು ಪಾಲ್ಗೊಂಡಿದ್ದರು. ಈ ವೇಳೆ, ವೇದಿಕೆಯ ಹಿಂದಿನ ಸ್ಕ್ರೀನ್ನಲ್ಲಿ ಕಾರ್ಯಕ್ರಮದ ಲೈವ್ ಫೂಟೇಜ್ ಪ್ರಸಾರ ಮಾಡಲಾಗುತ್ತಿತ್ತು. ಇಂಡಿಯನ್ ಆಯಿಲ್ ಸಂಸ್ಥೆಯ ಅಧಿಕಾರಿಯೊಬ್ಬರು ಸ್ಟೇಜ್ ಮೇಲೆ ಭಾಷಣ ಮಾಡತೊಡಗುತ್ತಿದ್ದಂತೆಯೇ ಹಿಂದಿನ ಪರದೆಯಲ್ಲಿ ಪೋರ್ನ್ ಕ್ಲಿಪ್ವೊಂದರ ಪ್ರಸಾರ ಆಗತೊಡಗಿತು.
ಯಾವುದೇ ಮುಸ್ಲಿಂ ಮಹಿಳೆ ಪತಿಗೆ 3 ಪತ್ನಿಯರು ಇರಲೆಂದು ಬಯಸಲ್ಲ: ಅಸ್ಸಾಂ ಸಿಎಂ
ಕಾರ್ಯಕ್ರಮದ ಸಂಘಟಕರು ಕೂಡಲೇ ಪರಿಸ್ಥಿತಿ ಸರಿಪಡಿಸಲು ಯತ್ನಿಸಿದರು. ಆದರೆ, ಕೆಲ ಕ್ಷಣಗಳವರೆಗೆ ಪೋರ್ನ್ ಪ್ರಸಾರವಾಗುವುದನ್ನು ತಪ್ಪಿಸಲು ಆಗಲಿಲ್ಲ. ಅಷ್ಟರಲ್ಲಾಗಲೇ ಕಾರ್ಯಕ್ರಮದಲ್ಲಿ ಇದ್ದವರು ತಮ್ಮ ಮೊಬೈಲ್ನಿಂದ ಆ ದೃಶ್ಯವನ್ನು ಸೆರೆಹಿಡಿದಾಗಿತ್ತು. ಸೋಷಿಯಲ್ ಮೀಡಿಯಾಗೂ ಕೆಲವರು ಪೋಸ್ಟ್ ಮಾಡಿದರು. ಆನ್ಲೈನ್ನಲ್ಲೂ ಈ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗುತ್ತಿತ್ತೆನ್ನಲಾಗಿದೆ.
ಕಾರ್ಯಕ್ರಮದಲ್ಲಿ ಪೋರ್ನ್ ವಿಡಿಯೋ ಪ್ರಸಾರವಾದ ಘಟನೆ ನಡೆದ ಬಳಿಕ ಅಸ್ಸಾಮ್ನ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಬಂದು ವಿಚಾರಣೆ ನಡೆಸಿದರು. ಬಳಿಕ ತೀನ್ಸುಕಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು.
ಅಲಿಗಢ್ ಧರ್ಮ ಸಂಸದ್: ಸಾಧ್ವಿ ಅನ್ನಪೂರ್ಣ ಭಾರತಿ ವಿವಾದಾತ್ಮಕ ಹೇಳಿಕೆ
ಝೂಮ್ ಮೀಟಿಂಗ್ನಲ್ಲಿ ಪಾಲ್ಗೊಂಡವರಲ್ಲೊಬ್ಬರಿಂದ ಈ ಕೃತ್ಯ:
ಇಂಡಿಯನ್ ಆಯಿಲ್ನ ಈ ಕಾರ್ಯಕ್ರಮವನ್ನು ಆನ್ಲೈನ್ನಲ್ಲೂ ಪ್ರಸಾರ ಮಾಡಲಾಗಿತ್ತು. "ಸಂಸ್ಥೆಯ ಅಧಿಕಾರಿಯೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಝೂಮ್ ಮೀಟಿಂಗ್ ಐಡಿ ಮತ್ತು ಪಾಸ್ಕೋಡ್ ಅನ್ನು ಹಾಕಿದ್ದರು. ಈ ವಿವರವನ್ನು ಉಪಯೋಗಿಸಿಕೊಂಡು ಝೂಮ್ ಮೀಟಿಂಗ್ಗೆ ಬಂದು ಯಾರೋ ದುಷ್ಕರ್ಮಿಯೊಬ್ಬ ಅಶ್ಲೀಲ ವಿಡಿಯೋ ಪ್ರಸಾರ ಮಾಡಿರಬಹುದು" ಎಂದು ತೀನ್ಸುಕಿಯಾ ಎಸ್ಪಿ ದೇಬೋಜಿತ್ ದೇವೋರಿ ಅವರು ಶಂಕಿಸಿದ್ದಾರೆ.
ಇಂಡಿಯನ್ ಅಯಿಲ್ನ ಎಂ-15 ಪೆಟ್ರೋಲ್ ಉದ್ಘಾಟನೆ ಮಾಡಿದ ಕೇಂದ್ರ ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ ಈ ಬಗ್ಗೆ ಪ್ರತಿಕ್ರಿಯಿಸಿ, "ಪೋರ್ನ್ ವಿಡಿಯೋ ಸ್ಕ್ರೀನ್ ಆದಾಗ ನಾನು ನೋಡಲಿಲ್ಲ. ನನ್ನ ಆಪ್ತಸಹಾಯಕರು ಈ ಬಗ್ಗೆ ನನಗೆ ಮಾಹಿತಿ ನೀಡಿದಾಗಲೇ ಗೊತ್ತಾಗಿದ್ದು. ಈ ಘಟನೆಯ ತನಿಖೆ ನಡೆಸಿ, ಇದರಲ್ಲಿ ಭಾಗಿಯಾದವರನ್ನ ಪತ್ತೆ ಮಾಡಿ ಸೂಕ್ತ ಶಿಕ್ಷೆ ವಿಧಿಸಬೇಕು" ಎಂದು ಹೇಳಿದ್ದಾರೆ.
ತೀನ್ಸುಕಿಯಾ ಜಿಲ್ಲಾ ಮ್ಯಾಜಿಸ್ಟ್ರೇಟರು ಘಟನೆಯ ತನಿಖೆಗೆ ಆದೇಶ ಮಾಡಿದ್ದಾರೆ. ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಂಜಿತ್ ಬರ್ಕಕಟಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ.
(ಒನ್ಇಂಡಿಯಾ ಸುದ್ದಿ)