ಭಾರತ: 49 ದಿನಗಳಲ್ಲಿ 1.90 ಕೋಟಿ ಜನರಿಗೆ ಕೊರೊನಾವೈರಸ್ ಲಸಿಕೆ
ನವದೆಹಲಿ, ಮಾರ್ಚ್.06: ಭಾರತದಲ್ಲಿ ಒಂದೇ ದಿನ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗಿದೆ. ಶುಕ್ರವಾರ ಸಂಜೆ 7 ಗಂಟೆ ವೇಳೆಗೆ ದೇಶದಲ್ಲಿ 10.34 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಭಾರತದಲ್ಲಿ 49 ದಿನಗಳಲ್ಲಿ 1,90,40,175 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ. 68,96,529 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 32,94,612 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 62,94,755 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 1,23,191 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ.
ಕೊರೊನಾ ಲಸಿಕೆ ಪಡೆಯುವ ಮುನ್ನ, ನಂತರ ಏನು ಮಾಡಬೇಕು?
ಭಾರತದಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಿದ ಮತ್ತು ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಿದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯನ್ನು ವಿತರಿಸಲಾಗುತ್ತಿದೆ. ಕಳೆದ ಜನವರಿ.16ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊದಲು ಕೊರೊನಾವೈರಸ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಅಂದು ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ವಿತರಿಸಲು ಆರಂಭಿಸಲಾಗಿತ್ತು. ಅದಾಗಿ ಫೆಬ್ರವರಿ.2ರಿಂದ ಎರಡನೇ ಡೋಸ್ ಲಸಿಕೆಯ ವಿತರಣೆ ಕಾರ್ಯಾರಂಭ ಮಾಡಲಾಗಿತ್ತು.
ಎರಡನೇ ಹಂತದ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಮಾರ್ಚ್.01ರಿಂದ ಆರಂಭವಾಗಿದ್ದು, 5 ದಿನದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ 21,17,862 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ಇದರ ಜೊತೆಗೆ 45 ವರ್ಷಕ್ಕಿಂತ ಮೇಲ್ಪಟ್ಟ 3,13,226 ಜನರಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ.
ಕಳೆದ 24 ಗಂಟೆಗಳಲ್ಲಿ ಯಾರಿಗೆ ಎಷ್ಟು ಲಸಿಕೆ?:
ಮೊದಲ ಡೋಸ್ | 2ನೇ ಡೋಸ್ | |
ಆರೋಗ್ಯ ಕಾರ್ಯಕರ್ತರು | 43446 | 153241 |
ಮೊದಲ ಶ್ರೇಣಿ ಕಾರ್ಮಿಕರು | 203824 | 55894 |
45 ರಿಂದ 60 ವರ್ಷದೊಳಗಿನವರು | 77325 | ---- |
60 ವರ್ಷ ಮೇಲ್ಪಟ್ಟವರು | 500942 | -- |
ಒಟ್ಟು ಕೊರೊನಾವೈರಸ್ ಲಸಿಕೆ | 825537 | 209135 |