ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Explained: ಭಾರತದಲ್ಲಿ ಕೊವಿಡ್-19 ನಿಯಂತ್ರಿಸಲು ಯಾವ ರಾಜ್ಯಗಳಲ್ಲಿ ಯಾವ ಮಾರ್ಗಸೂಚಿ?

|
Google Oneindia Kannada News

ನವದೆಹಲಿ, ಸಪ್ಟೆಂಬರ್ 4: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಹಲವು ರಾಜ್ಯಗಳು ಕಠಿಣ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ.

ಕೇರಳ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಒಡಿಶಾ ಮತ್ತು ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳಲ್ಲಿ ರಾತ್ರಿ ನಿಷೇಧಾಜ್ಞೆ ಜಾರಿಗೊಳಿಸುವ ಮೂಲಕ ಕೊವಿಡ್-19 ನಿಯಂತ್ರಿಸಲು ಸರ್ಕಾರಗಳು ಮುಂದಾಗಿವೆ. ಸೋಂಕಿನ ಮತ್ತಷ್ಟು ಹರಡುವಿಕೆಯನ್ನು ನಿಯಂತ್ರಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಬೆಂಗಳೂರಿನ ಶೇ.75ರಷ್ಟು ಜನರಲ್ಲಿ ಕೊವಿಡ್-19 ಪ್ರತಿಕಾಯ ಶಕ್ತಿ!ಬೆಂಗಳೂರಿನ ಶೇ.75ರಷ್ಟು ಜನರಲ್ಲಿ ಕೊವಿಡ್-19 ಪ್ರತಿಕಾಯ ಶಕ್ತಿ!

ರಾತ್ರಿ ಕರ್ಫ್ಯೂಗಳನ್ನು ಘೋಷಿಸುವುದರಿಂದ ಹಿಡಿದು ಬೇರೆ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ RT-PCR ಪರೀಕ್ಷೆಯ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸುವವರೆಗೆ ಹೊಸ ಮಾರ್ಗಸೂಚಿ ಜಾರಿಗೊಳಿಸಲಾಗುತ್ತಿದೆ. ಇದಲ್ಲದೆ, ಕೆಲವು ರಾಜ್ಯಗಳು ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳನ್ನು ಕಟ್ಟುನಿಟ್ಟಾದ ಕೋವಿಡ್ -19 ಶಿಷ್ಟಾಚಾರಗಳೊಂದಿಗೆ ಪುನರಾರಂಭಿಸಿವೆ. ಕೊವಿಡ್-19 ಹರಡುವುದನ್ನು ತಡೆಯಲು ಇತ್ತೀಚೆಗೆ ಕಠಿಣ ಮಾರ್ಗಸೂಚಿಗಳನ್ನು ಘೋಷಿಸಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ ಇಲ್ಲಿದೆ.

ಕೇರಳ

ಕೇರಳ

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಂಪೂರ್ಣ ಲಾಕ್‌ಡೌನ್‌ ಜಾರಿಗೊಳಿಸುವುದಿಲ್ಲ, ಅದರಿಂದ ಆರ್ಥಿಕತೆಗೆ ಹೊಡೆತ ಬೀಳುವ ಅಪಾಯವಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಘೋಷಿಸಿದ್ದಾರೆ. ಓಣಂ ಹಬ್ಬದ ದೃಷ್ಟಿಯಿಂದ ಆಗಸ್ಟ್ 15 ಮತ್ತು ಆಗಸ್ಟ್ 23 ರಂದು ಎರಡು ವಾರಗಳವರೆಗೆ ಕೇರಳದಲ್ಲಿ ಭಾನುವಾರ ಲಾಕ್‌ಡೌನ್‌ಗಳನ್ನು ಸಡಿಲಗೊಳಿಸಿತ್ತು. ಆದರೆ ಆಗಸ್ಟ್ 23ರಂದು ಓಣಂ ಹಬ್ಬದ ನಂತರ ಪ್ರತಿನಿತ್ಯ ಕೋವಿಡ್ -19 ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ಮುಖ್ಯಮಂತ್ರಿ ಭಾನುವಾರ ರಾಜ್ಯದಲ್ಲಿ ಲಾಕ್‌ಡೌನ್ ವಿಧಿಸಿದ್ದರು. ಕಳೆದ ಒಂದು ವಾರದಿಂದ ರಾಜ್ಯದಲ್ಲಿ 30,000ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಈ ನಿಟ್ಟಿನಲ್ಲಿ ಜಾರಿಗೊಳಿಸಿರುವ ಕೊವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರಿಗೆ ದಂಡವನ್ನು ವಿಧಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಮಹಾರಾಷ್ಟ್ರ

ಮಹಾರಾಷ್ಟ್ರ

ಕೊರೊನಾವೈರಸ್ ಸೋಂಕಿನ ಹರಡುವಿಕೆ ನಡುವೆ ಮಹಾರಾಷ್ಟ್ರದಲ್ಲಿ ಮತ್ತೊಂದು ಸುತ್ತಿನ ಲಾಕ್‌ಡೌನ್‌ ಜಾರಿಗೊಳಿಸುವುದಿಲ್ಲ ಎಂದು ಆರೋಗ್ಯ ಸಚಿವ ರಾಜೇಶ್ ತೊಪೆ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಸಾರ್ವಜನಿಕರು ಶಿಸ್ತುಬದ್ಧವಾಗಿ ಕೊವಿಡ್-19 ನಿಯಮಗಳನ್ನು ಪಾಲನೆ ಮಾಡಬೇಕು. ಈ ವಾರ ಮುಂಬೈ ಸೇರಿದಂತೆ ಮಹಾರಾಷ್ಟ್ರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ. ಸರ್ಕಾರದ ಆದೇಶದ ಪ್ರಕಾರ, ಅಂತಾರಾಷ್ಟ್ರೀಯ ಪ್ರಯಾಣಿಕರು ಎರಡೂ ಡೋಸ್ ಲಸಿಕೆ ಪಡೆದುಕೊಂಡಿರಬೇಕು, ಅಥವಾ 72 ಗಂಟೆಗಳ ಒಳಗೆ ನಡೆಸಿದ RT-PCR ಪರೀಕ್ಷೆಯ ನೆಗೆಟಿವ್ ವರದಿಯನ್ನು ತೆಗೆದುಕೊಂಡು ಬರುವುದನ್ನು ಕಡ್ಡಾಯಗೊಳಿಸಲಾಗಿದೆ.

ಕರ್ನಾಟಕ

ಕರ್ನಾಟಕ

ಕೊವಿಡ್-19 ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರ ಕೂಡ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಕೇರಳದಿಂದ ಆಗಮಿಸುವ ಪ್ರಯಾಣಿಕರಿಗೆ ಒಂದು ವಾರಗಳ ಕಾಲ ಸಾಂಸ್ಥಿಕ ಕ್ವಾರೆಂಟೈನ್ ಅನ್ನು ಕಡ್ಡಾಯಗೊಳಿಸಲಾಗಿದೆ. ಏಳು ದಿನಗಳ ದಿಗ್ಬಂಧನದ ನಂತರದಲ್ಲಿ ವ್ಯಕ್ತಿಯು ಕೊವಿಡ್-19 ಎರಡೂ ಡೋಸ್ ಲಸಿಕೆ ಪಡೆದ ಪ್ರಮಾಣಪತ್ರ ಅಥವಾ 72 ಗಂಟೆಗಳ ಒಳಗೆ ನಡೆಸಿದ RT-PCR ಪರೀಕ್ಷೆಯ ನೆಗೆಟಿವ್ ವರದಿಯನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಕೊಡಗು, ಹಾಸನ, ದಕ್ಷಿಣ ಕನ್ನಡ ಮತ್ತು ಉಡುಪಿ ಹೊರತಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಾತ್ರಿ ನಿಷೇಧಾಜ್ಞೆಯನ್ನು ತೆರವುಗೊಳಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮದುವೆಗಳಲ್ಲಿ ಸಭಾಂಗಣದ ಶೇ..50ರಷ್ಟು ಮಂದಿಗೆ ಅಥವಾ ಗರಿಷ್ಠ 400 ಮಂದಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ.

ತಮಿಳುನಾಡು

ತಮಿಳುನಾಡು

ಕೊರೊನಾವೈರಸ್ ನಿಯಂತ್ರಿಸುವ ಉದ್ದೇಶದಿಂದ ತಮಿಳುನಾಡು ಸರ್ಕಾರವು ಪ್ರಸ್ತುತ ಜಾರಿಯಲ್ಲಿರುವ ನಿರ್ಬಂಧಗಳನ್ನು ಸೆಪ್ಟೆಂಬರ್ 15ರವರೆಗೂ ವಿಸ್ತರಿಸಿದೆ. ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ, ರಾಜ್ಯದ ಸಮುದ್ರದ ಬೀಚ್ ಗಳಲ್ಲಿ ಭಾನುವಾರ ಯಾವುದೇ ರೀತಿ ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ತೆರೆದಿರುವುದಿಲ್ಲ. ಇದಲ್ಲದೆ, ಸಾರ್ವಜನಿಕರಿಗೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ಪ್ರಾರ್ಥನಾ ಸ್ಥಳಗಳಿಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಧಾರ್ಮಿಕ ಕೂಟಗಳು ಮತ್ತು ಕಾರ್ಯಕ್ರಮಗಳ ಮೇಲಿನ ನಿಷೇಧ ಮುಂದುವರಿಯಲಿದೆ ಎಂದು ರಾಜ್ಯವು ಆದೇಶದಲ್ಲಿ ತಿಳಿಸಿದೆ. ಆದಾಗ್ಯೂ, ಸೆಪ್ಟೆಂಬರ್ 1 ರಿಂದ ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲಾಗಿದೆ.

ಅಸ್ಸಾಂ

ಅಸ್ಸಾಂ

ಎರಡೂ ಡೋಸ್ ಲಸಿಕೆ ಪಡೆದುಕೊಂಡಿರುವ ಅಥವಾ 72 ಗಂಟೆಗಳ ಒಳಗೆ ನಡೆಸಿದ RT-PCR ಪರೀಕ್ಷೆಯ ನೆಗೆಟಿವ್ ವರದಿಯನ್ನು ತೆಗೆದುಕೊಂಡು ಬರುವ ಪ್ರಯಾಣಿಕರಿಗೆ ಮಾತ್ರ ವಿಮಾನ ನಿಲ್ದಾಣ, ರೈಲ್ವೆ ಮತ್ತು ರಾಜ್ಯದ ಗಡಿಯಲ್ಲಿ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಒಂದು ಡೋಸ್ ಲಸಿಕೆ ಪಡೆದುಕೊಂಡಿರುವ ಅಥವಾ ಯಾವುದೇ ಲಸಿಕೆ ಪಡೆದುಕೊಳ್ಳದ ಇಲ್ಲವೇ ಎರಡೂ ಡೋಸ್ ಲಸಿಕೆಯನ್ನು ಪಡೆದ ಹೊರತಾಗಿಯೂ ಸೋಂಕಿನ ಲಕ್ಷಣಗಳನ್ನು ಹೊಂದಿರುವ ಪ್ರಯಾಣಿಕರು ತಮ್ಮ ವೆಚ್ಚದಲ್ಲಿ RT-PCR ಪರೀಕ್ಷೆಗೆ ಒಳಪಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಒಡಿಶಾ

ಒಡಿಶಾ

ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಇಳಿಮುಖವಾಗುತ್ತಿರುವುದರ ನಡುವೆಯೂ ಒಡಿಶಾ ಸರ್ಕಾರವು ಆಗಸ್ಟ್ 31ರಂದು ರಾಜ್ಯದಲ್ಲಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಪ್ಟೆಂಬರ್ ತಿಂಗಳಿನಲ್ಲಿ ರಾಜ್ಯವು ಯಾವುದೇ ರೀತಿ ವಾರಾಂತ್ಯದ ನಿಷೇಧಾಜ್ಞೆಗೆ ಒಳಪಡುವುದಿಲ್ಲ. ಆದರೆ ನಗರ ಪ್ರದೇಶಗಳಲ್ಲಿ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೂ ರಾತ್ರಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗುತ್ತದೆ. ಸಪ್ಟೆಂಬರ್ 1 ರಿಂದ ಆಕ್ಟೋಬರ್ 1ರವರೆಗೂ ಈ ಹೊಸ ಮಾರ್ಗಸೂಚಿಗಳು ಜಾರಿಯಲ್ಲಿ ಇರಲಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ದೇಶದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಏರಿಕೆ

ದೇಶದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಏರಿಕೆ

ಎರಡು ತಿಂಗಳ ನಂತರ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದೆ. ಕಳೆದ ಎರಡ್ಮೂರು ದಿನಗಳಿಂದ ಪ್ರತಿನಿತ್ಯ ಹೊಸ ಪ್ರಕರಣಗಳ ಸಂಖ್ಯೆ 45 ಸಾವಿರದ ಗಡಿ ದಾಟುತ್ತಿದೆ.ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 45,352 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 34,791 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಇದೇ ಅವಧಿಯಲ್ಲಿ 366 ಜನರು ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ.ಶುಕ್ರವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,99,778ಕ್ಕೆ ಏರಿಕೆಯಾಗಿದೆ. ಇದುವರೆಗೂ 3,20,63,616 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಗೆ ಬಲಿಯಾದವರ ಸಂಖ್ಯೆ 4,39,895ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

English summary
How States Impose Restrictions to Control Coronavirus Surge; Here Read the List And Explanation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X