ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೊರೊನಾವೈರಸ್ ಏರಿಕೆ ಸೂಚನೆ ನೀಡುತ್ತಿದೆಯಾ ಆರ್-ಮೌಲ್ಯ!?

|
Google Oneindia Kannada News

ನವದೆಹಲಿ, ಜುಲೈ 30: ಭಾರತದಲ್ಲಿ ಒಂದೇ ದಿನ 44,230 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಮೂರು ವಾರಗಳಲ್ಲೇ ಅತಿಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗಿವೆ. ಕೊವಿಡ್-19 ಸೋಂಕಿನ ಮೂರನೇ ಅಲೆಯ ಭೀತಿಯನ್ನು ಇದೇ ಅಂಕಿ-ಸಂಖ್ಯೆಗಳು ಹುಟ್ಟು ಹಾಕುತ್ತಿವೆ.

ದೇಶದ ಆರ್-ಮೌಲ್ಯದಿಂದಾಗಿ ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಹರಡುವಿಕೆ ವೇಗ ಎಷ್ಟರ ಮಟ್ಟಿಗೆ ಸ್ಥಿರವಾಗಿ ಹೆಚ್ಚಳವಾಗುತ್ತಿದೆ ಎಂಬುದನ್ನು ಸೂಚಿಸುತ್ತಿದೆ. ಕೇರಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣಗಳ ಏರಿಕೆಗೆ ಇದೇ ಆರ್-ಮೌಲ್ಯವು ಕೈಗನ್ನಡಿಯಂತೆ ಗೋಚರಿಸುತ್ತಿದೆ. ಚೆನ್ನೈನಲ್ಲಿರುವ ಗಣಿತ ವಿಜ್ಞಾನ ಸಂಸ್ಥೆಯ ವಿಶ್ಲೇಷಕರು ಚೆನ್ನೈ, ಮುಂಬೈ ಮತ್ತು ದೆಹಲಿ ಸೇರಿದಂತೆ ಮೆಟ್ರೋ ಸಿಟಿಗಳಲ್ಲಿನ ಆರ್-ಮೌಲ್ಯದ ಬಗ್ಗೆ ವಿಶ್ಲೇಷಿಸಲಾಗುತ್ತಿದೆ.

ಮೊದಲು ಓದಿ: ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳ ಏರಿಕೆಗೆ ಕಾರಣವೇನು? ಮೊದಲು ಓದಿ: ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳ ಏರಿಕೆಗೆ ಕಾರಣವೇನು?

ಭಾರತದಲ್ಲಿ ಕೊರೊನಾವೈರಸ್ ಹೆಚ್ಚಳಕ್ಕೆ ಆರ್-ಮೌಲ್ಯ ಹೇಗೆ ಕಾರಣವಾಗುತ್ತದೆ. ಅಸಲಿಗೆ ಈ ಆರ್-ಮೌಲ್ಯ ಎಂದರೇನು, ಭಾರತದಲ್ಲಿ ಆರ್-ಮೌಲ್ಯದ ಪ್ರಮಾಣ ಎಷ್ಟರ ಮಟ್ಟಿಗಿದೆ. ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಅಂಕಿ-ಸಂಖ್ಯೆ ಮತ್ತು ಏರಿಳಿತದ ಜೊತೆಗೆ ಆರ್-ಮೌಲ್ಯದ ಕುರಿತು ಒಂದು ವಿಸ್ತೃತ ವರದಿಗಾಗಿ ಮುಂದೆ ಓದಿ.

ಆರ್-ಮೌಲ್ಯ ಎಂಬುದರ ಅರ್ಥ?

ಆರ್-ಮೌಲ್ಯ ಎಂಬುದರ ಅರ್ಥ?

ಒಂದು ವೇಳೆ ಆರ್-ಮೌಲ್ಯವು 0.95 ಎಂಬುದರ ಅರ್ಥವು ಹೀಗಿದೆ. ಸರಾಸರಿ 100 ಮಂದಿ ಕೊರೊನಾವೈರಸ್ ಸೋಂಕಿತರಲ್ಲಿ 95 ಮಂದಿ ವ್ಯಕ್ತಿಗಳ ಸಂಪರ್ಕಕ್ಕೆ ಬಂದಿರುತ್ತಾರೆ. ಆರ್-ಮೌಲ್ಯವು 1ಕ್ಕಿಂತ ಕಡಿಮೆಯಾಗಿದ್ದರೆ, ಹೊಸದಾಗಿ ಸೋಂಕಿತರ ಸಂಖ್ಯೆಯು ಈ ಹಿಂದಿನ ಹೊಸ ಸೋಂಕಿತರ ಸಂಖ್ಯೆಗಿಂತ ಇಳಿಮುಖವಾಗಿರುತ್ತದೆ. ಆರ್-ಮೌಲ್ಯ ಕಡಿಮೆಯಾಗಿದೆ ಹಾಗೂ ಸೋಂಕಿನ ಹರಡುವಿಕೆ ಪ್ರಮಾಣ ಕ್ಷೀಣಿಸುತ್ತಿದೆ ಎಂದರ್ಥ. ಅದೇ ರೀತಿ ಆರ್-ಮೌಲ್ಯವು 1ಕ್ಕಿಂತ ಹೆಚ್ಚಾಗಿದ್ದರೆ, ನಂತರದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಾಗುತ್ತಿದ್ದು ಇದನ್ನೇ ಸಾಂಕ್ರಾಮಿಕ ಹಂತ ಎಂದು ಕರೆಯಲಾಗುತ್ತದೆ.

ಸಾಮಾನ್ಯವಾಗಿ ಪ್ರತಿನಿತ್ಯ ವರದಿಯಾಗುವ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ ಒಂದೇ ಆಗಿರುತ್ತದೆ. ಯಾವಾಗ ಸಕ್ರಿಯ ಪ್ರಕರಣಗಳ ಸಂಖ್ಯೆಯು ನೂರರ ಅಂತರದಲ್ಲಿದ್ದು, ಆರ್-ಮೌಲ್ಯ 1ರ ಸಮೀಪದಲ್ಲಿದ್ದರೆ ಸುಲಭವಾಗಿ ಸೋಂಕನ್ನು ನಿಯಂತ್ರಿಸಬಹುದು," ಪಿಟಿಐ ತಂಡದ ಗಣಿತ ವಿಜ್ಞಾನ ಸಂಸ್ಥೆಯ ಸೀತಾಭ್ರಾ ಸಿನ್ಹಾ ಹೇಳಿದ್ದಾರೆ.

ದೇಶದಲ್ಲಿ ಎಷ್ಟಿದೆ ಆರ್-ಮೌಲ್ಯದ ಪ್ರಮಾಣ?

ದೇಶದಲ್ಲಿ ಎಷ್ಟಿದೆ ಆರ್-ಮೌಲ್ಯದ ಪ್ರಮಾಣ?

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಹಾವಳಿ ಹೆಚ್ಚಾಗಿದ್ದ ಮಾರ್ಚ್ 9, ಏಪ್ರಿಲ್ 21ರ ಅವಧಿಯಲ್ಲಿ ದೇಶದ ಆರ್-ಮೌಲ್ಯವು 1.37ರಷ್ಟಿದೆ. ಏಪ್ರಿಲ್ 24ರಿಂದ ಮೇ 1ರ ಅವಧಿಯಲ್ಲಿ ಈ ಪ್ರಮಾಣವು 1.18ಕ್ಕೆ ಇಳಿಕೆಯಾಯಿತು. ಏಪ್ರಿಲ್ 29 ರಿಂದ ಮೇ 7ರ ಅವಧಿಯಲ್ಲಿ ಆರ್-ಮೌಲ್ಯವು 1.1ರ ಅಂತರದಲ್ಲಿದ್ದು ಎಂದು ವಿಶ್ಲೇಷಕರು ತಿಳಿಸಿದ್ದಾರೆ. ಮೇ 9 ಮತ್ತು 11ರ ಮಧ್ಯದಲ್ಲಿ ಆರ್-ಮೌಲ್ಯ 0.98ರಷ್ಟಿತ್ತು. ಮೇ 14ರಿಂದ ಮೇ 30ರ ಸಮಯದಲ್ಲಿ ಅದು 0.88ಕ್ಕೆ ಇಳಿಕೆಯಾಯಿತು. ಮೇ 15 ರಿಂದ ಜೂನ್ 26ರ ಅವಧಿಯಲ್ಲಿ ಆರ್- ಮೌಲ್ಯವು 0.78ರಷ್ಟಿದೆ. ಜೂನ್ 20 ರಿಂದ ಜುಲೈ 7ರ ಅವಧಿಯಲ್ಲಿ 0.88ರಷ್ಟಿದ್ದು, ಜುಲೈ 3ರಿಂದ ಜುಲೈ 22ರ ಅವಧಿಯಲ್ಲಿ 0.95ರಷ್ಟಿದೆ.

ಕೇರಳದಲ್ಲಿ ಸೃಷ್ಟಿಯಾದ ಟ್ರೆಂಡ್ ಬಗ್ಗೆ ಆತಂಕ

ಕೇರಳದಲ್ಲಿ ಸೃಷ್ಟಿಯಾದ ಟ್ರೆಂಡ್ ಬಗ್ಗೆ ಆತಂಕ

"ಭಾರತದಲ್ಲೇ ಅತಿಹೆಚ್ಚು ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಕೇರಳದಲ್ಲಿ ವರದಿಯಾಗಿದ್ದು, ಅಲ್ಲಿ ಆರ್-ಮೌಲ್ಯವು 1.11ರಷ್ಟಿದೆ. ಮುಂದಿನ ಕೆಲವೇ ಕೆಲವು ವಾರಗಳಲ್ಲಿ ಇದು ಇಮ್ಮಡಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈಶಾನ್ಯ ಭಾಗದ ಹಲವು ರಾಜ್ಯಗಳು ತುಂಬಾ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಅಲ್ಲಿ ಆರ್-ಮೌಲ್ಯವು 1ಕ್ಕಿಂತ ಹೆಚ್ಚಾಗಿದೆ," ಎಂದು ಸಿನ್ಹಾ ಹೇಳಿದ್ದಾರೆ.

ದೇಶದಲ್ಲಿ ಅತಿಹೆಚ್ಚು ಕೊವಿಡ್-19 ಪ್ರಕರಣಗಳನ್ನು ದಾಖಲಿಸುತ್ತಿರುವ ಕೇರಳದಲ್ಲಿ ಪರಿಸ್ಥಿತಿ ನಿರ್ವಹಣೆಗಾಗಿ ಆರು ಮಂದಿ ಸದಸ್ಯರ ತಂಡವನ್ನು ಕಳುಹಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಗುರುವಾರ ತಿಳಿಸಿತ್ತು. ಶುಕ್ರವಾರ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಎಸ್ ಕೆ ಸಿಂಗ್ ನೇತೃತ್ವದ ತಂಡವು ಕೇರಳದಲ್ಲಿ ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳನ್ನು ವರದಿ ಮಾಡುತ್ತಿದ್ದ ಜಿಲ್ಲೆಗಳು ಮತ್ತು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ದೇಶದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವ ಈ ಸಂದರ್ಭದಲ್ಲಿ ಪಾಸಿಟಿವಿಟಿ ಪ್ರಮಾಣ ಹೆಚ್ಚುತ್ತಿರುವುದು ಹೊಸ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಈಶಾನ್ಯ ರಾಜ್ಯಗಳ ಪೈಕಿ ತ್ರಿಪುರಾದಲ್ಲಿ ಮಾತ್ರ ಆರ್-ಮೌಲ್ಯವು 1ಕ್ಕಿಂತ ಕಡಿಮೆಯಾಗಿದೆ. ಮಣಿಪುರ ಆರ್-ಮೌಲ್ಯವು 1ಕ್ಕೆ ಸನ್ನಿಹಿತದಲ್ಲಿದ್ದು, ಉತ್ತರಾಖಂಡದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.

ಕೇರಳದಲ್ಲಿ ಕೊರೊನಾವೈರಸ್ ಕಥೆ:

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 20,772 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, 14,651 ಸೋಂಕಿತರು ಗುಣಮುಖರಾಗಿದ್ದಾರೆ. ಈ ಅವಧಿಯಲ್ಲಿ 116 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಇದರ ಹೊರತಾಗಿ ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 33,70,137ರಷ್ಟಿದ್ದು, ಈ ಪೈಕಿ 1,60,821 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಮೆಟ್ರೋ ಸಿಟಿಗಳಲ್ಲಿ ಆರ್-ಮೌಲ್ಯದ ಪ್ರಮಾಣ?

ಮೆಟ್ರೋ ಸಿಟಿಗಳಲ್ಲಿ ಆರ್-ಮೌಲ್ಯದ ಪ್ರಮಾಣ?

ಭಾರತದ ಪ್ರಮುಖ ಮೆಟ್ರೋ ಸಿಟಿಗಳ ಪೈಕಿ ನವದೆಹಲಿಯಲ್ಲಿ ಆರ್-ಮೌಲ್ಯವು ಸ್ವಲ್ಪಮಟ್ಟಿಗೆ ನಿಯಂತ್ರಣದಲ್ಲಿದೆ. ರಾಷ್ಟ್ರ ರಾಜಧಾನಿಯಲ್ಲಿ ಜೂನ್ 21 ರಿಂದ 26ರ ಅವಧಿಯಲ್ಲಿ 0.8ರಷ್ಟಿದ್ದು, ಜೂನ್ 28ರಿಂದ ಜುಲೈ 6ರ ಅವಧಿ ವೇಳೆಗೆ ಅದು 0.66ಕ್ಕೆ ಇಳಿಕೆಯಾಗಿತ್ತು. ಆದರೆ ಜುಲೈ 4 ರಿಂದ 20ರ ಅವಧಿಯಲ್ಲಿ ಅದು ಮತ್ತೆ 0.84ಕ್ಕೆ ಏರಿಕೆಯಾಯಿತು. ನವದೆಹಲಿಯಲ್ಲಿ ಶುಕ್ರವಾರ ಒಂದೇ ದಿನ 63 ಹೊಸ ಪ್ರಕರಣಗಳು ವರದಿಯಾಗಿದ್ದು, 34 ಸೋಂಕಿತರು ಗುಣಮುಖರಾದರೆ, ಮೂವರು ಮಹಾಮಾರಿಗೆ ಬಲಿಯಾಗಿದ್ದರು.

ಕೊರೊನಾವೈರಸ್ ಸಕ್ರಿಯ ಪ್ರಕರಣಗಳ ಸಂಖ್ಯೆಯು ಸ್ಥಿರವಾಗಿದ್ದು, ಆರ್-ಮೌಲ್ಯವು 1ರಷ್ಟಿದ್ದ ಸಂದರ್ಭದಲ್ಲಿ ನವದೆಹಲಿಯಲ್ಲಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದು ಎಂಬುದರ ಬಗ್ಗೆ ಸಿನ್ಹಾ ಉದಾಹರಣೆ ಸಮೇತ ವಿವರಿಸುಿದ್ದಾರೆ. ಆರ್-ಮೌಲ್ಯವು 1ರ ಆಸುಪಾಸಿನಲ್ಲಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯು 100ರ ಹಂತದಲ್ಲಿದ್ದರೆ ಪರಿಸ್ಥಿತಿಯು ಕೈತಪ್ಪಿ ಹೋಗುವುದುಕ್ಕೂ ಮೊದಲೇ ಹಿಡಿತ ಸಾಧಿಸಿಕೊಳ್ಳುವುದಕ್ಕೆ ಸಾಧ್ಯವಿದೆ. ಅದೇ ಒಂದು ಬಾರಿ ಸಕ್ರಿಯ ಪ್ರಕರಣಗಳ ಸಂಖ್ಯೆಯು 5 ಸಾವಿರಕ್ಕಿಂತ ಹೆಚ್ಚಾಗಿ ಆರ್-ಮೌಲ್ಯವು 1ಕ್ಕಿಂತ ಅಧಿಕವಾದರೆ ಪರಿಸ್ಥಿತಿ ಮತ್ತಷ್ಟು ಅಪಾಯಕಾರಿಯಾಗುತ್ತದೆ," ಎಂದು ಎಚ್ಚರಿಸಿದ್ದಾರೆ.
* ಪುಣೆಯಲ್ಲಿ ಜುಲೈ 11 ರಿಂದ 13ರ ಅವಧಿಯಲ್ಲಿ ಆರ್-ಮೌಲ್ಯವು 0.85ರಷ್ಟಿದ್ದು, ಜುಲೈ 15 ರಿಂದ 20ರ ಅವಧಿಯಲ್ಲಿ 0.89ರಷ್ಟಿತ್ತು.
* ಬೆಂಗಳೂರಿನಲ್ಲಿ ಜುಲೈ 7 ರಿಂದ 13ರ ಅವಧಿಯಲ್ಲಿ ಆರ್-ಮೌಲ್ಯವು 0.92ರಷ್ಟಿದ್ದು, ಜುಲೈ 13ರಿಂದ 17ರ ಅವಧಿಯಲ್ಲಿ ಆರ್-ಮೌಲ್ಯವು 0.95ರಷ್ಟಿದೆ. ಅದೇ ಜುಲೈ 17 ರಿಂದ 23ರ ಅವಧಿಯಲ್ಲಿ ಅದು 0.72ರಷ್ಟಿತ್ತು.
* ಮುಂಬೈನಲ್ಲಿ ಜುಲೈ 2ರಿಂದ 4ರ ಅವಧಿಯಲ್ಲಿ ಆರ್-ಮೌಲ್ಯವು 0.96ರಷ್ಟಿದ್ದು, ಜುಲೈ 6 ರಿಂದ 9ರ ಅವಧಿಯಲ್ಲಿ 0.89ಕ್ಕೆ ಕುಸಿಯಿತು. ಜುಲೈ 22 ರಿಂದ 24ರ ಅವಧಿಯಲ್ಲಿ ಅದೇ ಆರ್-ಮೌಲ್ಯವು 0.74ರಷ್ಟಾಯಿತು.
* ಚೆನ್ನೈನಲ್ಲಿ ಜೂನ್ 29 ರಿಂದ ಜುಲೈ 7ರ ಅವಧಿಯಲ್ಲಿ ಆರ್-ಮೌಲ್ಯವು 0.63ರಷ್ಟಿದ್ದು, ಜುಲೈ 16 ರಿಂದ 19ರ ಅವಧಿಯಲ್ಲಿ ಅದು 1.05ಕ್ಕೆ ಏರಿಕೆಯಾಯಿತು. ಜುಲೈ 21 ರಿಂದ 24ರ ಅವಧಿಯಲ್ಲಿ ಅದೇ ಮೌಲ್ಯವು 0.94ಕ್ಕೆ ಕುಸಿಯಿತು.
* ಕೋಲ್ಕತ್ತಾದಲ್ಲಿ ಜುಲೈ 1 ರಿಂದ 13ರ ಅವಧಿಯಲ್ಲಿ 0.80ರಷ್ಟಿದ್ದ ಆರ್ ಮೌಲ್ಯವು ಜುಲೈ 1 ರಿಂದ 13ರ ಅವಧಿಯಲ್ಲಿ 0.91ಕ್ಕೆ ಏರಿಕೆಯಾಯಿತು. ಅದೇ ಮೌಲ್ಯವು ಜುಲೈ 12 ರಿಂದ 17ರ ಅವಧಿಯಲ್ಲಿ 0.86ಕ್ಕೆ ಇಳಿಕೆಯಾಯಿತು.

ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಏರಿಳಿತ

ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಏರಿಳಿತ

ಕೊರೊನಾವೈರಸ್ ಮೂರನೇ ಅಲೆಯ ಭೀತಿ ಸೃಷ್ಟಿಯಾಗಿರುವ ಭಾರತದಲ್ಲಿ ಒಂದೇ ದಿನ 44,230 ಮಂದಿಗೆ ಸೋಂಕು ತಗುಲಿದ್ದು, ಇದೇ ಅವಧಿಯಲ್ಲಿ 42,360 ಸೋಂಕಿತರು ಗುಣಮುಖರಾಗಿದ್ದರೆ, 555 ಜನರು ಪ್ರಾಣ ಬಿಟ್ಟಿದ್ದಾರೆ. ಭಾರತದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,15,72,344ಕ್ಕೆ ಏರಿಕೆಯಾಗಿದ್ದು, 3,07,43,972 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೂ 4,23,217 ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದು, 4,05,155 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಈ ಹಂತದಲ್ಲಿ ಕೊವಿಡ್-19 ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 196 ದಿನಗಳಲ್ಲಿ ಈವರೆಗೂ 46 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ. ಶುಕ್ರವಾರ ರಾತ್ರಿ 7 ಗಂಟೆ ವೇಳೆಗೆ 44,38,901 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ. ದೇಶದಲ್ಲಿ ಈವರೆಗೂ 46,06,56,534 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ.

English summary
Highest Number of New Covid-19 Cases in India in 3 weeks as R value rise. Read Here To Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X