ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಭಾಷ್ಯ ಬರೆದಿರುವ ವಿಪಕ್ಷಗಳ ಮೈತ್ರಿ ಬಿಜೆಪಿಗೆ ಎಚ್ಚರಿಕೆ ಗಂಟೆ!

By Prasad
|
Google Oneindia Kannada News

ಪ್ರಾದೇಶಿಕ ಪಕ್ಷಗಳೆಂದರೆ ಮೂಗು ಮುರಿಯುತ್ತಿದ್ದ, ನಿಕೃಷ್ಟವಾಗಿ ನೋಡುತ್ತಿದ್ದ, ಈ ದೇಶ ಆಳುವ ಹಕ್ಕು ತಮಗೆ ಮಾತ್ರ ಇರುವುದು ಎಂಬಂತೆ ದಾರ್ಷ್ಟ್ಯ ಮೆರೆಯುತ್ತಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಕಡೆಗೂ ತನ್ನ ಹಮ್ಮುಬಿಮ್ಮುಗಳನ್ನೆಲ್ಲ ಬದಿಗಿಟ್ಟು ಒಂದು ಗಟ್ಟಿ ನಿರ್ಧಾರಕ್ಕೆ ಬಂದಿದೆ.

ಅದೆಂದರೆ, ಆ ಸ್ಥಳೀಯ ಪಕ್ಷಗಳ ವಿರುದ್ಧ ವೈರತ್ವವೇ ಇರಲಿ, ಜಿದ್ದಾಜಿದ್ದಿ ಯುದ್ಧವನ್ನೇ ಮಾಡಿರಲಿ, ನಖಶಿಖಾಂತ ಉರಿದುಬೀಳುತ್ತಿರಲಿ, ತಮ್ಮ ತತ್ತ್ವ ಆದರ್ಶಗಳನ್ನು ಬಲಿ ಕೊಟ್ಟಾದರೂ ಸರಿ, ಅವರ ಸಿದ್ಧಾಂತಗಳನ್ನು ಒಪ್ಪಿಕೊಂಡಾದರೂ ಸರಿ, ಆ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು.

ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ?ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ?

ಉದ್ದೇಶ ಒಂದೇ, ಲೋಕಸಭೆ ಮತ್ತು ಕೆಲ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ, ಸಾಕಷ್ಟು ಬಲಾಢ್ಯವಾಗಿರುವ ಭಾರತೀಯ ಜನತಾ ಪಕ್ಷವನ್ನು ಮತ್ತೆ ಮೇಲೇಳದಂತೆ ಪ್ರಾದೇಶಿಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹಣಿದು ಹಾಕುವುದು. ಈ ಪ್ರಯತ್ನದಲ್ಲಿ ಕಾಂಗ್ರೆಸ್ ಈಗಾಗಲೆ ಸಾಕಷ್ಟು ಯಶಸ್ಸನ್ನೂ ಕಂಡಿದೆ.

ಈ ಚಿಂತನೆಗೆ ಮತ್ತು ಭವ್ಯ ರಾಜಕೀಯ ಬದಲಾವಣೆಗೆ ವೇದಿಕೆ ಕಲ್ಪಿಸಿದ್ದು ಕರ್ನಾಟಕ ವಿಧಾನಸಭೆ ಚುನಾವಣೆ 2018. ಚುನಾವಣೆಗೆ ಮುನ್ನ ಅಲ್ಲದಿದ್ದರೂ, ಚುನಾವಣೆಯ ನಂತರ ನಡೆದಿರುವ ಹೊಂದಾಣಿಕೆಗಳು, ಮೈತ್ರಿಕೂಟಗಳು, ಒಗ್ಗಟ್ಟಿನ ಪ್ರದರ್ಶನಗಳು, ಮುಂದೆ ನಡೆಯಲಿರುವ ರಾಜಕೀಯ ಚಟುವಟಿಕೆಗಳಿಗೆ ಕರ್ನಾಟಕ ಮುನ್ನುಡಿ ಹಾಕಿದೆ.

ಟೈಮ್ಸ್ ನೌ ಸಮೀಕ್ಷೆ: ಈಗ ಚುನಾವಣೆ ನಡೆದರೆ ಬಿಜೆಪಿಗೆ ಭರ್ಜರಿ ಬಹುಮತಟೈಮ್ಸ್ ನೌ ಸಮೀಕ್ಷೆ: ಈಗ ಚುನಾವಣೆ ನಡೆದರೆ ಬಿಜೆಪಿಗೆ ಭರ್ಜರಿ ಬಹುಮತ

ಕರ್ನಾಟಕದಲ್ಲಿ ಹಾವು ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಗಳೆರಡು ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲೆಂದು ಮಾಡಿಕೊಂಡ ಮೈತ್ರಿ, ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಹೊಸ ಭಾಷ್ಯ ಬರೆದಿದೆ, ಇತರ ರಾಜ್ಯಗಳಲ್ಲಿ ಆಗಬಹುದಾದ ಮೈತ್ರಿಗಳಿಗೆ ನಾಂದಿ ಹಾಡಿದೆ. ವಿರೋಧಿಗಳೆಲ್ಲರೂ ನರೇಂದ್ರ ಮೋದಿ ವಿರುದ್ಧ ಒಗ್ಗಟ್ಟಿನಿಂದ ತಿರುಗಿಬಿದ್ದಿದ್ದಾರೆ. ವಿರೋಧಿಗಳು ಯಶಸ್ವಿಯಾಗುತ್ತಾರಾ?

ಮೈತ್ರಿಗೆ ಹೊಸ ಭಾಷ್ಯ ಬರೆದ ಕರ್ನಾಟಕ

ಮೈತ್ರಿಗೆ ಹೊಸ ಭಾಷ್ಯ ಬರೆದ ಕರ್ನಾಟಕ

ಕರ್ನಾಟಕದಲ್ಲಿನ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಈ ಮೈತ್ರಿಯ ಆಯಸ್ಸು ಎಷ್ಟು, ಆಗಬಹುದಾಗ ಪರಿಣಾಮಗಳೇನು ಎಂಬುದು ಕಾಲವೇ ಉತ್ತರ ಹೇಳಲಿದೆ. ಆದರೆ, ಇದರ ಮುಂದುವರಿದ ಭಾಗವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿಯೂ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿವೆ. ಇರುವ 28 ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸೀಟು ಹಂಚಿಕೆಯ ಕುರಿತಂತೆ ಈಗಾಗಲೆ ಮಾತುಕತೆಗಳು, ಬೇಡಿಕೆಗಳು, ಆಗ್ರಹಗಳು, ಒತ್ತಡಗಳು, ಸಣ್ಣದಾಗಿ ಕಿತ್ತಾಟಗಳು ಕೂಡ ಆರಂಭವಾಗಿವೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ವಿರುದ್ಧ ಶಿವಸೇನೆ

ಮಹಾರಾಷ್ಟ್ರದಲ್ಲಿ ಬಿಜೆಪಿ ವಿರುದ್ಧ ಶಿವಸೇನೆ

ಮಹಾರಾಷ್ಟ್ರದಲ್ಲಿ ಮೈತ್ರಿ ಸರಕಾರ ರಚಿಸಿರುವ ಬಿಜೆಪಿ ಮತ್ತು ಶಿವಸೇನೆ ಭಾರೀ ಕಿತ್ತಾಟಕ್ಕಿಳಿದಿವೆ. ಬಿಜೆಪಿಯನ್ನು ಖಂಡತುಂಡವಾಗಿ ವಿರೋಧಿಸುತ್ತಿರುವ ಶಿವಸೇನೆ, ಬಿಜೆಪಿಯನ್ನು ತನ್ನ ಬದ್ಧ ಪ್ರತಿಸ್ಪರ್ಧಿ ಎಂದು ಹೇಳಿದ್ದು, ಇತ್ತೀಚೆಗೆ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ಸಿನೊಂದಿಗೆ ಮೈತ್ರಿ ಮಾಡಿಕೊಂಡು ಬಿಜೆಪಿಯ ಗಾಯದ ಮೇಲೆ ಉಪ್ಪು ಸವರಿದೆ. ಬುಲೆಟ್ ರೈಲಿನ ವಿರುದ್ಧ ವಿರೋಧ ಪಕ್ಷಗಳ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಅಧಿಕಾರದಲ್ಲಿರುವ ಶಿವಸೇನೆಯೇ ಭಾಗವಹಿಸುತ್ತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಇಷ್ಟಾದರೂ ಶಿವಸೇನೆಯೊಂದಿಗೇ ಚುನಾವಣೆ ಎದುರಿಸುತ್ತೇವೆ ಎಂದು ಬಿಜೆಪಿ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ.

ಉಪ್ರದಲ್ಲಿ ಅಲ್ಲಾಡುತ್ತಿರುವ ಬಿಜೆಪಿ ಬುಡ

ಉಪ್ರದಲ್ಲಿ ಅಲ್ಲಾಡುತ್ತಿರುವ ಬಿಜೆಪಿ ಬುಡ

ಇನ್ನು ಉತ್ತರ ಪ್ರದೇಶದಲ್ಲಿ ತನ್ನ ತಳಹದಿಯನ್ನು ಕಳೆದುಕೊಳ್ಳುತ್ತಿರುವ ಭಾರತೀಯ ಜನತಾ ಪಕ್ಷದ ವಿರುದ್ಧ ವಿರೋಧ ಪಕ್ಷಗಳೆಲ್ಲ ಒಂದಾಗಿ ತಿರುಗಿಬಿದ್ದಿವೆ. ಕೈರಾನಾ ಮತ್ತು ನೂಪುರ ಉಪಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಗಳೆಲ್ಲ ಸೇರಿ ಭಾರತೀಯ ಜನತಾ ಪಕ್ಷವನ್ನು ಸದೆಬಡಿದಿವೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮುಳುಗಿಸಬೇಕೆಂದಿದ್ದರೆ ಇದೇ ತಂತ್ರ ಅನುಸರಿಸಬೇಕೆಂಬ ನಿರ್ಧಾರಕ್ಕೆ ಕಟಿಬದ್ಧವಾದಂತೆ ವರ್ತಿಸುತ್ತಿವೆ. 2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಇರುವ 80 ಸೀಟುಗಳಲ್ಲಿ ಬಿಜೆಪಿ 71 ಸೀಟಿಗಳನ್ನು ಕಬಳಿಸಿ ಜಯಭೇರಿ ಬಾರಿಸಿತ್ತು, ಎಸ್ಪಿ 5, ಕಾಂಗ್ರೆಸ್ 2 ಮತ್ತು ಮತ್ತೆರಡು ಅಪ್ನಾ ದಳದ ಪಾಲಾಗಿದ್ದವು. ಈ ಬಾರಿ ಏನಾಗಲಿದೆ?

ಬಿಹಾರದಲ್ಲಿ ವಿರೋಧಿಗಳ ಎಚ್ಚರಿಕೆಯ ಗಂಟೆ

ಬಿಹಾರದಲ್ಲಿ ವಿರೋಧಿಗಳ ಎಚ್ಚರಿಕೆಯ ಗಂಟೆ

ಬಿಹಾರದ ಹಿಂದಿದ್ದ ಮಹಾಘಟಬಂಧನ ಒಡೆದು ಛಿದ್ರಛಿದ್ರವಾಗಿದೆ. ಆದರೆ, ಕಳೆದ ಉಪಚುನಾವಣೆಯಲ್ಲಿ ಮತ್ತೆ ಒಂದಾದ ಕೆಲ ಪಕ್ಷಗಳು ಬಿಜೆಪಿಯ ಮಿತ್ರಪಕ್ಷವಾಗಿರುವ ಜೆಡಿಯು ವಿರುದ್ಧ ಸೆಣಸಿ, ಜಯಭೇರಿ ಬಾರಿಸಿವೆ. ನಿತಿಶ್ ಕುಮಾರ್ ಅವರು ಕಳೆದ ಚುನಾವಣೆಯ ನಂತರ ಬಿಜೆಪಿಯೊಂದಿಗೆ ಸರಕಾರ ರಚಿಸಿದ್ದರೂ ಮತ್ತು ನರೇಂದ್ರ ಮೋದಿ ಅವರಿಗೆ ಬೆಂಬಲ ಸೂಚಿಸಿದ್ದರೂ, ಅವರು ಸ್ವಲ್ಪಸ್ವಲ್ಪವಾಗಿ ಬಿಜೆಪಿಯಿಂದ ದೂರ ಸರಿಯುತ್ತಿರುವುದು ಬಿಜೆಪಿಗೆ ಎಚ್ಚರಿಯ ಗಂಟೆಯಾಗಿದೆ. ಸ್ನೇಹಕೂಟವನ್ನು ಹೇಗೆ ಹಿಡಿದಿಟ್ಟುಕೊಳ್ಳಬೇಕೆಂಬುದೇ ಬಿಜೆಪಿಗೆ ಭಾರೀ ತಲೆನೋವಾಗಿದೆ.

ಮಧ್ಯಪ್ರದೇಶದಲ್ಲಿ ವಿಪಕ್ಷಗಳ ರಣತಂತ್ರ

ಮಧ್ಯಪ್ರದೇಶದಲ್ಲಿ ವಿಪಕ್ಷಗಳ ರಣತಂತ್ರ

ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಆಡಳಿತಾರೂಢ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ರಣತಂತ್ರಗಳು ಈಗಾಗಲೆ ಆರಂಭವಾಗಿವೆ. ಕೆಲ ಉಪಚುನಾವಣೆಯಲ್ಲಿ ವಿರೋಧಿ ಮೈತ್ರಿಕೂಟಗಳು ಯಶಸ್ಸು ಕೂಡ ಕಂಡಿವೆ. ಅಲ್ಲದೆ, ಬಹುಜನ ಸಮಾಜವಾದಿ ಪಕ್ಷದೊಡನೆ ಹಸ್ತಲಾಘವ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿರುವುದು ಬಿಜೆಪಿಗೆ ಶುಭಸೂಚಕವಲ್ಲ. ರಾಜಸ್ತಾನದಲ್ಲಿ ಕೂಡ ಬಿಜೆಪಿ ವಿರೋಧಿ ಅಲೆ ಎದ್ದಿದ್ದು, ವಸುಂಧರಾ ರಾಜೇ ಅವರನ್ನು ನಿಯಂತ್ರಿಸದಿದ್ದರೆ ರಾಜಸ್ತಾನವನ್ನು ಬಿಜೆಪಿ ಕಳೆದುಕೊಳ್ಳುವ ದಿನಗಳು ದೂರವಿಲ್ಲ.

ದೆಹಲಿಯಲ್ಲಿ ಆಪ್, ಕಾಂಗ್ರೆಸ್ ಮೈತ್ರಿ?

ದೆಹಲಿಯಲ್ಲಿ ಆಪ್, ಕಾಂಗ್ರೆಸ್ ಮೈತ್ರಿ?

ಎಲ್ಲಕ್ಕಿಂತ ಪ್ರಮುಖವಾಗಿ, ದೆಹಲಿಯಲ್ಲಿ ಒಬ್ಬರ ವಿರುದ್ಧ ಮತ್ತೊಬ್ಬರು ವಿಷ ಕಾರುತ್ತಿರುವ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಕೈಜೋಡಿಸಿ ಭಾರತೀಯ ಜನತಾ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ನೀರು ಕುಡಿಸುವ ಪ್ಲಾನ್ ಮಾಡಿಕೊಂಡಿರುವ ಗಾಳಿ ಸುದ್ದಿ ಸುಳಿದಾಡುತ್ತಿದೆ. ಇದನ್ನು ಆಮ್ ಆದ್ಮಿ ಪಕ್ಷ ಅಲ್ಲಗಳೆದಿದೆಯಾದರೂ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು, ನರೇಂದ್ರ ಮೋದಿ ಮತ್ತು ಅಮಿತ್ ಶಾ ಮೇಲುಗೈ ಸಾಧಿಸದಂತಿರಲು ಏನು ಬೇಕಾದರೂ ನಡೆದರೂ ಅಚ್ಚರಿಯಿಲ್ಲ.

English summary
Grand alliance by opposition, a warning bell for BJP just before Lok Sabha Elections 2019 and few assembly elections. Congress is aligning with regional parties everywhere to push BJP to the corner. Will Congress succeed?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X