ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲಿಂದಲೇ ಚುನಾವಣೆಗೆ ನಿಂತು, ಗೆದ್ದಿದ್ದ ಮೋಡಿಗಾರ ಜಾರ್ಜ್ ಫರ್ನಾಂಡಿಸ್!

|
Google Oneindia Kannada News

ಅದು 1977 ರ ಲೋಕಸಭಾ ಚುನಾವಣೆಯ ಹೊತ್ತು... ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ವಿರುದ್ಧ ಇಡೀ ದೇಶವೇ ತಿರುಗಿ ಬಿದ್ದಿತ್ತು. ಈ ಸಂದರ್ಭದಲ್ಲಿ ತಿಹಾರದ ಜೈಲಿನಲ್ಲಿದ್ದುಕೊಂಡೇ ಬಿಹಾರದ ಮುಜಾಫರ್ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು ಜಾರ್ಜ್ ಫರ್ನಾಂಡಿಸ್. ಪ್ರಚಾರವಿಲ್ಲ, ಹಣದ ಆಮಿಷವಿಲ್ಲ, ನೋಟಿಲ್ಲ, ಬಾಟಲಿಯಿಲ್ಲ... ಇದ್ದಿದ್ದು ಗೆಲ್ಲುತ್ತೇನೆಂಬ ವಿಶ್ವಾಸ, ಜನಸೇವೆಯ ತುಡಿತ ಅಷ್ಟೆ!

ಅವರ ಆತ್ಮವಿಶ್ವಾಸ ಸುಳ್ಳಾಗಲಿಲ್ಲ. ಜೈಲಿನಲ್ಲಿದ್ದುಕೊಂಡೇ ಚುನಾವಣೆ ಗೆದ್ದ ದಾಖಲೆ ಬರೆದರು ಫರ್ನಾಡಿಸ್. ನೂರಲ್ಲ, ಸಾವಿರವಲ್ಲ... ಬರೋಬ್ಬರಿ ಮೂರು ಲಕ್ಷ ಮತಗಳ ಅಂತರದಿಂದ ಗೆದ್ದು ವಿರೋಧಿಗಳು ಹುಬ್ಬೇರಿಸುವಂತೆ ಮಾಡಿದರು.

Breaking News: ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನBreaking News: ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ

ಮೊತ್ತ ಮೊದಲ ಬಾರಿಗೆ ಕಾಂಗ್ರೆಸ್ ಹೊರತಾದ ಜನತಾ ಸರ್ಕಾರ ದೇಶದಲ್ಲಿ ಅಸ್ತಿತ್ವಕ್ಕೆ ಬಂದು, ಮೊರಾರ್ಜಿ ದೇಸಾಯಿ ಪ್ರಧಾನಿಯಾದರು. ಆಗಲೂ ಕೆಲ ದಿನ ಜೈಲಿನಲ್ಲೇ ಇದ್ದ ಫರ್ನಾಡಿಸ್ ಅವರಿಗೆ ಸಚಿವ ಸಂಪುಟದಲ್ಲೂ ಸ್ಥಾನ ನೀಡಲಾಗಿತ್ತು ಎಂದರೆ, ಫರ್ನಾಡಿಸ್ ಬಗ್ಗೆ ನಾಯಕರಲ್ಲಿದ್ದ ಅಕ್ಕರೆ, ವಿಶ್ವಾಸ ಮತ್ತು ಅವರ ಸಾಮರ್ಥ್ಯದ ಮೇಲಿನ ನಂಬಿಕೆ ಹೇಗಿತ್ತು ಎಂಬುದಕ್ಕೆ ಸಾಕ್ಷಿಯಾಗುತ್ತದೆ.

ಇಂಥ ಜಾರ್ಜ್ ಫರ್ನಾಂಡಿಸ್ ಇಂದಿಲ್ಲ. ಅಲ್ಜಮೈರ್ (ಮರೆವಿನ ಕಾಯಿಲೆ) ಎಂಬ ಮಹಾಮಾರಿಗೆ ತುತ್ತಾಗಿದ್ದ ಅವರು ಜ.29 ರಂದು ಇಹಲೋಕ ತ್ಯಜಿಸಿದರು. ಕೆಲವು ವರ್ಷಗಳಿಂದ ಯಾರನ್ನೂ ಗುರುತಿಸಲಾಗದ ಸ್ಥಿತಿಯಲ್ಲಿದ್ದ ಫರ್ನಾಂಡಿಸ್ ಅವರು ಭಾರತೀಯ ರಾಜಕೀಯ ಇತಿಹಾಸದಲ್ಲಿ ಮಾತ್ರ ಯಾರೂ ಮರೆಯಲಾಗದ ಹೆಜ್ಜೆಗುರುತು ಮೂಡಿಸಿದ್ದಾರೆ.

ಮೂಲತಃ ಮಂಗಳೂರಿನವರಾದ ಅವರ ಸಂಕ್ಷಿಪ್ತ ವ್ಯಕ್ತಿಚಿತ್ರ ಇಲ್ಲಿದೆ.

ಮಂಗಳೂರಿನ ಫರ್ನಾಂಡಿಸ್

ಮಂಗಳೂರಿನ ಫರ್ನಾಂಡಿಸ್

* ಜೂನ್ 3, 1930 ರಲ್ಲಿ ಜನಿಸಿದ ಜಾರ್ಜ್ ಮ್ಯಾಥ್ಯೂ ಫರ್ನಾಂಡಿಸ್
* ತಂದೆ ಜಾನ್ ಜೋಸೆಫ್ ಫರ್ನಾಂಡಿಸ್, ತಾಯಿ ಅಲೈಸ್ ಮರ್ತಾ ಫರ್ನಾಂಡಿಸ್.
* ಮಂಗಳೂರು ಕ್ಯಾಥೋಲಿಕ್ ಕುಟುಂಬದಲ್ಲಿ ಜನನ
* ತಂದೆ-ತಾಯಿ ಆರು ಮಕ್ಕಳಲ್ಲಿ ಹಿರಿಯರು ಫರ್ನಾಂಡಿಸ್
* ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜ್ ನಲ್ಲಿ ಶಿಕ್ಷಣ
* ಕೊಂಕಣಿ, ತುಳು, ಇಂಗ್ಲಿಷ್, ಕನ್ನಡ, ಹಿಂದಿ, ಮರಾಠಿ, ತಮಿಳು, ಉರ್ದು, ಮಲಯಾಳಂ, ಲಾಟಿನ್ ಭಾಷೆಗಳಲ್ಲಿ ಪರಿಣಿತಿ
* ಹಲವು ಪತ್ರಿಕೆಗಳಲ್ಲಿಗೆ ಅಂಕಣಗಳನ್ನು ಬರೆಯುತ್ತಿದ್ದ ಫರ್ನಾಂಡಿಸ್, ಪತ್ರಕರ್ತರೂ, ಲೇಖಕರೂ ಆಗಿದ್ದರು.
* 1971 ಜುಲೈ 21 ರಂದು ರೆಡ್ ಕ್ರಾಸ್ ನ ಸಹಾಯಕ ಸಿಬ್ಬಂದಿಯಾಗಿದ್ದ, ಮಾಜಿ ಕೇಂದ್ರ ಸಚಿವ ಹುಮಾಯುನ್ ಕಬಿರ್ ಅವರ ಪುತ್ರಿ ಲೈಲಾ ಕಬಿರ್ ಅವರನ್ನು ಮದುವೆಯಾದರು.
* ಜಾರ್ಜ್ ಮತ್ತು ಲೈಲಾ ದಂಪತಿಗೆ ಸೀನ್ ಫರ್ನಾಂಡಿಸ್ ಎಂಬ ಪುತ್ರನಿದ್ದು, ಅಮೆರಿಕದಲ್ಲಿ ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಆಗಿ ಕೆಲಸ ಮಾಡುತ್ತಿದ್ದಾರೆ.
* 1984 ರಲ್ಲಿ ಲೈಲಾ ಅವರಿಂದ ವಿಚ್ಛೇದನ ಪಡೆದ ಫರ್ನಾಂಡಿಸ್, ನಂತರ ಜಯಾ ಜೇಟ್ಲಿ ಅವರೊಂದಿಗೆ ಬದುಕು ಹಂಚಿಕೊಂಡರು.

ಮುಂಬೈಯಲ್ಲಿ ರಸ್ತೆಯಲ್ಲೇ ಮಲಗುತ್ತಿದ್ದ ಫರ್ನಾಡಿಸ್

ಮುಂಬೈಯಲ್ಲಿ ರಸ್ತೆಯಲ್ಲೇ ಮಲಗುತ್ತಿದ್ದ ಫರ್ನಾಡಿಸ್

16 ನೇ ವರ್ಷದಲ್ಲೇ ಮನೆಯಿಂದ ಆಚೆ ಬಂದ ಫರ್ನಾಡೀಸ್ ಕ್ಯಾಥೋಲಿಕ್ ಗುರುವಾಗಲು ತರಬೇತಿ ಪಡೆದರು. ಎರಡು ವರ್ಷದ ನಂತರ ಅಲ್ಲಿನ ತಾರತಮ್ಯಗಳನ್ನು ಕಂಡು ಬೇಸರಗೊಂಡು ಹೊರಬಂದರು. 19 ನೇ ವರ್ಷ ವಯಸ್ಸಿನಲ್ಲಿ ಮಂಗಳೂರಿನ ರಸ್ತೆ ಸಾರಿಗೆ ಮತ್ತು ಹೊಟೇಲ್ ಗಳಲ್ಲಿ ದೌರ್ಜನ್ಯಕ್ಕೊಳಗಾದ ಕೆಲಸಗಾರರನ್ನು ಸಂಘಟಿಸುವ ಕೆಲಸದಲ್ಲಿ ತೊಡಗಿದ್ದರು. 1949 ರಲ್ಲಿ ಮುಂಬೈಗೆ ತೆರಳಿದ ಫರ್ನಾಂಡಿಸ್, ಪತ್ರಿಕೆಯೊಂದರಲ್ಲಿ ಪ್ರೂಫ್ ರೀಡರ್ ಆಗಿ ಕೆಲಸಕ್ಕೆ ಸೇರುವವರೆಗೂ ರಸ್ತೆಯ ಮೇಲೆ ಮಲಗುತ್ತಿದ್ದರು!

ಯೂನಿಯನ್ ಲೀಡರ್ ಆಗಿ ಖ್ಯಾತಿ ಗಳಿಸಿದ್ದ ಪ್ರಾಸಿಡ್ ಡಿ ಮೆಲ್ಲೋ ಮತ್ತು ಸಮಾಜವಾದಿ ರಾಮಮನೋಹರ್ ಲೋಹಿಯಾ ಅವರ ಪ್ರಭಾವಕ್ಕೊಳಗಾದ ಫರ್ನಾಂಡಿಸ್, ನಂತರ ಸೋಶಿಯಲಿಸ್ಟ್ ಟ್ರೇಶ್ ಯೂನಿಯನ್ ಮೂವ್ಮೆಂಟ್ ಸೇರಿದರು. ಕಾರ್ಮಿಕರ ಹಕ್ಕಿಗಾಗಿ, ನ್ಯಾಯಕ್ಕಾಗಿ ಹೋರಾಟ ನಡೆಸಿದರು. 1950 ರ ಸಮಯದಲ್ಲಿ ಮುಂಬೈಯ ಕಾರ್ಮಿಕ ಹೋರಾಟದ ನೇತೃತ್ವ ವಹಿಸಿದ್ದರು. 1961 ರಿಂದ 1968 ಬಾಂಬೆ ಮುನ್ಸಿಪಲ್ ಕಾರ್ಪೋರೇಶನ್ ನ ಸದಸ್ಯರಾಗಿದ್ದರು.

ಹುಟ್ಟು ಹೋರಾಟಗಾರ ಜಾರ್ಜ್ ನಡೆದು ಬಂದ ದಾರಿ, ಸಾಧನೆ ಹುಟ್ಟು ಹೋರಾಟಗಾರ ಜಾರ್ಜ್ ನಡೆದು ಬಂದ ದಾರಿ, ಸಾಧನೆ

ಜಾರ್ಜ್ ದಿ ಜೈಂಟ್ ಕಿಲ್ಲರ್!

ಜಾರ್ಜ್ ದಿ ಜೈಂಟ್ ಕಿಲ್ಲರ್!

1967 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಬೆ ದಕ್ಷಿಣ ಕ್ಷೇತ್ರದಿಂದ ಸಂಯುಕ್ತ ಸೋಶಿಯಲಿಸ್ಟ್ ಪಕ್ಷ ಫರ್ನಾಂಡಿಸ್ ಅವರಿಗೆ ಟಿಕೆಟ್ ನೀಡಿತ್ತು. ಕಾಂಗ್ರೆಸ್ ನ ಆಗಿನ ಜನಪ್ರಿಯ ನಾಯಕ ಸದಾಶಿವ್ ಕನೋಜಿ ಪಾಟೀಲ್ ಅವರು ಫರ್ನಾಂಡಿಸ್ ವಿರುದ್ಧ ಚುನಾವಣೆಗೆ ನಿಂತಿದ್ದರು. ಸಾಕಷ್ಟು ಜನಪ್ರಿಯತೆ ಗಳಿಸಿದ್ದ, ರಾಜಕೀಯ ಅನುಭವ ಗಳಿಸಿದ್ದ ಪಾಟೀಲ್ ರನ್ನು ಜಾರ್ಜ್ ಅಚ್ಚರಿಯ ಸೋಲು ಕಾಣುವಂತೆ ಮಾಡಿದರು! ಈ ಗೆಲುವಿನ ನಂತರ ಜಾರ್ಜ್ ಅಭಿಮಾನಿಗಳು ಅವರನ್ನು 'ಜಾರ್ಜ್ ದಿ ಜೈಂಟ್ ಕಿಲ್ಲರ್' ಎಂದೇ ಕರೆಯುತ್ತಿದ್ದರು.

1974 ರ ರೈಲ್ವೇ ಮುಷ್ಕರ

1974 ರ ರೈಲ್ವೇ ಮುಷ್ಕರ

ಫರ್ನಾಡಿಸ್ ಅವರ ಹೋರಾಟದ ಹಾದಿಯ ಬಗ್ಗೆ ಹೇಳುತ್ತ ಹೋದರೆ ರೈಲ್ವೇ ಮುಷ್ಕರ ಪ್ರಮುಖವಾಗಿ ನಿಲ್ಲುತ್ತದೆ. 1974 ರಲ್ಲಿ ರೈಲ್ವೇ ಇಲಾಖೆಯ ಕಾರ್ಮಿಕರ ವೇತನ ಹೆಚ್ಚಳ ಮತ್ತು ಜೀವನ ಮಟ್ಟ ಸುಧಾರಿಸುವ ಬೇಡಿಕೆಯೊಂದಿಗೆ ಅವರು ಮುಷ್ಕರ ನಡೆಸಿದ್ದರು. ಈ ಮುಷ್ಕರ ಕೇಂದ್ರ ಸರ್ಕಾರವನ್ನು ನಡುಗಿಸಿತ್ತು. ಸುಮಾರು 30,000 ಕಾರ್ಮಿಕರನ್ನು ಬಂಧಿಸಲಾಗಿತ್ತು!

ಬೆಂಕಿಯುಂಡೆಯಂತಹ ಕಾರ್ಮಿಕ ನಾಯಕ: ಜಾರ್ಜ್ ಅವರನ್ನು ನೆನೆದ ಮೋದಿ ಬೆಂಕಿಯುಂಡೆಯಂತಹ ಕಾರ್ಮಿಕ ನಾಯಕ: ಜಾರ್ಜ್ ಅವರನ್ನು ನೆನೆದ ಮೋದಿ

ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ

ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ

1975 ಜೂನ್ 25 ರಂದು ಇಂದಿರಾ ಗಾಂಧಿ ಅವರು ಅಧಿಕಾರ ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಿದ್ದನ್ನು ಫರ್ನಾಂಡಿಸ್ ಕಟುವಾಗಿ ಟೀಕಿಸಿದ್ದರು. ಅದರ ವಿರುದ್ಧ ಹೋರಾಟ ನಡೆಸಿದ್ದಲ್ಲದೆ, ಇಂದಿರಾ ಗಾಂಧಿ ಭಾಷಣ ಮಾಡುವ ಎಡೆಯಲ್ಲೆಲ್ಲ ಡೈನಮೈಟ್ ಗಳನ್ನು ಸಿಡಿಸಿ ಬೆದರಿಸುವ ಕೆಲಸ ಮಾಡುತ್ತಿದ್ದರು. ಅದರನ್ನು ಬಂಧಿಸಲಾಗಿತ್ತಾದರೂ ಜೈಲಿನಿಂದ ಪರಾರಿಯಾಗಿ ಅದೇ ಕೆಲಸ ಮಾಡುತ್ತಿದ್ದರು. ಒಮ್ಮೆ ಬರೋಡಾದಲ್ಲಿ ಇಂದಿರಾ ಗಾಂಧಿ ಭಾಷಣದ ಸಮಯದಲ್ಲಿ ಡೈನಮೈಟ್ ಸಿಡಿಸಿ ವಿವಾದ ಸೃಷ್ಟಿಸಿದ್ದರು. ನಂತರ ಅವರನ್ನು ಬಂಧಿಸಲಾಗಿತ್ತು. ಇದು ಬರೋಡಾ ಡೈನಮೈಟ್ ಕೇಸ್ ಎಂದೇ ಹೆಸರುವಾಸಿಯಾಗಿತ್ತು.

ಜೈಲಿಂದಲೇ ಚುನಾವಣೆಗೆ ಸ್ಪರ್ಧೆ

ಜೈಲಿಂದಲೇ ಚುನಾವಣೆಗೆ ಸ್ಪರ್ಧೆ

1977 ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ವಾಪಸ್ ಪಡೆದ ನಂತರ ಚುನಾವಣೆ ಘೋಷಣೆಯಾಗಿತ್ತು. ಈ ಸಂದರ್ಭದಲ್ಲಿ ಬರೋಡಾ ಡೈನಮೈಟ್ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿದ್ದ ಫರ್ನಾಂಡಿಸ್, ಜೈಲಿನಿಂದಲೇ ಬಿಹಾರದ ಮುಜಾಫರ್ ನಗರ ಕ್ಷೇತ್ರದಿಂದ ಚುನಾವಣೆಗೆ ನಿಂತು ಕಾಂಗ್ರೆಸ್ ಅಭ್ಯರ್ಥಿಯನ್ನು ಮೂರು ಲಕ್ಷ ಮತಗಳ ಅಂತರದಿಂದ ಸೋಲಿಸಿದರು. ಇದು ಅವರ ಜನಪ್ರಿಯತೆಯನ್ನು ಹೆಚ್ಚಿಸಿತ್ತು.

ಕೇಂದ್ರ ಸಚಿವ ಫರ್ನಾಂಡಿಸ್

ಕೇಂದ್ರ ಸಚಿವ ಫರ್ನಾಂಡಿಸ್

1977 ರಲ್ಲಿ ಮೊರಾರ್ಜಿ ದೇಸಾಯಿ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಅವರು ಕೈಗಾರಿಕಾ ಸಚಿವರಾದರು. ಜೊತೆಗೆ ಸಂಪರ್ಕ ಸಚಿವರೂ ಆಗಿದ್ದ ಅವರು ದೂರದರ್ಶನ ಕೇಂದ್ರ(1978), ಕಂಟಿ ಥರ್ಮಲ್ ಪವರ್ ಸ್ಟೇಶನ್(1978) ಮುಂತಾದ ಹತ್ತು ಹಲವು ಕೇಂದ್ರಗಳನ್ನೂ, ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗಕ್ಕೆ ಒತ್ತು ನೀಡಿದ್ದರು. ನಂತರ ಜನತಾ ಪಕ್ಷ ಒಡೆದು, ಮತ್ತೆ 1980 ರಲ್ಲಿ ಕಾಂಗ್ರೆಸ್ ಸರಾಕರ ಅಸ್ತಿತ್ವಕ್ಕೆ ಬಂದಿತ್ತು. 1984 ರಲ್ಲಿ ಇಂದಿರಾ ಹತ್ಯೆಯ ನಂತರ ನಡೆದ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಫರ್ನಾಂಡಿಸ್, ಕಾಂಗ್ರೆಸ್ ನ ಸಿಕೆ ಜಾಫರ್ ಷರೀಫ್ ಅವರ ವಿರುದ್ಧ ಸೋಲುಂಡಿದ್ದರು. ನಂತರ 1989ರಿಂದ 1991ರವರೆಗೆ ವಿಪಿ ಸಿಂಗ್ ಸರ್ಕಾರದಲ್ಲಿ ರೈಲ್ವೇ ಸಚಿವರಾಗಿ ಕಾರ್ಯ ನಿರ್ವಹಿಸಿದರು.

ಹೊಸ ಪಕ್ಷ ಸ್ಥಾಪನೆ

ಹೊಸ ಪಕ್ಷ ಸ್ಥಾಪನೆ

1994 ರಲ್ಲಿ ಜನತಾದಳವನ್ನು ಒಡೆದು ಸಮಾತಾ ಪಕ್ಷವನ್ನು ಫರ್ನಾಂಡಿಸ್ ಕಟ್ಟಿದರು. ನಂತರ ಇದು ಭಾರತೀಯ ಜನತಾ ಪಕ್ಷವಾಗಿ ಬದಲಾಗಿದ್ದ ಭಾರತೀಯ ಜನಸಂಘದ ಮೈತ್ರಿ ಪಕ್ಷವಾಯಿತು. 1996 ರಲ್ಲಿ ಕೇವಲ 13 ದಿನಗಳ ಕಾಲ ಬಿಜೆಪಿ ಆಡಳಿತ ನಡೆಸಿದಾಗಲೂ ಸಮಾತಾ ಪಕ್ಷ ಬಿಜೆಪಿಯೊಂದಿಗಿತ್ತು. 1999 ರಲ್ಲಿ ಬಿಜೆಪಿ ನೇತೃತ್ವದಲ್ಲಿ 24 ಕ್ಕೂ ಹೆಚ್ಚು ಪಕ್ಷಗಳು ಸೇರಿ ಕಟ್ಟಿಕೊಂಡ ಎನ್ ಡಿಎ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂತು.

ರಕ್ಷಣಾ ಸಚಿವರಾಗಿ

ರಕ್ಷಣಾ ಸಚಿವರಾಗಿ

1998-2004 ರವರೆಗೆ ರಕ್ಷಣಾ ಸಚಿವರಾಗಿದ್ದರು ಫರ್ನಾಂಡಿಸ್. 1999ರ ಕಾರ್ಗಿಲ್ ಯುದ್ಧದಲ್ಲಿ ಭಾರತದ ಗೆಲುವಿಗೆ ಫರ್ನಾಂಡಿಸ್ ಅವರ ದಿಟ್ಟ ನಿರ್ಧಾರಗಳೇ ಕಾರಣ ಎಂಬ ಮಾತಿದೆ. ಅಣು ನಿಶ್ಶಸ್ತ್ರೀಕರಣದ ಬೆಂಬಲಿಗರಾಗಿದ್ದ ಫರ್ನಾಂಡಿಸ್ 1998 ರಲ್ಲಿ ಭಾರತ ಪೋಖ್ರಾನ್ ಪರೀಕ್ಷೆ ಮಾಡಿದ್ದನ್ನು ನೇರವಾಗಿಯೇ ಖಂಡಿಸಿದ್ದರು. ನಂತರ 2001 ರಲ್ಲಿ ತೆಹಲ್ಕಾ ಡಿಫೆನ್ಸ್ ಸ್ಕಾಂಡಲ್ ಬಗ್ಗೆ ವಿವಾದ ಸೃಷ್ಟಿಯಾದಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಸರ್ಕಾರ ಅವರನ್ನು ಮತ್ತೆ ರಕ್ಷಣಾ ಸಚಿವರನ್ನಾಗಿ ನೇಮಕ ಮಾಡಿಕೊಂಡಿತ್ತು. ವಿಶ್ವದ ಅತೀ ಎತ್ತರದ ಯುದ್ಧ ಭೂಮಿ ಸಿಯಾಚಿನ್(6000ಮೀ.) ಗೆ 18 ಬಾರಿ ಭೇಟಿ ನೀಡಿದ್ದರು ಫರ್ನಾಂಡಿಸ್. ರಕ್ಷಣಾ ಕ್ಷೇತ್ರದ ಆಯವ್ಯಯವನ್ನು ಅವರ ಅವಧಿಗೂ ಮುನ್ನ ಬಂದಿದ್ದ ಎಲ್ಲಾ ಸರ್ಕಾರಗಳೂ ಬಿಡುಗಡೆ ಮಾಡಿದ್ದಕ್ಕಿಂತ ಹೆಚ್ಚು ಆಯವ್ಯಯವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಬಿಡುಗಡೆ ಮಾಡಿಸಿದ ಕೀರ್ತಿಯೂ ಫರ್ನಾಂಡಿಸ್ ಅವರಿಗೆ ಸಲ್ಲುತ್ತದೆ.

ಕೊನೆಯ ದಿನಗಳು

ಕೊನೆಯ ದಿನಗಳು

2009 ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಾದ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಮುಜಾಫರ್ ನಗರದಿಂದ ಸ್ಪರ್ಧಿಸಿ ಸೋತರು. ನಂತರ 2009 ರ ಜುಲೈನಲ್ಲಿ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾದರು. 2010 ರಲ್ಲಿ ಪಾರ್ಕಿನ್ ಸನ್ ಮತ್ತು ಅಲ್ಜಮೈರ್ ಕಾಯಿಲೆಗಳಿಗೆ ತುತ್ತಾದ ಫರ್ನಾಂಡಿಸ್ ಹರಿದ್ವಾರದ ಬಾಬಾ ರಾಮದೇವ್ ಆಶ್ರಮದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಲೈಲಾ ಮತ್ತು ಸೀನಾ ಫರ್ನಾಂಡಿಸ್ ಅವರು ಜಾರ್ಜ್ ಅವರ ವೈದ್ಯಕೀಯ ಚಿಕಿತ್ಸೆಗಾಗಿ ಅವರನ್ನು ಅಜ್ಞಾತ ಸ್ಥಳಕ್ಕೆ ಸಾಗಿಸಿದ್ದಾರೆ, ಅವರನ್ನು ನೋಡಲು ನಮಗೆ ಅನುಮತಿ ದೊರಕುತ್ತಿಲ್ಲ ಎಂದು ಫರ್ನಾಂಡಿಸ್ ಅವರ ಸಹೋದರರು ದೂರು ನೀಡಿದ್ದರು. ನಂತರ 2012 ರಲ್ಲಿ ಅವರನ್ನು ಭೇಟಿಯಾಗಲು ಎರಡನೇ ಪತ್ನಿ ಜಯಾ ಜೇಟ್ಲಿ ಮತ್ತು ಫರ್ನಾಂಡಿಸ್ ಅವರ ಸಹೋದರರಿಗೆ ಕೋರ್ಟು ಅನುಮತಿ ನೀಡಿತ್ತು. ಯಾರನ್ನೂ ಗುರುತಿಸಲಾಗದ ಸ್ಥಿತಿಯಲ್ಲಿದ್ದ ಫರ್ನಾಂಡಿಸ್ ಅವರು ತಮ್ಮ 88 ನೇ ವರ್ಷದಲ್ಲಿ ಜ.29 ರಂದು ನವದೆಹಲಿಯಲ್ಲಿ ಇಹಲೋಕ ತ್ಯಜಿಸಿದರು.

ಆದರೆ ಅವರು ರಾಜಕಾರಣಿಯಾಗಿ, ವಾಗ್ಮಿಯಾಗಿ, ಸಮಾಜ ಸೇವಕರಾಗಿ, ಹೋರಾಟಗಾರರಾಗಿ, ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯ ಅಂತಃಕರಣವುಳ್ಳ ವ್ಯಕ್ತಿಯಾಗಿ ತಮ್ಮ ಬದುಕಿನುದ್ದಕ್ಕೂ ಮೂಡಿಸಿದ ಹೆಮ್ಮೆ ಮಾತ್ರ ಅಚ್ಚಳಿಯದೆ ಉಳಿದಿದೆ, ಉಳಿಯಲಿದೆ.

English summary
Former union minister, journalist, agriculturist, social worker, orator George Fernandes' passed away due to age old illness at the age of 88. Here is his detailed profile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X