ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಗಡಿತಂಟೆಗೆ ಮೋದಿ ಖಡಕ್ ಎಚ್ಚರಿಕೆ

|
Google Oneindia Kannada News

ನವದೆಹಲಿ, ಫೆ.22 : " ಅರುಣಾಚಲ ಪ್ರದೇಶ ಭಾರತದ ಭಾಗ, ಚೀನಾ ತನ್ನ ಗಡಿಯನ್ನು ವಿಸ್ತರಣೆ ಮಾಡುವ ಯೋಚನೆ ಹಾಕಿಕೊಂಡಿದ್ದರೆ ಅದನ್ನು ನಿಲ್ಲಿಸಬೇಕು" ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಚೀನಾಕ್ಕೆ ಎಚ್ಚರಿಕೆ ನೀಡಿದ್ದಾರೆ. ಭಾರತದಿಂದ ಅರುಣಾಚಲಪ್ರದೇಶ ಕಣ್ಮರೆಯಾಗಲು ಅವಕಾಶ ನೀಡುವುದಿಲ್ಲ ಎಂದು ಮೋದಿ ಘೋಷಿಸಿದ್ದಾರೆ.

ಅರುಣಾಚಲ ಪ್ರದೇಶದ ಪಸಿಘಾಟ್ ನಲ್ಲಿ ಶನಿವಾರ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, "ಚೀನಾ ತನ್ನ ಗಡಿಯನ್ನು ವಿಸ್ತರಿಸಬೇಕು ಎಂಬ ಯೋಜನೆಯನ್ನು ಹಾಕಿಕೊಂಡಿದ್ದರೆ ಅದನ್ನು ಕೂಡಲೇ ನಿಲ್ಲಿಸಬೇಕು. ಗಡಿ ಒಪ್ಪಂದವನ್ನು ಚೀನಾ ಗೌರವಿಸುವ ಮೂಲಕ ಉಭಯ ದೇಶಗಳ ಅಭಿವೃದ್ಧಿಗೆ ಸಹಕರಿಸಬೇಕು" ಎಂದು ಹೇಳಿದರು. [ಮೋದಿ ಒಂದೇ ಮಾತು, ವಿಭಿನ್ನ ಅವತಾರ]

Narendra Modi

ತಮ್ಮ ಭಾಷಣದಲ್ಲಿ ಚೀನಾದ ಗಡಿತಂಟೆಯನ್ನು ಪ್ರಸ್ತಾಪಿಸಿದ ನರೇಂದ್ರ ಮೋದಿ, ಅರುಣಾಚಲ ಪ್ರದೇಶ ನಮ್ಮದು, ಬಾಹ್ಯಶಕ್ತಿಗಳು ಅದನ್ನು ನಮ್ಮಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ, ಅದಕ್ಕೆ ಅವಕಾಶವನ್ನು ನೀಡುವುದಿಲ್ಲ ಎಂದು ಘೋಷಿಸಿದರು. ರಾಜ್ಯದ ಜನರು ಚೀನಾದ ಭಯದ ನೆರಳಲ್ಲಿ ಬದುಕುತ್ತಿಲ್ಲ ಎಂದು ಮೋದಿ ತಿಳಿಸಿದರು. [ದೇಶಕ್ಕಾಗಿ ನಮೋ ನಂಬರ್]

ಇಂದು ವಿಶ್ವದ ಅನೇಕ ರಾಷ್ಟ್ರಗಳು ಅಭಿವೃದ್ಧಿಯತ್ತ ಗಮನಹರಿಸಿವೆ. ಆದರೆ, ಚೀನಾ ಮಾತ್ರ ಗಡಿ ವಿಸ್ತರಣೆ ಬಗ್ಗೆ ಚಿಂತನೆ ನಡೆಸುತ್ತಿದೆ. ಭಾರತ ಇದನ್ನು ಸಹಿಸುವುದಿಲ್ಲ. ಚೀನಾ ಅಂತರಾಷ್ಟ್ರೀಯ ಗಡಿ ಒಪ್ಪಂದವನ್ನು ಗೌರವಿಸಬೇಕು. ಗಡಿ ವಿಸ್ತರಣೆಯಂತಹ ಯೋಜನೆಯನ್ನು ಕೈಬಿಡಬೇಕು ಎಂದು ಮೋದಿ ಹೇಳಿದರು.

ಯೋಧರ ಹೊಗಳಿದ ಮೋದಿ : ನಿಜವಾದ ದೇಶಪ್ರೇಮಿಗಳು ಅರುಣಾಚಲ ಪ್ರದೇಶದ ಜನರು ಎಂದು ಹೊಗಳಿದ ಮೋದಿ, ಭಾರತೀಯ ಸೇನೆಯಲ್ಲಿ ರಾಜ್ಯದ ಸೈನಿಕರ ಪಾತ್ರ ಶ್ಲಾಘನೀಯ ಎಂದರು. ಅರುಣಾಚಲ ಪ್ರದೇಶದ ಯೋಧರು ದೇಶದ ಭದ್ರತೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ ಎಂದು ಮೋದಿ ಹೇಳಿದರು.

1962ರಲ್ಲಿ ಚೀನಾ ದೇಶ ನಮ್ಮ ಗಡಿಯನ್ನು ಅತಿಕ್ರಮಿಸಿದಾಗ ಅರುಣಾಚಲ ಪ್ರದೇಶದ ಸೈನಿಕರು ಅವರಿಗೆ ದಿಟ್ಟ ಉತ್ತರ ನೀಡಿದ್ದರು ಎಂದು ನೆನಪಿಸಿಕೊಂಡ ಮೋದಿ, ಕಾರ್ಗಿಲ್ ಕದನದಲ್ಲಿಯೂ ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸುವಲ್ಲಿ ರಾಜ್ಯದ ಯೋಧರ ಪಾತ್ರ ಬಹುಮುಖ್ಯವಾಗಿತ್ತು ಎಂದು ಹೇಳಿದರು.

ಕೇಂದ್ರಕ್ಕೆ ಕುಟುಕಿದ ಮೋದಿ : ದೆಹಲಿಯಲ್ಲಿ ಸಾವಿಗೀಡಾದ ನಿಡೋ ತಾನಿಯಾ ಪ್ರಕರಣದ ಕುರಿತು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಮೋದಿ, ಅರುಣಾಚಲ ಪ್ರದೇಶ ಶಾಸಕನ ಪುತ್ರನ ಸಾವಿಗೆ ಕೇಂದ್ರ ಸರ್ಕಾರವೇ ಕಾರಣ. ದೇಶದ ಪ್ರತಿಯೊಬ್ಬ ನಾಗರೀಕನ ರಕ್ಷಣೆ ಕೇಂದ್ರ ಸರ್ಕಾರದ ಹೊಣೆಯಾಗಿದ್ದು, ಅದನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

English summary
Wading into a foreign policy issue for the first time, Narendra Modi Saturday, Feb 22 asked China to shed its "expansionist mindset", making it clear that no power on earth can snatch Arunachal Pradesh from India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X