ಕೊರೊನಾ ಎರಡನೇ ಅಲೆ; ಸಾವಿನ ಸಂಖ್ಯೆ ದ್ವಿಗುಣಗೊಳ್ಳುವ ಎಚ್ಚರಿಕೆ ಕೊಟ್ಟ ತಜ್ಞರು
ನವದೆಹಲಿ, ಏಪ್ರಿಲ್ 8: ಭಾರತದಲ್ಲಿ ಮಂಗಳವಾರ ಒಂದೇ ದಿನ 1,15,736 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಇದುವರೆಗೂ ಒಟ್ಟಾರೆ 1,28,01,785 ಪ್ರಕರಣಗಳು ವರದಿಯಾಗಿವೆ. ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚುತ್ತಿರುವುದಾಗಿ ತಿಳಿದುಬಂದಿದೆ.
ಕೆಲವು ರಾಜ್ಯಗಳಲ್ಲಿ ಸಾವಿನ ಸಂಖ್ಯೆಯೂ ಅತಿ ವೇಗಗತಿಯಲ್ಲಿ ದ್ವಿಗುಣಗೊಳ್ಳುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.
ಛತ್ತೀಸ್ಗಡ, ಪಂಜಾಬ್, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ಮಧ್ಯಪ್ರದೇಶ ಈ ಆರು ರಾಜ್ಯಗಳಲ್ಲಿ ಕಳೆದ ಎರಡು ವಾರಗಳಿಂದ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ದ್ವಿಗುಣಗೊಳ್ಳುತ್ತಿರುವುದಾಗಿ ತಿಳಿದುಬಂದಿದೆ.
ಕಳೆದ ವರ್ಷ ಮಾರ್ಚ್ನಿಂದ ಇದುವರೆಗೂ ಭಾರತದಲ್ಲಿ ಸೋಂಕಿನಿಂದ 166,177 ಸಾವುಗಳು ಸಮಭವಿಸಿವೆ. ಪರಿಸ್ಥಿತಿ ಹೀಗೇ ಮುಂದುವರೆದರೆ ಮುಂದಿನ ಎಂಟು ತಿಂಗಳಿನಲ್ಲಿ ಈ ಸಂಖ್ಯೆ ಏಕಾಏಕಿ 332,000ಗೆ ಜಿಗಿಯಬಹುದು ಎಂದು ಅಂದಾಜಿಸಲಾಗಿದೆ. ಸೋಂಕು ನಿಯಂತ್ರಣ ಮಾಡದೇ ಇದ್ದರೆ ಛತ್ತೀಸ್ಗಡದಲ್ಲಿ ಮುಂದಿನ 76 ದಿನಗಳಲ್ಲಿ ಹಾಗೂ ಪಂಜಾಬ್ನಲ್ಲಿ ಮುಂದಿನ 83 ದಿನಗಳಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆ ದ್ವಿಗುಣಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಮಾಹಿತಿ: ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ ಪ್ರಗತಿ ಹೇಗಿದೆ?
ಸದ್ಯಕ್ಕೆ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆಯಲ್ಲಿ ಭಾರತ 14ನೇ ಸ್ಥಾನದಲ್ಲಿದ್ದು, ಮಿಲಿಯನ್ ಮಂದಿಯಲ್ಲಿ 120 ಮಂದಿ ಸಾವನ್ನಪ್ಪುತ್ತಿದ್ದಾರೆ. ಬ್ರಿಟನ್ನಲ್ಲಿ ಈ ಸಂಖ್ಯೆ 1,868 ಇದ್ದರೆ, ಅಮೆರಿಕದಲ್ಲಿ1,665 ಹಾಗೂ ಮೆಕ್ಸಿಕೋದಲ್ಲಿ 1,582 ಇದೆ.
ಆದರೂ ಜಾಗರೂಕರಾಗಿರಬೇಕು. ದೃಢಪಟ್ಟ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆಯ ಪೈಕಿ ಕಳೆದ ಎರಡು ವಾರಗಳಲ್ಲಿನ ಸಾವಿನ ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡರೆ, ಈ ಸಂಖ್ಯೆ ದ್ವಿಗುಣಗೊಳ್ಳುತ್ತಿದ್ದು, ಭಯಾನಕ ಚಿತ್ರಣ ನೀಡಲಿದೆ ಎಂದು ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ.