ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಮಾರ್ಟ್‌ಫೋನ್‌ಗಳಿಂದಾಗಿ ಬತ್ತಿಹೋಗುತ್ತಿದೆ ಕಣ್ಣೀರು!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 5: ಸ್ಮಾರ್ಟ್‌ ಫೋನ್‌ಗೂ ಐ ಡ್ರಾಪ್ ಔಷಧಗಳಿಗೂ ಈಗ ಗಳಸ್ಯ ಕಂಠಸ್ಯ ಎಂಬಂತಹ ನಂಟು. ಇದೆಲ್ಲಿಂದ ಬಂತು ಈ ನೆಂಟಸ್ತನ ಎಂದು ಹುಬ್ಬೇರಿಸಬೇಡಿ.

ಭಾರತದ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಮಾರಾಟ ಹೆಚ್ಚಾದಂತೆಯೇ, ಕಣ್ಣಿನ ಔಷಧಗಳ ಮಾರಾಟವೂ ಎತ್ತರಕ್ಕೇರಿದೆ.

ಭಾರತೀಯ ವಿದ್ಯಾರ್ಥಿಗಳಿಂದ ನಿತ್ಯ 150 ಸಲ ಫೋನ್ ಬಳಕೆ: ಅಧ್ಯಯನಭಾರತೀಯ ವಿದ್ಯಾರ್ಥಿಗಳಿಂದ ನಿತ್ಯ 150 ಸಲ ಫೋನ್ ಬಳಕೆ: ಅಧ್ಯಯನ

ಮೊಬೈಲ್ ಫೋನ್, ಕಂಪ್ಯೂಟರ್‌ ಮುಂತಾದ ಗ್ಯಾಜೆಟ್‌ಗಳ ಬಳಕೆ ಹೆಚ್ಚಳದಿಂದ ಜನರು 'ಡಿಜಿಟಲ್ ವಿಷನ್ ಸಿಂಡ್ರೋಮ್'ಗೆ ತುತ್ತಾಗುತ್ತಿದ್ದಾರೆ. ಇದರಿಂದ ಕಣ್ಣಿನ ಔಷಧಗಳಿಗೆ ಭಾರಿ ಬೇಡಿಕೆ ಬಂದಿದೆ.

ಸ್ಮಾರ್ಟ್‌ ಫೋನ್ ಮಾರಾಟ ಹೆಚ್ಚಳ

ಸ್ಮಾರ್ಟ್‌ ಫೋನ್ ಮಾರಾಟ ಹೆಚ್ಚಳ

ಸ್ಮಾರ್ಟ್‌ ಫೋನ್ ಮಾರುಕಟ್ಟೆಯ ಮಾರಾಟದಲ್ಲಿ ಜಗತ್ತಿನಲ್ಲಿ ಭಾರತ ಎರಡನೆಯ ಸ್ಥಾನದಲ್ಲಿದೆ. 2018ರ ಮೊದಲಾರ್ಧದಲ್ಲಿ ಪ್ರತಿ ದಿನ 42 ಲಕ್ಷ ಹ್ಯಾಂಡ್‌ಸೆಟ್‌ಗಳು ಮಾರಾಟ ಕಂಡಿದ್ದವು.

ಆದರೆ, ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಮುಂದಿದ್ದೇವೆ ಎಂಬುದು ಹೆಮ್ಮೆಯ ಸಂಗತಿ ಅಲ್ಲ. ಅದು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ವೈದ್ಯರು ನಿರಂತರವಾಗಿ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಸ್ಮಾರ್ಟ್‌ಫೋನ್, ಕಂಪ್ಯೂಟರ್ ಮತ್ತು ಟ್ಯಾಬ್ಲೆಟ್‌ಗಳ ಅತಿಯಾದ ಬಳಕೆಯಿಂದ ಕಣ್ಣಿಗೆ ಆಯಾಸ ನೀಡುತ್ತಿದೆ. ಇದಕ್ಕಾಗಿ ಕಣ್ಣಿಗೆ ನಿರಾಳತೆ ನೀಡಲು ಔ‍ಷಧ ಬಿಟ್ಟುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.

ವಿಮಾನದಲ್ಲಿ ಇನ್ನುಮುಂದೆ ಮೊಬೈಲ್ ಬಳಸಬಹುದು!ವಿಮಾನದಲ್ಲಿ ಇನ್ನುಮುಂದೆ ಮೊಬೈಲ್ ಬಳಸಬಹುದು!

ಡಿಜಿಟಲ್ ವಿಷನ್ ಸಿಂಡ್ರೋಮ್

ಡಿಜಿಟಲ್ ವಿಷನ್ ಸಿಂಡ್ರೋಮ್

ಹತ್ತರಲ್ಲಿ ಏಳು ಮಂದಿ ರೋಗಿಗಳು 'ಡಿಜಿಟಲ್ ವಿಷನ್ ಸಿಂಡ್ರೋಮ್'ಗೆ ತುತ್ತಾಗುತ್ತಿದ್ದಾರೆ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.

ಈ ಉಪಕರಣಗಳಿಂದ ಹೊರಬರುವ ನೀಲಿ ಬೆಳಕಿನಿಂದ ಕಣ್ಣುಗಳು ಶುಷ್ಕಗೊಳ್ಳುತ್ತಿವೆ. ಅಂದರೆ, ನಿರಂತರವಾಗಿ ಸ್ಮಾರ್ಟ್‌ಫೋನ್‌ಗಳ ಬೆಳಕಿಗೆ ಕಣ್ಣೊಡ್ಡಿ ಕೂರುವುದರಿಂದ ಕಣ್ಣಿನಲ್ಲಿರುವ ತೇವಾಂಶದ ಪಸೆಯೇ ಬತ್ತಿ ಹೋಗುತ್ತಿದೆ. ಕಣ್ಣಿಗೆ ಶುಷ್ಕತೆ ಹೋಗಲಾಡಿಸಿ ತೇವಗೊಳಿಸಲು ಜನರು ಐ ಡ್ರಾಪ್‌ಗಳ ಮೊರೆ ಹೋಗುತ್ತಿದ್ದಾರೆ. ಇದರ ಪರಿಣಾಮವಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟಾರೆ ಮಾರುಕಟ್ಟೆಯಲ್ಲಿ ಐ ಡ್ರಾಪ್‌ಗಳ ಮಾರಾಟ ಶೇ 54ರಷ್ಟು ಹೆಚ್ಚಳವಾಗಿದೆ ಎನ್ನುತ್ತಾರೆ ತಜ್ಞರು.

ಪಾಲಕರೇ ಎಚ್ಚರ ಮೋಮೋ ಗೇಮ್‌ ಬ್ಲೂವೇಲ್‌ಗಿಂತಲೂ ಡೆಡ್ಲಿ!ಪಾಲಕರೇ ಎಚ್ಚರ ಮೋಮೋ ಗೇಮ್‌ ಬ್ಲೂವೇಲ್‌ಗಿಂತಲೂ ಡೆಡ್ಲಿ!

20-30 ವರ್ಷದವರು

20-30 ವರ್ಷದವರು

ಈ ಏಳರಲ್ಲಿ ಕನಿಷ್ಠ ನಾಲ್ಕು ರೋಗಿಗಳು 20-30 ವರ್ಷದವರಾಗಿದ್ದಾರೆ. ಈ ರೋಗಿಗಳು ಕಣ್ಣಿನ ಆಯಾಸ, ತಲೆನೋವು, ಮುಸುಕಾದ ದೃಷ್ಟಿ, ಕುತ್ತಿಗೆ ಹಾಗೂ ಭುಜದ ನೋವುಗಳ ದೂರುಗಳನ್ನು ನೀಡುತ್ತಾರೆ ಎಂದು ವೈದ್ಯರು ಹೇಳುತ್ತಾರೆ.

ಗ್ಯಾಡ್ಜೆಟ್‌ಗಳಿಂದ ಹೊರಬರುವ ಹಾನಿಕಾರ ನೀಲಿ ಬೆಳಕುಗಳ ಎದುರು ದಿನಕ್ಕೆ ಸುಮಾರು 10 ಗಂಟೆ ಕಳೆಯುತ್ತೇವೆ. ನಮ್ಮ ನೇತ್ರ ಸಮಸ್ಯೆ ಹೊರ ರೋಗಿಗಳ ವಿಭಾಗದಲ್ಲಿ (ಓಪಿಡಿ) ಕನಿಷ್ಠ ಶೇ 70ರಷ್ಟು ರೋಗಿಗಳು ಶುಷ್ಕ ನೇತ್ರ (ಡ್ರೈ ಐ) ಸಮಸ್ಯೆಯಿಂದ ಬಳಲುವವರು ಸಿಗುತ್ತಾರೆ. ಅವರಲ್ಲಿ ಅರ್ಧದಷ್ಟು ಮಂದಿ 20 ರಿಂದ 30 ವರ್ಷದ ಒಳಗಿನವರು ಎನ್ನುತ್ತಾರೆ ದೆಹಲಿಯ ನೇತ್ರ ತಜ್ಞೆ ಅದಿತಿ ದುಸಾಜ್.

ಏಮ್ಸ್ ನಡೆಸಿದ ಸಮೀಕ್ಷೆ

ಏಮ್ಸ್ ನಡೆಸಿದ ಸಮೀಕ್ಷೆ

ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ನಡೆಸಿದ ಸಮೀಕ್ಷೆಯ ಪ್ರಕಾರ, 2017ರಲ್ಲಿ 5 ಸಾವಿರ ರೋಗಿಗಳು ಕಣ್ಣಿನ ಹೊರರೋಗ ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇವರಲ್ಲಿ ಶೇ 50ರಷ್ಟು ಮಂದಿ ಡ್ರೈ ಐ, ಅಂದರೆ ಸಾಕಷ್ಟು ಕಣ್ಣೀರು ಉತ್ಪಾದಿಸಲು ಸಾಧ್ಯವಾಗದ ಸ್ಥಿತಿಗೆ ಒಳಗಾಗಿದ್ದಾರೆ. ಇದರಲ್ಲಿ ಶೇ 20ರಷ್ಟು ರೋಗಿಗಳು 40 ವರ್ಷದ ಒಳಗಿನವರು.

ಐ ಡ್ರಾಪ್ ಮಾರಾಟ ಹೆಚ್ಚಳ

ಐ ಡ್ರಾಪ್ ಮಾರಾಟ ಹೆಚ್ಚಳ

ಶುಷ್ಕ ನೇತ್ರಗಳಿಗೆ ಸರಳ ಚಿಕಿತ್ಸೆಯೆಂದರೆ ಐ ಡ್ರಾಪ್‌ಗಳು. 'ರಿಫ್ರೆಶ್ ಟಿಯರ್ಸ್' ಎಂಬ ಕಣ್ಣಿನ ಔಷಧದ ಮಾರಾಟ 4.71 ಲಕ್ಷದಿಂದ 8.15 ಲಕ್ಷ ಯುನಿಟ್‌ಗಳಿಗೆ ಹೆಚ್ಚಳ ಕಂಡಿದೆ. ಜುಲೈ 2014ರಿಂದ ಜುಲೈ 2018ರ ಅವಧಿಯಲ್ಲಿ ಇದರ ಮಾರಾಟ ಪ್ರಮಾಣ ಬರೋಬ್ಬರಿ ಶೇ 73ರಷ್ಟು ಏರಿಕೆಯಾಗಿದೆ ಎನ್ನುತ್ತದೆ ಎಐಒಸಿಡಿ-ಎಡಬ್ಲ್ಯೂಎಸಿಎಸ್ ನೀಡುವ ಮಾಹಿತಿ.

ಮತ್ತೊಂದು ಔ‍ಷಧ ಕಂಪೆನಿ ಬ್ರ್ಯಾಂಡ್ ಮ್ಯಾಕ್ಸ್ ಮಾಯಿಸ್ಚ್ 2014ರಲ್ಲಿ 82,600 ಯುನಿಟ್ ಮಾರಾಟ ಕಂಡಿದ್ದರೆ, ಈಗ ಅದರ ಪ್ರಮಾಣ 7.45 ಲಕ್ಷ ಯುನಿಟ್‌ಗೆ ತಲುಪಿದೆ. ಅಂದರೆ ಶೇ 800ರಷ್ಟು ಹೆಚ್ಚಳವಾಗಿದೆ.

ಮಾಯಿಶ್ಚೇನ್ ಕಂಪೆನಿಯು ಶೇ 130ರಷ್ಟು ಮಾರಾಟ ಏರಿಕೆ ಕಂಡಿದೆ. 2014ರಲ್ಲಿ 1.97 ಲಕ್ಷ ಯುನಿಟ್ ಮಾರಾಟವಾಗಿದ್ದರೆ ಕಳೆದ ವರ್ಷ 4.54 ಲಕ್ಷ ಯುನಿಟ್ ಮಾರಾಟವಾಗಿದೆ.

ಹೊಸ ಉತ್ಪನ್ನಗಳ ಬಿಡುಗಡೆ

ಹೊಸ ಉತ್ಪನ್ನಗಳ ಬಿಡುಗಡೆ

ಬೇಡಿಕೆ ಹೆಚ್ಚುತ್ತಿದ್ದಂತೆಯೇ ಔಷಧ ತಯಾರಕಾ ಕಂಪೆನಿಗಳು ಕಳೆದ ನಾಲ್ಕು ವರ್ಷಗಳಲ್ಲಿ ಐ ಡ್ರಾಪ್ ವಿಭಾಗಕ್ಕೆ ಸೇರಿದಂತೆಯೇ 284 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿವೆ. ಇದರಲ್ಲಿ ಸುಮಾರು 45 ಉತ್ಪನ್ನಗಳು (ಶೇ 15) ಶುಷ್ಕ ಕಣ್ಣುಗಳ ಚಿಕಿತ್ಸೆಗಾಗಿಯೇ ಮೀಸಲಾಗಿವೆ. ಉಳಿದ ಔಷಧಗಳು ಕಣ್ಣಿನ ಸೋಂಕು, ಕಾರ್ಯಕ್ಷಮತೆ ಮತ್ತು ಶಸ್ತ್ರಚಿಕಿತ್ಸಾ ನಂತರದ ಚಿಕಿತ್ಸೆಗಳಿಗಾಗಿ ಬಳಕೆಯಾಗುತ್ತಿವೆ.

ಸ್ಮಾರ್ಟ್‌ಫೋನ್‌ಗಳಿಂದ ಅಪಾಯ ಹೇಗೆ ?

ಸ್ಮಾರ್ಟ್‌ಫೋನ್‌ಗಳಿಂದ ಅಪಾಯ ಹೇಗೆ ?

ಡಿಜಿಟಲ್ ವಿಷನ್ ಸಿಂಡ್ರೋಮ್ ಅಥವಾ ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಕಣ್ಣಿನಲ್ಲಿ ಕಿರಿಕಿರಿಯುಂಟಾಗಿ ಮುಂದೆ ದೃಷ್ಟಿ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ. ಇದಕ್ಕೆ ಕಾರಣ ಡಿಜಿಟಲ್ ಪರದೆಗಳಿಗೆ ಸುದೀರ್ಘಾವಧಿ ನಮ್ಮ ಕಣ್ಣುಗಳನ್ನು ಒಡ್ಡಿಕೊಳ್ಳುವುದು. ನಾವು ಡಿಜಿಟಲ್ ಪರದೆಗಳಿಗೆ ಹೆಚ್ಚು ತೆರೆದುಕೊಂಡಂತೆ ಕಣ್ಣಿನ ಸಮಸ್ಯೆಯ ಮಟ್ಟವೂ ಹೆಚ್ಚುತ್ತದೆ.

ದಿನಕ್ಕೆ ಸರಾಸರಿ 2 ಗಂಟೆ 39 ನಿಮಿಷ

ದಿನಕ್ಕೆ ಸರಾಸರಿ 2 ಗಂಟೆ 39 ನಿಮಿಷ

ಸಂಶೋಧನಾ ಸಂಸ್ಥೆ ಇ-ಮಾರ್ಕೆಟರ್ ನಡೆಸಿದ ಅಧ್ಯಯನವೊಂದರ ಪ್ರಕಾರ, 2018ರಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರು ದಿನಕ್ಕೆ ಸರಾಸರಿ 2 ಗಂಟೆ 39 ನಿಮಿಷಗಳನ್ನು ತಮ್ಮ ಹ್ಯಾಂಡ್‌ಸೆಟ್‌ ಮುಂದೆ ಕಳೆಯುತ್ತಿದ್ದಾರೆ. ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ತಯಾರಿಸುವ ಅಕ್ಯುವ್ ಎಂಬ ಸಂಸ್ಥೆ ನಡೆಸಿದ ಮತ್ತೊಂದು ಸಮೀಕ್ಷೆ ಪ್ರಕಾರ, ಭಾರತದಲ್ಲಿ ಕಚೇರಿ ಕೆಲಸ ಮಾಡುವ ವ್ಯಕ್ತಿಯು ದಿನಕ್ಕೆ ಸರಾಸರಿ 6.5 ಗಂಟೆಗಳನ್ನು ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಎದುರು ಕಳೆಯುತ್ತಾರೆ.

ಪ್ರಕಟಿತ ಬರಹಕ್ಕೂ ಪರದೆಯ ಓದಿಗೂ ವ್ಯತ್ಯಾಸ

ಪ್ರಕಟಿತ ಬರಹಕ್ಕೂ ಪರದೆಯ ಓದಿಗೂ ವ್ಯತ್ಯಾಸ

ಮುದ್ರಿತ ಕಾಗದವೊಂದನ್ನು ಓದುವುದಕ್ಕೂ, ಕಂಪ್ಯೂಟರ್ ಅಥವಾ ಡಿಜಿಟಲ್ ಪರದೆ ಮೇಲೆ ನೋಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎನ್ನುತ್ತಾರೆ ಅಮೆರಿಕದ ವೈದ್ಯಕೀಯ ತಜ್ಞರು. ವಿದ್ಯುನ್ಮಾನ ಪರದೆಗಳಿಂದ ಹೊಮ್ಮುವ ಬೆಳಕು ತೀಕ್ಷ್ಣವಾಗಿರುತ್ತದೆ. ಅದರ ಪ್ರತಿಫಲನ ನೋಟವನ್ನು ಕ್ಲಿಷ್ಟಕರವಾಗಿಸುತ್ತದೆ.

ಇತರೆ ಬರವಣಿಗೆ ಮತ್ತು ಓದಿನ ಪ್ರಕ್ರಿಯೆಗಳಿಗಿಂತಲೂ ಈ ಉಪಕರಣಗಳನ್ನು ಬಳಸುವ ಅಂತರ ಹಾಗೂ ಕೋನಗಳೂ ವಿಭಿನ್ನವಾಗಿರುತ್ತವೆ. ಇದರ ಪರಿಣಾಮವಾಗಿ ಡಿಜಿಟಲ್ ಉಪಕರಣಗಳನ್ನು ನೋಡಲು ಕಣ್ಣನ್ನು ಫೋಕಸ್ ಮಾಡುವ ಮತ್ತು ಚಲನೆ ಮಾಡುವ ಕ್ರಿಯೆಗಳಿಗೆ ಹೆಚ್ಚಿನ ಕೆಲಸ ಕೊಡಬೇಕಾಗುತ್ತದೆ. ಕಣ್ಣಿನಲ್ಲಿರುವ ಸಣ್ಣ ಪ್ರಮಾಣದ ದೋಷವೂ ಡಿಜಿಟಲ್ ಪರದೆಗಳನ್ನು ವೀಕ್ಷಿಸುವ ಸಂದರ್ಭದಲ್ಲಿ ಹೆಚ್ಚು ಸಮಸ್ಯೆಗಳನ್ನು ನೀಡುತ್ತದೆ.

English summary
Eye drop has increased in India as the usage of smartphone and other gadgets become more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X