ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗ್ರಿ ಗೋಲ್ಡ್ 4109 ಕೋಟಿ ಆಸ್ತಿ ಇಡಿಯಿಂದ ಜಪ್ತಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 24: ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಲಕ್ಷಾಂತರ ಜನರಿಂದ ಹಣ ಕಟ್ಟಿಸಿಕೊಂಡು ಸಾವಿರಾರು ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪಕ್ಕೆ ಗುರಿಯಾಗಿರುವ ಅಗ್ರಿಗೋಲ್ಡ್ ಸಂಸ್ಥೆಗೆ ಸೇರಿದ 4109 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

ಅಗ್ರಿಗೋಲ್ಡ್ ಸಂಸ್ಥೆಗೆ ಸೇರಿದ ಆಂಧ್ರ ಪ್ರದೇಶದ ಅಮ್ಯೂಸ್ಮೆಂಟ್ ಪಾರ್ಕ್ ಆಸ್ತಿ, ಕರ್ನಾಟಕ, ತೆಲಂಗಾಣ, ಒರಿಸ್ಸಾ ತಮಿಳುನಾಡು ರಾಜ್ಯದಲ್ಲಿ ಹೊಂದಿರುವ ಸುಮಾರು 2809 ಆಸ್ತಿಗಳು ಮಟ್ಟುಗೋಲು ಆಗಿವೆ. ಸಂಸ್ಥೆಗೆ ಸೇರಿದ ಸುಮಾರು 4109 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಅಧಿಕೃತ ಟಿಟ್ಟರ್ ಖಾತೆಯಲ್ಲಿ ಪ್ರಕಟಣೆ ನೀಡಿದೆ.

ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪ ಕುರಿತು ಅಗ್ರಿಗೋಲ್ಡ್‌ ಸಂಸ್ಥೆ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಇದೇ ಆರೋಪಕ್ಕೆ ಸಂಬಂಧಿಸಿದಂತೆ ಎರಡು ದಿನದ ಹಿಂದಷ್ಟೇ ಸಂಸ್ಥೆಯ ಮುಖ್ಯಸ್ಥ ಅವ್ವ ವೆಂಕಟ ರಾಮರಾವ್, ಅವ್ವ ವೆಂಕಟ ಶೇಷು ಹಾಗೂ ಮತ್ತೊಬ್ಬ ನಿರ್ದೇಶಕನನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು.

 ED attached RS 4109 crore in Agri Gold scam

ಸಾರ್ವಜನಿಕರು ಹೂಡಿಕೆ ಮಾಡಿದ್ದ ಹಣವನ್ನು ಅಕ್ರಮವಾಗಿ ತಮ್ಮ ಒಡೆತನದ ಕಂಪನಿಗಳಿಗೆ ವರ್ಗಾವಣೆ ಮಾಡಿದ ಆರೋಪ ಕುರಿತು ಸಾಕ್ಷಾಧಾರಗಳನ್ನು ಸಂಗ್ರಹಿಸಿದ್ದ ಇಡಿ ಅಧಿಕಾರಿಗಳು ಮೂವರನ್ನು ಬಂಧಿಸಿದ್ದರು. ಅವರ ಬಂಧನದ ಬೆನ್ನಲ್ಲೇ ಇದೀಗ ನಾಲ್ಕು ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಕರ್ನಾಟಕ ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ , ಒರಿಸ್ಸಾ ರಾಜ್ಯಗಳಲ್ಲಿ ಸುಮಾರು 32 ಲಕ್ಷಕ್ಕೂ ಹೆಚ್ಚು ಜನರಿಂದ ಹಣ ಸಂಗ್ರಹಿಸಿ ಮೋಸ ಮಾಡಿದ ಆರೋಪ ಅಗ್ರಿಗೋಲ್ಡ್ ಸಂಸ್ಥೆ ಎದುರಿಸುತ್ತಿದೆ.

ಅಗ್ರಿಗೋಲ್ಡ್ ವಂಚನೆ ಇತಿಹಾಸ: 1995 ರಲ್ಲಿ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಅಗ್ರಿಗೋಲ್ಡ್ ಎಂಬ ಸಂಸ್ಥೆಯನ್ನು ಅವ್ವ ವೆಂಕಟರಾಮರಾವ್ ಮತ್ತು ಇತರರು ಸೇರಿ ಹುಟ್ಟು ಹಾಕಿದ್ದರು. ಮಾಸಿಕ ಹಣ ಹೂಡಿಕೆ ಮಾಡಿಸುವ ಸ್ಕೀಮ್ ಗಳನ್ನು ಸಂಸ್ಥೆ ಪರಿಚಯಿಸಿತ್ತು. ಹೆಚ್ಚು ಬಡ್ಡಿ ಕೊಡುವ ಆಸೆ ಹುಟ್ಟಿಸಿದ್ದರಿಂದ ಲಕ್ಷಾಂತರ ಜನರು, ಅದರಲ್ಲೂ ಹಳ್ಳಿ ಪ್ರದೇಶದ ಜನರೇ ಹೂಡಿಕೆ ಮಾಡಿದ್ದರು. ಹಣ ಹೂಡಿಕೆ ಮಾಡಿದವರಿಗೆ ಕಮೀಷನ್ ಆಸೆ ತೋರಿಸಿ ಏಜೆಂಟರನ್ನಾಗಿ ನೇಮಿಸಿತು. ಇದ್ದಕ್ಕಿದ್ದಂತೆ ಕಂಪನಿಯಲ್ಲಿ ಹೂಡಿಕೆ ಮಾಡುವರ ಸಂಖ್ಯೆ ಲಕ್ಷಗಳು ದಾಟಿತು. ಇದೇ ಅವಧಿಯಲ್ಲಿ ಅಗ್ರಿಗೋಲ್ಡ್ ಸಂಸ್ಥೆ ರಿಯಲ್ ಎಸ್ಟೇಟ್, ಅಗ್ರಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟಿತು. ಇದು ಜನರ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿತ್ತು. ಹೀಗಾಗಿ ಹೂಡಿಕೆ ಮಾಡುವ ಪ್ರಮಾಣ ದಿನೇ ದಿನೇ ಹೆಚ್ಚಾಗಿತ್ತು.

 ED attached RS 4109 crore in Agri Gold scam

ಹೂಡಿಕೆ ಮಾಡಿದ್ದ ಜನರಿಗೆ ವರ್ಷಗಳು ಕಳೆದರೂ ಹಣ ವಾಪಸು ಸಿಗಲಿಲ್ಲ. 2014 ರ ವೇಳೆಗೆ ಹಣ ಹೂಡಿಕೆ ಮಾಡಿದ್ದ ಜನರು ವಾಪಸು ಕೇಳಲು ಆರಂಭಿಸಿದ್ದರು. ಆಂಧ್ರ ಪ್ರದೇಶದ ವಿಜಯವಾಡದಲ್ಲಿದ್ದ ಕಂಪನಿ ಎದುರು ನಿಂತು ಪ್ರತಿಭಟನೆ ನಡೆಸಿದರು. ಹಣವೂ ಬರಲಿಲ್ಲ, ಬಡ್ಡಿಯೂ ಸಿಗಲಿಲ್ಲ. ಕೊಟ್ಟ ಚೆಕ್ ಗಳು ಬೌನ್ಸ್ ಆಗಿದ್ದ ಸಂಗತಿ ಹೊರಗೆ ಬಿತ್ತು. ಸುಮಾರು ತಿಂಗಳು ಹೀಗೆ ಸಾಗುತ್ತಿದ್ದಂತೆ ಅಗ್ರಿಗೋಲ್ಡ್ ಕಂಪನಿ ವಿರುದ್ಧ ವಂಚನೆ ದೂರುಗಳು ದಾಖಲಾದವು. ಅದೇ ವೇಳೆಗೆ ಎಲ್ಲಾ ರಾಜ್ಯಗಳಲ್ಲಿ ಅಗ್ರಿಗೋಲ್ಡ್ ಕಂಪನಿ ವಿರುದ್ಧ ಸರಣಿ ದೂರುಗಳು ದಾಖಲಾದವು.

ಅಗ್ರಿಗೋಲ್ಡ್ ಸಂಸ್ಥೆಯ ಕಚೇರಿಗಳಿಗೆ ನುಗ್ಗಿ ಗಲಾಟೆ ಮಾಡಿದರು. ಹಣ ಕಟ್ಟಿಸಿದ್ದ ಏಜೆಂಟರು ಊರು ಬಿಟ್ಟು ತಲೆ ಮರೆಸಿಕೊಂಡರು. ಇದೇ ಹಂತದಲ್ಲಿ ಅಗ್ರಿಗೋಲ್ಡ್ ಕಂಪನಿ ಜನರಿಂದ ಅಕ್ರಮವಾಗಿ ಹಣ ಸಂಗ್ರಹಿಸಿ ವಂಚನೆ ಮಾಡುತ್ತಿದೆ ಎಂಬ ಸಂಗತಿಯನ್ನು ಸೆಬಿ ಬಹಿರಂಗಪಡಿಸಿತ್ತು. ಅಗ್ರಿಗೋಲ್ಡ್ ಸಂಸ್ಥೆ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಹೈದರಾಬಾದ್ ಹೈಕೋರ್ಟ್‌ ಸಿಐಡಿ ತನಿಖೆಗೆ ವಹಿಸಿತ್ತು. ಹೀಗೆ ಬೆಳಕಿಗೆ ಬಂದ ಅಕ್ರಮ ವರ್ಷಗಳಾದರೂ ತನಿಖೆ ಹಾದಿಯಲ್ಲಿಯೇ ಸಾಗಿದೆ.

 ED attached RS 4109 crore in Agri Gold scam

ಹಣ ಹೂಡಿಕೆ ಮಾಡಿದ ಎಷ್ಟೋ ಮಂದಿ ಸಾವನ್ನಪ್ಪಿದ್ದಾರೆ. ಹಣ ಕಟ್ಟಿಸಿದ ಏಜೆಂಟರು ಊರು ಬಿಟ್ಟಿದ್ದಾರೆ. ಕಟ್ಟಿದ ಅಸಲಾದರೂ ಸಿಗಬಹುದೇ ಎಂಬ ಆಸೆ ಇಟ್ಟುಕೊಂಡು ಜಾತಕ ಪಕ್ಷಿಗಳಂತೆ ಜನ ಕಾಯುತ್ತಿದ್ದಾರೆ. ಸದ್ಯ ಇಡಿ ಅಧಿಕಾರಿಗಳು ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದು, ಹೂಡಿಕೆದಾರರಲ್ಲಿ ಸಣ್ಣ ಭರವಸೆ ಮೂಡಿಸಿದೆ. ಆದರೆ ಇಡಿ ಜಪ್ತಿ ಮಾಡಿರುವ ಹಣಕ್ಕೂ, ಅಗ್ರಿ ಗೋಲ್ಡ್ ಸಂಸ್ಥೆ ವಂಚನೆ ಮಾಡಿರುವ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂಬುದು ಅಷ್ಟೇ ವಾಸ್ತವ.

English summary
The Enforcement Directorate announced attachment of properties worth RS 4109 crore across three states in a money laundering case, linked ponzi scam involving Agri Gold group.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X