ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಲ್ಲು ಶಿಕ್ಷೆ ಪ್ರಕಟಿಸಿದ ನ್ಯಾ. ಯೋಗೇಶ್ ಹೇಳಿದ್ದೇನು?

By Prasad
|
Google Oneindia Kannada News

ನವದೆಹಲಿ, ಸೆ. 13 : "ಯುವತಿಯ ಮೇಲೆ ಕಂಡುಕೇಳರಿಯದಂತಹ ರೀತಿಯಲ್ಲಿ ಬರ್ಬರವಾಗಿ ಹಲ್ಲೆ ಮಾಡಿ ಅತ್ಯಾಚಾರ ಮಾಡಿದ್ದಕ್ಕೆ ಅತ್ಯುಗ್ರ ಶಿಕ್ಷೆ ನೀಡಲೇಬೇಕು. ಈ ಪ್ರಕರಣ ವಿರಳಾತಿ ವಿರಳ ಘಟನೆಗಳಲ್ಲಿ ಒಂದಾಗಿದೆ. ಎಲ್ಲ ನಾಲ್ಕು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ" ಇದು ಶುಕ್ರವಾರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಯೋಗೇಶ್ ಖನ್ನಾ ಅವರ ಮಾತುಗಳು.

ಡಿಸೆಂಬರ್ 16ರಂದು ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ ಆರು ಜನ ದುರುಳರು 23 ವರ್ಷದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿ, ಆಕೆಯ ಹೊಟ್ಟೆ ಮತ್ತು ಮರ್ಮಾಂಗವನ್ನು ಬಗೆದುಹಾಕಿದ್ದರು. ನಂತರ ಆಕೆ ಮತ್ತು ಆಕೆಯ ಜೊತೆಗಿದ್ದ ಸ್ನೇಹಿತನನ್ನು ಚಲಿಸುತ್ತಿದ್ದ ಬಸ್ಸಿನಿಂದಲೇ ಬೆತ್ತಲು ಸ್ಥಿತಿಯಲ್ಲಿ ಬಿಸಾಕಿದ್ದರು. ಈ ಘಟನೆ ರಾಷ್ಟ್ರದಾದ್ಯಂತ ಭಾರೀ ಆಕ್ರೋಶಕ್ಕೆ ಗುರಿಯಾಗಿತ್ತು. ದೇಶದ ಯುವಜನತೆಯೇ ಸಿಡಿದುನಿಂತಿತ್ತು.

Delhi gang-rape case : What Justice Yogesh Khanna said

ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಾಕೇತ್ ನ್ಯಾಯಾಲಯ ಸಂಕೀರ್ಣದಲ್ಲಿರುವ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶ ಯೋಗೇಶ್ ಖನ್ನಾ ಏನು ತೀರ್ಪು ನೀಡುತ್ತಾರೆ ಎಂದು ಇಡೀ ದೇಶ ಕಾದು ಕುಳಿತಿತ್ತು. ಇದೇ ನ್ಯಾಯಾಲಯ ಅತ್ಯಾಚಾರವೆಸಗಿದ್ದ ಬಾಲಾಪರಾಧಿಗೆ ಕೇವಲ 3 ವರ್ಷ ಮಾತ್ರ ಜೈಲು ಶಿಕ್ಷೆ ವಿಧಿಸಿದ್ದ ಹಿನ್ನೆಲೆಯಲ್ಲಿ ಈ ನಾಲ್ಕು ಅಪರಾಧಿಗಳಿಗೆ ಯಾವ ರೀತಿ ಶಿಕ್ಷೆ ನೀಡಬಹುದು ಎಂದು ಕಾತುರದಿಂದ ಕಾಯಲಾಗುತ್ತಿತ್ತು.

ಆದರೆ, ಹೀನಾಯ ಕೃತ್ಯವೆಸಗಿದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕೊಡಲೇಬೇಕು ಎಂಬ ಒಕ್ಕೊರಲಿಗೆ ದನಿಗೂಡಿಸಿರುವ ಕೋರ್ಟ್ ನಾಲ್ವರಿಗೂ ಗಲ್ಲು ಶಿಕ್ಷೆ ವಿಧಿಸಿ ಉಳಿದ ನ್ಯಾಯಾಲಯಗಳಿಗೆ ಮುನ್ನುಡಿಯನ್ನು ಹಾಕಿಕೊಟ್ಟಿದೆ. ಟ್ವಿಟ್ಟರಲ್ಲಿ ಈ ತೀರ್ಪಿನ ಕುರಿತು ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದೆ.

"ಅಪರಾಧಿಗಳು ಎಸಗಿರುವ ಇತರ ಅಪರಾಧಗಳ ಜೊತೆ, ನೇರವಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ)ಕ್ಕೆ ನೇರವಾಗಿ ಬಂದುಬಿಡುತ್ತೇನೆ. ಅಪರಾಧಿಗಳು ಎಸಗಿರುವುದು ಅಮಾನವೀಯ ಕೃತ್ಯ. ನ್ಯಾಯಾಲಯ ಇಂಥ ಅಪರಾಧವನ್ನು ಎಂದೂ ಸಹಿಸುವುದಿಲ್ಲ. ಎಲ್ಲ ನಾಲ್ವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ" ಎಂದು ನ್ಯಾ. ಯೋಗೇಶ್ ಖನ್ನಾ ಘೋಷಿಸುತ್ತಿದ್ದಂತೆ ಅಪರಾಧಿಗಳು ಚಿಕ್ಕಮಕ್ಕಳಂತೆ ಗಳಗಳನೆ ಅಳಲು ಆರಂಭಿಸಿದರೆ, ಉಳಿದವರಿಂದ ಜೈಕಾರ ಮುಗಿಲುಮುಟ್ಟಿತ್ತು.

"ಮುಕೇಶ್ (26), ಅಕ್ಷಯ್ ಠಾಕೂರ್ (28), ಪವನ್ ಗುಪ್ತಾ (19) ಮತ್ತು ವಿನಯ್ ಶರ್ಮಾ (20) ಮಾಡಿರುವ ಅಪರಾಧ ಗಲ್ಲು ಶಿಕ್ಷೆ ನೀಡಲಾಗುವ ವಿರಳಾತಿ ವಿರಳ ಅಪರಾಧಗಳ ವಿಭಾಗದಲ್ಲಿ ಬರುತ್ತದೆ. ಇಂಥ ಹೀನಾಯ ಕೃತ್ಯಕ್ಕೆ ಕೋರ್ಟ್ ಕುರುಡಾಗಲು ಸಾಧ್ಯವಿಲ್ಲ. ದಿನದಿಂದ ದಿನಕ್ಕೆ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ನ್ಯಾಯಾಲಯ ಕಣ್ಣುಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಮಹಿಳೆಯರಲ್ಲಿ ನ್ಯಾಯಾಲಯದ ಕುರಿತು ವಿಶ್ವಾಸವನ್ನು ಕುದುರಿಸುವ ಜವಾಬ್ದಾರಿ ಕೋರ್ಟಿನ ಮೇಲಿದೆ" ಎಂದು ನ್ಯಾಯಾಧೀಶರು ತೀರ್ಪು ನೀಡಿದ ಸಂದರ್ಭದಲ್ಲಿ ಹೇಳಿದ್ದಾರೆ.

English summary
'Death to all' - Saket court additional sessions judge announced while delivering judgement in Delhi gang-rape case. The judge Yogesh Khanna said the court cannot turn blind to such heinous crime. This case falls under rarest of rare category warranting death sentence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X