ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಅತ್ಯಂತ ವಿಶ್ವಾಸಾರ್ಹ ಡಿಜಿಟಲ್ ಮಾಧ್ಯಮ ಡೇಲಿಹಂಟ್ : ಉಮಂಗ್ ಬೇಡಿ

|
Google Oneindia Kannada News

"ಸುಳ್ಳು ಸುದ್ದಿಗಳು ಡಿಜಿಟಲ್ ಮಾಧ್ಯಮ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ. ಈ ವಿಷಯದಲ್ಲಿ ಡೇಲಿಹಂಟ್‌ ಬಹು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಬಳಕೆದಾರರಿಂದ ಬರುವ ಸುದ್ದಿಗಳನ್ನು ತೆಗೆದುಕೊಳ್ಳುವುದಿಲ್ಲ, ಕೇವಲ ವೃತ್ತಿಪರರಿಂದ ಬರುವ ಸುದ್ದಿ, ಮಾಹಿತಿಗಷ್ಟೆ ಆದ್ಯತೆ" ಎಂದು ಡಿಜಿಟಲ್ ಮಾಧ್ಯಮದ 'ಬಾಹುಬಲಿ' ಡೇಲಿಹಂಟ್‌ನ ಅಧ್ಯಕ್ಷ ಉಮಂಗ್ ಬೇಡಿ ಹೇಳಿದ್ದಾರೆ.

ಅವರು ಸಿಎನ್‌ಬಿಸಿ ಟಿವಿ 18ನಲ್ಲಿ ಉದಯೋನ್ಮುಖ ಉದ್ಯಮಿಗಳನ್ನು ಪರಿಚಯಿಸುವ 'ಯಂಗ್ ಟರ್ಕ್ಸ್' ಕಾರ್ಯಕ್ರಮಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಡೇಲಿಹಂಟ್‌ನ ಕಾರ್ಯವ್ಯಾಪ್ತಿ, ಉದ್ದೇಶಗಳು, ಸವಾಲುಗಳನ್ನು ಎದುರಿಸುತ್ತಿರುವ ರೀತಿ, ಡೇಲಿಹಂಟ್‌ನ ಮುಂದಿನ ಗುರಿ, ಗ್ರಾಹಕರನ್ನು ಅರಿತು ನೀಡುತ್ತಿರುವ ಸೇವೆಗಳು, ಮಾರುಕಟ್ಟೆಯಲ್ಲಿರುವ ಎಡರು-ತೊಡರುಗಳ ಬಗ್ಗೆ ಸಂದರ್ಶಕಿ ಸೈನಾ ದೆಹ್ನೂಗರಾ ಜೊತೆ ಅತ್ಯಂತ ಮುಕ್ತವಾಗಿ ಮಾತನಾಡಿದರು. ಉಮಂಗ್ ಬೇಡಿ ಅವರು ಈ ಮುಂಚೆ ಫೇಸ್‌ಬುಕ್ ಇಂಡಿಯಾ, ದಕ್ಷಿಣ ಏಷ್ಯಾಕ್ಕೆ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಸುಳ್ಳುಸುದ್ದಿಗೆ ಜಾಗವಿಲ್ಲ, ಗುಣಮಟ್ಟದೊಂದಿಗೆ ಕಾಂಪ್ರಮೈಸ್ ಆಗಲ್ಲ

"ಡೇಲಿಹಂಟ್‌ ಹಾಗೂ ಒನ್‌ಇಂಡಿಯಾದ ದೊಡ್ಡ ಸಂಪಾದಕೀಯ ತಂಡ ಸುಳ್ಳು ಸುದ್ದಿ ಜನರಿಗೆ ತಲುಪದಂತೆ ತಡೆಯುತ್ತದೆ. ದೇಶದಾದ್ಯಂತ ಇರುವ 10,000ಕ್ಕೂ ಹೆಚ್ಚು ಸ್ಟ್ರಿಂಜರ್ ಗಳಿಂದ ಬರುವ ಸುದ್ದಿಯ ಮೂಲದ ಹಿನ್ನೆಲೆಯನ್ನು ಗುರುತಿಸಲಾಗುತ್ತದೆ, ಸುದ್ದಿಯ ಮೌಲ್ಯವನ್ನು ಅಮೂಲಾಗ್ರವಾಗಿ ಪರಾಮರ್ಶಿಸಲಾಗುತ್ತದೆ. ಆನಂತರವೇ ಅದು ಬಳಕೆದಾರರಿಗೆ ತಲುಪುತ್ತದೆ. ದೊಡ್ಡ ಸುದ್ದಿಸಂಸ್ಥೆಗಳಿಂದ ಬರುವ ಸುದ್ದಿಗಳನ್ನೂ ಸಹ ಪರಾಮರ್ಶೆಗೆ ಒಳಪಡಿಸಿಯೇ ಗ್ರಾಹಕರಿಗೆ ನೀಡಲಾಗುತ್ತದೆ" ಎಂದು ಅವರು ಡೇಲಿಹಂಟ್ ನಲ್ಲಿರುವ ಸುದ್ದಿ ಪರಿಷ್ಕರಣಾ ಪ್ರಕ್ರಿಯೆ ಬಗ್ಗೆ ವಿವರಿಸಿದರು.

Dailyhunt is most reliable digital media in India : Umang Bedi

ಡೇಲಿಹಂಟ್‌ನಲ್ಲಿ, ಸುದ್ದಿ ಸಂಸ್ಥೆ ಹಾಗೂ ಸುದ್ದಿಗೆ ಗ್ರಾಹಕರೇ ಅಂಕಗಳನ್ನು (ರೇಟಿಂಗ್) ನಿರ್ಧರಿಸುವ ಅವಕಾಶ ಇದೆ. ಸುದ್ದಿಯೊಂದನ್ನು ಇಬ್ಬರಿಗಿಂತಲೂ ಹೆಚ್ಚು ಗ್ರಾಹಕರು 'ಸುಳ್ಳು ಸುದ್ದಿ' ಎಂದರೆ ನಾವು ಮತ್ತೊಮ್ಮೆ ಅದನ್ನು ಪರಾಮರ್ಶೆಗೆ ಒಳಪಡಿಸುತ್ತೇವೆ ಮತ್ತು ಆ ಸುದ್ದಿಯನ್ನು ಪ್ರಕಟಿಸಿದ ಸಂಸ್ಥೆಯನ್ನು ಸಂಪರ್ಕಿಸಿ ಸ್ಪಷ್ಟನೆ ಪಡೆಯುತ್ತೇವೆ" ಎಂದು ಡೇಲಿಹಂಟ್‌ ಸುಳ್ಳು ಸುದ್ದಿಗಳನ್ನು ಹೇಗೆ ಶೋಧಿಸುತ್ತದೆ ಮತ್ತು ಹೇಗೆ ಗುಣಮಟ್ಟದ ಸುದ್ದಿ ನೀಡುತ್ತದೆ ಎಂಬ ಬಗ್ಗೆ ಉಮಂಗ್ ವಿವರಣೆ ನೀಡಿದರು.

ಪ್ರಾದೇಶಿಕ ಭಾಷಿಕರನ್ನು ಡೇಲಿಹಂಟ್ ಹೇಗೆ ತಲುಪುತ್ತಿದೆ

ಭಾರತೀಯ ಇಂಟರ್ನೆಟ್‌ ಮಾರುಕಟ್ಟೆ ದೊಡ್ಡದಾಗಿ ಬೆಳೆದ ಬಗ್ಗೆ ಮಾತನಾಡಿದ ಉಮಂಗ್ ಅವರು, 'ಭಾರತೀಯ ಡಿಜಿಟಲ್ ಕ್ಷೇತ್ರದ ಮೇಲೆ ಜಿಯೋ ಮಾಡಿದ ಪರಿಣಾಮ ಅತಿ ದೊಡ್ಡದು. ಜಿಯೋ ಇಂದಾಗಿ ಕೇವಲ ಇಂಗ್ಲಿಷ್ ಮಾತನಾಡುತ್ತಿದ್ದ ಅಥವಾ ಕಾರ್ಪೊರೇಟ್ ವಲಯದವರ ಕೈಯಲ್ಲಿದ್ದ ಇಂಟರ್ನೆಟ್‌ ಸಾಮಾನ್ಯರಿಗೆ, ಅತಿ ಸಾಮಾನ್ಯರ ಕೈಗೆ ದೊರಕುವಂತಾಯಿತು, ಅಂತರ್ಜಾಲ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿತು, ಅಂತರ್ಜಾಲ ಆಧಾರಿತ ಲಕ್ಷಾಂತರ ಸೇವೆಗಳು ಪ್ರಾರಂಭವಾದುವು, ಅತ್ಯಂತ ಮುಖ್ಯವಾಗಿ ಪ್ರಾದೇಶಿಕ ಬಳಕೆದಾರರು ಹೆಚ್ಚಾದರು, ಹೀಗಾಗಿ ಡೇಲಿಹಂಟ್‌ ಪ್ರಾದೇಶಿಕ ಗ್ರಾಹಕರನ್ನು ಸುಲಭವಾಗಿ ತಲುಪುವಂತಾಗಿದೆ ಎಂದರು.

ಡೇಲಿಹಂಟ್‌ ಸ್ಥಳೀಯ ಸುದ್ದಿಗಳನ್ನು ನೀಡಲು ಹೆಚ್ಚು ಆದ್ಯತೆ ನೀಡುತ್ತದೆ. 15 ಪ್ರಾದೇಶಿಕ ಭಾಷೆಗಳಲ್ಲಿ ಡೇಲಿಹಂಟ್‌ ಸುದ್ದಿಗಳನ್ನು ಹಂಚುತ್ತಿದ್ದು, ಪ್ರಾದೇಶಿಕ ಸುದ್ದಿಗಳನ್ನು ಆಯಾ ಆಸಕ್ತ ಗ್ರಾಹಕರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದೆ. ಇದರಿಂದಾಗಿಯೇ ತಿಂಗಳಿಗೆ 13 ಬಿಲಿಯನ್ ಪೇಜ್‌ ವೀವ್ಸ್‌ (1300 ಕೋಟಿ) ಮತ್ತು 250 ಕೋಟಿ ವಿಡಿಯೋ ವೀಕ್ಷಣೆಯನ್ನು ಉತ್ಪಾದಿಸುತ್ತಿದೆ ಎಂದು ಡೇಲಿಹಂಟ್‌ನ ಬೃಹತ್ ವ್ಯಾಪ್ತಿಯ ಬಗ್ಗೆ ಉಮಂಗ್ ಮಾಹಿತಿ ನೀಡಿದರು.

Dailyhunt is most reliable digital media in India : Umang Bedi

ಎಡವೂ ಅಲ್ಲ, ಬಲವೂ ಅಲ್ಲ, ಡೇಲಿಹಂಟ್ ತಟಸ್ಥ

ಮಾಧ್ಯಮಗಳಲ್ಲಿಯೂ ಬಲಪಂಥ, ಎಡಪಂಥ ಎಂದು ಪಂಗಡಗಳಾಗಿ ಗ್ರಾಹಕರ ಅಭಿಪ್ರಾಯಗಳ ಮೇಲೆ ಪರಿಣಾಮ ಬೀರುತ್ತಿರುವ ಬಗ್ಗೆ ಮಾತನಾಡಿರುವ ಅವರು, ನಾವು ಯಾವುದೇ ಸುದ್ದಿ ಸಂಸ್ಥೆಯಿಂದ ಸುದ್ದಿಗಳನ್ನು ತೆಗೆದುಕೊಂಡರೂ ಆ ಸುದ್ದಿಯ ಇನ್ನೊಂದು ಕೋನದ ಸುದ್ದಿಯೂ ಸಹ ಗ್ರಾಹಕರಿಗೆ ದೊರಕುವಂತೆ ವ್ಯವಸ್ಥೆ ಮಾಡಿದ್ದೇವೆ. ಗ್ರಾಹಕನಿಗೆ ಯಾವುದೇ ವಿಷಯದ ಬಗ್ಗೆ 360 ಡಿಗ್ರಿ ಮಾಹಿತಿ ಹಾಗೂ ಅಭಿಪ್ರಾಯಗಳು ಲಭ್ಯವಾಗುವಂತಾಗಬೇಕು ಎಂಬುದು ನಮ್ಮ ಉದ್ದೇಶ. ಡೈಲಿಹಂಟ್ ಯಾವ ಪಂಥಕ್ಕೂ ಸೇರದೆ ತಟಸ್ಥವಾಗಿರುವುದರಿಂದ ಇದು ಸಾಧ್ಯವಾಗುತ್ತಿದೆ ಎಂದ ಉಮಂಗ್ ಗ್ರಾಹಕರ ಮೇಲೆ ಒಂದೇ ಪಂಥದ ಪ್ರಭಾವ ಉಂಟಾಗದಂತೆ ತಡೆಯುತ್ತಿರುವ ಬಗೆಯನ್ನು ವಿವರಿಸಿದರು.

ಬಳಕೆದಾರರಿಗೆ ಆಸಕ್ತಿಕರ ಎನಿಸುವಂತ ಸುದ್ದಿಗಳನ್ನು ನೀಡಲಾಗುತ್ತದೆ

ಡೇಲಿಹಂಟ್‌ ಸ್ವಚ್ಛವಾದ ಸುದ್ದಿಯನ್ನು ಮಾತ್ರವೇ ತನ್ನ ಗ್ರಾಹಕರಿಗೆ ನೀಡುತ್ತದೆ. ಗ್ರಾಹಕರು ಯಾರೊಂದಿಗಾದರೂ ಅದನ್ನು ಹಂಚಿಕೊಳ್ಳಲು ಸಾಧ್ಯವಾಗುವಂತಹ ಕಂಟೆಂಟ್‌ ಮಾತ್ರವನ್ನೇ ನೀಡಲಾಗುತ್ತಿದೆ. ನಮ್ಮ ಬಳಕೆದಾರರಲ್ಲಿ 30ರ ವಯಸ್ಸಿನ ಒಳಗೆ ಇರುವವರು 65%-68% ಜನ ಇದ್ದಾರೆ. ಡೇಲಿಹಂಟ್‌ 62% ಪುರುಷರ ಬಳಕೆದಾರರನ್ನು ಹೊಂದಿದ್ದರೆ 38% ಮಹಿಳಾ ಬಳಕೆದಾರರನ್ನು ಹೊಂದಿದೆ. ಗ್ರಾಹಕರ ಇಷ್ಟವಾದ ವಿಷಯಗಳನ್ನು ಆಧರಿಸಿ ಅವರಿಗೆ ಸುದ್ದಿಗಳನ್ನು ನೀಡುವ ವ್ಯವಸ್ಥೆ ಡೇಲಿಹಂಟ್‌ನಲ್ಲಿದೆ. ಆದರೆ ಡೇಲಿಹಂಟ್‌ ಗ್ರಾಹಕರ ವೈಯಕ್ತಿಕ ಮಾಹಿತಿ ಅಥವಾ ಇನ್ನಿತರೆ ಮಾಹಿತಿಗಳನ್ನು ಪಡೆಯುವುದಿಲ್ಲ. ಹಾಗಾಗಿಯೇ ಡೇಲಿಹಂಟ್‌ ಆಪ್‌ ಮೊಬೈಲ್‌ಗೆ ಹಾಕಿಕೊಂಡಾದ ಅದು ಯಾವುದೇ ಸೈನ್‌ ಇನ್‌ ಅನ್ನು ಕೇಳುವುದಿಲ್ಲ ಎಂದು ಉಮಂಗ್ ಬೇಡಿ ಅವರು ಡೇಲಿಹಂಟ್ ಆಪ್, ಗ್ರಾಹಕರ ಖಾಸಗಿ ಹಕ್ಕು ರಕ್ಷಣೆ ಬಗ್ಗೆ ವಹಿಸಿರುವ ಎಚ್ಚರಿಕೆ ಬಗ್ಗೆ ಹೇಳಿದರು.

ಡೇಲಿಹಂಟ್ ಟಿವಿ ಚಾನೆಲ್ ಬಿಡುಗಡೆ

ಡೇಲಿಹಂಟ್‌ ಟಿವಿ ಬಿಡುಗಡೆ ಮಾಡಿದ್ದು, ಒಟ್ಟು 543 ಚಾನೆಲ್‌ಗಳನ್ನು ಲಾಂಚ್ ಮಾಡುವ ಗುರಿಯನ್ನು ಹೊಂದಲಾಗಿದೆ. 543 ಲೋಕಸಭಾ ಕ್ಷೇತ್ರಗಳು ದೇಶದಲ್ಲಿದ್ದು ಎಲ್ಲವುಗಳ ಬಗ್ಗೆಯೂ ಪೂರ್ಣ ಮಾಹಿತಿ ಆಯಾ ಪ್ರಾಂತ್ಯದ ಗ್ರಾಹಕನಿಗೆ ದೊರಕಿಸುವುದು ನಮ್ಮ ಉದ್ದೇಶ. ಲೋಕಸಭಾ ಚುನಾವಣೆಗೆ ಸಮರೋಪಾದಿಯಲ್ಲಿ ಡೇಲಿಹಂಟ್‌ ತಯಾರಾಗುತ್ತಿದ್ದು, ಇದು ನಮ್ಮ 'ಐಪಿಎಲ್‌' ಆಗಿದೆ ಎಂದು ಉಮಂಗ್ ಹಾಸ್ಯ ಚಟಾಕಿ ಹಾರಿಸಿದರು.

ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆಪ್

ಡೇಲಿಹಂಟ್‌ ಭಾರತದ ವೇಗವಾಗಿ ಬೆಳೆಯುತ್ತಿರುವ ಆಪ್. ಕಳೆದ 15 ತಿಂಗಳಿನಿಂದಲೂ ನಾವು ಪ್ರತಿ ತಿಂಗಳೂ 10-15 ಮಿಲಿಯನ್ ಹೊಸ ಗ್ರಾಹಕರನ್ನು ಪಡೆದುಕೊಳ್ಳುತ್ತಲೇ ಇದ್ದೇವೆ. ಜ್ಯೋತಿಷ್ಯ, ಬಾಲಿವುಡ್, ಧಾರ್ಮಿಕತೆ, ಲೈಫ್‌ಸ್ಟೈಲ್, ಯೂತ್‌, ಕ್ರೀಡೆ, ಮಹಿಳೆ, ಈ ವಿಭಾಗದ ಕಂಟೆಂಟ್‌ ಹೆಚ್ಚು ಜನರನ್ನು ತಲುಪುತ್ತಿವೆ. ಈ ವಿಭಾಗದ ಬಹುತೇಕ ಸುದ್ದಿ ಅಥವಾ ಲೇಖನಗಳನ್ನು ವಿಡಿಯೋಗಳನ್ನಾಗಿಸಿ ಜನರಿಗೆ ತಲುಪಿಸುತ್ತಿದ್ದೇವೆ. ಇದರ ಜೊತೆಗೆ ಇತ್ತೀಚೆಗೆ ನಾವು ಸಣ್ಣ ಉದ್ಯಮಕ್ಕಾಗಿ ಸ್ವ-ಸೇವಾ ಆಯ್ಕೆಯೊಂದನ್ನು ಲಾಂಚ್ ಮಾಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

ಚೀನಾ ಮಾರುಕಟ್ಟೆಯೊಂದಿಗೆ ಭಾರತದ ಮಾರುಕಟ್ಟೆ ಹೋಲಿಕೆ

ಚೀನಾ ಹಾಗೂ ಭಾರತದ ಮಾರುಕಟ್ಟೆಗಳ ವಿಭಿನ್ನತೆಯ ಬಗ್ಗೆ ವಿಶ್ಲೇಷಿಸಿದ ಉಮಂಗ್, ಚೀನಾದ ಜನರ ತಲಾ ಆದಾಯ ಸರಾಸರಿ 9000-10000 ಡಾಲರ್ ಇದೆ. ಹಾಗಾಗಿ ಅದು ಮಾರುಕಟ್ಟೆಗೆ ಉತ್ತಮ ರಾಷ್ಟ್ರ. ಆದರೆ ಭಾರತದಲ್ಲಿ ತಲಾ ಆದಾಯ ಸರಾಸರಿ 1200-1800 ಡಾಲರ್ ಇದೆ. ಆದರೆ ಇತ್ತೀಚೆಗೆ ತಲಾ ಆದಾಯ ಸರಾಸರಿ ಹೆಚ್ಚುತ್ತಿರುವುದು ಇಲ್ಲಿನ ಉದ್ಯಮಗಳಿಗೆ ಆಶಾದಾಯಕ ಬೆಳವಣಿಗೆ. ಕೆಲವೇ ವರ್ಷಗಳಲ್ಲಿ ಭಾರತವು ವಿಶ್ವದ ಅತಿ ದೊಡ್ಡ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಲಿದೆ ಎಂದು ಅವರು ತಮ್ಮ ದೂರಗಾಮಿ ದೃಷ್ಟಿ ಮುಂದಿಟ್ಟರು. ಜೊತೆಗೆ ಚೀನಾದ ನ್ಯೂಸ್‌ ಡಾಗ್‌, ಅಲಿಬಾಬಾ ಭಾರತದಲ್ಲಿ ಏರಿದಷ್ಟೇ ವೇಗದಲ್ಲಿ ಕೆಳಗಿಳಿದ ಬಗೆಯನ್ನೂ ವಿವರಿಸಿದ ಅವರು, ಚೀನಾ ಹಾಗೂ ಭಾರತ ಮಾರುಕಟ್ಟೆ ಹೇಗೆ ವಿಭಿನ್ನವಾಗಿವೆ ಎಂದು ವರ್ಣಿಸಿದರು.

300 ಮಿಲಿಯನ್ ಬಳೆಕಾದರರ ಪಡೆಯವ ಗುರಿ

ಡೇಲಿಹಂಟ್ ಪ್ರಸ್ತುತ 186 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದ್ದು, 2019ರ ಅಂತ್ಯದ ವೇಳೆಗೆ 300 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದುವ ಗುರಿ ಇಟ್ಟುಕೊಂಡಿದೆ. ಚುನಾವಣೆ ಸಹ ಇರುವುದರಿಂದ ಕ್ರಿಯಾಶೀಲವಾಗಿ ಯೋಜನೆಗಳನ್ನು ರೂಪಿಸಿ, ಜನರಿಗೆ ಸುಲಭವಾಗಿ ಮಾಹಿತಿ ದೊರಕುವಂತೆ ಮಾಡುವ ಉದ್ದೇಶ ಇದೆ. ನಮ್ಮ ಬಳಕೆದಾರರ ವ್ಯಾಪ್ತಿ ದೊಡ್ಡದಾಗಿದ್ದು, ಅದನ್ನು ಮತ್ತಷ್ಟು ಹಿಗ್ಗಿಸುವ ಗುರಿ ಹೊಂದಿದ್ದೇವೆ. ಜೊತೆಗೆ ಮಹಿಳಾ ಬಳಕೆದಾರರನ್ನು ಸೆಳೆಯುವ ಗುರಿ ಸಹ ಈ ಹಣಕಾಸು ವರ್ಷದಲ್ಲಿ ಹೊಂದಲಾಗಿದೆ ಎಂದು 2019ರ ಗುರಿಗಳ ಬಗ್ಗೆ ಉಮಂಗ್ ಮಾತನಾಡಿದರು.

ಭಾರತದ ಅತಿದೊಡ್ಡ ವಿಶ್ವಾಸಾರ್ಹ ಡಿಜಿಟಲ್ ಮಾಧ್ಯಮ

ಈ ವರ್ಷದಾಂತ್ಯಕ್ಕೆ ನಾವು ಭಾರತದ ಅತಿ ದೊಡ್ಡ ಡಿಜಿಟಲ್ ಮಾಧ್ಯಮ ಆಗುವ ಗುರಿ ಹೊಂದಿದ್ದೇವೆ. ಜೊತೆಗೆ ವಿವಿಧ ಸುದ್ದಿಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಿ ಅವರಿಗೆ, ಡೇಲಿಹಂಟ್‌ ವೇದಿಕೆಯಲ್ಲಿ ಅವಕಾಶ ನೀಡಿ, ಅವರಿಗೆ ಆರ್ಥಿಕ ಸಹಾಯ ಮಾಡುವ ಗುರಿ ಸಹ ಇದೆ. ಬಹುಕೋಟಿ ಸಂಸ್ಥೆಯಾಗಿ ರೂಪುಗೊಳ್ಳುವ ಗುರಿಯನ್ನು ಡೇಲಿಹಂಟ್‌ ಹೊಂದಿದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಅತಿ ದೊಡ್ಡ ವಿಶ್ವಾಸಾರ್ಹ ಡಿಜಿಟಲ್ ಮಾಧ್ಯಮ ವೇದಿಕೆ ಡೈಲಿಹಂಟ್ ಎನಿಸಿಕೊಳ್ಳುವತ್ತ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಉಮಂಗ್ ಅವರು ಡೇಲಿಹಂಟ್‌ನ ಭವಿಷ್ಯದ ಕಾರ್ಯಸೂಚಿ ತೆರೆದಿಟ್ಟರು.

ಮಿಲಿಯನ್ ಡಾಲರ್‌ ಸಂಸ್ಥೆ ಆಗುವತ್ತ ಡೇಲಿಹಂಟ್‌

ಡೇಲಿಹಂಟ್‌ ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಹಲವು ಪ್ರಮುಖ ಬಂಡವಾಳ ಹೂಡಿಕೆ ಸಂಸ್ಥೆಗಳು ನಮ್ಮ ಮೇಲೆ ಹೂಡಿಕೆ ಮಾಡಲು ತುದಿಗಾಲಲ್ಲಿ ಕಾಯುತ್ತಿವೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಘೋಷಿಸಲಾಗುವುದು. ಆದರೆ ಪ್ರಸ್ತುತ ಏನಿದ್ದರೂ ನಮ್ಮ ಗುರಿ ಅತ್ಯಂತ ದೊಡ್ಡ ವಿಶ್ವಾಸಾರ್ಹ ಡಿಜಿಟಲ್ ಮಾಧ್ಯಮವಾಗಿ ಗುರುತಿಸಿಕೊಳ್ಳುವುದಷ್ಟೆ ಎಂದು ಉಮಂಗ್ ತಮ್ಮ ಮಾತಿಗೆ ತೆರೆ ಎಳೆದರು.

English summary
In CNBC TV 18 interview Dailyhunt's president Umang Bedi said that 'Dailyhunt's core strategy revolves around providing content in regional languages with 'deep personalisation' using technology. He also said, Dailyhunt is most reliable digital media in India. Excerpts from the interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X