• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

8 ಕೋಟಿ ವಲಸೆ ಕಾರ್ಮಿಕರಿಗೆ ಊಟ, ಸಾರಿಗೆ ವ್ಯವಸ್ಥೆಗಾಗಿ ಮನವಿ

|

ಕೋವಿಡ್ 19 ಕಾರಣದಿಂದ ವಲಸೆ ಮತ್ತು ಅಪಾಯದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರಿಗೆ ಪಡಿತರ ಮತ್ತು ಆಹಾರ ಭದ್ರತೆಯ ಜೊತೆಗೆ ಕನಿಷ್ಠ ದರದಲ್ಲಿ ತವರಿಗೆ ಮರಳಲು ಅನುಕೂಲ ಕಲ್ಪಿಸುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಹಾಕಲಾಗಿದೆ.

ಸಾಮಾಜಿಕ ಕಾರ್ಯಕರ್ತರಾದ ಹರ್ಷ್‌ ಮಂದರ್‌, ಅಂಜಲಿ ಭಾರದ್ವಾಜ್‌ ಮತ್ತು ಜಗದೀಪ್‌ ಚೊಕ್ಕರ್‌ ಅವರು ಸುಪ್ರೀಂ ಕೋರ್ಟ್‌ಗೆ ತುರ್ತು ಮನವಿ ಸಲ್ಲಿಸಿದ್ದಾರೆ.

ಪ್ರಸಕ್ತ ವರ್ಷದಲ್ಲಿ ರಾಜ್ಯ ಸರ್ಕಾರಗಳು ವಿಕೇಂದ್ರೀಕೃತ ರೀತಿಯಲ್ಲಿ ಲಾಕ್‌ಡೌನ್‌ ಮತ್ತು ಕರ್ಫ್ಯೂ ವಿಧಿಸುತ್ತಿದ್ದು, "ಮತ್ತೊಮ್ಮೆ ಬದುಕು ಅಪಾಯಕ್ಕೆ ಸಿಲುಕಿರುವ ಕೂಲಿ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರಿಗೆ ಕನಿಷ್ಠ ಕಲ್ಯಾಣ ಕಾರ್ಯಕ್ರಮ ಜಾರಿಗೊಳಿಸಲಾಗಿದೆ" ಎಂದು ಅರ್ಜಿದಾರರು ವಾದಿಸಿದ್ದಾರೆ.

"ನಗರ ಪ್ರದೇಶದಲ್ಲಿ ತವರಿಗೆ ಮರಳಲು ರೈಲು ಮತ್ತು ಬಸ್‌ ನಿಲ್ದಾಣದಲ್ಲಿ ಗುಂಪುಗಟ್ಟಿರುವ ವಲಸೆ ಕಾರ್ಮಿಕರಿರುವ ದೃಶ್ಯಗಳು ಎರಡನೇ ಮಹಾ ವಲಸೆಯಂತೆ ಭಾಸವಾಗುತ್ತಿದೆ" ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕಳೆದ ವರ್ಷ ದಾಖಲಾಗಿದ್ದ ಸ್ವಯಂಪ್ರೇರಿತ ಪ್ರಕರಣಕ್ಕೆ ಪೂರಕವಾಗಿ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರು ಮನವಿ ಸಲ್ಲಿಸಿದ್ದು, ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (ಎನ್‌ಎಫ್‌ಎಸ್‌ಎ) ಅಥವಾ ರಾಜ್ಯ ಪಡಿತರ ಯೋಜನೆಯಡಿ ಸೇರ್ಪಡೆಗೊಳ್ಳದ, ಆದರೆ ಆ ಯೋಜನೆಯಡಿ ಕಳೆದ ವರ್ಷ ಗುರುತಿಸಲ್ಪಟ್ಟಿರುವ ಎಂಟು ಕೋಟಿ ವಲಸೆ ಕಾರ್ಮಿಕರಿಗೆ ಆತ್ಮನಿರ್ಭರ್‌ ಭಾರತ ಯೋಜನೆಯಡಿ ಪಡಿತರ ವಿತರಿಸುವ ಯೋಜನೆಯನ್ನು ಪುನಾರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಮನವಿ ಮಾಡಲಾಗಿದೆ.

ಕಳೆದ ವರ್ಷ ವಲಸೆ ಕಾರ್ಮಿಕರ ಬಿಕ್ಕಟ್ಟು ಉಲ್ಬಣಿಸಿದ ಹಿನ್ನೆಲೆಯಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗಿತ್ತಾದರೂ ಅದನ್ನು ಕಳೆದ ವರ್ಷದ ಜೂನ್‌ವರೆಗೆ ಮಾತ್ರ ಅಂದರೆ ಎರಡು ತಿಂಗಳು ಮಾತ್ರ ಸಕ್ರಿಯಗೊಳಿಸಲಾಗಿತ್ತು. ಆ ಬಳಿಕ ಅದನ್ನು ನಿಲ್ಲಿಸಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಕೈಗಾರಿಕಾ ಪ್ರದೇಶಗಳು, ನಿರಾಶ್ರಿತ ಪ್ರದೇಶಗಳು, ಬಸ್‌ ಮತ್ತು ರೈಲು ನಿಲ್ದಾಣಗಳು ಮತ್ತು ಇತರ ಕಡೆ ಗುಂಪುಗೂಡುವ ವಲಸೆ ಕಾರ್ಮಿಕರನ್ನು ಕೇಂದ್ರೀಕರಿಸಿ ಅವರಿಗೆ ಸಮುದಾಯಗಳ ಸಂಪರ್ಕ, ಹಸಿವು ನೀಗಿಸುವ ಪರಿಹಾರ ಕೇಂದ್ರಗಳ ಮೂಲಕ ಉಚಿತ ಆಹಾರ ಪೂರೈಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಸಾಮಾಜಿಕ ಕಾರ್ಯಕರ್ತರು ಮನವಿ ಮಾಡಿದ್ದಾರೆ.

ಕೋವಿಡ್‌ ಶಿಷ್ಟಾಚಾರಗಳನ್ನು ಅನುಸರಿಸುವುದರೊಂದಿಗೆ ಕನಿಷ್ಠ ದರದಲ್ಲಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತಲುಪಲು ಸಾರಿಗೆ ವ್ಯವಸ್ಥೆ ಮಾಡುವ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.

ಲಾಕ್‌ಡೌನ್‌ ಮತ್ತು ನಿರ್ಬಂಧ ಕ್ರಮಗಳಿಂದಾಗಿ ಆರ್ಥಿಕ ಚಟುವಟಿಕೆಗಳು ನಿಂತಿವೆ. ಹೀಗಾಗಿ ವಿವಿಧ ರಾಜ್ಯಗಳಲ್ಲಿ ಉಲ್ಲೇಖಿತವಾದ ಕನಿಷ್ಠ ಕೂಲಿ/ವೇತನವನ್ನು ವಲಸೆ ಕಾರ್ಮಿಕರ ಬ್ಯಾಂಕ್‌ ಖಾತೆಗೆ ವರ್ಗಾಯಿಸುವ ಕೆಲಸವನ್ನು ತುರ್ತಾಗಿ ಹಾಗೂ ಜಂಟಿಯಾಗಿ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಲು ಕೋರಲಾಗಿದೆ.( ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)

English summary
Covid: A plea before the Supreme Court seeking directions to ensure the migrant and stranded labourers are not deprived of ration and food security and are able to travel back to their homes at nominal cost.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X