ನೊಂದಣಿಯಿಲ್ಲದೆ ಚಾರ್‌ಧಾಮ್ ದರ್ಶನಕ್ಕೆ ಜನರ ದಂಡು: 2013ರ ದಾಖಲೆ ಬ್ರೇಕ್
ಕೇದಾರನಾಥ ಮೇ 19: ದೇಶದಲ್ಲಿ ಕೊರೊನಾ ಲಾಕ್‌ಡೌನ್ ಬಳಿಕ ಸುಮಾರು ಎರಡೂವರೆ ವರ್ಷಗಳ ನಂತರ ಮೇ 06 ರಂದು ಕೇದಾರನಾಥ ಧಾಮದ ಬಾಗಿಲು ತೆರೆಯಿತು. ಹೀಗಾಗಿ ಈ ವರ್ಷ ದೇಗುಲಕ್ಕೆ ವಿವಿಧ ರಾಜ್ಯಗಳಿಂದ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಜೊತೆಗೆ ಚಾರ್‌ಧಾಮ್ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ 2013ರ ದಾಖಲೆಯನ್ನು ಬ್ರೇಕ್ ಮಾಡಿದೆ. ಇದರಿಂದಾಗಿ ಕಳೆದ ವಾರಾಂತ್ಯದಲ್ಲಿ ಉತ್ತರಾಖಂಡದ ಸುತ್ತಲೂ ಭಾರಿ ಟ್ರಾಫಿಕ್ ಜಾಮ್ ನಿರ್ಮಾಣವಾಗಿತ್ತು. ನೋಂದಣಿ ಮಾಡಿಸಿಕೊಳ್ಳದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಯಾತ್ರೆಗೆ ಬರುತ್ತಿದ್ದು, ಅಂತಹ ಯಾತ್ರಿಗಳನ್ನು ಪೊಲೀಸರು ಹಾಗೂ ಆರೋಗ್ಯ ತಪಾಸಣಾ ಅಧಿಕಾರಿಗಳು ವಾಪಸ್ ಕಳುಹಿಸುತ್ತಿದ್ದಾರೆ.
ಚಾರ್ ಧಾಮ್‌ಗಳು ದೇಶ ಮತ್ತು ವಿದೇಶಗಳಿಂದ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಮತ್ತು ಭಕ್ತರನ್ನು ಸೆಳೆಯುತ್ತವೆ. ಜೊತೆಗೆ ಈ ವರ್ಷ ಯಾತ್ರಾರ್ಥಿಗಳು COVID-19 ಪರೀಕ್ಷಾ ವರದಿ ಅಥವಾ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯವಲ್ಲ. ಹೀಗಾಗಿ ಚಾರ್‌ಧಾಮ್ ಯಾತ್ರಿಗಳ ಸಂಖ್ಯೆ ಹೆಚ್ಚಾಗಿದೆ. ಇದೀಗ ಅಧಿಕಾರಿಗಳು ಬದಲಾವಣೆ ತಂದಿರುವುದರಿಂದ ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಚಾರ್‌ಧಾಮ್ ಯಾತ್ರೆ 2022: ಇದುವರೆಗೂ 41 ಯಾತ್ರಾರ್ಥಿಗಳ ಸಾವು

ಶಿವಪುರಿ ಚೌಕಿಯಲ್ಲಿ ನೊಂದಣಿ ಕೇಂದ್ರ
ನೋಂದಣಿ ಇಲ್ಲದೆ ಬರುವವರಿಗೆ ಎರಡು ಪ್ರತ್ಯೇಕ ಚೆಕ್‌ಪೋಸ್ಟ್‌ಗಳಿಗೆ ಆಡಳಿತದಿಂದ ಆದೇಶ ನೀಡಲಾಗಿದೆ. ಕೇದಾರನಾಥ ಮತ್ತು ಬದರಿನಾಥಕ್ಕೆ ಭೇಟಿ ನೀಡುವ ಭಕ್ತರ ನೋಂದಣಿ ಪರಿಶೀಲನೆ ಅಥವಾ ಆಫ್‌ಲೈನ್ ನೋಂದಣಿಗಾಗಿ ಋಷಿಕೇಶದ ಶಿವಪುರಿ ಚೌಕಿಯಲ್ಲಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಆನ್‌ಲೈನ್ ನೋಂದಣಿಯ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲದ ಕಾರಣ, ಚೆಕ್‌ಪೋಸ್ಟ್‌ಗಳಲ್ಲಿ ಉದ್ದನೆಯ ಸರತಿ ಸಾಲುಗಳಲ್ಲಿ ಯಾತ್ರಿಗಳು ನಿಂತಿರುವುದು ಕಂಡು ಬಂದಿದೆ. ಉತ್ತರಾಖಂಡ್, ಚಾರ್ ಧಾಮ್‌ಗಾಗಿ ಪಿಎಂ ಮೋದಿ ಸರ್ಕಾರ ಮತ್ತು ಪುಷ್ಕರ್ ಸಿಂಗ್ ಧಾಮಿ ಅವರ ಪ್ರಯತ್ನಗಳನ್ನು ಭಕ್ತರು ಶ್ಲಾಘಿಸುತ್ತಿದ್ದಾರೆ.

ಎರಡು ದಿನಕ್ಕೂ ಹೆಚ್ಚು ಕಾಲ ವೃದ್ಧರ ವೇಟಿಂಗ್
ಕುದುರೆ ಮತ್ತು ಹೇಸರಗತ್ತೆ ಟ್ರಿಪ್ ಕೌಂಟರ್‌ಗಳ ಹೊರಗೆ ನಡೆಯುತ್ತಿರುವ ಅವ್ಯವಸ್ಥೆಯಷ್ಟು ನೋಂದಣಿ ಸಮಸ್ಯೆ ದೊಡ್ಡದಾಗಿ ಕಾಣಲಿಲ್ಲ. ಎರಡು ದಿನಕ್ಕೂ ಹೆಚ್ಚು ಕಾಲ ತಮ್ಮ ಸರದಿಗಾಗಿ ಕಾಯಬೇಕಾದ ಸ್ಥಿತಿಯಲ್ಲಿರುವ ವಯೋವೃದ್ಧರಿಗೆ ಇದು ನಿರಾಸೆ ಮೂಡಿಸಿದೆ. ಪವಿತ್ರ ದೇಗುಲಕ್ಕೆ ಹೋಗುವ ದಾರಿ ಕಿರಿದಾಗಿದ್ದು, ಪಾದಚಾರಿಗಳಿಗೆ ತೊಂದರೆಯಾಗುವುದರಿಂದ ಎಲ್ಲ ಜನರನ್ನು ಒಂದೇ ಬಾರಿಗೆ ಕುದುರೆಗಳ ಮೇಲೆ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಕೌಂಟರ್ ಸೆಂಟರ್‌ನ ಅಧಿಕಾರಿಯೊಬ್ಬರು ಹಂಚಿಕೊಂಡರು. ಆ ಸಂದರ್ಭದಲ್ಲಿ ಅಪಘಾತಗಳ ಸಾಧ್ಯತೆಯೂ ಹೆಚ್ಚುತ್ತದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕುದುರೆಗಳು ಕಡಿಮೆಯಾಗಿವೆ ಎಂದು ತಿಳಿಸಿದರು. ಕುದುರೆ ಸವಾರರು ಹೆಚ್ಚಿನ ಬೆಲೆಗೆ ಬೇಡಿಕೆ ಇಟ್ಟಿರುವ ಬಗ್ಗೆ ಜನರು ದೂರುತ್ತಿದ್ದಾರೆ. ಇದರಿಂದ ಕುದುರೆ ಸವಾರಿಯನ್ನು ಭಕ್ತರು ಕಡಿಮೆ ಮಾಡುತ್ತಿದ್ದಾರೆ. ವೃದ್ಧರು ಮಾತ್ರ ಎರಡು ದಿನಕ್ಕೂ ಹೆಚ್ಚು ಕಾಲ ಕಾದು ಕುದುರೆ ಸವಾರಿಯನ್ನು ಮಾಡುತ್ತಿರುವುದು ಕಂಡು ಬಂದಿದೆ.

ಪಾದಚಾರಿ ಮಾರ್ಗ ನಿರ್ಮಾಣ
ಗೌರಿ ಕುಂಡದಲ್ಲಿ ಇರುವ ಜನರು ನಿತ್ಯ ಮಂತ್ರಗಳನ್ನು ಮತ್ತು ಪ್ರಾರ್ಥನೆಗಳನ್ನು ಪಠಿಸುವ ಮೂಲಕ ತಮ್ಮ ಉತ್ಸಾಹವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ 2013 ರ ದುರಂತದ ಸಮಯದಲ್ಲಿ ಸಂಪೂರ್ಣವಾಗಿ ನಾಶವಾದ ವಾಕ್‌ವೇ ಅನ್ನು ಉತ್ತಮ ಪಾದಚಾರಿ ಮಾರ್ಗವಾಗಿ ಬದಲಾಯಿಸಲಾಗಿದೆ. ಇನ್ನು ಸರ್ಕಾರದ ಕ್ರಮದಿಂದ ಭಕ್ತರು ಸಂತಸಗೊಂಡಿದ್ದಾರೆ. 2013 ರ ವಿನಾಶದ ನಂತರ ಅಧಿಕಾರಿಗಳು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿ ಪ್ರಭಾವಿತರಾಗಿದ್ದಾರೆ. ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದಿದ್ದಾರೆ.

ಯಾತ್ರಿಗಳಿಗೆ ಮಿತಿ ನಿಗದಿ
ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಸಾಮಾನ್ಯ ಖಾಯಿಲೆ'ಗಳಿಂದ ಇದುವರೆಗೆ ಚಾರ್ ಧಾಮ್ ಯಾತ್ರೆಯ ಮಾರ್ಗದಲ್ಲಿ ಕನಿಷ್ಠ 39 ಯಾತ್ರಿಕರು ಸಾವನ್ನಪ್ಪಿದ್ದಾರೆ ಎಂದು ಉತ್ತರಾಖಂಡದ ಮಹಾನಿರ್ದೇಶಕ ಡಾ. ಶೈಲ್ಜಾ ಭಟ್ ಮಾಹಿತಿ ನೀಡಿದ್ದಾರೆ. ಹೀಗಾಗಿ ವೈದ್ಯಕೀಯವಾಗಿ ಅನರ್ಹವಾಗಿರುವ ಮತ್ತು ಯಾವುದೇ ರೀತಿಯ ದೈಹಿಕ ಖಾಯಿಲೆ ಇರುವ ಯಾತ್ರಾರ್ಥಿಗಳು ಚಾರ್‌ಧಾಮ್ ಯಾತ್ರೆಗೆ ಪ್ರಯಾಣಿಸದಂತೆ ಸಲಹೆ ನೀಡಿದರು.
ಪರಿಷ್ಕೃತ ಆದೇಶದ ಪ್ರಕಾರ ಪ್ರತಿದಿನ ಗಂಗೋತ್ರಿಗೆ 8 ಸಾವಿರ, ಯಮುನೋತ್ರಿಯಲ್ಲಿ 5 ಸಾವಿರ, ಕೇದಾರನಾಥದಲ್ಲಿ 13 ಸಾವಿರ ಮತ್ತು ಬದರಿನಾಥಕ್ಕೆ 16 ಸಾವಿರ ಯಾತ್ರಾರ್ಥಿಗಳು ಭೇಟಿ ನೀಡಬಹುದಾಗಿದೆ. ಆದರೆ, ಈ ಹಿಂದೆ ನೀಡಿದ ಸೂಚನೆಯಂತೆ ದರ್ಶನ ಆಗುತ್ತಿಲ್ಲ. ಧಾಮಗಳಲ್ಲಿ ಸೇರುವ ಜನಸಮೂಹದ ಪ್ರಕಾರ, ದರ್ಶನಕ್ಕೆ ಮಿತಿಯನ್ನು ನಿಗದಿಪಡಿಸುವುದು ಸುಲಭವಲ್ಲ. ಪೊಲೀಸರ ಪರವಾಗಿ ಸಂಖ್ಯೆ ಹೆಚ್ಚಾಗಿರುವುದರಿಂದ ನೋಂದಣಿ ಇಲ್ಲದೆ ಹೋಗುವ ಪ್ರಯಾಣಿಕರನ್ನು ಚೆಕ್‌ಪೋಸ್ಟ್‌ನಲ್ಲಿಯೇ ನಿಲ್ಲಿಸುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಜನಸಂದಣಿಯನ್ನು ಗಮನಿಸಿದರೆ, ಪ್ರಸ್ತುತ ಚಾರ್‌ಧಾಮ್‌ನಲ್ಲಿನ ಪ್ರಯಾಣವು ಆಡಳಿತ ಮತ್ತು ಸರ್ಕಾರದ ನಿಯಂತ್ರಣದಲ್ಲಿಲ್ಲ ಎಂಬುದು ಸ್ಪಷ್ಟವಾಗಿದೆ.