ನಾಸಾ ಡಿಸೈನ್ ಮಾಡಿರುವ ವೆಂಟಿಲೇಟರ್ ಗಳು ಬೆಂಗಳೂರಿನಲ್ಲೇ ತಯಾರಿ!
ಬೆಂಗಳೂರು, ಮೇ.31: ನೊವೆಲ್ ಕೊರೊನಾ ವೈರಸ್ ಸೋಂಕಿನಿಂದ ತತ್ತರಿಸಿದ ರಾಷ್ಟ್ರಗಳಲ್ಲೇ ಅಮೆರಿಕಾ ಅಗ್ರಸ್ಥಾನದಲ್ಲಿದೆ. ಯುನೈಟೆಡ್ ಸ್ಟೇಟ್ಟ್ ಆಪ್ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾಗೂ ಕೂಡಾ ಕೊವಿಡ್-19 ಬಿಸಿ ತಟ್ಟಿದೆ.
ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ನಾಸಾ ಸಂಸ್ಥೆಯು ಹೊಸದಾಗಿ ವಿಶಿಷ್ಟ ರೀತಿಯ ವೆಂಟಿಲೇಟ್ ಒಂದನ್ನು ಡಿಸೈನ್ ಮಾಡಿದೆ. ನಾಸಾದ ಜೆಟ್ ಪ್ರಪಲ್ಶನ್ ಲ್ಯಾಬ್ನಲ್ಲಿ ಇದರ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದೆ. ಬೆಂಗಳೂರಿನ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ನಾಸಾಗೆ ವಿಶಿಷ್ಟ ವೆಂಟಿಲೇಟರ್ ಗಳನ್ನು ತಯಾರಿಸಿ ಕೊಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.
ನಾಸಾದಿಂದ ವಿಶೇಷ 'ವೈಟಲ್' ವೆಂಟಿಲೇಟರ್ ತಯಾರಿಕೆ: ಭಾರತೀಯ ಕಂಪನಿಗಳ ಸಾಥ್
ಜಗತ್ತಿನಾದ್ಯಂತ ಒಟ್ಟು 21 ಸಂಸ್ಥೆಗಳಿಗೆ ಈ ವಿಶಿಷ್ಟ ವೆಂಟಿಲೇಟರ್ ತಯಾರಿಕಾ ಜವಾಬ್ದಾರಿ ನಾಸಾ ನೀಡಿದೆ. ಭಾರತ, ಮೆಕ್ಸಿಕೊ, ಬ್ರೆಜಿಲ್, ಮಲೇಷಿಯಾ ಮತ್ತು ಯುಎಇಯ ಸಂಸ್ಥೆಗಳು ನಾಸಾಗೆ ಈ ವಿಶಿಷ್ಟ ವೆಂಟಿಲೇಟರ್ ಗಳನ್ನು ತಯಾರಿಸಿ ನೀಡಲು ಸಿದ್ಧವಾಗಿವೆ. ವೆಂಟಿಲೇಟರ್ನ ತಂತ್ರಜ್ಞಾನ, ಸಾಫ್ಟ್ ವೇರ್, ಸ್ಕೆಚಸ್ ಎಲ್ಲವನ್ನೂ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಗೆ ನಾಸಾ ಒದಗಿಸಿದೆ.
ನಾಸಾ ಡಿಸೈನ್ ಮಾಡಿದ ವೆಂಟಿಲೇಟರ್ ಗಳ ಬೆಲೆ ಕಡಿಮೆ:
ಅಸಲಿಗೆ ಬೇರೆ ವೆಂಟಿಲೇಟರ್ ಗಳಿಗೆ ಹೋಲಿಕೆ ಮಾಡಿ ನೋಡಿದಾಗ ನಾಸಾ ಡಿಸೈನ್ ಮಾಡಿರುವ ವೆಂಟಿಲೇಟರ್ ಗಳಲ್ಲಿ ಬಿಡಿಭಾಗಗಳನ್ನು ಬಳಸಿಕೊಂಡು ಸಿದ್ಧಪಡಿಸಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ನಾಸಾ ಡಿಸೈನ್ ಮಾಡಿರುವ ವೆಂಟಿಲೇಟರ್ ಗಳ ಬೆಲೆಯೂ ಕೂಡಾ ಬೇರೆ ವೆಂಟಿಲೇಟರ್ಗಳಿಗಿಂತ ಕಡಿಮೆ ಇರುತ್ತದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಇದರಿಂದ ವಿಶ್ವದಾದ್ಯಂತ ಎಲ್ಲಾ ರೋಗಿಗಳಿಗೆ ಅನುಕೂಲಕರವಾಗಲಿದೆ ಎನ್ನಲಾಗಿದೆ.
ಸದ್ಯದ ಮಟ್ಟಿಗೆ ಬೆಂಗಳೂರಿನ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಸಂಸ್ಥೆಯು ನಾಸಾಗೆ ಒಟ್ಟು 5 ವೆಂಟಿಲೇಟರ್ ಗಳ ಪ್ರೊಟೊಟೈಪ್ ತಯಾರಿಸಿ ಕಳಿಸಲು ಸಜ್ಜಾಗಿದೆ. ಎಫ್ಡಿಎ ಸಮ್ಮತಿ ಬಳಿಕ ಅಮೆರಿಕಾದಲ್ಲಿ ಮತ್ತು ಯೂರೋಪ್ನಲ್ಲಿ ಮಾರಾಟ ಮಾಡಲು ಸಂಸ್ಥೆ ಚಿಂತನೆ ನಡೆಸಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲೂ 5 ವೆಂಟಿಲೇಟರ್ ತಯಾರಿಸಿ ಐಸಿಎಂಆರ್ ಗೆ ಪ್ರೊಟೊಟೈಪ್ ಕಳಿಸಲು ನಿರ್ಧರಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ವೆಂಟಿಲೇಟರ್ಗಳಿಗಿಂತ ಇದು ವಿಶಿಷ್ಟ ಮತ್ತು ಅತ್ಯಗತ್ಯ ತಂತ್ರಜ್ಞಾನ ಹೊಂದಿದೆ. ಭವಿಷ್ಯದಲ್ಲಿ ಅತ್ಯುತ್ತಮ ಮಾರುಕಟ್ಟೆ ಹೊಂದಿದೆ ಎನ್ನುವ ಭರವಸೆಯನ್ನು ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಸಂಸ್ಥೆ ಹೊಂದಿದೆ.