ವಿಮಾನ ಪ್ರಯಾಣ ವೇಳೆಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ
ನವದೆಹಲಿ, ಮಾರ್ಚ್ 17: ಬೆಂಗಳೂರು-ಜೈಪುರ ನಡುವೆ ಸಂಚರಿಸುತ್ತಿದ್ದ ವಿಮಾನದಲ್ಲಿಯೇ ಬುಧವಾರ ಬೆಳಿಗ್ಗೆ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಸಂಗತಿ ನಡೆದಿದೆ.
ಬುಧವಾರ ಬೆಳಿಗ್ಗೆ ಬೆಂಗಳೂರಿನಿಂದ ಜೈಪುರಕ್ಕೆ ಇಂಡಿಗೋ 6E469 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ಸಂದರ್ಭ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯೆ ಡಾ. ಸುಬಹಾನಾ ನಜೀರ್, ವಿಮಾನ ಸಿಬ್ಬಂದಿ ನೆರವಿನಿಂದ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ವಿಮಾನ ಸಂಚರಿಸುವ ವೇಳೆಯೇ ವೈದ್ಯರು ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವಿಮಾನ ಯಾನ ಸಂಸ್ಥೆ ಹೇಳಿಕೆ ನೀಡಿದೆ.
ಮೈಸೂರು: ಪಾರ್ಕ್ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಬೆಂಗಳೂರಿನಿಂದ ಬುಧವಾರ ಬೆಳಿಗ್ಗೆ 5.45ಕ್ಕೆ ವಿಮಾನ ಟೇಕ್ಆಫ್ ಆಗಿದ್ದು, ಬೆಳಿಗ್ಗೆ 8 ಗಂಟೆಗೆ ಜೈಪುರ ತಲುಪಿದೆ. ವಿಮಾನ ತಲುಪುವ ವೇಳೆಗೆ ಜೈಪುರ ವಿಮಾನ ನಿಲ್ದಾಣದಲ್ಲಿ ಆಂಬುಲೆನ್ಸ ಹಾಗೂ ವೈದ್ಯರ ವ್ಯವಸ್ಥೆ ಮಾಡಲಾಗಿತ್ತು.
ಹೆರಿಗೆ ಮಾಡಿಸಿದ ವೈದ್ಯರನ್ನು ಸ್ವಾಗತಿಸಿ ಇಂಡಿಗೋ ಜೈಪುರ ಸಿಬ್ಬಂದಿ ಧನ್ಯವಾದ ಸಲ್ಲಿಸಿದ್ದಾರೆ.