ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಆರೋಗ್ಯ ಸ್ಥಿತಿ ಬಗ್ಗೆ ಸಂಸತ್ತಿಗೆ ರಾಜನಾಥ್ ಸಿಂಗ್ ಮಾಹಿತಿ
ನವದೆಹಲಿ, ಡಿಸೆಂಬರ್ 9: "ಭಾರತೀಯ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ಸಿಂಗ್ ರಾವತ್ ಸೇರಿದಂತೆ 13 ಮಂದಿ ಮೃತಪಟ್ಟ ಹೆಲಿಕಾಪ್ಟರ್ ದುರಂತದಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಒಬ್ಬರೇ ಬದುಕುಳಿದಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೂ, ಸ್ಥಿರವಾಗಿದೆ. ಲೈಫ್ ಸಪೋರ್ಟ್ ಮೇಲೆ ಉಸಿರಾಡುತ್ತಿರುವ ಅವರನ್ನು ಬದುಕಿಸಿಕೊಳ್ಳಲು ಎಲ್ಲ ರೀತಿ ಪ್ರಯತ್ನ ಮಾಡಲಾಗುತ್ತಿದೆ," ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ ಕಲಾಪದಲ್ಲಿ ಮಾಹಿತಿ ನೀಡಿದ್ದಾರೆ.
"ಹಲಿಕಾಪ್ಟರ್ ಪತನದ ಘಟನೆಯಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಸುಟ್ಟ ಗಾಯಗಳಾಗಿದ್ದು, ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಕರೆ ತರಲಾಗಿದೆ," ಎಂದು ಅವರ ತಂದೆ ನಿವೃತ್ತ ಕರ್ನಲ್ ಕೆಪಿ ಸಿಂಗ್ ತಿಳಿಸಿದ್ದಾರೆ. ಅವರನ್ನು ಬೆಂಗಳೂರಿಗೆ ರವಾನಿಸಿದ ಸಂದರ್ಭದಲ್ಲಿ ನಾವು ವೆಲ್ಲಿಂಗ್ಟನ್ ತಲುಪಿದೆವು ಎಂದರು.
ಕ್ಯಾಪ್ಟನ್ ವರುಣ್ ಸಿಂಗ್ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ
ತಮ್ಮ ಮಗನ ಆರೋಗ್ಯ ಸ್ಥಿತಿ ಬಗ್ಗೆ ಕೇಳಿದ ಪ್ರಶ್ನೆಗೆ ತಂದೆ ನಿವೃತ್ತ ಕರ್ನಲ್ ಕೆಪಿ ಸಿಂಗ್ ಉತ್ತರಿಸಿದರು. "ಅದರ ಬಗ್ಗೆ ನಾನು ಏನನ್ನೂ ಹೇಳುವುದಕ್ಕೆ ಸಾಧ್ಯವಿಲ್ಲ, ನನಗೆ ಭರವಸೆ ಇಲ್ಲ. ಅವರ ಆರೋಗ್ಯ ಸ್ಥಿತಿಯು ಗಂಭೀರವಾಗಿದೆ ನಿಜ, ಆದರೆ ಸ್ಥಿರವಾಗಿದೆ ಎಂದಿದ್ದಾರೆ.
ಮುಂಬೈನಲ್ಲಿ ವರುಣ್ ಸಿಂಗ್ ತಂದೆ-ತಾಯಿ:
ನಿವೃತ್ತ ಕರ್ನಲ್ ಕೆಪಿ ಸಿಂಗ್ ಮತ್ತು ಅವರ ಪತ್ನಿ ಉಮಾ ಅವರು ಮುಂಬೈನಲ್ಲಿ ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿರುವ ತಮ್ಮ ಕಿರಿಯ ಮಗ ತನುಜ್ ಅವರ ಮನೆಯಲ್ಲಿ ವಾಸವಾಗಿದ್ದರು. "ನಾನು ಇಂದು ಬೆಳಿಗ್ಗೆ ಕರ್ನಲ್ ಕೆ ಪಿ ಸಿಂಗ್ ಅವರೊಂದಿಗೆ ಮಾತನಾಡಿದ್ದೇನೆ. ಅವರು ತಮ್ಮ ಮಗ ಹೋರಾಟಗಾರ ಮತ್ತು ವಿಜಯಶಾಲಿಯಾಗುತ್ತಾರೆ ಎಂದು ಹೇಳಿದ್ದಾರೆ," ಎಂದು ಕರ್ನಲ್ ಸಿಂಗ್ ಅವರ ಸ್ನೇಹಿತ ಲೆಫ್ಟಿನೆಂಟ್ ಕರ್ನಲ್ ಇಶಾನ್ ಆರ್ ಹೇಳಿದ್ದಾರೆ.
ಶೌರ್ಯ ಚಕ್ರ ಪ್ರಶಸ್ತಿ:
ಕಳೆದ ವರ್ಷ ಪ್ರಮುಖ ತಾಂತ್ರಿಕ ಸಮಸ್ಯೆಗಳ ನಡುವೆಯೂ ಸುರಕ್ಷಿತವಾಗಿ ವಿಮಾನವನ್ನು ನಿರ್ವಹಿಸಿದ ಅವರ ಧೈರ್ಯ ಮತ್ತು ಸಾಧನೆಯನ್ನು ಗುರುತಿಸಿ 2021ರ ಆಗಸ್ಟ್ ತಿಂಗಳಿನಲ್ಲಿ ಶೌರ್ಯ ಚಕ್ರ ಪ್ರಶಸ್ತಿ ನೀಡಲಾಗಿತ್ತು. ಅವರು ತಮ್ಮ ತೇಜಸ್ ಯುದ್ಧವಿಮಾನವನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾದರು.
ರಾವತ್ ಅವರನ್ನು ಸ್ವಾಗತಿಸಲು ತೆರಳಿದ್ದ ಸಿಂಗ್:
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಜನರಲ್ ಬಿಪಿನ್ ರಾವತ್ ಅವರನ್ನು ಸ್ವಾಗತಿಸಲು ಮತ್ತು ಅವರನ್ನು ವೆಲ್ಲಿಂಗ್ಟನ್ನ ರಕ್ಷಣಾ ಸೇವೆ ಸಿಬ್ಬಂದಿ ಕಾಲೇಜಿಗೆ ಕರೆದೊಯ್ಯಲು ಸೂಲೂರಿಗೆ ತೆರಳಿದ್ದರು. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಸಿಬ್ಬಂದಿಯನ್ನು ನಿರ್ದೇಶಿಸುತ್ತಿದ್ದ ಸಂಸ್ಥೆಯಲ್ಲಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಜನರಲ್ ಬಿಪಿನ್ ರಾವತ್ ಮಾತನಾಡಬೇಕಿತ್ತು.
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಸೇನಾ ಹಿನ್ನೆಲೆ:
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಕೂಡ ಸೇನಾ ಹಿನ್ನೆಲೆಯನ್ನು ಹೊಂದಿದ್ದಾರೆ. ಇವರ ತಂದೆ ತಂದೆ ಪೂರ್ವ ಉತ್ತರ ಪ್ರದೇಶದ ಡಿಯೋರಿಯಾ ಗ್ರಾಮವಾಗಿದ್ದು, ತಂದೆ ಕೆ ಪಿ ಸಿಂಗ್ ಅವರು ಸೇನೆಯಿಂದ ಕರ್ನಲ್ ಆಗಿ ನಿವೃತ್ತರಾಗಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕ ಅಖಿಲೇಶ್ ಪ್ರತಾಪ್ ಸಿಂಗ್, ವರುಣ್ ಸಿಂಗ್ ಅವರ ಚಿಕ್ಕಪ್ಪ ಆಗಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಗ್ರೂಪ್ ಕ್ಯಾಪ್ಟನ್ ಸಿಂಗ್ ಅವರ ಚಿಕ್ಕಪ್ಪ ದಿನೇಶ್ ಪ್ರತಾಪ್ ಸಿಂಗ್, "ಅವರು ಪ್ರಸ್ತುತ ಆಸ್ಪತ್ರೆಯಲ್ಲಿದ್ದಾರೆ, ವಾಯುಪಡೆ ಬುಲೆಟಿನ್ ಹೊರಡಿಸಿದಾಗ ಅವರ ಸ್ಥಿತಿಯ ಬಗ್ಗೆ ನಮಗೆ ಮಾಹಿತಿ ಸಿಗುತ್ತದೆ" ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಸೇನಾ ಹೆಲಿಕಾಪ್ಟರ್ ಪತನದ ಹಿನ್ನೆಲೆ?:
ತಮಿಳುನಾಡಿನ ನೀಲ್ಗಿರಿ ಜಿಲ್ಲೆಯ ಕುನೂರ್ ಬಳಿ ಬುಧವಾರ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಭಾರತದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಸೇರಿ ಒಟ್ಟು 13 ಜನರು ಮೃತಪಟ್ಟಿದ್ದಾರೆ. ಹೆಲಿಕಾಪ್ಟರ್ ಪತನಗೊಂಡ ಸ್ಥಳದಿಂದ ರಕ್ಷಿಸಲ್ಪಟ್ಟಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಶೇ.80 ಸುಟ್ಟ ಗಾಯಗಳಾಗಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.