ರಜನಿ ಎಂಬ ಸಿನಿಮಾ ಪೋಸ್ಟರ್ ಹಾಗೂ ರಾಜಕಾರಣಕ್ಕೆ ಹೊಂದದ ಫ್ರೇಮು!

Posted By:
Subscribe to Oneindia Kannada

ಬೆಂಗಳೂರು, ಮೇ 17: ನಟ ರಜನೀಕಾಂತ್ ಬಗ್ಗೆ ಹರಿದಾಡಿದಷ್ಟು ವದಂತಿಗಳು ಪ್ರಾಯಶಃ ಬೇರೆ ಯಾವ ನಟರ ಬಗ್ಗೆಯೂ ಕೇಳಿರಲಾರದು. ಒಂದಂಶ ಗಮನಿಸಿದ್ದೀರಾ, ರಜನಿ ಹೊಸ ಸಿನಿಮಾ ಬಿಡುಗಡೆಗೆ ಆಚೀಚೆ ಶುರುವಾಗುತ್ತೆ ನೋಡಿ, ಇದು ಅವರ ಕೊನೆ ಸಿನಿಮಾ. ರಾಜಕಾರಣಕ್ಕೆ ಬರ್ತಾರಂತೆ ಎಂಬ ಸುದ್ದಿ ಗಿರಕಿ ಹೊಡೆಯುವುದಕ್ಕೆ ಆರಂಭವಾಗುತ್ತದೆ.

ಇಷ್ಟೇ ಆಗಿದ್ದರೆ ಪರ್ವಾಗಿಲ್ಲ. ರಜನಿ ಹಿಮಾಲಯಕ್ಕೆ ಹೋಗ್ತಾರಂತೆ. ಅಲ್ಲೇ ಆಧ್ಯಾತ್ಮಿಕ ಜೀವನ ನಡೆಸುತ್ತಾರೆ ಎಂಬ ವದಂತಿ ಕೆಲವಾರು ದಿನ ಹರಿದಾಡುತ್ತಿತ್ತು. ಬಿಡಿ, ಇವೆಲ್ಲ ನಿಮಗೆ ಗೊತ್ತಿರುತ್ತದೆ. ಆದರೆ ಇವತ್ತಿಗೆ ಒಂದು ರಾಜಕೀಯ ಪಕ್ಷ ಆರಂಭಿಸೋದು ಹಾಗೂ ಅದನ್ನು ದಷ್ಟಪುಷ್ಟ ಮಾಡೋದು ಖಂಡಿತಾ ಸಲೀಸಲ್ಲ. ಈ ಸಂದರ್ಭದಲ್ಲಿ ಕನ್ನಡದ ಸಾಹಸಿ ನಿರ್ಮಾಪಕ ದ್ವಾರಕೀಶ್ ಅವರ ಮಾತೊಂದು ನೆನಪಾಗುತ್ತಿದೆ.[ರಜನಿ ಸಾರ್ ಬಿಜೆಪಿ ಯಾವಾಗ ಸೇರ್ತೀರಿ? ನೋ ಕಾಮೆಂಟ್ಸ್!]

ಕನ್ನಡ ನಾಡು ಪಕ್ಷದಿಂದ ಅವರು ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಚುನಾವಣೆ ಪ್ರಚಾರಕ್ಕೆ ಅವರು ತೆರಳಿದ್ದ ವೇಳೆ ಭಾರೀ ಜನರು ಸೇರಿದ್ದರಂತೆ. ಅದನ್ನು ಕಂಡು ದ್ವಾರಕೀಶ್ ಬಲೇ ಹಿಗ್ಗು ಪಟ್ಟಿದ್ದರಂತೆ. ಚುನಾವಣೆ ಫಲಿತಾಂಶ ಬಂದಾಗ ಸಭೆಯಲ್ಲಿ ಬಂದಿದ್ದವರ ಪೈಕಿ ಅರ್ಧದಷ್ಟು ಜನರು ಮತ ಹಾಕಿದ್ದರೂ ಸಾಕಿತ್ತು ಎಂದಿದ್ದರು. ರಜನಿ ತಾರಾ ವರ್ಚಸ್ಸು ಏನೇ ಇದ್ದರೂ ಸಿದ್ಧಾಂತ, ಹೋರಾಟ, ಚಳವಳಿ ಇಂಥ ಯಾವ ಹಿನ್ನೆಲೆಯೂ ಅವರಿಗಿಲ್ಲ.

ಒಂದು ವೇಳೆ ರಜನೀಕಾಂತ್ ರಾಜಕಾರಣಕ್ಕೆ ಬಂದರೆ ಏನೇನು ಸವಾಲು ಎದುರಾಗಬಹುದು. ಈ ವಿಶೇಷ ವರದಿ ಆ ಬಗ್ಗೆ ಕೆಲ ಪ್ರಶ್ನೆಗಳನ್ನು ತೆರೆದಿಟ್ಟಿದೆ.[ಬೆಂಗಳೂರಿನ ಮರಾಠಿಗ ರಜನಿಗೆ ರಾಜಕೀಯದಲ್ಲಿ ಸೋಲು ಗ್ಯಾರಂಟಿ: ಸ್ವಾಮಿ]

ಅರವತ್ತಾರು ವರ್ಷದ ರಜನಿಗೆ ಇದು ಸಾಧ್ಯವಾ?

ಅರವತ್ತಾರು ವರ್ಷದ ರಜನಿಗೆ ಇದು ಸಾಧ್ಯವಾ?

ದಿವಂಗತ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಅವರು ಆಂಧ್ರದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿದ್ದು ಅಷ್ಟು ಸುಲಭದಲ್ಲಿ ಅಲ್ಲ. ಅವರು ಇಡೀ ಆಂಧ್ರ ಪ್ರವಾಸ ಮಾಡಿದರು. ಎಲ್ಲ ಊರುಗಳಿಗೆ ನಡೆದು ಹೋದರು. ಅಲ್ಲಿನ ಜನರನ್ನು ಅರ್ಥ ಮಾಡಿಕೊಂಡರು. ಇದು ಒಬ್ಬ ವೈಎಸ್ ಆರ್ ಕಥೆಯಲ್ಲ. ಮಹಾನ್ ನಾಯಕರಾಗಿ ಅಭ್ಯುದಯವಾದ ಬಹುತೇಕರ ರಾಜಕೀಯ ಜೀವನ ಆರಂಭವಾದದ್ದು ಹೀಗೆ. ಆದರೆ ಅರವತ್ತಾರು ವರ್ಷದ, ಅನಾರೋಗ್ಯ ಸಮಸ್ಯೆಗಳಿಂದ ಚೇತರಿಸಿಕೊಳ್ಳುತ್ತಿರುವ ರಜನಿಗೆ ಇದು ಸಾಧ್ಯವಾ?

ಪಕ್ಷ ಕಟ್ಟಿ ಬಸವಳಿದಿದ್ದಾರೆ

ಪಕ್ಷ ಕಟ್ಟಿ ಬಸವಳಿದಿದ್ದಾರೆ

ಈಗ ರಜನಿ ರಾಜಕೀಯಕ್ಕೆ ಬರಲಿ ಅನ್ನುತ್ತಿರುವುದು ಬಿಜೆಪಿ. ಆ ಪಕ್ಷಕ್ಕೆ ರಜನಿ ವರ್ಚಸ್ಸು ಬೇಕು. ಆ ಮೂಲಕ ತಮಿಳುನಾಡಿನಲ್ಲಿ ನೆಲೆಯೂರಬೇಕು. ಇನ್ನು ಸ್ವಂತ ಪಕ್ಷ ಅಂತೀರಾ? ಎಷ್ಟೇ ಶ್ರೀಮಂತರಾದವರೇ, ರಾಜಕೀಯದ ಪಂಟರೇ ಪಕ್ಷ ಕಟ್ಟಿ ಉಸ್ಸಪ್ಪೋ ಅಂದಿದ್ದಾರೆ. ಇನ್ನು ಆಂಧ್ರದಲ್ಲಿ ಚಿರಂಜೀವಿ ಸ್ಥಿತಿ ಏನಾಗಿದೆ ಅನ್ನೋದು ಎಲ್ಲರಿಗೂ ತಿಳಿದ ವಿಷಯ. ಇನ್ನು ಪವನ್ ಕಲ್ಯಾಣ್ ಏನನ್ನೂ ಸಾಬೀತು ಪಡಿಸಲು ಸಾಧ್ಯವಾಗಿಲ್ಲ.

ಸುಬ್ರಮಣಿಯನ್ ಸ್ವಾಮಿ ಮಾತು ನಿಜ

ಸುಬ್ರಮಣಿಯನ್ ಸ್ವಾಮಿ ಮಾತು ನಿಜ

ಇನ್ನು ಬಿಜೆಪಿ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರ ಮಾತು ನಿಜ. ರಜನಿ ತುಂಬ ಓದಿಕೊಂಡವರಲ್ಲ. ಅವರ ರಾಜಕೀಯ ಸಿದ್ಧಾಂತ, ತತ್ವ ಏನು ಎಂಬುದು ಈವರೆಗೆ ಗೊತ್ತಾಗಿಲ್ಲ. ಯಾರೋ ಬರೆದ ಡೈಲಾಗ್ ಸುಲಭವಾಗಿ ಹೇಳಬಹುದು. ಆದರೆ ಆ ತಕ್ಷಣಕ್ಕೆ ಎದುರಾಗುವ ಪ್ರಶ್ನೆಗಳಿಗೆ ಉತ್ತರಿಸಿ, ಜಯಿಸುವುದು ಸಲೀಸಲ್ಲ. ಏಕೆಂದರೆ ರಾಜಕಾರಣ ಅಂದರೆ ಡೈಲಾಗ್ ಒಪ್ಪಿಸುವ ಕೆಲಸವಲ್ಲ.

ಜಾತಿ, ಧರ್ಮ, ಸಿದ್ಧಾಂತ..

ಜಾತಿ, ಧರ್ಮ, ಸಿದ್ಧಾಂತ..

ಎಲ್ಲ ಜಾತಿ, ಧರ್ಮ, ಸಿದ್ಧಾಂತದ ಆಚೆಗೂ ಜನರು ನಟ-ನಟಿಯರನ್ನು ಇಷ್ಟಪಡುತ್ತಾರೆ. ಏಕೆಂದರೆ ಅಲ್ಲಿರುವುದು ಶುದ್ಧ ಮನರಂಜನೆ. ಮತ ಇಲ್ಲ, ಅಧಿಕಾರ ಇಲ್ಲ, ಸಿದ್ಧಾಂತ-ತತ್ವಗಳಿಲ್ಲ. ಆದರೆ ರಾಜಕಾರಣ ಅಂತ ಬಂದರೆ ಅಲ್ಲಿ ಆದ್ಯತೆ ವಿಷಯವಾಗುತ್ತದೆ. ಜಾತಿ, ಧರ್ಮ, ಸಿದ್ಧಾಂತ ಎಲ್ಲವೂ ಮುನ್ನೆಲೆಗೆ ಬರುತ್ತದೆ.

ಯಾರ ಪರವೂ ವಹಿಸದಂತಿರಲು ಸಾಧ್ಯವಾ?

ಯಾರ ಪರವೂ ವಹಿಸದಂತಿರಲು ಸಾಧ್ಯವಾ?

ಒಬ್ಬ ನಟರಾಗಿ ಎಲ್ಲ ಪ್ರಾದೇಶಿಕ ಭಾಗದವರು ರಜನಿಯನ್ನು ಒಪ್ಪುತ್ತಾರೆ. ಆದರೆ ರಾಜಕಾರಣಕ್ಕೆ ಬಂದು, ಅಧಿಕಾರ ಸಿಕ್ಕರೆ ಎಲ್ಲರನ್ನೂ ಒಪ್ಪಿಸುವ ಅನಿವಾರ್ಯ ಎದುರಾಗುತ್ತದೆ. ಉದಾಹರಣೆ ಕೇಳಿ, ರಜನಿ ಒಂದು ವೇಳೆ ಕೇಂದ್ರ ಸಚಿವರಾದರೆ, ಕಾವೇರಿ ವಿವಾದ ಎದುರಾಗಿ, ಅದನ್ನು ಪರಿಹರಿಸುವ ಹೊಣೆ ಅವರ ಹೆಗಲಿಗೆ ಬಿದ್ದರೆ ಅಂತ ಯೋಚಿಸಿ. ಇದು ಕರ್ನಾಟಕ-ತಮಿಳುನಾಡು ಅಂತಲ್ಲ. ದೇಶದ ಯಾವುದೇ ರಾಜ್ಯದ ಯೋಜನೆ, ಸಮಸ್ಯೆ ಅಂತ ಬಂದರೆ ಅವರಿಗೆ ಪೂರ್ವಾಶ್ರಮದ ಸೂಪರ್ ಸ್ಟಾರ್ ಪ್ರಭಾವಳಿಯಿಂದ ಹೊರಬರುವುದು ಸಲೀಸಲ್ಲ.

ಅಂಬರೀಷ್ ರನ್ನು ಕಣ್ಣೆದುರು ತಂದುಕೊಳ್ಳಿ

ಅಂಬರೀಷ್ ರನ್ನು ಕಣ್ಣೆದುರು ತಂದುಕೊಳ್ಳಿ

ಸದಾ ಜನರ ಮಧ್ಯೆಯೇ ಇರಬೇಕು ಎಂಬುದು ರಾಜಕಾರಣಿಯ ಮೊದಲ ಲಕ್ಷಣ. ದೊಡ್ಡ ನಟನಾದ ವ್ಯಕ್ತಿ ಪದೇ ಪದೇ ಜನರ ಮಧ್ಯೆ ಕಾಣಿಸಿಕೊಳ್ಳಬಾರದು ಎಂಬುದು ಸಿನಿಮಾ ರಂಗದ ಮೊದಲ ಪಾಠ. ರಜನಿಗೆ ಜನರ ಮಧ್ಯೆ ಬೆರೆಯುವುದು ಸಾಧ್ಯವಾ? ಈ ವಿಚಾರದಲ್ಲಿ ಅಂಬರೀಷ್ ರನ್ನು ನೆನಪಿಸಿಕೊಳ್ಳಿ. ನಟನಾಗಿ-ರಾಜಕಾರಣಿಯಾಗಿ ಅವರು ಅನುಭವಿಸುವ ಪ್ರೀತಿ, ಆ ಮೂಲಕ ಎದುರಾಗುವ ಸಂಕಟ-ಸಂಕಷ್ಟಗಳನ್ನು ಎದುರಿಸುವುದಕ್ಕೆ ದೊಡ್ಡ ತಯಾರಿ ಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Here is an analysis about Tamil superstar Rajinikanth political entry news. Is it so easy as news analyse comapare his cinema fame?
Please Wait while comments are loading...