ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲ್ವಾರ್ ಹತ್ಯೆ: ವ್ಯಕ್ತಿ ಪ್ರಾಣಕ್ಕಿಂತ ಗೋವುಗಳು ಮುಖ್ಯವಾದವೇ ಪೊಲೀಸರಿಗೆ?

|
Google Oneindia Kannada News

ಅಲ್ವಾರ್, ಜುಲೈ 23: ಗೋಕಳ್ಳನೆಂದು ಭಾವಿಸಿದ ಜನರಿಂದ ಹಲ್ಲೆಗೊಳಗಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವ ಬದಲು ರಾಜಸ್ಥಾನ ಪೊಲೀಸರು ವಶಪಡಿಸಿಕೊಳ್ಳಲಾದ ಗೋವುಗಳನ್ನು ಗೋಶಾಲೆಗೆ ಸಾಗಿಸಲು ವ್ಯವಸ್ಥೆ ಮಾಡುತ್ತಿದ್ದರು ಎನ್ನುವುದು ತಿಳಿದುಬಂದಿದೆ.

ರಾಜಸ್ಥಾನದ ಅಲ್ವಾರ್‌ನಲ್ಲಿ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ರಕ್ಬರ್ ಖಾನ್‌ನನ್ನು ಆಸ್ಪತ್ರೆಗೆ ಸಾಗಿಸುವ ಮೊದಲು ಪೊಲೀಸರು ಆತನನ್ನು 3.45 ಗಂಟೆ ಕಾಲ ವಶದಲ್ಲಿ ಇರಿಸಿಕೊಂಡಿದ್ದರು ಎಂಬ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ.

 ರಾಜಸ್ಥಾನ: ಗೋಕಳ್ಳನೆಂದು ವ್ಯಕ್ತಿಯನ್ನು ಹೊಡೆದು ಕೊಂದ ಜನ ರಾಜಸ್ಥಾನ: ಗೋಕಳ್ಳನೆಂದು ವ್ಯಕ್ತಿಯನ್ನು ಹೊಡೆದು ಕೊಂದ ಜನ

ಜನರು ಹಲ್ಲೆ ನಡೆಸಿದ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೊದಲು ಗೋವುಗಳನ್ನು ಗೋಶಾಲೆಗೆ ರವಾನಿಸಲು ವಾಹನಗಳ ವ್ಯವಸ್ಥೆ ಮಾಡಿದರು. ಬಳಿಕ ಪೊಲೀಸ್ ಠಾಣೆಗೆ ತೆರಳಿದರು.

ದಾರಿ ಮಧ್ಯೆ ಟೀ ಕುಡಿಯಲು ವಾಹನ ನಿಲ್ಲಿಸಿ, ನಂತರ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದರು. ಆ ವೇಳೆಗೆ ಆತ ಮೃತಪಟ್ಟಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ರಕ್ಬರ್ ಖಾನ್ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದ್ದು, ಅವರ ಮೇಲೆ ಹತ್ಯೆ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಮೋದಿ ಜನಪ್ರಿಯತೆ ಹೆಚ್ಚಿದಷ್ಟೂ ಗುಂಪು ಹತ್ಯೆ ಹೆಚ್ಚಳ: ಮೇಘ್ವಾಲ್ ವಿವಾದಮೋದಿ ಜನಪ್ರಿಯತೆ ಹೆಚ್ಚಿದಷ್ಟೂ ಗುಂಪು ಹತ್ಯೆ ಹೆಚ್ಚಳ: ಮೇಘ್ವಾಲ್ ವಿವಾದ

ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಸ್ಥಳೀಯ ಪೊಲೀಸರಿಂದ ಹಿರಿಯ ಅಧಿಕಾರಿಯೊಬ್ಬರಿಗೆ ವರ್ಗಾಯಿಸಲಾಗಿದೆ. ಪ್ರಕರಣದ ತನಿಖೆಯ ಜತೆಗೆ, ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲು ಏಕೆ ಅಷ್ಟು ವಿಳಂಬವಾಯಿತು ಎಂಬ ವಿಚಾರದ ಕುರಿತೂ ಸಹ ಅವರು ವಿಚಾರಣೆ ನಡೆಸಲಿದ್ದಾರೆ.

ನರಳುತ್ತಿರುವಾಗ ಟೀ ಕುಡಿಯುತ್ತಿದ್ದರು

ನರಳುತ್ತಿರುವಾಗ ಟೀ ಕುಡಿಯುತ್ತಿದ್ದರು

ಮಧ್ಯರಾತ್ರಿ 12.41ರ ಸಮಯಕ್ಕೆ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ತಿಳಿದಿದೆ. ಆದರೆ ಅವರು ಸ್ಥಳಕ್ಕೆ ಬಂದಿದ್ದು 1.15 ಅಥವಾ 1.20ರ ವೇಳೆಗೆ ಎಂದು ಪೊಲೀಸರಿಗೆ ಕರೆ ಮಾಡಿದ ಬಲಪಂಥೀಯ ಸಂಘಟನೆಯೊಂದರ ಮುಖಂಡ ನವಲ್ ಕಿಶೋರ್ ತಿಳಿಸಿದ್ದಾರೆ.

ಮೈತುಂಬಾ ಮಣ್ಣಾಗಿದ್ದ ಗಾಯಾಳುವಿಗೆ ಪೊಲೀಸರು ಮೊದಲು ಸ್ನಾನ ಮಾಡಿಸಿದರು. ಬಳಿಕ ಆತನನ್ನು ಕರೆದೊಯ್ದರು. ಮೊದಲು ಕಿಶೋರ್ ಮನೆಗೆ ತೆರಳಿ ಅಲ್ಲಿ ಗೋವುಗಳನ್ನು ಸ್ಥಳೀಯ ಗೋಶಾಲೆಗೆ ರವಾನಿಸಲು ವಾಹನ ವ್ಯವಸ್ಥೆ ಮಾಡಿದರು.

ಆಗ ವಾಹನದ ಒಳಗಿದ್ದ ವ್ಯಕ್ತಿಯನ್ನು ಪೊಲೀಸರು ಹೊಡೆದು ನಿಂದಿಸುತ್ತಿದ್ದರು. ಆತ ಆಗ ಜೀವಂತವಾಗಿದ್ದ ಎಂದು ಕಿಶೋರ್ ಅವರ ಸಂಬಂಧಿ ಮಾಯಾ ತಿಳಿಸಿದ್ದಾರೆ.

ಗೋವುಗಳನ್ನು ರವಾನಿಸಲು ವಾಹನ ವ್ಯವಸ್ಥೆ ಮಾಡಿದ ಬಳಿಕ ಪೊಲೀಸರು ವಿರಮಿಸಲು ತೆರಳಿದರು. ಗಾಯಾಳು ವ್ಯಕ್ತಿ ನೋವಾಗುತ್ತಿದೆ ಎಂದು ನರಳುತ್ತಿರುವಾಗ ಪೊಲೀಸರು ಸಮೀಪದ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದರು.

ಬಳಿಕ ತಾನು ಗೋವುಗಳನ್ನು ಗೋಶಾಲೆಗೆ ಸಾಗಿಸಿದೆ. ಪೊಲೀಸರು ಗಾಯಾಳುವನ್ನು ಠಾಣೆಗೆ ಕರೆದೊಯ್ದರು ಎಂದು ಕಿಶೋರ್ ಹೇಳಿದ್ದಾರೆ.

ಕರೆದೊಯ್ದಿದ್ದು ನಾಲ್ಕು ಗಂಟೆಗೆ

ಪೊಲೀಸ್ ಠಾಣೆಯಿಂದ ಕೇವಲ ಒಂದು ಕಿ.ಮೀ. ದೂರದಲ್ಲಿರುವ ಆಸ್ಪತ್ರೆಗೆ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಕರೆದೊಯ್ಯಲಾಯಿತು. ಆತ ಆಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು. ಆಸ್ಪತ್ರೆಯ ನೋಂದಣಿ ಪುಸ್ತಕದಲ್ಲಿ ಆತನನ್ನು ಕರೆದುತಂದ ಸಮಯ ದಾಖಲಾಗಿದೆ.

ಸ್ಥಳೀಯ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ರಾಜೇಂದ್ರ ಚೌಧರಿ ಅವರನ್ನು ಪ್ರಶ್ನಿಸಿದರೆ, 'ನಾನು ನಿನ್ನೆಯಷ್ಟೇ ಕರ್ತವ್ಯ ವಹಿಸಿಕೊಂಡಿದ್ದೇನೆ. ಈ ಪ್ರಕರಣದ ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಆದರೆ ಇದರಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡುತ್ತೇನೆ' ಎಂದು ಹೇಳಿದ್ದಾರೆ.

ಪೊಲೀಸರ ವಿರುದ್ಧವೇ ಆರೋಪ

ಗೋಕಳ್ಳತನದ ಅನುಮಾನದಡಿ ನಡೆದ ಹತ್ಯೆಯಲ್ಲಿ ಸ್ಥಳೀಯ ಪೊಲೀಸರ ಪಾತ್ರದ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.

ಗೋವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜನರ ಗುಂಪಿನ ದಾಳಿಗೆ ಸಿಲುಕಿದ 28 ವರ್ಷದ ರಕ್ಬರ್ ಖಾನ್ ಬಲಿಯಾಗಿದ್ದರೆ, ಮತ್ತೊಬ್ಬ ವ್ಯಕ್ತಿ ಅಸ್ಲಾಂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಗೋ ರಕ್ಷಕರನ್ನು ಬಂಧಿಸಿದ್ದಾರೆ. ಆದರೆ, ಪೊಲೀಸರು ಹೇಳುವಂತೆ ಆತ ಗುಂಪು ಹಿಂಸಾಚಾರದಿಂದ ಮೃತಪಟ್ಟಿದ್ದಲ್ಲ. ಪೊಲೀಸರ ವಶದಲ್ಲಿರುವಾಗಲೇ ಸಾವಿಗೀಡಾಗಿರುವುದು ಎಂದು ಸ್ಥಳೀಯ ಗೋ ರಕ್ಷಕರು ಆರೋಪಿಸಿದ್ದಾರೆ.

ಬಿಜೆಪಿ ಶಾಸಕ ಪ್ರಶ್ನೆ

ಗೋವುಗಳನ್ನು ಕಸಾಯಿಖಾನೆಗೆ ಸಾಗಿಸಲು ತೆರಳುತ್ತಿದ್ದ ಇಬ್ಬರ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಪೊಲೀಸರಿಗೆ ರಾತ್ರಿ 12.40ರ ಸುಮಾರಿಗೆ ಮಾಹಿತಿ ದೊರಕಿದೆ.

ಮಾಹಿತಿ ಬಂದ ಅರ್ಧ ಗಂಟೆಯೊಳಗೆ ಲಾಲಾವಂಡಿ ಅರಣ್ಯದ ಸ್ಥಳಕ್ಕೆ ಪೊಲೀಸರು ತಲುಪಿದ್ದಾರೆ. ಆದರೆ, ಗಾಯಾಳುವಿನ ದೇಹವನ್ನು ಆಸ್ಪತ್ರೆಗೆ ಕರೆದುತಂದಿದ್ದು ನಾಲ್ಕು ಗಂಟೆಗೆ.

ಈ ಅವಧಿಯಲ್ಲಿ ಪೊಲೀಸರು ಏನು ಮಾಡುತ್ತಿದ್ದರು ಎಂದು ರಾಮಗಡದ ಬಿಜೆಪಿ ಶಾಸಕ ಜ್ಞಾನದೇವ ಅಹುಜಾ ಪ್ರಶ್ನಿಸಿದ್ದಾರೆ.

ಗ್ರಾಮಸ್ಥರು ಅವರಿಗೆ ಲಘುವಾಗಿ ಹೊಡೆದಿದ್ದಾರಷ್ಟೇ. ಆದರೆ, ಆತನನ್ನು ಸಾಯುವಂತೆ ಹೊಡೆದಿರುವುದು ಪೊಲೀಸರು ಎಂದು ಅವರು ಆರೋಪಿಸಿದ್ದಾರೆ.

ಪರಾರಿಯಾಗುತ್ತಿರಲಿಲ್ಲವೇ?

ಪರಾರಿಯಾಗುತ್ತಿರಲಿಲ್ಲವೇ?

ಪೊಲೀಸರು ಬಂಧಿಸಿರುವ ಮೂವರೂ ನನಗೆ ಗೋಸಾಗಣೆ ಬಗ್ಗೆ ಮಾಹಿತಿ ನೀಡಿದವರಾಗಿದ್ದಾರೆ. ಒಂದು ವೇಳೆ ಆತನನ್ನು ಅವರು ಕೊಂದಿದ್ದರೆ ಪೊಲೀಸರನ್ನು ನೋಡಿದಾಗ ಅಲ್ಲಿಂದ ಪರಾರಿಯಾಗುತ್ತಿದ್ದರು ಎಂದು ನವಲ್ ಕಿಶೋರ್ ಶರ್ಮಾ, ಬಂಧಿತರು ಅಮಾಯಕರು ಎಂದು ಪ್ರತಿಪಾದಿಸಿದ್ದಾರೆ.

ಬಂಧಿತರಾದ ಧರ್ಮೇಂದ್ರ ಯಾದವ್ ಮತ್ತು ಪರಮ್ಜೀತ್ ಸಿಂಗ್ ಇಬ್ಬರೂ ಅಲ್ಲಿಯೇ ಇದ್ದು ಆತನನ್ನು ಪೊಲೀಸ್ ವ್ಯಾನ್‌ಗೆ ಹತ್ತಿಸಲು ನೆರವಾಗಿದ್ದರು. ಆತನ ಪರಿಸ್ಥಿತಿ ಆಗ ಗಂಭೀರವಾಗಿರಲಿಲ್ಲ. ಬಳಿಕ ನಾವು ಟೀ ಅಂಗಡಿ ಎದುರೂ ಗಾಡಿ ನಿಲ್ಲಿಸಿದ್ದೆವು ಎಂದು ಕಿಶೋರ್, ವಾಹನದೊಳಗೆ ಕೂರಿಸಿದ್ದ ರಕ್ಬರ್‌ನ ಫೋಟೊವನ್ನು ತೋರಿಸಿದ್ದಾರೆ.

ಆದರೆ, ಆತನನ್ನು ಪೊಲೀಸರು ಸ್ಟೇಷನ್‌ನ ಒಳಗೆ ಥಳಿಸಿದ್ದಾರೆ. ತಮ್ಮನ್ನು ಉಳಿಸಿಕೊಳ್ಳುವುದಕ್ಕಾಗಿ ಇಬ್ಬರನ್ನು ಬಂಧಿಸಿದ್ದಾರೆ. ನಾವು ಗೋವುಗಳನ್ನು ಗೋಶಾಲೆಗೆ ಬಿಟ್ಟು ಮರಳುವಾಗ ಆತ ಮೃತಪಟ್ಟಿದ್ದ ಎಂದು ಹೇಳಿದ್ದಾರೆ.

ಆರೋಪಿಗಳಿಂದಲೇ ನೆರವು ಸಾಧ್ಯವೇ?

ಆರೋಪಿಗಳಿಂದಲೇ ನೆರವು ಸಾಧ್ಯವೇ?

ರಕ್ಬರ್ ಖಾನ್‌ನನ್ನು ಆಸ್ಪತ್ರೆಗೆ ದಾಖಲಿಸುವಾಗ ಪೊಲೀಸರು ಧರ್ಮೇಂದ್ರ ಯಾದವ್ ಮತ್ತು ಪರಮ್ಜೀತ್ ಸಿಂಗ್ ನೆರವನ್ನು ಪಡೆದುಕೊಂಡಿರುವುದು ಕುತೂಹಲ ಮೂಡಿಸಿದೆ.

ಅವರಿಬ್ಬರೂ ಬಂಧಿತರಾಗುವ ಮುನ್ನ ಪೊಲೀಸ್ ವಾಹನದಿಂದ ರಕ್ಬರ್‌ನನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿದ್ದರು.

'ಪೊಲೀಸ್ ವಾಹನದಲ್ಲಿ ಬಂದ ಅವರು ಮೃತ ವ್ಯಕ್ತಿಯನ್ನು ಪೊಲೀಸರ ಜತೆಗೂಡಿ ಸ್ಟ್ರೆಚರ್‌ನಲ್ಲಿ ಕರೆತಂದರು. ಆಗ ಅವರು ಯಾರೆಂದು ನಾವು ಯೋಚಿಸಲು ಹೋಗಿರಲಿಲ್ಲ. ಆದರೆ, ಬಂಧಿತರಾದ ಇಬ್ಬರು ವ್ಯಕ್ತಿಗಳ ಚಿತ್ರವನ್ನು ನೋಡಿದಾಗಲೇ ಗೊತ್ತಾಗಿದ್ದು, ಅವರು ಪೊಲೀಸರಿಗೆ ಸಹಾಯ ಮಾಡಿದ್ದವರು ಎಂದು' ಎಂಬುದಾಗಿ ಅಲ್ವಾರ್ ಸಮುದಾಯ ಆಸ್ಪತ್ರೆ ಕೇಂದ್ರದ ಡಾ. ಹಸನ್ ಅಲಿ ಖಾನ್ ತಿಳಿಸಿದ್ದಾರೆ.

'ಹತ್ಯೆಯಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಪೊಲೀಸರು ಆರೋಪಿಗಳ ಸಹಾಯವನ್ನು ಏಕೆ ಪಡೆದುಕೊಳ್ಳುತ್ತಾರೆ? ಅಚ್ಚರಿ ಮೂಡಿಸುತ್ತಿದೆ' ಎಂದು ಅವರು ಹೇಳಿದ್ದಾರೆ.

ಪೊಲೀಸರ ಹೇಳಿಕೆ

ಪೊಲೀಸರ ಹೇಳಿಕೆ

ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ತಡವಾಗಿ ದಾಖಲಿಸಲಾಯಿತು ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ರಾಮಗಡ ಪೊಲೀಸ್ ಠಾಣೆ ಉಸ್ತುವಾರಿ ಸುಭಾಷ್ ಶರ್ಮಾ, 'ವೈದ್ಯರೇ ಇವುಗಳನ್ನು ಹೇಳಿದರೆ ನಾವೇನೂ ಮಾಡಲು ಸಾಧ್ಯವಿಲ್ಲ' ಎಂದಿದ್ದಾರೆ.

ರಕ್ಬರ್‌ನ ಸ್ನೇಹಿತನಿಗಾಗಿ ಹುಡುಕಾಡುತ್ತಿದ್ದೇವೆ. ಆತನಿಗೆ ಯಾವುದೇ ಸಮಸ್ಯೆಯಾಗಿಲ್ಲವೇ ಎನ್ನುವುದು ಖಚಿತವಾಗಬೇಕಿದೆ ಎಂದು ಹೇಳಿದ್ದಾರೆ.

'ಕೆಲವು ಮಂದಿ ಬಂದು ನಮ್ಮನ್ನು ತಡೆದರು. ನಾವು ಗೋಕಳ್ಳರೆಂದು ಭಾವಿಸಿ ಹೊಡೆಯಲು ಶುರುಮಾಡಿದರು' ಎಂದು ರಕ್ಬರ್ ಹೇಳಿಕೆ ನೀಡಿದ್ದಾಗಿ ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.

ನನ್ನ ಸ್ನೇಹಿತ ಅಸ್ಲಾಂ ಅವರಿಂದ ತಪ್ಪಿಸಿಕೊಂಡ. ಗ್ರಾಮಸ್ಥರು ಬಡಿಗೆಗಳು ಹಾಗೂ ಲಾಠಿಗಳಿಂದ ಹೊಡೆದರು. ಇದರಿಂದ ನನಗೆ ಗಾಯಗಳಾದವು ಎಂದು ಆತ ಹೇಳಿಕೆ ನೀಡಿದ್ದ.

ಸರ್ಕಾರದ ವಿರುದ್ಧ ಅರ್ಜಿ

ಸರ್ಕಾರದ ವಿರುದ್ಧ ಅರ್ಜಿ

ಗುಂಪು ಹತ್ಯೆಯಂತಹ ಪ್ರಕರಣಗಳಮ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಕಾನೂನು ರೂಪಿಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಹೇಳಿಕೆ ನೀಡಿದ್ದ ಬೆನ್ನಲ್ಲೇ ಅಲ್ವಾರ್ ಪ್ರಕರಣ ನಡೆದಿರುವುದು ಆಘಾತ ಮೂಡಿಸಿದೆ.

ಈ ಪ್ರಕರಣ ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ರಾಜಸ್ಥಾನ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.

ದೇಶದಲ್ಲಿ ಹೆಚ್ಚುತ್ತಿರುವ ಗುಂಪು ಹತ್ಯೆ ಪ್ರಕರಣಗಳ ಕುರಿತಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ 20ಕ್ಕೆ ನಿಗದಿಪಡಿಸಿದ್ದು, ಈ ಅರ್ಜಿ ಕೂಡ ಅಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ.

English summary
Police had taken the victim of Rajasthan's alwar lynching case almost 4 hours after the incident was happened.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X